ಚಿಕ್ಕಮಗಳೂರು: ಮೂಲಭೂತ ಸೌಲಭ್ಯಕ್ಕಾಗಿ ಗ್ರಾಮಸ್ಥರಿಂದ ಪ್ರಧಾನಿಗೆ ಪತ್ರ; 10 ದಿನದಲ್ಲಿ ಹಳ್ಳಿಗರ ಜತೆ ಮಾತನಾಡಲಿರುವ ಮೋದಿ

| Updated By: Kiran Hanumant Madar

Updated on: Aug 20, 2023 | 6:54 PM

ಅದು ಕಾಡಂಚಿನ ಕುಗ್ರಾಮ. ಅಲ್ಲಿ ಬದುಕುವುದೇ ಕಷ್ಟವಾಗಿದೆ. ಹೌದು, ಅಲ್ಲಿ ಕುಡಿಯೋಕೆ ನೀರಿಲ್ಲ, ಓಡಾಡೋಕೆ ರಸ್ತೆ ಇಲ್ಲ. ಕರೆಂಟ್ ಕೇಳೋದೇ ಬೇಡ. ಸ್ವತಂತ್ರ ಬಂದು ಏಳೂವರೆ ದಶಕಗಳೇ ಕಳೆದರೂ, ಅವರು ಇಂದಿಗೂ ನಿರಾಶ್ರಿತರಂತೆಯೇ ಬದುಕುತ್ತಿದ್ದಾರೆ. ಜನನಾಯಕರು, ಅಧಿಕಾರಿಗಳಿಗೆ ಹೇಳಿ ಸಾಕಾಗಿ ಪ್ರಧಾನಿಗೆ ಪತ್ರ ಬರೆದಿದ್ದರು. ಇದೀಗ ಅವರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ಉತ್ತರ ನೀಡಿದೆ.

ಚಿಕ್ಕಮಗಳೂರು: ಮೂಲಭೂತ ಸೌಲಭ್ಯಕ್ಕಾಗಿ ಗ್ರಾಮಸ್ಥರಿಂದ ಪ್ರಧಾನಿಗೆ ಪತ್ರ; 10 ದಿನದಲ್ಲಿ ಹಳ್ಳಿಗರ ಜತೆ ಮಾತನಾಡಲಿರುವ ಮೋದಿ
ಕೆಲವೇ ದಿನದಲ್ಲಿ ಹಳ್ಳಿಗರ ಜೊತೆ ಮಾತನಾಡಲಿರುವ ಮೋದಿ
Follow us on

ಚಿಕ್ಕಮಗಳೂರು, ಆ.20: ಓಡಾಡೋಕೆ ರಸ್ತೆ ಇಲ್ಲ. ಕುಡಿಯಲು ಶುದ್ಧ ನೀರೂ ಇಲ್ಲ. ಮಕ್ಕಳಿಗೆ ಶಿಕ್ಷಣವಂತೂ ದೂರದ ಮಾತು. ಈ ಆಧುನಿಕ ಭವ್ಯ ಭಾರತದಲ್ಲಿ ಆ ಕುಗ್ರಾಮಗಳ ಮನೆಗಳಿಗೆ ಕರೆಂಟ್​ ಕೂಡ ಇಲ್ಲ. ಹೌದು, ಕಾಫಿನಾಡು ಚಿಕ್ಕಮಗಳೂರು (Chikkamagalur) ಜಿಲ್ಲೆಯ ಕಳಸ ತಾಲೂಕಿನ ಕುಗ್ರಾಮ ಕುಂಬಳಡಿಕೆ ಗ್ರಾಮದ ದುಸ್ಥಿತಿಯಿದು. ಈ ಗ್ರಾಮದಲ್ಲಿ ಬರೊಬ್ಬರಿ 70ಕ್ಕೂ ಹೆಚ್ಚು ಕುಟುಂಬಗಳಿವೆ. ಅವರ ನೋವಿನ ಕೂಗೂ ಯಾರಿಗೂ ಕೇಳಿಸುತ್ತಿಲ್ಲ. ಈ ಕುರಿತು ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸುಸ್ತಾದ ಈ ಗಿರಿಜನರು ಇದೀಗ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದು, ಖುದ್ದು ಗ್ರಾಮಸ್ಥರೇ ಪ್ರಧಾನಿಗೆ ಪತ್ರ ಬರೆದು ತಮ್ಮ ಗ್ರಾಮದ ಸಮಸ್ಯೆ ಹೇಳಿಕೊಂಡಿದ್ದಾರೆ.

ಮುಂದಿನ 10ದಿನದಲ್ಲಿ ಖುದ್ದು ಪ್ರಧಾನಿಯೇ ಕರೆ ಮಾಡಿ ವಿಚಾರಿಸುವುದಾಗಿ ಹೇಳಿದ ಕಾರ್ಯಾಲಯ

ಹೌದು, ಹಳ್ಳಿಗರ ನೋವಿಗೆ ಎಚ್ಚೆತ್ತ ಪ್ರಧಾನಿ ಕಾರ್ಯಾಲಯ ಇದೀಗ ಸಂತ್ರಸ್ಥರ ನೆರವಿಗೆ ನಿಂತಿದೆ. ಮುಂದಿನ ಹತ್ತು ದಿನದಲ್ಲಿ ಖುದ್ದು ಪ್ರಧಾನಿ ಮೋದಿ ಅವರೇ ನಿಮಗೆ ಕರೆ ಮಾಡಿ ಸಮಸ್ಯೆ ಆಲಿಸುತ್ತಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಇದರಿಂದ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಕೊನೆಗೂ ನಮ್ಮ ಧ್ವನಿ ಕೇಳಿತು ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Double Bridge! ಚಿಕ್ಕಮಗಳೂರು: 30 ಮನೆಗಳಿರುವ ಕುಗ್ರಾಮಕ್ಕೆ ಎರಡು ಸೇತುವೆ ಭಾಗ್ಯ ಕಲ್ಪಿಸಿದ ಸರ್ಕಾರ, ಗ್ರಾಮಸ್ಥರು ಹೇಳೋದೇನು?

ಕನಿಷ್ಠ ಮೂಲಭೂತ ಸೌಲಭ್ಯವೂ ಇಲ್ಲದ ಕಾಡಂಚಿನ ಕುಗ್ರಾಮ; ಪ್ರಧಾನಿ ಮೋದಿಯ ಕರೆಗಾಗಿ ಗ್ರಾಮಸ್ಥರು ಕಾತುರ

ನಿಮಗೆ ಏನು ಬೇಕು ಎಂದು ಕಳೆದ 10 ವರ್ಷದಿಂದ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ ಈ ಕುಗ್ರಾಮಕ್ಕೆ ಬಂದಿಲ್ಲ. ಯಾರಾದ್ರು ಬಂದರೆ ಸಮಸ್ಯೆ ಹೇಳಿಕೊಳ್ಳಬಹುದು. ಯಾರೂ ಬರದಿದ್ರೆ, ಹೇಗೆ ಹೇಳುವುದು ಎಂದು ಹಳ್ಳಿಗರು ತಮ್ಮ ಅಸಹಾಯಕ ಸ್ಥಿತಿಯನ್ನು ಹೊರಹಾಕುತ್ತಿದ್ದಾರೆ. ಇದು ಯಥೇಚ್ಛವಾಗಿ ಮಳೆ ಬೀಳುವ ಪ್ರದೇಶ. ಟಾರ್ಪಲ್ ಕಟ್ಟಿಕೊಂಡು ಬದುಕುತ್ತಿರುವವರು ಹೆಚ್ಚಿದ್ದಾರೆ. ಜೋರು ಮಳೆ ಬಂದ್ರೆ, ಮನೆಯೊಳಗೆ ನೀರು ನಿಲ್ಲುವ ಪರಿಸ್ಥಿತಿಯಿದೆ.

ಆಧುನಿಕ ಭಾರತದಲ್ಲಿ ಕರೆಂಟ್ ಕಾಣದ ಗ್ರಾಮ​

ಕರೆಂಟ್ ಇಲ್ಲ, ಸೀಮೆಎಣ್ಣೆಯೂ ಸಿಗಲ್ಲ. ಇಲ್ಲಿನ ಜನ ಡಿಸೇಲ್‍ನಲ್ಲಿ ದೀಪ ಉರಿಸಿಕೊಂಡು ಬದುಕುತ್ತಿದ್ದಾರೆ. ಮಕ್ಕಳು ಓದೋದು ಕೂಡ ಅದೇ ಡಿಸೇಲ್ ಬೆಳಕಲ್ಲಿ. ಹಾಗಾಗಿ, ಹಲವು ವರ್ಷಗಳಿಂದ ತಮ್ಮ ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ಸಂಕಷ್ಟ ಹೇಳಿ ರೋಸಿ ಹೋದ ಜನ, ನಮ್ಮ ಪಾಲಿಗೆ ಪ್ರಧಾನಿಯಾದರೂ ಇದ್ದಾರಾ ಎಂದು ಪತ್ರ ಬರೆದಿದ್ದರು. ಇದೀಗ ಇದಕ್ಕೆ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿದ್ದು. ಗಿರಿಜನರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದ್ದಾರೆ. ಒಟ್ಟಾರೆ ಗ್ರಾಮ ಸ್ವರಾಜ್ಯ, ಗ್ರಾಮ ನೈರ್ಮಲ್ಯ, ಗ್ರಾಮ ರಾಮರಾಜ್ಯ ಎಂದು ವೇದಿಕೆ ಮೇಲೆ ಮಾರುದ್ಧ ಭಾಷಣ ಬಿಗಿಯುವ ಜನಪ್ರತಿನಿಧಿಗಳು, ಜಾಗ ನೀಡಿದ ಮೇಲೆ ಕನಿಷ್ಟ ಮೂಲಭೂತ ಸೌಕರ್ಯ ನೀಡದಿರುವುದು ನಿಜಕ್ಕೂ ದುರಂತ. ಈಗ ಪ್ರಧಾನಿ ಕಾರ್ಯಲಯದಿಂದ ಹಳ್ಳಿಗರ ಪತ್ರಕ್ಕೆ ಉತ್ತರ ಬಂದಿದ್ದು, ನರೇಂದ್ರ ಮೋದಿಯವರ ಜೊತೆ ಮಾತನಾಡಿ, ಸಂಕಷ್ಟ ಹೇಳಿಕೊಳ್ಳಲು ಗ್ರಾಮಸ್ಥರು ಮುಂದಾಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ