ಚಿಕ್ಕಬಳ್ಳಾಪುರ, ಆಗಸ್ಟ್ 9: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ (Bagepalli police) ಗಡಿದಂ ಗ್ರಾಮದಲ್ಲಿ ಪಿಂಕ್ ಟು ಗ್ರೀನ್ ನೋಟುಗಳ ಬದಲಾವಣೆ ಹಾಗೂ ವಂಚನೆ ಪ್ರಕರಣದಲ್ಲಿ ಬಗೆದಷ್ಟೂ ರಹಸ್ಯ ಮಾಹಿತಿ ಹಾಗೂ ರೋಚಕತೆ, ಕುತೂಹಲ ಕೆರಳಿಸುವಂತಿದೆ (allegation). ಖುದ್ದಾಗಿ, ಬಾಗೇಪಲ್ಲಿ ಹಾಗೂ ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ನಡೆದಿರುವ ಕಳ್ಳ-ಪೊಲೀಸ್ ಆಟ, ಹಣ ಬದಲಾವಣೆ, ಅಕ್ರಮ ಬಂಧನ, ಸಿಬ್ಬಂದಿಗೆ ಕಿರುಕುಳ ಪ್ರಕರಣ ಬಟಾಬಯಲಾಗಿದೆ. ಪ್ರಕರಣದ ಕುರಿತು ಟಿವಿ-9ಗೆ ಖಚಿತ ಮಾಹಿತಿ ಹಾಗೂ ಕೆಲವು ದಾಖಲೆಗಳು ಲಭ್ಯವಾಗಿದ್ದು, ನಿಮ್ಮ ಮುಂದೆ ಇಡುತ್ತಿದ್ದೇವೆ.
ಇದೇ ತಿಂಗಳ ಆಗಸ್ಟ್ 4 ರಂದು ಸಂಜೆ 5-30ರ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಗುಪ್ತವಾರ್ತೆ ಕಾನ್ ಸ್ಟೇಬಲ್ ನರಸಿಂಹಮೂರ್ತಿಗೆ ಪೊಲೀಸ್ ಮಾಹಿತಿದಾರನಿಂದ ಖಚಿತ ಮಾಹಿತಿ ಬರುತ್ತೆ. ಬೆಂಗಳೂರು ಮೂಲದ ಸುರೇಶ್ ರೆಡ್ಡಿ ಎನ್ನುವಾತ ತನ್ನ ಬಳಿ 2 ಸಾವಿರ ಮುಖಬೆಲೆಯ ನೋಟುಗಳಿದ್ದು, ಅವುಗಳನ್ನು 500 ರೂ. ಮುಖಬೆಲೆಯ ನೋಟುಗಳಾಗಿ ಮಾಡಿಕೊಳ್ಳಬೇಕಿದೆ ಎಂದು ಕೆಲವು ಹಣವಂತರಿಗೆ ಮೋಸ ಮಾಡುತ್ತಿದ್ದಾನೆ. 500 ರೂ. ಮುಖಬೆಲೆಯ 10 ಲಕ್ಷ ರೂಪಾಯಿ ನೋಟುಗಳನ್ನು ನೀಡಿದರೆ ಅದಕ್ಕೆ ಪರ್ಯಾಯವಾಗಿ, ಹೆಚ್ಚುವಾರಿಯಾಗಿ 12.50 ಲಕ್ಷ ರೂಪಾಯಿ ಮೌಲ್ಯದ 2 ಸಾವಿರ ನೋಟುಗಳನ್ನು ನೀಡಲಾಗುವುದೆಂದು ನಂಬಿಸಿ ಮೋಸ ಮಾಡುತ್ತಿದ್ದಾನೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಗಡಿದಂ ಗ್ರಾಮದ ಬಳಿ ವ್ಯವಹಾರ ನಡೆಯುತ್ತದೆ ಎಂಬುದಾಗಿ ಮಾಹಿತಿ ನೀಡಿದ್ದ.
ಅಲ್ಲಿಗೆ ಪೊಲೀಸರ ಕಾರ್ಯಾಚರಣೆ ಆರಂಭವಾಗಿತ್ತು: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಗುಪ್ತವಾರ್ತೆ ಕಾನ್ ಸ್ಟೇಬಲ್ ನರಸಿಂಹಮೂರ್ತಿ, ಕರ್ತವ್ಯನಿರತ ಪೊಲೀಸ್ ಇನ್ಸ್ ಪೆಕ್ಟರ್ ರವಿಕುಮಾರ್ಗೆ ಮಾಹಿತಿ ನೀಡಿ, ಠಾಣೆಯ ಸಿಬ್ಬಂದಿ ಅಶೋಕ್ ಸೇರಿದಂತೆ ಕೆಲ ಸಿಬ್ಬಂದಿಯ ಜೊತೆ ಗಡಿದಂಗೆ ಆಗಮಿಸಿದ್ದಾರೆ. ಅಲ್ಲಿ ಮರೆಯಲ್ಲಿ ನಿಂತು ನೋಡಿದಾಗ ಬಂದ ಮಾಹಿತಿ ಖಚಿತವಾಗಿತ್ತು. ಇನ್ನು ಹಣ ಎಕ್ಸ್ಚೇಂಜ್ ಮಾಡಿಕೊಳ್ಳುವಾಗ ಸುರೇಶ್ ರೆಡ್ಡಿ ಹಾಗೂ ಆತನ ಬಳಿಯಿದ್ದ ಬ್ಯಾಗ್ನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲೇ ಸ್ಥಳದಲ್ಲಿ ಇನ್ನೋವಾ ಕಾರಿನಲ್ಲಿದ್ದ ತ್ರಿವೇಣಿ ಎನ್ನುವ ಮಹಿಳೆ ಹಾಗೂ ಕಾರಿನ ಡ್ರೈವರ್ ಹರೀಶ್ ಎಂಬಾತನನ್ನು ವಶಕ್ಕೆ ಪಡೆಯುತ್ತಾರೆ. ಅಷ್ಟರಲ್ಲೆ ಸ್ವಿಫ್ಟ್ ಕಾರಿನಲ್ಲಿ ಅಲ್ಲಿಗೆ ಬಂದ 5 ಜನರ ತಂಡ ನಾವೇ ಪೊಲೀಸರು, ನಾವೇ ಕಾರ್ಯಾಚರಣೆಗೆ ಬಂದಿದ್ದೇವೆ. ಅಷ್ಟಕ್ಕೂ ನೀವು ಯಾರು? ಎಂದು ನರಸಿಂಹಮೂರ್ತಿ ಹಾಗೂ ಅಶೋಕ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೊತ್ತಿಗೆ ಬಾಗೇಪಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರವಿಕುಮಾರ್ ಸಹಾ ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹಣ ಬದಲಾವಣೆಗೆಂದು ಒಂದು ಇನ್ನೋವಾ ಕಾರು ಹಾಗೂ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ 7 ಜನ ಆರೋಪಿಗಳು ಹಾಗೂ ಹಣ ಬದಲಾವಣೆ ಹೆಸರಿನಲ್ಲಿ ವಂಚನೆಗೆ ಬಂದಿದ್ದ ಸುರೇಶ್ ರೆಡ್ಡಿಯನ್ನು ಠಾಣೆಗೆ ಕರೆದುಕೊಂಡು ಬಂದ ಇನ್ಸ್ ಸ್ಪೆಕ್ಟರ್ ರವಿಕುಮಾರ್ ಆರೋಪಿಗಳನ್ನು ತಮ್ಮ ಛೇಂಬರ್ಗೆ ಕರೆದು ವಿಚಾರಣೆ ಮಾಡಿದ್ದಾರೆ. ಅಷ್ಟರಲ್ಲೆ ಗೌರಿಬಿದನೂರು ಮೂಲದ ಮೋಹನ್ ಎನ್ನುವ ವ್ಯಕ್ತಿಯಿಂದ ಇನ್ಸ್ ಪೆಕ್ಟರ್ ರವಿಕುಮಾರ್ಗೆ ಕಾಲ್ ಬಂದಿದೆ. ಮಾತನಾಡ್ತೀವಿ, 7 ಜನರನ್ನು ಬಿಟ್ಟು ಕಳುಹಿಸಿಬಿಡಿ. ನಾನು ಬಂದು ಮಾತನಾಡುತ್ತೇನೆಂದು ಪೋನ್ ಕಟ್ ಮಾಡಿದ್ದಾರೆ. ಅಲ್ಲಿಗೆ ವಿಚಾರಣೆ ಕೈಬಿಟ್ಟು, ಏಳೂ ಜನರನ್ನು ಇನ್ಸ್ ಪೆಕ್ಟರ್ ಬಿಟ್ಟು ಕಳುಹಿಸಿದ್ದಾರೆ.
ಆಗಸ್ಟ್ 4 ರಂದು ರಾತ್ರಿ, ಇನ್ಸ್ ಪೆಕ್ಟರ್ ಹಾಗೂ ಆರೋಪಿಗಳು ಮತ್ತು ಆರೋಪಿಗಳ ಬೆಂಬಲಿಗರ ಜೊತೆ ಅದೇನು ಚರ್ಚೆ ಮಾಡಿಕೊಂಡರೋ… ಅದೇನು ಡೀಲ್ ಮಾಡಿಕೊಂಡರೋ… ಅದೇನು ವಹಿವಾಟು ಮಾಡಿಕೊಂಡರೋ ಆರೋಪಿಗಳು ಅಲ್ಲಿಂದ ಹೊರಟು ಹೋಗಿದ್ದಾರೆ.
ಹಣ ಬದಲಾವಣೆ ಪ್ರಕರಣದ ಆರೋಪಿ ಸುರೇಶ್ ರೆಡ್ಡಿಯನ್ನು ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಬಾಗೇಪಲ್ಲಿ ಪೊಲೀಸ್ ಠಾಣೆಯ ಲಾಕಪ್ನಲ್ಲಿ ಅಕ್ರಮವಾಗಿ ಕೂಡಿ ಹಾಕಲಾಗಿತ್ತು.. ಈ ವೇಳೆ ಆರೋಪಿಯ ವಿಚಾರಣೆಯನ್ನು ಮಾಡಿಲ್ಲ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಸಿಆರ್, ಎಫ್ಐಆರ್ ದಾಖಲಿಸಿಲ್ಲ ಎನ್ನಲಾಗಿದೆ. ಇನ್ನು ಪ್ರಕರಣದ ಕುರಿತು ಚಿಕ್ಕಬಳ್ಳಾಪುರ ವಿಭಾಗದ ಡಿವೈಎಸ್ಪಿ ಶಿವಕುಮಾರ್ ಹಾಗೂ ಎಸ್ಪಿ ಡಿ.ಎಲ್. ನಾಗೇಶ್ಗೂ ಮಾಹಿತಿ ನೀಡಿಲ್ಲ. ಕೊನೆಗೆ, ಭಾನುವಾರದಂದು ಆರೋಪಿ ಸುರೇಶ್ ರೆಡ್ಡಿಯನ್ನು ಬಿಟ್ಟು ಕಳುಹಿಸಲಾಗಿದೆ ಎನ್ನಲಾಗಿದೆ.
500 ರೂ. ಮುಖಬೆಲೆಯ 10 ಲಕ್ಷ ರೂಪಾಯಿ ನೋಟುಗಳನ್ನು ನೀಡಿದರೆ ಅದಕ್ಕೆ ಹೆಚ್ಚುವರಿಯಾಗಿ 12.50 ಲಕ್ಷ ರೂಪಾಯಿ ಮೌಲ್ಯದ 2 ಸಾವಿರ ನೋಟುಗಳನ್ನು ನೀಡಲಾಗುವುದೆಂದು ಒಪ್ಪಂದ ಮಾಡಿಕೊಂಡಿದ್ದ ತ್ರಿವೇಣಿ ಹಾಗೂ ಆಕೆಯ ಸಹಚರರೆನ್ನಲಾದ 6 ಜನ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸುರೇಶ್ ರೆಡ್ಡಿಗೆ ಈಗಾಗಲೇ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6 ಲಕ್ಷ ರೂಪಾಯಿ ಅಸಲು ಹಣವನ್ನು ನೀಡಲಾಗಿದೆ. ಅದನ್ನಾದರೂ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಸೂಚನೆಯಂತೆ ಆರೋಪಿಗಳು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಾಜೇಶ್ವರಿಯನ್ನು ಭೇಟಿಯಾಗಿ ಪ್ರಕರಣ ತಿರುಚಿ, ದೂರು ನೀಡಿದ್ದಾರೆ.
ಏನೋ ಮಸಲತ್ತು ನಡೆದಿದೆ ಎಂದು ಅನುಮಾನಗೊಂಡ ಪಿಎಸ್ಐ ಅವರು ಪ್ರಕರಣವನ್ನು ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್ರವರ ಗಮನಕ್ಕೆ ತಂದಿದ್ದಾರೆ. ಆಗ ಪೊಲೀಸರು ಆರೋಪಿಗಳು, ವಂಚನೆಯ ಆರೋಪಿಯ ಆಟ, ಹೈಡ್ರಾಮಾ, ಪೊಲೀಸರ ಮಸಲತ್ತು ಬಯಲಾಗಿದೆ.
ಇನ್ನು ಪೊಲೀಸರು, ವಂಚಕ ಹಾಗೂ ಮೋಸ ಹೋದವರ ಡ್ರಾಮಾ, ಹೈಡ್ರಾಮಾ, ಲಂಚಾವತಾರ ಬಯಲಾಗುತ್ತಿದ್ದಂತೆ ಅಲರ್ಟ್ ಆದ ಇನ್ಸ್ ಪೆಕ್ಟರ್ ರವಿಕುಮಾರ್, ಪ್ರಕರಣಕ್ಕೂ ತನಗೂ ಸಂಬಂಧವೇ ಇಲ್ಲ. ತಮ್ಮ ಠಾಣೆಯ ಸಿಬ್ಬಂದಿಗಳಾದ ನರಸಿಂಹಮೂರ್ತಿ ಹಾಗೂ ಅಶೋಕ್ ಅವರೇ ಷಾಮೀಲಾಗಿ ಈ ರೀತಿ ಮಾಡಿರಬಹುದು. ತಾನು ಸ್ಥಳಕ್ಕೆ ಹೋಗಿಲ್ಲ, ತನಗೆ ಏನೂ ಗೊತ್ತಿಲ್ಲ, ತಾನು ಅಮಾಯಕನೆಂದು ಪ್ರಕರಣದಲ್ಲಿ ಬಚಾವ್ ಆಗಲು ಯತ್ನಿಸಿರುವ ಬಗ್ಗೆ ಟಿವಿ-9ಗೆ ಖಚಿತ ಮಾಹಿತಿ ಲಭ್ಯವಾಗಿದೆ.
ದರೋಡೆಕೋರರು, ಕಳ್ಳಕಾಕರು, ವಂಚಕರಿಗೆ ನೈತಿಕತೆಯ ಪಾಠ ಮಾಡಿ ಬುದ್ದಿ ಹೇಳಬೇಕಾದ ಪೊಲೀಸರೇ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಲಂಚಾವತಾರ ಆರೋಪ ಕೇಳಿಬಂದ ಹಿನ್ನೆಲೆ ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎನ್ನುವ ಆರೋಪ ಈಗ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿ ಟಿವಿ ದಾಖಲೆ, ಆಡಿಯೋ, ವೀಡಿಯೋಗಳು ಸೇರಿದಂತೆ ಕೆಲ ಸಾಕ್ಷಾಧಾರಗಳು ಲಭ್ಯವಿದ್ದರೂ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ.
ಇದರಿಂದ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡರು ತಮ್ಮ ಕಛೇರಿಯ ಅಧಿಕಾರಿಯೊಬ್ಬರ ಮೂಲಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇನ್ನಾದರೂ ಚಿಕ್ಕಬಳ್ಳಾಪುರ ಜಿಲ್ಲೆಯ ವರಿಷ್ಠಾಧಿಕಾರಿ ನಾಗೇಶ್ ಅವರು ಪೊಲೀಸ್ ಇಲಾಖೆಯ ಘನತೆ, ಗೌರವ, ಮರ್ಯಾದೆಯನ್ನು ಕಾಪಾಡುತ್ತಾರಾ…ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕು.
ಚಿಕ್ಕಬಳ್ಳಾಪುರ ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Wed, 9 August 23