ಚಿಕ್ಕಮಗಳೂರು, ಆ.17: ಬೆಳಗಾವಿಯ ಹಿಂಡಲಗಾ ಜೈಲಿನ(Belagavi Hindalga jail) ಬಳಿಕ ಮತ್ತೊಂದು ಜೈಲಿನ ಕರ್ಮಕಾಂಡ ಬಯಲಾಗಿದೆ. ಶಿಕ್ಷೆ ಮುಗಿಸಿ ಜೈಲಿನಿಂದ ಹೊರ ಬಂದ ವ್ಯಕ್ತಿ ಜೈಲಿನೊಳಗಿನ ಬ್ರಹ್ಮಾಂಡ ಬಯಲು ಮಾಡಿದ್ದಾರೆ. ಶಿವಮೊಗ್ಗ ಕೇಂದ್ರ ಕಾರಾಗೃಹದೊಳಗೆ(Shivamogga Central Jail) ನಡೆಯುತ್ತಿರುವ ಅಸಲಿ ಅಕ್ರಮಗಳ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ. ಶಿಕ್ಷೆ ಮುಗಿಸಿ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ. ಹಾಗೂ ಅಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಟಿವಿ9 ಕನ್ನಡ ಬೆಳಗಾವಿಯ ಹಿಂಡಲಗಾ ಜೈಲಿನ ಒಳಗೆ ನಡೆಯುತ್ತಿರುವ ಅಕ್ರಮದ ಬಗ್ಗೆ ಎಳೆ ಎಳೆಯಾಗಿ ವರದಿ ಬಿತ್ತರಿಸಿತ್ತು. ಕೈದಿ ಪ್ರಶಾಂತ ಮೊಗವೀರ್ ಜೈಲಿನಲ್ಲಿದ್ದುಕೊಂಡೇ ಇಬ್ಬರು ಅಧಿಕಾರಿಗಳ ದರ್ಪದ ಕುರಿತು ಸೆಲ್ಫಿ ವಿಡಿಯೋ ಮಾಡಿ ಹಿಂಡಲಗಾ ಜೈಲಿನ ಅವ್ಯವಸ್ಥೆ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದರು. ಅದೇ ರೀತಿ ಶಿವಮೊಗ್ಗ ಕೇಂದ್ರ ಕಾರಾಗೃಹದೊಳಗೆ ಶಿಕ್ಷೆ ಅನುಭವಿಸಿ ಹೊರ ಬಂದ ಫಾರೂಕ್ ಎಂಬ ವ್ಯಕ್ತಿ ಶಿವಮೊಗ್ಗ ಜೈಲಿನ ಕರ್ಮಕಾಂಡದ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಶಿವಮೊಗ್ಗ ಜೈಲಿನಲ್ಲಿ ದುಡ್ಡಿದ್ರೆ ಎಣ್ಣೆ, ಗಾಂಜಾ ಎಲ್ಲವೂ ಕೈದಿಗಳ ಕೈ ಸೇರುತ್ತೆ. ಸಿಬ್ಬಂದಿ ಕೈಗೆ ಹಣ ಕೊಟ್ರೆ ಕೈದಿಗಳಿಗೆ VVIP ಟ್ರೀಟ್ಮೆಂಟ್ ಸಿಗುತ್ತೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ಶಿವಮೊಗ್ಗ ಜೈಲು ಸೇರಿದ್ದ ಫಾರೂಕ್, ಆಗಸ್ಟ್ 15 ರಂದು ಶಿಕ್ಷೆ ಮುಗಿಸಿ ಜೈಲಿನಿಂದ ಹೊರ ಬಂದಿದ್ದಾರೆ. 1 ವರ್ಷ 4 ತಿಂಗಳು ಶಿವಮೊಗ್ಗ ಜೈಲಿನಲ್ಲಿ ಸಜಾ ಕೈದಿಯಾಗಿದ್ದ ಫಾರೂಕ್ ಜೈಲಿನಿಂದ ಹೊರ ಬರುತ್ತಿದ್ದಂತೆ ಶಿವಮೊಗ್ಗ ಕಾರಾಗೃಹದೊಳಗೆ ನಡೆಯುತ್ತಿರುವ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಜೈಲಿನಲ್ಲಿ ಕೈದಿಗಳಿಂದ ಬಡ್ಡಿ ದಂಧೆ ನಡೆಯುತ್ತಂತೆ. ಮೊಬೈಲ್ ಬಳಸಲು ತಿಂಗಳಿಗೆ 3 ಸಾವಿರ. VVIP ಟ್ರೀಟ್ಮೆಂಟ್ ಗೆ 10 ಸಾವಿರ ಫಿಕ್ಸ್ ಮಾಡಲಾಗಿದೆ. ಕೇಂದ್ರ ಕಾರಾಗೃಹದಲ್ಲಿ 750 ವಿಚಾರಣಾಧೀನ, ಸಜಾ ಕೈದಿಗಳಿದ್ದಾರೆ ಎಂದು ಫಾರೂಕ್ ಅಸಲಿ ಕಥೆ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: TV9 Impact: ಬೆಳಗಾವಿಯ ಹಿಂಡಲಗಾ ಜೈಲಿನ ಅಕ್ರಮ ಬಯಲು, ಇಬ್ಬರು ಜೈಲಾಧಿಕಾರಿಗಳಿಗೆ ಎತ್ತಂಗಡಿ ಶಿಕ್ಷೆ
ಶಿಕ್ಷೆ ಪ್ರಕಟವಾದ ನಂತರ ಶಿವಮೊಗ್ಗ ಜೈಲಿಗೆ ನನನ್ನು ಸ್ಥಳಾಂತರಿಸಲಾಯಿತು. ಜೈಲಿನಲ್ಲಿ ಕೈದಿಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಜೈಲಿನೊಳಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಬಳಸಲು ಅವಕಾಶ ಮಾಡಿಕೊಡಲು ಹಲವಾರು ಅಧಿಕಾರಿಗಳು ಕೈದಿಗಳಿಂದ ಹಣವನ್ನು ಪಡೆಯುತ್ತಾರೆ. ಜೈಲುಗಳ ಒಳಗೆ ಗ್ಯಾಂಗ್ ವಾರ್‌ಗಳು ನಡೆಯುತ್ತಿವೆ. ಆಗಸ್ಟ್ 14 ರಂದು ಭಾರಿ ಘರ್ಷಣೆ ನಡೆದಿತ್ತು ಆದರೆ ಪ್ರಕರಣ ದಾಖಲಿಸುವ ಬದಲು ಅಧಿಕಾರಿಗಳು ಎರಡೂ ಕಡೆಯಿಂದ ಲಂಚ ಪಡೆದು ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ ಎಂದು ಫಾರೂಕ್ ತಿಳಿಸಿದರು.
ಕಾನ್ಸ್‌ಟೇಬಲ್‌ಗಳಿಂದ ಹಿಡಿದು ಜೈಲರ್‌ವರೆಗೆ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಲ್ಲಿ ಎಲ್ಲದಕ್ಕೂ ನಿಗದಿತ ದರ ಫಿಕ್ಸ್ ಮಾಡಲಾಗಿದೆ. ನಮ್ಮ ಸೆಲ್‌ನಲ್ಲಿ ಬಲ್ಬ್ ಹಾಕಿಸಬೇಕಂದ್ರೂ ಸಹ 500 ರೂ ಲಂಚ ಕೊಡಬೇಕು. VVIP ಟ್ರೀಟ್ಮೆಂಟ್ ಬೇಕಂದ್ರೆ 10,000 ಕೊಡಬೇಕು. ಅವರಿಗೆ ಪ್ರತ್ಯೇಕ ಆವರಣದಲ್ಲಿ ಟಿವಿ ನೀಡಲಾಗುವುದು. ಕೈದಿ ಶಶಿ ಪೂಜಾರಿ, ಸಾಗರದ ಅಲಿ ಮತ್ತು ಶಾಹಿದ್ ಎಂಬ ಕೈದಿಗಳು ಹಣ ಕೊಟ್ಟು ವಿಐಪಿ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ ಎಂದು ಫಾರೂಕ್ ಹೇಳಿದರು.
ಹಣ ಕೊಡುವ ಮತ್ತು ಹಣವಿಲ್ಲದ ಕೈದಿಗಳಿಗೆ ಬೇರೆ ಬೇರೆ ರೀತಿಯಲ್ಲಿ ನೋಡಲಾಗುತ್ತೆ. ಕೈದಿಗಳು ಹಣ ಕೊಟ್ಟರೆ ಅವರಿಗೆ ಬೇಕಾದುದೆಲ್ಲ ಸಿಗುತ್ತದೆ. ಆಗಾಗ ಜೈಲು ಪ್ರವೇಶಿಸುವ ಕೇಬಲ್ ವ್ಯಕ್ತಿಯ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಮಹಿಳಾ ಅಧಿಕಾರಿಯೊಬ್ಬರು ಜೈಲು ಕೈದಿಗಳಿಗೆ ಮದ್ಯ ನೀಡುವುದನ್ನು ನಾನೇ ನೋಡಿದ್ದೇನೆ. ಅನೇಕ ಕೈದಿಗಳು ಜೈಲಿನಿಂದ ಕಾರ್ಯನಿರ್ವಹಿಸುತ್ತಾರೆ. ಅವರು ಇತರರಿಗೆ ಹೆಚ್ಚಿನ ಬಡ್ಡಿದರದಲ್ಲಿ ಹಣವನ್ನು ನೀಡುತ್ತಾರೆ ಮತ್ತು ತಮ್ಮ ವ್ಯವಹಾರಗಳನ್ನು ನಡೆಸುತ್ತಾರೆ ಎಂದು ಫಾರೂಕ್ ತಿಳಿಸಿದ್ದಾರೆ.
ಚಿಕ್ಕಮಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ