ಚಿಕ್ಕಮಗಳೂರು: ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ; ರಾಜ್ಯದ ಜನರನ್ನು ಬಲಿ ಕೊಡುವ ಕೆಲಸ ಸರ್ಕಾರ ಮಾಡ್ತಿದೆ ಎಂದ ಶೋಭಾ ಕರಂದ್ಲಾಜೆ
ಈ ಬಾರಿ ರಾಜ್ಯದಲ್ಲಿಯೇ ಸರಿಯಾಗಿ ಮಳೆಯಾಗಿಲ್ಲ, ಈ ಹಿನ್ನಲೆ ಡ್ಯಾಂಗಳು ಕೂಡ ಸಂಪೂರ್ಣ ಭರ್ತಿಯಾಗಿಲ್ಲ. ಈ ಮಧ್ಯೆ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದ್ದು, ಎಲ್ಲೆಡೆ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ‘ಕರ್ನಾಟಕದ ಜನರನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು, ಆ.19: ರಾಜ್ಯದಲ್ಲಿ ಕೆಆರ್ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದ ವಿಚಾರ ಇದೀಗ ಮತ್ತೆ ಭುಗಿಲೆದ್ದಿದೆ. ಹೌದು, ಈ ಬಾರಿ ಮುಂಗಾರು ಮಳೆ ಸರಿಯಾಗಿ ಆಗದ ಹಿನ್ನಲೆ ಡ್ಯಾಂಗಳೇ ಭರ್ತಿಯಾಗಿಲ್ಲ. ಹೀಗಿರುವಾಗ, ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಇನ್ನು ಈ ಕುರಿತು ‘ಸರ್ಕಾರ ಕರ್ನಾಟಕದ ಜನರನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ‘ ಬೆಂಗಳೂರು ನಗರದಲ್ಲೇ ಬೇಕಾದಷ್ಟು ನೀರನ್ನು ಬಿಡುತ್ತಿಲ್ಲ. ಹೌದು, ಒಂದೆಡೆ ನೀರು, ವಿದ್ಯುತ್ ಇಲ್ಲ. ಮತ್ತೊಂದೆಡೆ ಮಳೆಯೂ ಬಂದಿಲ್ಲ. ಮಂಡ್ಯ, ಮೈಸೂರು, ಬೆಂಗಳೂರು ಕಡೆ ಕುಡಿಯುವ ನೀರಿಗೆ ಸಮಸ್ಯೆಯಿದೆ. ಆದರೂ, ರಾಜ್ಯ ಸರ್ಕಾರ ಜನರ ದೃಷ್ಟಿಯಲ್ಲಿ ಯೋಚನೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ತಮಿಳುನಾಡಿಗೆ ಮನವರಿಕೆ ಮಾಡದ ಸರ್ಕಾರ
ನಮ್ಮ ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಬಂದಿಲ್ಲ ಎಂಬುವುದನ್ನು ತಮಿಳುನಾಡಿಗೆ ಮನವರಿಕೆ ಮಾಡಿಲ್ಲ. I N D A ದಲ್ಲಿ ಇದ್ದಾರೆ ಎಂಬ ಒತ್ತಡದಲ್ಲಿ ನೀರು ಬಿಟ್ಟರೆ, ರಾಜ್ಯದ ರೈತರು ಮತ್ತು ಬೆಂಗಳೂರಿನ ಜನಕ್ಕೆ ನೀರಿನ ಸಮಸ್ಯೆ ಬರುತ್ತದೆ. ಕೇವಲ ಅವರವರ ಒಳಗಿನ ರಾಜಕೀಯದ ಕಾರಣಕ್ಕಾಗಿ ಕರ್ನಾಟಕದ ಜನರನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ. ಟೀಮ್ ಕಳಿಸಿ ಪರಿಶೀಲನೆ ನಡೆಸಿ ಎಂದು ಗಟ್ಟಿಯಾದ ದ್ವನಿ ಸರ್ಕಾರದ ಕಡೆಯಿಂದ ಬರುತ್ತಿಲ್ಲ. ಕಾವೇರಿ ನದಿ ಮತ್ತು ಜಲಾಶಯಗಳಲ್ಲಿ ನೀರಿಲ್ಲ ಎಂದು ಸರ್ಕಾರ ಹೇಳುತ್ತಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sat, 19 August 23