ಧಾರವಾಡ, ಆಗಸ್ಟ್ 24: ಸಂಗೀತ ಕ್ಷೇತ್ರದಲ್ಲಿ ಗುರು ಶಿಷ್ಯರ ಪರಂಪರೆಗೆ ಬುನಾದಿ ಹಾಕಿದವರು ಸ್ವರಸಾಮ್ರಾಟ ಪದ್ಮಭೂಷಣ ಪಂ. ಬಸವರಾಜ ರಾಜಗುರು. ಸಂಗೀತ ಕ್ಷೇತ್ರದ ಮಹನೀಯರನ್ನು ನೆನೆಯಬೇಕು. ಸಂಗೀತ ಕ್ಷೇತ್ರಕ್ಕೆ ಧಾರವಾಡದ ಕೊಡುಗೆ ಅಪಾರವಿದೆ ಎಂದು ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ (Basavaraja Hoogara) ಅವರು ಹೇಳಿದರು. ನಗರದ ಆಲೂರು ವೆಂಕಟರಾವ್ ಸಂಸ್ಕೃತಿ ಭವನದಲ್ಲಿ ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಸ್ವರ ಸಾಮ್ರಾಟ ಪದ್ಮಭೂಷಣ ಪಂ. ಬಸವರಾಜ ರಾಜಗುರು ಅವರ 103 ನೇ ಜನ್ಮದಿನಾಚರಣೆ ಹಾಗೂ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮತ್ತು ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತಿದೇವಿ ರಾಜಗುರು, ನಿಜಗುಣ ರಾಜಗುರು, ಡಾ. ಮುದ್ದುಮೋಹನ್, ಡಾ.ಉದಯಕುಮಾರ ದೇಸಾಯಿ, ಸಂಗೀತಾ ಕಟ್ಟಿ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ: ರೈತರ ಪಾಲಿಗೆ ಲಕ್ಷ್ಮಿಯಾದ ಹೂವು! ಕೆಜಿ ಕನಕಾಂಬರಕ್ಕೆ 2 ಸಾವಿರ; ಚೆಂಡು, ಸೇವಂತಿಗೆ ಎಷ್ಟು ಗೊತ್ತಾ?
ಮುಂಬಯಿಯ ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು ಮತ್ತು ಧಾರವಾಡದ ಡಾ.ಉದಯ ಕುಲಕರ್ಣಿ ಹಾಗೂ ಬೆಂಗಳೂರಿನ ಇಮಾನ್ ದಾಸ್ ಅವರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
1 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡ 2023-24 ನೇ ಸಾಲಿನ ಪಂ.ಬಸವರಾಜ ರಾಜಗುರು ರಾಷ್ತ್ರೀಯ ಪ್ರಶಸ್ತಿಯನ್ನು ಮುಂಬೈನ ಸಂಗೀತ ಕಲಾವಿದೆ ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ಪ್ರದಾನ ಮಾಡಲಾಯಿತು. ಇನ್ನು ರಾಷ್ಟ್ರೀಯ ಯುವ ಪ್ರಶಸ್ತಿಯನ್ನು ಧಾರವಾಡದ ತಬಲಾ ವಾದಕ ಉದಯ ಕುಲಕರ್ಣಿ ಹಾಗೂ ಬೆಂಗಳೂರಿನ ಗಾಯಕ ಇಮಾನ ದಾಸ್ ಅವರಿಗೆ ನೀಡಲಾಯಿತು. ಈ ರಾಷ್ಟ್ರೀಯ ಯುವ ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರಿಗೆ ತಲಾ 25,000 ರೂ. ಮೊತ್ತದ ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ವಿತರಿಸಲಾಯಿತು.
ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:05 pm, Thu, 24 August 23