ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ; ಮೂರು ತಿಂಗಳಲ್ಲಿ ನಾಲ್ವರು ಸಾವು

| Updated By: Kiran Hanumant Madar

Updated on: Aug 20, 2023 | 9:03 PM

ದಕ್ಷಿಣ ಕನ್ನಡ ಜಿಲ್ಲೆಯು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿರುವ ಜಿಲ್ಲೆ. ಆದರೆ, ಇದೀಗ ಸ್ವತ ಆರೋಗ್ಯ ಸಚಿವರೇ ಉಸ್ತುವಾರಿಯಾಗಿರುವ ಈ ಜಿಲ್ಲೆಯಲ್ಲಿ ವೈದ್ಯರುಗಳ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಮೂರು ತಿಂಗಳ ಅಂತರದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ನಾಲ್ವರು ರೋಗಿಗಳು ಸಾವನ್ನಪ್ಪಿದ್ದು, ಆತಂಕಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ; ಮೂರು ತಿಂಗಳಲ್ಲಿ ನಾಲ್ವರು ಸಾವು
ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ
Follow us on

ದಕ್ಷಿಣ ಕನ್ನಡ, ಆ.20: ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ(Dakshina Kannada) ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಆದರೆ, ಇಂತಹ ಜಿಲ್ಲೆಯಲ್ಲಿನ ಕೆಲ ಆಸ್ಪತ್ರೆಗಳ ವೈದ್ಯರ ವಿರುದ್ಧ ನಿರ್ಲಕ್ಷ್ಯ ಧೋರಣೆಯ ಆರೋಪ ಕೇಳಿ ಬರುತ್ತಿದೆ. ಹೌದು, ಜಿಲ್ಲೆಯ ಕೆಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳು ಮೃತಪಟ್ಟಿರುವ ಆರೋಪಗಳು ಕೇಳಿ ಬಂದಿವೆ. ಅಷ್ಟೇ ಅಲ್ಲದೆ ಆಸ್ಪತ್ರೆಯ ಮುಂದೆ ಕುಟುಂಬಸ್ಥರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆಗಳೂ ನಡೆದಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಬೆಳ್ತಂಗಡಿಯಲ್ಲಿ ಇಂತಹ ನಾಲ್ಕು ಪ್ರಕರಣ ವರದಿಯಾಗಿದೆ.

 ಮೂರು ತಿಂಗಳಲ್ಲಿ ಬಲಿಯಾದ ಪ್ರಕರಣಗಳು ಇಲ್ಲಿವೆ

1) ಮಂಗಳೂರು- ಮೇ 14ರಂದು ಹೊಟ್ಟೆ ನೋವಿನಿಂದ ಮಂಗಳೂರಿನ ಸರಕಾರಿ ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ನಿತೀನ್ ಪೂಜಾರಿ ಎಂಬ ಯುವಕನಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದ.

2) ಮಂಗಳೂರು- ಜುಲೈ 25ರಂದು ಮಂಗಳೂರಿನ ಖಾಸಗಿ ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದ ಆರೋಪ ಕೇಳಿಬಂದಿತ್ತು.

3) ಬೆಳ್ತಂಗಡಿ- ಆಗಸ್ಟ್ 8ರಂದು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಒಂದೂವರೆ ತಿಂಗಳ ಹಸುಗೂಸು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿತ್ತು.

4) ಪುತ್ತೂರು- ಆಗಸ್ಟ್ 13ರಂದು ಹೊಟ್ಟೆ ನೋವಿನ ಕಾರಣಕ್ಕೆ ಪುತ್ತೂರಿನ ಚೇತನಾ ಖಾಸಗಿ ಆಸ್ಪತ್ರೆಗೆ ಸೇರಿದ್ದ ಯುವಕ ಮೃತನಾಗಿದ್ದ.

ಇದನ್ನೂ ಓದಿ:ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ 4 ತಿಂಗಳ ಮಗು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರ ಆರೋಪ

ಹೀಗೆ ಈ ಎಲ್ಲಾ ಸಾವುಗಳು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಸಂಭವಿಸಿವೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯೂ ಎಚ್ಚೆತ್ತುಕೊಂಡಿದ್ದು, ಎಲ್ಲೆಲ್ಲಿ ಈ ರೀತಿ ಆರೋಪ ಕೇಳಿ ಬಂದಿತ್ತು. ಅಲ್ಲೆಲ್ಲ ಈಗಾಗಲೇ ಆರೋಗ್ಯ ಇಲಾಖೆಯ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಮುಂದಿನ ದಿನದಲ್ಲಿ ಈ ರೀತಿ‌ ಘಟನೆ ನಡೆಯದಂತೆ ನಿಗಾವಹಿಸಲು ವಿಶೇಷ ತಂಡವನ್ನು ನಿಯೋಜನೆ ಮಾಡಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ. ಇದರ ಜೊತೆಗೆ ಪ್ರೊಟೋಕಾಲ್ ಪ್ರಕಾರ ಚಿಕಿತ್ಸೆ ನಡೆದಿದೆಯಾ, ಪ್ರಾಣಕ್ಕೆ ಅಪಾಯ ಆಗುವ ಸಂದರ್ಭ ಯಾಕಾಗಿ ಬಂತು, ಅಗತ್ಯ ಚಿಕಿತ್ಸೆ ಸರಿಯಾದ ಸಂದರ್ಭಕ್ಕೆ ಸಿಕ್ಕಿದೆಯಾ ಈ ಎಲ್ಲದರ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಕುಮಾರ್ ಹೇಳಿದ್ದಾರೆ.

ಒಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗೂಂಡುರಾವ್ ಉಸ್ತುವಾರಿ ಸಚಿವರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವೈದ್ಯರ ನಿರ್ಲಕ್ಷ್ಯಕ್ಕೆ ತುತ್ತಾಗಿ ರೋಗಿಗಳ ಸಾವುಗಳು ಸಂಭವಿಸುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಏನು, ಎಲ್ಲಿ ಎಡವಟ್ಟಾಗಿದೆ. ಈ ಎಲ್ಲವನ್ನೂ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ. ಜೊತೆಗೆ ವೈದ್ಯರನ್ನೇ ದೇವರೆಂದು ನಂಬಿ ಆಸ್ಪತ್ರೆಗೆ ಹೋಗುವ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಸ್ಪತ್ರೆಗಳು ಕಾರ್ಯವಹಿಸಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ