ದಾವಣಗೆರೆ: ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಕೆರೆ ಅಂದರೇ ಅದು ದಾವಣಗೆರೆ (Davangere) ಜಿಲ್ಲೆಯಲ್ಲಿರುವ ಸೂಳೆಕೆರೆ. ಈ ಕೆರೆ ಚಿತ್ರುದುರ್ಗ, ಚನ್ನಗಿರಿ ಹೊಳಲ್ಕೆರೆ ಜಗಳೂರು ಸೇರಿದಂತೆ 612 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತದೆ . 10 ಸಾವಿರ ಎಕರೆ ಭೂಮಿಗೆ ನೀರುಣಿಸುತ್ತಿದೆ. ಆದರೆ ಇದೀಗ ಕೆರೆ ನೀರು ಕುಡಿಯಲು ಯೋಗ್ಯವಲ್ಲವೆಂದು ಜಿಲ್ಲಾಡಳಿತ ನೀರು ಪೂರೈಕೆಯನ್ನು ಬಂದ್ ಮಾಡಿದೆ.
ಹೌದು ಇತ್ತೀಚಿಗೆ ಕೆರೆ ನೀರು ಕಲುಷಿತವಾಗಿ ಮತ್ತು ಬೇರೆ ಬಣ್ಣಕ್ಕೆ ತಿರುಗಿದ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಇದೀಗ ಪ್ರಯೋಗಾಲಯದ ವರದಿ ಬಂದಿದ್ದು, ಈ ಕೆರೆಯ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಹೇಳಿದೆ. ಈ ವರದಿ ಬರುತ್ತಿದ್ದಂತೆ ದಾವಣಗೆರೆ ಜಿಲ್ಲಾಡಳಿತ ಸೂಳೆಕೆರೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೇ ನೀರು ಪೂರೈಕೆ ಘಟಕದ ಫಿಲ್ಟರ್ಗಳು ಹಾಳಾಗಿವೆ.
ಸೂಳೆಕೆರೆಯಿಂದ ನೀರು ಪೂರೈಕೆ ಮಾಡುವ ನೀರು ಶುದ್ಧೀಕರಣ ಘಟಕದಲ್ಲಿ ಫಿಲ್ಟರ್ಗಳು ಹಾಳಾಗಿವೆ.
ಫಿಲ್ಟರ್ ಹಾಳಾದರೂ ನೀರು ಪೂರೈಕೆ ಮಾಡಿದ್ದರಿಂದ ತೊಂದರೆ ಆಗಿದೆ. ಚನ್ನಗಿರಿ ಮತ್ತು ಜಗಳೂರು ಪಟ್ಟಣ ಹಾಗೂ ಚಿತ್ರದುರ್ಗ ನಗರಕ್ಕೆ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಸದ್ಯಕ್ಕೆ ನೀರು ಪೂರೈಕೆ ಸ್ಥಗಿತವಾಗಿದ್ದು ಫಿಲ್ಟರ್ ಅಳವಡಿಸಲಾಗುವುದು. ನೀರು ಶುದ್ಧೀಕರಣವಾದ ಬಳಿಕ ಇನ್ನೊಮ್ಮೆ ಪ್ರಯೋಗಾಲಯಕ್ಕೆ ನೀರು ಕಳುಸಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯಕ್ಕೆ ಬೋರ್ ವೆಲ್ ಹಾಗೂ ಭದ್ರಾ ನಾಲೆಯ ಪಂಪ್ ಹೌಸ್ ನಿಂದ ನೀರು ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತ್ ಸಿಇಓ ಸುರೇಶ ಇಟ್ನಾಳ್ ಮಾಹಿತಿ ನೀಡಿದ್ದಾರೆ.
ಚನ್ನಗಿರಿ, ಜಗಳೂರು ಹಾಗೂ ಚಿತ್ರದುರ್ಗಕ್ಕೆ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಇದೀಗ ನೀರು ಕುಡಿಯಲು ಯೋಗ್ಯವಲ್ಲದ ಹಿನ್ನೆಲೆ ಕುಡಿಯಲು ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್ ಹೇಳಿದ್ದಾರೆ.
ಈ ಕೆರೆಗೆ ಶತಮಾನದ ಇತಿಹಾಸವಿದೆ. ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಇರುವ ಕೆರೆ ಏಷ್ಯಾದ ನಂಬರ್ ಒನ್ ಕೆರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಇರುವ ಈ ಕೆರೆ ನಂಬರ್ ಎರಡನೇ ಸ್ಥಾನದಲ್ಲಿದೆ. ಸುಮಾರು 60 ಕಿಲೋ ಮೀಟರ್ ಸುತ್ತಳತೆ ಇದೆ. ಮೂರು ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಸ್ಥಳೀಯ ಇತಿಹಾಸದ ಪ್ರಕಾರ ಶತಮಾನದ ಹಿಂದೆ ಇಲ್ಲಿ ವಾಸವಾಗಿದ್ದ ಸೂಳೆ ಶಾಂತವ್ವ ಎಂಬ ಮಹಿಳೆ ಈ ಕೆರೆ ಕಟ್ಟಿಸಿದ್ದಾಳೆ.
ಈ ಕೆರೆಯನ್ನು ಗುಡ್ಡದ ಮೇಲೆ ನಿಂತು ನೋಡಿದರೆ ಇಡಿ ಕೆರೆ ಹೃದಯ ಆಕಾರದಂತೆ ಕಾಣುತ್ತದೆ. ಹಿರೇಹಳ್ಳ, ಹರಿದ್ರಾವತಿ ಹಾಗೂ ತುಮರು ಹಳ್ಳಗಳ ನೀರು ಹರಿದು ಈ ಕೆರೆಗೆ ಬರುತ್ತದೆ. ಭದ್ರ ಡ್ಯಾಂನಿಂದ ಬರುವ ನೀರಿನಿಂದ ಕೆರೆ ತುಂಬಿಸಲಾಗುತ್ತದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಜಗಳೂರು ತಾಲೂಕು ಹಾಗೂ ಪಕ್ಕದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲೂಕಿನ 612 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿರುವುದು ಈ ಕೆರೆಯಿಂದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sun, 13 August 23