ಬೆಳ್ತಂಗಡಿ ಬಿಜೆಪಿ ಶಾಸಕನ ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಗ್ರಾಮ ಪಂಚಾಯತ್ ಸಿಬ್ಬಂದಿ ಅಮಾನತು
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉಜಿರೆ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪಿಡಿಓ ಆದೇಶ ಹೊರಡಿಸಿದ್ದಾರೆ.
- ರಾಜ್ಯ ವಿಧಾಸನಭೆ ಚುನಾವಣೆ ಮುಗಿದು 10 ದಿನ ಕಳೆದಿದ್ದು, ಗೆದ್ದ ನಾಯಕರು ವಿಜಯೋತ್ಸವ ಆಚರಿಸುತ್ತಿದ್ದಾರೆ.
- ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿಜಯೋತ್ಸವ ಕಾರ್ಯಕ್ರಮ
- ಉಜಿರೆಯ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪಿಡಿಓ ಆದೇಶ ಹೊರಡಿಸಿದ್ದಾರೆ.
ಮಂಗಳೂರು: ರಾಜ್ಯ ವಿಧಾಸನಭೆ ಚುನಾವಣೆ (Karnataka Assembly Election) ಮುಗಿದು 10 ದಿನ ಕಳೆದಿದ್ದು, ಗೆದ್ದ ನಾಯಕರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಇದೆ ರೀತಿ ಬೆಳ್ತಂಗಡಿ (Belthangady) ಬಿಜೆಪಿ (BJP) ಶಾಸಕ ಹರೀಶ್ ಪೂಂಜಾ (Harish Poonja) ಅವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉಜಿರೆಯ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪಿಡಿಓ ಆದೇಶ ಹೊರಡಿಸಿದ್ದಾರೆ. ನಾಗೇಶ್ ಅಮಾನತಾದ ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಚುನಾವಣಾ ಪ್ರಚಾರ ಹಾಗೂ ವಿಜಯೋತ್ಸವದಲ್ಲಿ ಪಂಚಾಯಿತಿ ಸಿಬ್ಬಂದಿ ನಾಗೇಶ್ ಬಿಜೆಪಿ ಬಾವುಟ ಹಿಡಿದು ತಿರುಗುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆ ಸೇವೆಯಿಂದ ಅಮಾನತು ಮಾಡಿ ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ ಆದೇಶ ಹೊರಡಿಸಿದ್ದಾರೆ.
ಹರೀಶ್ ಪೂಂಜಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಕಾಂಗ್ರೆಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಇದೇ ತಿಂಗಳ 22ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಹರೀಶ್ ಪೂಂಜಾ ಅವರು, 24 ಹಿಂದೂ ಕಾರ್ಯಕರ್ತರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆಂದು ತುಳುವಿನಲ್ಲಿ ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕೂಡ ವೈರಲ್ ಆಗಿತ್ತು.
ಇದನ್ನೂ ಓದಿ : ಕರಾವಳಿಯಿಂದ ಗೆದ್ದಿದ್ದು ಇಬ್ಬರೇ, ಒಬ್ಬರು ಸ್ಪೀಕರಾದರೆ ಮತ್ತೊಬ್ಬರು ಹೊಸಬರು; ಇನ್ಯಾರಿಗೆ ಸಚಿವ ಸ್ಥಾನ?
ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ನಮಿತಾ ಪೂಜಾರಿ ನೀಡಿದ ದೂರಿನ ಆಧಾರದ ಮೇಲೆ ಬುಧವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು.
ಹರೀಶ್ ಪೂಂಜಾ ಚುನಾವಣೆ ಗೆಲ್ಲಲು ಹಣ ಹಂಚಿದ್ದಾರೆ: ಹರೀಶ್ ಕುಮಾರ್
ಈ ಕುರಿತಾಗಿ ನಗರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಹರೀಶ್ ಪೂಂಜಾ ಚುನಾವಣೆ ಗೆಲ್ಲಲು 40% ಕಮಿಷನ್ ಹಣ ಹಂಚಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಗೆಲ್ಲಲು ಹರೀಶ್ ಪೂಂಜಾ ಹಣದ ಹೊಳೆ ಹರಿಸಿದ್ದಾರೆ. ಸುಮಾರು 30ರಿಂದ 40 ಕೋಟಿ ಹಣ ಖರ್ಚು ಮಾಡಿ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪ ಮಾಡಿದ್ದರು.
ಚುನಾವಣೆ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸರನ್ನು ಪೂಂಜಾ ಬುಕ್ ಮಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈಗ ನಮ್ಮ ಸರ್ಕಾರ ಇರುವುದರಿಂದ ಪೂಂಜಾ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಕಿಡಿಕಾರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Fri, 26 May 23