ಕರಾವಳಿಯಲ್ಲಿ ನಡೆಯುತ್ತೆ ಪ್ರೇತಾತ್ಮಗಳ ವಿವಾಹ; ಏನಿದು ಅಂತೀರಾ? ಇಲ್ಲಿದೆ ನೋಡಿ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವರ್ಷಕ್ಕೊಂದು ಬಾರಿ, ಅದ್ಧೂರಿಯಾಗಿ ಅಲ್ಲದೆ ಇದ್ದರೂ ಕುಟುಂಬಸ್ಥರು ಹಾಗೂ ತೀರಾ ಆತ್ಮೀಯರು ಪಾಲ್ಗೊಂಡು ಸರಳವಾಗಿ ಮದುವೆ ನಡೆಯುತ್ತದೆ. ಮದುವೆಯಾದ ಜೋಡಿ ಸುಖವಾಗಿರಲಿ ಎಂದು ಹಾರೈಸಿ ಹಿರಿಯರ ಆಶೀರ್ವಾದ ಕೂಡ ನವಜೋಡಿಗಳಿಗೆ ಸಿಕ್ಕಿತ್ತು. ಆದ್ರೆ, ವಿಶೇಷ ಅಂದ್ರೆ ಆ ನವಜೋಡಿಗಳು ಮದುವೆಯ ಸಮಾರಂಭದಲ್ಲಿದ್ದ ಯಾರ ಕಣ್ಣಿಗೂ ಕಾಣಿಸದೆ ಹಸಮಣೆ ಏರಿ ಎಲ್ಲಾ ಶಾಸ್ತ್ರ ಮುಗಿಸಿದ್ರು. ಅರೆ! ವದು ವರ ಇಲ್ಲದೆ ಇದೆಂತಾ ಮದುವೆ ಅಂತಿರಾ? ಹಾಗಿದ್ರೆ ಈ ಸ್ಟೋರಿ ಓದಿ.
ದಕ್ಷಿಣ ಕನ್ನಡ, ಆ.9: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ(Dakshina Kannada), ಉಡುಪಿ(Udupi) ಜಿಲ್ಲೆಗಳಲ್ಲಿ ವರ್ಷಕ್ಕೊಂದು ಬಾರಿ ಕುಟುಂಬದಲ್ಲಿ ಯಾರಾದ್ರೂ, ಮದುವೆ(Marriage)ಯಾಗದೇ ಅಕಾಲಿಕವಾಗಿ ಮೃತ ಪಟ್ಟಿದ್ದರೆ ಅಂತವರ ಮದುವೆಯನ್ನು ತುಳು ಸಂಪ್ರದಾಯದ ಪ್ರಕಾರ ಮಾಡಲಾಗುತ್ತದೆ. ತುಳು ಮಾಸ ಆಟಿ ಅಂದರೆ, ಯಾವುದೇ ಶುಭಕಾರ್ಯಗಳು ಕರಾವಳಿ ಭಾಗದಲ್ಲಿ ನಡೆಯುವುದಿಲ್ಲ. ಆದ್ರೆ, ಈ ಸಮಯದಲ್ಲಿ ಇಂತಹ ಮದುವೆಯ ಸಂಪ್ರದಾಯಗಳು ನಡೆಯುತ್ತದೆ. ಅದರಂತೆ ಇದೀಗ ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿಯ ವದುವಿನ ಕುಟುಂಬ ಹಾಗೂ ಉಳ್ಳಾಲ ತಾಲೂಕಿನ ಕೋಣಾಜೆ ಸಮೀಪದ ಬೊಳ್ಮ ಎಂಬಲ್ಲಿಯ ವರನ ಕುಟುಂಬದ ನಡುವೆ ಮದುವೆ ಸಂಬಂಧ ಏರ್ಪಟ್ಟಿದೆ.
ಮೃತಪಟ್ಟವರ ಆಸೆ ಈಡೇರಿಸುವ ವಿಶಿಷ್ಟ ಆಚರಣೆ
ಬಂಟ್ವಾಳ ತಾಲೂಕಿನ ವಗ್ಗದ ಮಾಂಗಜೆ ಎಂಬಲ್ಲಿಯ ಸಂಜೀವ ಪೂಜಾರಿಯವರ ಮಗಳು ವಿಶಾಲಾಕ್ಷಿ 2 ವರ್ಷದ ಮಗುವಾಗಿದ್ದಾಗ ಅಂದರೆ ಸರಿ ಸುಮಾರು 35 ವರ್ಷಗಳ ಹಿಂದೆ ಮೃತ ಪಟ್ಟಿದ್ದಾರೆ. ಇನ್ನು ಉಳ್ಳಾಲದ ಕೊಣಾಜೆ ಸಮೀಪದ ಬೊಳ್ಮ ಗ್ರಾಮದ ಲಕ್ಷ್ಮಣ ಪೂಜಾರಿಯವರ ಪುತ್ರ ಧರಣೇಶ್ ಕಳೆದ ಎರಡು ವರ್ಷಗಳ ಹಿಂದೆ ಮೃತ ಪಟ್ಟಿದ್ದಾರೆ. ಹೌದು, ಹೃದಯದ ತೊಂದರೆ ಇದ್ದ ಕಾರಣ ಧರಣೇಶ್ ಅವರಿಗೆ ಮದುವೆ ಮಾಡುವ ಬಗ್ಗೆ ಮನೆಯವರು ಯೋಚನೆ ಮಾಡಿರಲಿಲ್ಲ. ಆದ್ರೆ, ಧರಣೇಶ್ಗೆ ಮದುವೆ ಆಗಬೇಕು ಎನ್ನುವ ಆಸೆ ಇತ್ತಾದರೂ ಹೃದಯದ ಕಾಯಿಲೆಯಿಂದ ಗುಣಮುಖವಾಗದೆ ಮೃತ ಪಟ್ಟಿದ್ದರು. ವದುವಿನ ಕಡೆಯವರಿಗೆ ಜ್ಯೋತಿಷ್ಯದಲ್ಲಿ ಕಂಡು ಬಂದಂತೆ ವಿಶಾಲಕ್ಷಿಗೆ ಮದುವೆ ಮಾಡಬೇಕಾಗಿತ್ತು. ಈ ವೇಳೆ ವರಾನ್ವೇಶಣೆ ನಡೆಸಿದಾಗ ಧರಣೇಶನ ಸಂಬಂಧ ಸಿಕ್ಕಿ ಎಲ್ಲಾ ಮಾತುಕತೆ ನಡೆಸಿ ಸಂಪ್ರದಾಯದಂತೆ ಮದುವೆ ಕಾರ್ಯ ಮಾಡಲಾಗಿದೆ.
ತುಳುನಾಡಿನಲ್ಲಿ ಆಟಿ ಮಾಸದಲ್ಲಿ ನಡೆಯುವ ಈ ಪ್ರೇತಗಳ ಮದುವೆ ವಿಚಿತ್ರ ಅನಿಸಿದರೂ, ಬಹಳಷ್ಟು ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಕ್ಕಿಲ್ಲದೆ ಇದ್ದರೆ ಕುಟುಂಬದಲ್ಲಿ ಕಾಣಿಸುವ ಸಮಸ್ಯೆಗಳಿಗೆ ಜ್ಯೋತಿಷ್ಯದಲ್ಲಿ ಕಂಡು ಬರುವ ಪರಿಹಾರವಾಗಿ ಈ ರೀತಿಯ ಮದುವೆಗಳು ನಡೆಯುತ್ತದೆ. ಈ ಪ್ರೇತಾತ್ಮಗಳ ಮದುವೆ ತುಳು ಸಂಪ್ರದಾಯದ ಕಟ್ಟುಪಾಡುಗಳಂತೆ ನಡೆಯುವುದು ಒಂದು ವಿಶೇಷ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 am, Wed, 9 August 23