ಧಾರವಾಡ, ಆಗಸ್ಟ್ 21: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಂದಕೂಡಲೇ ಕರ್ನಾಟಕದ ಸಂಗೀತ ದಿಗ್ಗಜರು ಮುಂಚೂಣಿಯಲ್ಲಿ ಬಂದು ನಿಲ್ಲುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕದ ವಿಚಾರಕ್ಕೆ ಬಂದರೆ ಮೇರು ಗಾಯಕಿ ಗಂಗೂಬಾಯಿ ಹಾನಗಲ್ (Dr Gangubai Hangal) ಹೆಸರು ಮುಂಚೂಣಿಯಲ್ಲಿರುತ್ತೆ. ಇಂಥ ಮೇರು ಗಾಯಕಿ ಹುಟ್ಟಿದ್ದು ಮತ್ತು ಬೆಳೆದಿದ್ದು ಸಂಗೀತ ಕಾಶಿ ಧಾರವಾಡದಲ್ಲಿ. ಅಂಥ ಹಿರಿಯ ಸಂಗೀತಗಾರ್ತಿ ಹುಟ್ಟಿ ಬೆಳೆದ ಮನೆಯನ್ನು ನೋಡಿದರೆ ಎಂಥವರಿಗೂ ಕೊಂದು ಕ್ಷಣ ಅಚ್ಚರಿಯಾಗುತ್ತೆ. ಇದಕ್ಕೆ ಕಾರಣ ಅದರ ದುಸ್ಥಿತಿ. ಮಂಗಳವಾರ ಧಾರವಾಡಕ್ಕೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದ ಬಳಿಕ ಮೊದಲ ಬಾರಿಗೆ ಬರುತ್ತಿರುವ ಶಿವರಾಜ ತಂಗಡಗಿ ಅವರು ಇದರ ದುಸ್ಥಿತಿ ನೋಡುತ್ತಾರೆ ಅಂತಾ ಧಾರವಾಡದ ಜನರು ಕಾಯುತ್ತಿದ್ದಾರೆ.
ಧಾರವಾಡ ನಗರದ ಶುಕ್ರವಾರ ಪೇಟೆಯಲ್ಲಿ ಡಾ. ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ ಮನೆಯಿದೆ. ಅವರು ಹುಟ್ಟಿದ್ದು ಇಲ್ಲಿಯೇ ಮತ್ತು ಬೆಳೆದಿದ್ದು ಇಲ್ಲಿಯೇ. ಪದ್ಮಭೂಷಣದ ಜೊತೆಗೆ ಪದ್ಮವಿಭೂಷಣವನ್ನೂ ಪಡೆದ ಕೆಲವೇ ಕೆಲವು ಸಾಧಕರಲ್ಲಿ ಡಾ. ಗಂಗೂಬಾಯಿ ಹಾನಗಲ್ ಕೂಡ ಒಬ್ಬರು. ಹೀಗಾಗಿ ಆ ಗಾನ ಕೋಗಿಲೆ ಹುಟ್ಟಿ ಬೆಳೆದ ಮನೆಯನ್ನು ಸರ್ಕಾರ ಸ್ಮಾರಕವನ್ನಾಗಿ ಮಾಡಿತ್ತು. ಆದರೆ ಸ್ಮಾರಕವಾದ ಹತ್ತೇ ವರ್ಷದಲ್ಲಿ ಮೇರು ಗಾಯಕಿಯ ಆ ಮನೆ ಈಗ ಭೂತ ಬಂಗಲೆಯಾಗಿ ಪರಿವರ್ತನೆಯಾಗಿ ಹೋಗಿದೆ.
ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದಾಗ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿ, ಈ ಮನೆಯನ್ನು ಸ್ಮಾರಕವಾಗಿ ಪರಿವರ್ತನೆಗೊಳಿಸಿದ್ದರು. ಅದಾಗಿ ಹತ್ತು ವರ್ಷ ಕಳೆಯುವುದರೊಳಗೆ ಈ ಮನೆ ಇಂಥದ್ದೊಂದು ದುಸ್ಥಿತಿಗೆ ತಲುಪಿದೆ. ಈ ಮನೆಯೀಗ ಸ್ಮಾರಕದ ಸ್ವರೂಪವನ್ನು ಕಳೆದುಕೊಂಡು ಸಂಪೂರ್ಣವಾಗಿ ಪಾಳು ಬಿದ್ದಿದೆ.
ಇದನ್ನೂ ಓದಿ: Chaturthi 2023: ಹುಬ್ಬಳ್ಳಿಯಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿರುವ ಮುಸ್ಲಿಂ ಮಹಿಳೆ
ಸ್ಮಾರಕವಾದ ಬಳಿಕ ಇಲ್ಲಿಯೇ ಕೆಲ ದಿನಗಳವರೆಗೆ ಗಂಗೂಬಾಯಿ ಅವರ ಶಿಷ್ಯ ಬಳಗದಿಂದ ಸಂಗೀತ ತರಗತಿ ನಡೆಸಲಾಗುತ್ತಿತ್ತು. ಪರ ಊರುಗಳಿಂದ ಆಗಮಿಸುತ್ತಿದ್ದ ಸಂಗೀತಾಸಕ್ತರು, ಗಣ್ಯರು ಭೇಟಿ ನೀಡುತ್ತಿದ್ದರು. ನಂತರ ಕಟ್ಟಡ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಇದೀಗ ಮೊದಲ ಬಾರಿಗೆ ಧಾರವಾಡದಲ್ಲಿ ಬೆಳಗಾವಿ ವಿಭಾಗದ ಸಾಹಿತಿ ಹಾಗೂ ಕಲಾವಿದರ ಸಭೆಯನ್ನು ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಧಾರವಾಡಕ್ಕೆ ಆಗಮಿಸುತ್ತಿದ್ದು, ಈ ಕಡೆ ಗಮನ ಹರಿಸಲಿ ಅನ್ನೋದು ಸ್ಥಳೀಯರ ಆಗ್ರಹ.
ಸರಕಾರ ಬಿಡುಗಡೆ ಮಾಡಿದ್ದ 25 ಲಕ್ಷ ರೂಪಾಯಿಗಳ ಪೈಕಿ 2007ರ ಜೂನ್ ನಲ್ಲಿ 10 ಲಕ್ಷ ರೂಪಾಯಿ ಹಣದಲ್ಲಿ ಸರಕಾರ ಈ ಮನೆಯನ್ನು ವಶಕ್ಕೆ ಪಡೆದಿತ್ತು. ಉಳಿದ 15 ಲಕ್ಷ ರೂಪಾಯಿಯಲ್ಲಿ ಮನೆಯನ್ನು ನವೀಕರಿಸಿ ವಸ್ತು ಸಂಗ್ರಹಾಲಯ ಮಾಡಿತ್ತು. ಗಂಗಜ್ಜಿಯ 96ನೇ ಜನ್ಮದಿನದಂದು ಅಂದ್ರೆ 2008ರ ಮಾರ್ಚ್ 5ರಂದು ಉದ್ಘಾಟನೆಗೊಂಡ ಬಳಿಕ ನಾಲ್ಕು ವರ್ಷ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ ಆ ಬಳಿಕ ಇದನ್ನು ನೋಡಿಕೊಳ್ಳಬೇಕಾದ ಕನ್ನಡ ಮತ್ತ ಸಂಸ್ಕೃತಿ ಇಲಾಖೆ ಈ ಸ್ಮಾರಕವನ್ನು ಮರತೇ ಬಿಟ್ಟಿತು.
ಮನೆ ಬೀಳುವುದಕ್ಕೆ ಶುರುವಾದ ಬಳಿಕ ಇಲ್ಲಿದ್ದ ಪರಿಕರಗಳನ್ನು ಕೆಲ ವರ್ಷಗಳ ಹಿಂದಷ್ಟೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಭದ್ರವಾಗಿ ಇಡಲಾಗಿದೆ. ಸಣ್ಣ ಪುಟ್ಟ ದುರಸ್ತಿಗಳನ್ನು ನಿರ್ಲಕ್ಷಿಸಿದ್ದರಿಂದ ಇಡೀ ಕಟ್ಟಡವನ್ನೇ ಮತ್ತೊಮ್ಮೆ ನಿರ್ಮಿಸುವ ಸ್ಥಿತಿ ಬಂದೊದಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ್ದ ಕಟ್ಟಡವನ್ನು ಕಾಪಾಡಿಕೊಳ್ಳಲು ಸರ್ಕಾರದಿಂದ ಆಗಲೇ ಇಲ್ಲ. ಇದೀಗ ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮತ್ತೆ ಎಲ್ಲವನ್ನು ಸರಿಪಡಿಸಬೇಕಿದೆ.
ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪತ್ರ ಬರೆದಿದೆ. ಆದರೆ ಮೂರು ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆಗೆ ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡಿ, ಒಂದು ಅಂದಾಜು ವೆಚ್ಚದ ನೀಲನಕ್ಷೆ ತಯಾರಿಸಿಲ್ಲ.
ಇದನ್ನೂ ಓದಿ: ಶ್ರಾವಣ ಮಾಸದ ಉಂಡೆ ಹಬ್ಬದಲ್ಲಿ ಸಂಭ್ರಮಿಸಿದ ಧಾರವಾಡದ ಮಹಿಳೆಯರು
ಈ ಹಿಂದೆ ಸಿ.ಟಿ. ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ಇಲ್ಲಿಗೆ ಬಂದು ಇದರ ಅವಸ್ಥೆಯನ್ನು ನೋಡಿ ಹೋಗಿದ್ದಾರೆ. ಅನೇಕರು ಇಂದಿಗೂ ಬರುತ್ತಲೇ ಇದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗದೇ ಇರೋದನ್ನು ನೋಡಿದರೆ, ವ್ಯವಸ್ಥೆ ಹೇಗೆಲ್ಲಾ ಜಿಡ್ಡುಗಟ್ಟಿ ಹೋಗಿದೆ ಅನ್ನೋದು ಸ್ಪಷ್ಟವಾಗಿ ಹೋಗುತ್ತೆ. ಒಟ್ಟಿನಲ್ಲಿ ನಾಡಿನ ಮೇರು ಗಾಯಕಿ ಬಗ್ಗೆ ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಎಷ್ಟು ಗೌರವ ಇದೆ ಅನ್ನೋದಕ್ಕೆ ಈ ಗಂಗಜ್ಜಿ ಮನೆಯೇ ಮೂಕ ಸಾಕ್ಷಿಯಾಗಿದೆ.
ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಹೋರಾಟ ಮಾಡಿ ಸಾಕಾಗಿದೆ. ನಮ್ಮ ನಾಡಿನ ಹೆಮ್ಮೆ ಅಂದರೆ ಅದು ಗಂಗಜ್ಜಿ. ಆ ಅಜ್ಜಿಯ ನೆನಪಿಗೋಸ್ಕರ ಅವರು ಹುಟ್ಟಿ ಬೆಳೆದ ಮನೆಯನ್ನು ಸ್ಮಾರಕವನ್ನಾಗಿ ಅಥವಾ ಮ್ಯೂಸಿಯನ್ನಾಗಿ ಮಾಡಬೇಕು ಅನ್ನೋದು ನಮ್ಮ ಆಶಯ. ಆದರೆ ಸರಕಾರಕ್ಕೆ ಗಂಗೂಬಾಯಿ ಅವರ ಬಗ್ಗೆ ಗೌರವವೇ ಇಲ್ಲ. ಆದರೆ ಇದೀಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಚಿವರಾದ ಬಳಿಕ ಮೊದಲ ಬಾರಿಗೆ ವಿದ್ಯಾಕಾಶಿಗೆ ಬರುತ್ತಿದ್ದಾರೆ. ಅವರು ಒಮ್ಮೆ ಈ ಮನೆಯ ಸ್ಥಿತಿಯನ್ನು ನೋಡಬೇಕು. ಅವರು ತುಂಬಾನೇ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಂದಾದರೂ ಗಂಗೂಬಾಯಿ ಅವರಿಗೆ ಗೌರವ ಸಿಗುವಂತಾಗಲಿ ಅನ್ನೋದು ನಮ್ಮ ಆಶಯ ಅನ್ನುತ್ತಾರೆ.
ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಈಗಾಗಲೇ ರಾಜ್ಯ ಸರಕಾರ ಡಾ. ಗಂಗೂಬಾಯಿ ಹಾನಗಲ್ ಅವರ ನೆನಪಿನಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಲೇ ಇದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಗುರುಕುಲ ಸ್ಥಾಪನೆ ಮಾಡಲಾಗಿದ್ದು, ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಹೋರಟಿದೆ.
ಮೈಸೂರಿನಲ್ಲಿ ಸರಕಾರ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಇದೀಗ ಅವರ ಮನೆಯನ್ನು ಮ್ಯೂಜಿಯಂ ಮಾಡಬೇಕೆನ್ನೋದು ಅನೇಕ ಆಸೆ ಇದೆ. ಧಾರವಾಡ ಜಿಲ್ಲಾಡಳಿತ ಮೂಲಕ ಈ ಬಗ್ಗೆ ಪ್ರಸ್ತಾವನೆಯನ್ನು ತರಿಸಿಕೊಂಡು, ಸರಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಅನ್ನುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:58 pm, Mon, 21 August 23