ಚಿತ್ರದುರ್ಗ, ಆಗಸ್ಟ್ 05: ಆಡಳಿತ ವೈಫಲ್ಯ ಮತ್ತು ಸಾರ್ವಜನಿಕರಿಂದ ದೂರು ಹಿನ್ನೆಲೆ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ನನ್ನು ಅಮಾನತ್ತುಗೊಳಿಸಿ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಡಾ. ಬಸವರಾಜ ಅಮಾನತ್ತಾದ ಸರ್ಜನ್. ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಹೆರಿಗೆ ವಾರ್ಡ್, ಎಕ್ಸ್ ರೇ ಸೇರಿ ಹಲವೆಡೆ ಲಂಚಕ್ಕೆ ಬೇಡಿಕೆ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ.
ಬಳಿಕ ಡಿಸಿ ದಿವ್ಯಪ್ರಭುರಿಂದ ಮಾಹಿತಿ ಪಡೆದ ಸಚಿವ ದಿನೇಶ್ ಗುಂಡೂರಾವ್, ಹಲವು ದೂರುಗಳು, ಆಡಳಿತ ವೈಫಲ್ಯ ಕಂಡು ಬಂದಿದ್ದರಿಂದ ಸರ್ಜನ್ ಡಾ. ಬಸವರಾಜ ಅಮಾನತ್ತಿಗೆ ಸಚಿವರು ಸೂಚಿಸಿದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ 5 ಜನ ತೀರಿ ಹೋಗಿದ್ದಾರೆ.
ನೀರಿನ ಕಲುಷಿತದಿಂದ ತೀರಿ ಹೋಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ಮಾಡಲು ಹೇಳಿದ್ದೇವೆ. ಜಿಲ್ಲಾಸ್ಪತ್ರೆಗೂ ಕೂಡ ಭೇಟಿ ಕೊಟ್ಟಿದ್ದೆ. ಅಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿತ್ತು. ಹಾಗಾಗಿ ಅಲ್ಲಿನ ಸರ್ಜನ್ನ್ನು ಅಮಾನತು ಮಾಡಲು ಹೇಳಿದ್ದೇನೆ ಎಂದರು.
ಇದನ್ನೂ ಓದಿ: ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಐವರು ಸಾವು; ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ – ಗುಂಡೂರಾವ್
ಆಸ್ಪತ್ರೆಗೆ ತಂಡ ಕಳುಹಿಸಲು ಹೇಳಿದ್ದೇನೆ. ಅಲ್ಲಿ ಇಷ್ಟು ದೂರು ಬರಲು ಕಾರಣ ಏನು ಎಂದು ವರದಿ ಕೊಡಲು ಹೇಳಿದ್ದೇನೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ರೋಗಿಗಳು ಸಂಬಂಧಿಕರು ಸಾಕಷ್ಟು ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡಿದ್ದಾರೆ.
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ಬಗ್ಗೆ ಸರ್ಕಾರದ ಬೇಜವಾಬ್ದಾರಿ ಕಾಣಿಸುತ್ತಿದೆ. ಘಟನೆಯಾಗಿ ಒಂದು ವಾರದ ಬಳಿಕ ಆರೋಗ್ಯ ಸಚಿವರು ಭೇಟಿ ನೀಡಿಲ್ಲ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಸೌಕರ್ಯವಿಲ್ಲ. ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಯ ಆಗರ ಆಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಕಲುಷಿತ ನೀರು ಸೇವನೆ ಪ್ರಕರಣ: ಅಸ್ವಸ್ಥಗೊಂಡವರ ಸಂಖ್ಯೆ 185ಕ್ಕೆ ಏರಿಕೆ
ಸರ್ಕಾರಕ್ಕೆ ಐನೂರು ಜನರಿಗೆ ಚಿಕಿತ್ಸೆ ಕೊಡುವ ಶಕ್ತಿಯಿಲ್ಲವೇ? ಬಸವೇಶ್ವರ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ ನೀಡಬೇಕು. ಐವರ ಸಾವು ಸಂಭವಿಸಿದ್ದಲ್ಲ, ಸರ್ಕಾರದ ಕೊಲೆಯಿದು. ಮೃತರ ಕುಟುಂಬಕ್ಕೆ ತಲಾ 25ಲಕ್ಷ ರೂ. ಪರಿಹಾರ ನೀಡುವುದರ ಜೊತೆಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.