ದಾವಣಗೆರೆ, ಆಗಸ್ಟ್ 20: ತರಾಟೆಗೆ ತೆಗೆದುಕೊಂಡಿದ್ದಕ್ಕೆ ನನ್ನ ಫಾರ್ಮ್ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಸಚಿವ ಎಸ್ಎಸ್ ಮಲ್ಲಿಕಾರ್ಜುನ (S.S.Mallikarjun) ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ಡಿಸಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಬಡವರಿಗೆ ಅನಗತ್ಯವಾಗಿ ಅರಣ್ಯ ಅಧಿಕಾರಿಗಳು ಹಿಂಸೆ ನೀಡುತ್ತಿದ್ದರು. ಬೇಕಿದ್ದರೆ ಶ್ರೀಗಂಧ ಸೇರಿದಂತೆ ಬೆಲೆ ಬಾಳುವ ಮರಗಳ್ಳರನ್ನು ಹಿಡಿಯಲಿ. ಅದುಬಿಟ್ಟು ಅಡುಗೆ ಮಾಡಲು ಕಟ್ಟಿಗೆ ತುಂಡು ತಂದವರ ಮೇಲೆ ಕೇಸ್ ಹಾಕುತ್ತಿದ್ದರು. ಇಂತಹ ಕೆಲವು ಅಧಿಕಾರಿಗಳನ್ನು ನಾನು ತರಾಟೆಗೆ ತೆಗೆದುಕೊಂಡಿದ್ದೆ. ಇದೇ ಸೇಡು ಇಟ್ಟುಕೊಂಡು ನನ್ನ ಮೇಲೆ ಟಾರ್ಗೆಟ್ ಮಾಡಿದ್ದರು. ಉದ್ದೇಶ ಪೂರ್ವಕವಾಗಿ ಫಾರ್ಮ್ಹೌಸ್ ಮೇಲೆ ದಾಳಿ ಮಾಡಿದ್ದರು ಎಂದರು.
ಮಲ್ಲಿಕಾರ್ಜುನ ಅವರ ಫಾರ್ಮ್ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು 2022ರ ಡಿಸೆಂಬರ್ 22 ರಂದು ದಾಳಿ ನಡೆಸಿದ್ದರು. ಈ ವೇಳೆ ಪರವಾನಗಿ ಪಡೆಯದೇ ಚುಕ್ಕೆ ಜಿಂಕೆಗಳು, ಕೃಷ್ಣಮೃಗಗಳು, ಕಾಡುಹಂದಿಗಳು, ಮುಂಗುಸಿಗಳು, ನರಿಗಳನ್ನು ಸಾಕುತ್ತಿದ್ದ ಅಂಶ ಬೆಳಕಿಗೆ ಬಂದಿತ್ತು. ಅಲ್ಲದೆ, ಫಾರ್ಮ್ಹೌಸ್ನಲ್ಲಿದ್ದ ಎಲ್ಲಾ ಕಾಡು ಪ್ರಾಣಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಉಪೇಂದ್ರ ಬೆನ್ನಲ್ಲೇ ಇದೀಗ ಸಚಿವ ಎಸ್ಎಸ್ ಮಲ್ಲಿಕಾರ್ಜುನ ವಿಡಿಯೋ ವೈರಲ್, ದೂರು ದಾಖಲು
ಪ್ರಕರಣ ಸಂಬಂಧ ಮಲ್ಲಿಕಾರ್ಜುನ ಸೇರಿದಂತೆ ಕೆಲವರ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ ದಾವಣಗೆರೆಯ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಮಲ್ಲಿಕಾರ್ಜುನ ಅವರು ಜಾಮೀನು ಅರ್ಜಿ ಸಲ್ಲಿಸಿದ್ದು, ಜಾಮೀನು ಕೂಡ ಮಂಜೂರಾಗಿತ್ತು.
ದೇವರಾಜ್ ಅರಸ್ ಅವರ 108 ನೇ ಜನ್ಮದಿನಾಚರಣೆ ಪ್ರಯುಕ್ತ ದಾವಣಗೆರೆಯ ದೇವರಾಜ್ ಅರಸು ಸರ್ಕಲ್ನಲ್ಲಿರುವ ದೇವರಾಜ್ ಅರಸ್ ಪ್ರತಿಮೆಗೆ ಮಲ್ಲಿಕಾರ್ಜುನ್ ಅವರು ಮಾಲಾರ್ಪಣೆ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ವೆಂಕಟೇಶ್, ಎಸ್ಪಿ ಡಾ. ಅರುಣ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಮಾಲಾರ್ಪಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ್, ಅಮೇರಿಕಾದದಲ್ಲಿ ದಾವಣಗೆರೆಯ ಮೂಲದ ದಂಪತಿಗಳು ಮಗು ಸಮೇತಾ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹವನ್ನು ದಾವಣಗೆರೆಗೆ ತರಿಸಲು ಜಿಲ್ಲಾಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ. ಮೃತರ ಸಂಬಂಧಿಕರು ಅಲ್ಲೇ ಇದ್ದಾರೆ. ಅವರು ನೋಡಿ ಹೇಳುತ್ತಾರಂತೆ. ಅದು ಅತ್ಮಹತ್ಯೆಯೇ ಅಥವಾ ಅಲ್ಲವೋ ಎನ್ನುವುದು ಅಲ್ಲಿನ ಪೊಲೀಸರು ತನಿಖೆ ನಡೆಸಿದ ನಂತರ ಮಾಹಿತಿ ನೀಡುತ್ತಾರೆ ಎಂದರು.
ಬಿಜೆಪಿಗೆ ಹೋದವರು ಘರ್ ವಾಪಸ್ಸಿ ಆಗುತ್ತಾರೆಯೇ ಎಂಬುದರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ಅವರನ್ನು ನಾವು ನಮ್ಮ ಪಕ್ಷಕ್ಕೆ ಕರೆದಿಲ್ಲ. ಇದರ ಬಗ್ಗೆ ನಾನೇನು ಮಾತಾಡುವುದಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ