ಗದಗ, ಆಗಸ್ಟ್ 13: ಮುಂದಿನ ದಿನಮಾನಗಳಲ್ಲಿ ಪ್ರಕೃತಿ ಹಾಗೂ ಪರಿಸರ ಮನುಕುಲಕ್ಕೆ ದೊಡ್ಡ ಸವಾಲು ಆಗಲಿದ್ದು ಇದನ್ನು ನಿಯಂತ್ರಿಸುವ ಸಲುವಾಗಿ ಈಗಿನಿಂದಲೇ ಗಿಡ ಮರಗಳ ರಕ್ಷಣೆ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಹೇಳಿದರು. ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಇಂದು 100 ಸಸಿಗಳ ಹಾಗೂ ಗದಗ ಮೃಗಾಲಯದ ಪಕ್ಷಿಗಳ ದತ್ತು ಸ್ವೀಕಾರ ಮತ್ತು ರೆಡ್ ಕ್ರಾಸ್ ಸಂಸ್ಥೆಗೆ 1 ಲಕ್ಷ ರೂ. ಶಾಶ್ವತ ಠೇವಣಿ ಯೋಜನೆಯ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಹವಾಮಾನ ವೈಪರಿತ್ಯದಿಂದ ಬರಗಾಲ, ಅತೀವೃಷ್ಟಿ, ಅನಾವೃಷ್ಟಿಯಿಂದ ಮಾನವ ತತ್ತರಿಸಿ ಹೋಗುತ್ತಿದ್ದಾನೆ. ಗಿಡಮರಗಳ ನಾಶದಿಂದ ಅರಣ್ಯ ಪ್ರದೇಶ ನಾಶವಾಗುತ್ತಿದ್ದು, ಗಿಡಮರದ ಜೊತೆಗೆ ಆಧುನಿಕತೆಯ ಭರದಲ್ಲಿ ಐಷಾರಾಮಿ ಜೀವನ ಸಾಗಿಸಲು ನೀರು, ಆಹಾರ, ಗಾಳಿಯನ್ನು ಸಹ ಕಲುಷಿತಗೊಳಿಸುತ್ತಿದ್ದೇವೆ.
ಈ ಕುರಿತು ಜನರಲ್ಲಿ ಪರಿಸರದ ಜಾಗೃತಿ ಜೊತೆಗೆ ಜನಾಂದೋಲನದೊಂದಿಗೆ ಅರಣ್ಯ ಕ್ಷೇತ್ರ ಹೆಚ್ಚಿಸಬೇಕಾಗಿದೆ. ಅಲ್ಲದೇ ಪ್ಲಾಸ್ಟಿಕ ಬಳಕೆಯನ್ನು ಶಾಶ್ವತವಾಗಿ ನಿಲ್ಲಿಸುವ ಕಡೆ ಗಮನ ಹರಿಸಬೇಕಾಗಿದೆ. ಗಣೇಶ ಉತ್ಸವಗಳಲ್ಲಿ ಪಿ.ಓ.ಪಿ. ಗಣಪತಿ ಮೂರ್ತಿಗಳ ಬದಲಿಗೆ ಮಣ್ಣಿನ ಗಣಪತಿ ಮೂರ್ತಿಗಳನ್ನು ಬಳಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಗದಗ: ಅಂತ್ಯ ಸಂಸ್ಕಾರದ ಸಿದ್ಧತೆ ವೇಳೆ ಬಯಲಾದ ಮಹಿಳೆಯ ಸಾವಿನ ರಹಸ್ಯ
ಗದಗ ಮೃಗಾಲಯ ಸೇರಿ ಗದಗ ಪ್ರವಾಸೋದ್ಯಮದ ಅಭಿವೃದ್ಧಿಗೆ ಗದಗ ಜಿಲ್ಲೆಗೆ 7 ಕೋಟಿ ರೂ. ನೀಡುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಕಪ್ಪತಗುಡ್ಡದಲ್ಲಿ ಇಕೋ ಟೂರಿಸಂ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಕಪ್ಪತಗುಡ್ಡದ ಬಗ್ಗೆ ಅಧ್ಯಯನ ನಡೆಸಿ ಅದರ ಸಂರಕ್ಷಣೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಮಾತನಾಡಿ, ಗದಗ ಜಿಲ್ಲೆಯ ಅರಣ್ಯ ಹಾಗೂ ಪರಿಸರ ಸಂಬಂಧಿಸಿದಂತೆ 15 ಕೋಟಿ ರೂ. ಅನುದಾನದ ಅವಶ್ಯಕತೆಯಿದೆ. ಕಪ್ಪತಗುಡ್ಡ ನೋಡಲು ರಮಣೀಯ ಸ್ಥಳವಾಗಿದ್ದು ನಂದಿ ಹಿಲ್ಸ್ಗೆ ಕಡಿಮೇ ಏನಿಲ್ಲ ಎಂದರು. ಗದಗ ಮೃಗಾಲಯಕ್ಕೆ ಆನೆ, ಜೀಬ್ರಾ, ಜಿರಾಫೆ ನೀಡಲು ಅರಣ್ಯ ಸಚಿವರು ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಅಧಿಕಾರಿಗಳಿಗೆ ಸಿದ್ದತೆ ಮಾಡುವಂತೆಯೂ ಸೂಚನೆ ನೀಡಿರುತ್ತಾರೆ ಎಂದರು.
ಗದಗ ಜಿಲ್ಲೆಯು ಪ್ರವಾಸೋದ್ಯಮವನ್ನು ಬೆಳೆಸಬೇಕಾಗಿದೆ. ಲಕ್ಕುಂಡಿ ಯುನೆಸ್ಕೋ ಹೆರಿಟೆಜ್ ಸೈಟ್ ಮಾಡಲು ಶ್ರಮವಹಿಸಬೇಕು ಎಂಬುದಾಗಿ ತಜ್ಞರ ಸಮಿತಿ ಶಿಫಾರಸು ಮಾಡಿರುವುದು ಲಕ್ಕುಂಡಿಯ ಮಹತ್ವ ನಮಗೆ ಅರಿವಿಗೆ ಬರುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 7 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದರು.
ಬಂಗಾರಕ್ಕಿಂತ ಪರಿಸರಕ್ಕೆ ಹೆಚ್ಚು ಮಹತ್ವವಿದ್ದು ಕಪ್ಪತಗುಡ್ಡವನ್ನು ಉದ್ಯಮದ ಹೆಸರಿಲ್ಲಿ ಯಾವ ಕಾರಣಕ್ಕೂ ಹಾಳು ಮಾಡಬಾರದು. ಕಪ್ಪತಗುಡ್ಡದಲ್ಲಿ ಅತ್ಯುತ್ತಮ ಶುದ್ಧ ಗಾಳಿ ಸಿಗುವ ಪ್ರದೇಶವಾಗಿದೆ. ಪವನ ವಿದ್ಯುತ್ ಹಾಗೂ ಸೋಲಾರ ಮೂಲಕ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ವಿವರಿಸಿದರು. ಗದಗ ಅರಣ್ಯ ಹಾಗೂ ಪ್ರವಾಸಿ ತಾಣಗಳನ್ನು ದತ್ತು ತೆಗೆದುಕೊಳ್ಳುವಂತೆ ಸಚಿವರಾದ ಎಚ್.ಕೆ.ಪಾಟೀಲ ಅರಣ್ಯ ಸಚಿವರಲ್ಲಿ ಬೇಡಿಕೆ ಇಟ್ಟರು.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಮಾತನಾಡಿ, ಕಪ್ಪತಗುಡ್ಡದಲ್ಲಿ 300ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿದ್ದು ಪ್ರತಿವರ್ಷ ಬೀಳುವ ಬೆಂಕಿಗೆ ವನ್ಯಜೀವಿಗಳು ಹಾಗೂ ಔಷಧೀಯ ಸಸ್ಯಗಳು ಬಲಿಯಾಗುತ್ತಿದ್ದು. ಕಪ್ಪತಗುಡ್ಡದ ರಕ್ಷಣೆಗೆ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಅರಣ್ಯ ನಾಶದಿಂದ ಪರಿಸರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಮೃಗಾಲಯ ಆರಂಭಿಸಬೇಕು ಎಂಬ ಕೆ.ಎಚ್. ಪಾಟೀಲ ಅವರ ಕನಸು ಇಂದು ನನಸಾಗಿದೆ. ಕಪ್ಪತಗುಡ್ಡವನ್ನು ಹಾಳು ಮಾಡಲು ಅವಕಾಶ ನೀಡಬೇಡಿ ಎಂದು ಸಚಿವ ಈಶ್ವರ ಖಂಡ್ರೆ ಅವರಲ್ಲಿ ಮನವಿ ಮಾಡಿದರು. ಶಿರಹಟ್ಟಿ ಬೆಂದ್ರೆ ಭವನದಲ್ಲಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡಬೇಕು ಎಂದು ಹೇಳಿದರು.
ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಸ್. ಪಾಟೀಲ, ಸಿಸಿಎಫ್ ಯತೀಶಕುಮಾರ, ಡಿಸಿಎಫ್ ದೀಪಿಕಾ ಬಾಜಪೇಯಿ, ಐಎಸ್. ಪಾಟೀಲ, ಶಿವಕುಮಾರ ಪಾಟೀಲ, ಉಮೇಶಗೌಡ ಪಾಟೀಲ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:59 pm, Sun, 13 August 23