ಶಕ್ತಿ ಯೋಜನೆ ಓವರ್‌ಲೋಡೆಡ್! 60 ಸೀಟು ಸಾಮರ್ಥ್ಯದ ಬಸ್ಸಿನಲ್ಲಿ 160 ಜನ ಪ್ರಯಾಣ ಮಾಡ್ತಿದಾರೆ, ಎಲ್ಲಿಗೆ ಗೊತ್ತಾ?
ನಿಯಮಾವಳಿ ಪ್ರಕಾರ 60 ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ, ಹಾಗೆ ಮಾಡಿದರೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ಸನ್ನು ತಡೆದು ದಂಡ ವಿಧಿಸಬಹುದು. ಆದರೆ ಶಕ್ತಿಯೋಜನೆಯಿಂದ ಬಹುತೇಕ ಕೆಂಪು ಬಸ್ಸುಗಳಲ್ಲಿ ಒಂದೇ ಸಮಯದಲ್ಲಿ ನೂರಾರು ಜನ ಪ್ರಯಾಣ ಮಾಡುತ್ತಿದ್ದಾರೆ. ಬಸ್ಸುಗಳ ಓವರ್‌ಲೋಡ್‌ನಿಂದ ಅಪಘಾತ, ಪ್ರಾಣಹಾನಿ ಆಗುವುದಕ್ಕೂ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಗೊಳ್ಳಬೇಕಿದೆ.
ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ (Shakti Scheme) ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇ ತಡ ಅದೊಂದು ವಿಶ್ವವಿಖ್ಯಾತ ಪ್ರವಾಸಿತಾಣಕ್ಕೆ ಜನ ಮುಗಿಬಿದ್ದು ಹೋಗುತ್ತಿದ್ದಾರೆ. ಆ ಮಾರ್ಗದ ಬಸ್ಸಿನ ಸಾಮರ್ಥ್ಯ 60 ಸೀಟುಗಳಾದರೆ ಅದೇ ಬಸ್ಸಿನಲ್ಲಿ 160 ಜನ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಆ ಬಸ್ಸು ಆ ತಾಣಕ್ಕೆ ಹೋಗಲು ಸರ್ಕಸ್ ಮಾಡುವಂತಾಗಿದೆ. ಅಷ್ಟಕ್ಕೂ ಅದ್ಯಾವ ಪ್ರವಾಸಿ ತಾಣ, ಆದೇಗೆ ಒಂದೇ ಬಸ್ಸಿನಲ್ಲಿ 160 ಜನರು ಹೋಗ್ತಾರೆ ಈ ವರದಿಯನ್ನು ನೋಡಿ.. ಉಸಿರಾಟಕ್ಕೂ ಕಷ್ಟವಾಗುವ ಹಾಗೆ ಬಸ್ಸಿನ ಸೀಟ್ ಮೇಲೆ ಒಬ್ಬರ ಮೇಲೊಬ್ಬರು ಕುಳಿತುಕೊಂಡು, ಒಬ್ಬರ ಮೇಲೆ ಒಬ್ಬರು ನಿಂತುಕೊಂಡು ಬಸ್ಸಿನಲ್ಲಿ (Bus) ಜೋತಾಡಿಕೊಂಡು ಹರಸಾಹಸಪಟ್ಟು ಸರ್ಕಾರಿ ಕೆಂಪು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲ್ಲೂಕಿನ (Chikkaballapur) ನಂದಿ ಗಿರಿಧಾಮದ ಮಾರ್ಗದಲ್ಲಿ (Nandi hills).
ಹೌದು…. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಇದುವರೆವಿಗೂ ನಂದಿ ಗಿರಿಧಾಮ ನೋಡದ ಮಹಿಳೆಯರು ಮುಗಿಬಿದ್ದು, ನಂದಿ ಗಿರಿಧಾಮಕ್ಕೆ ಬರುತ್ತಿದ್ದಾರೆ. ಇದರಿಂದ ನಂದಿ ಗಿರಿಧಾಮದ ಬಸ್ಸು ಯಾವಾಗ್ಲೂ ಫುಲ್ ರಶ್‌ಆಗಿ ಸಂಚರಿಸುತ್ತಿದೆ. ಕೆಲವರಿಗೆ ಬಸ್ಸು ಹತ್ತಲು ಅವಕಾಶ ಸಿಕ್ಕರೆ, ಬಹುತೇಕ ಮಹಿಳಾ ಪ್ರಯಾಣಿಕರಿಗೆ ಬಸ್ ಹತ್ತಲೂ ಸಾಧ್ಯವಾಗದೇ ಹೈರಾಣಾಗುತ್ತಿದ್ದಾರೆ.
ಅಸಲಿಗೆ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಅದರಲ್ಲೂ ಕೆಂಪು ಬಸ್ಸುಗಳಲ್ಲಿ 60 ಜನ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ. ಸಾರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ 60 ಜನಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ ಹಾಗೆ ಮಾಡಿದರೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ಸನ್ನು ತಡೆದು ದಂಡ ವಿಧಿಸಬಹುದು. ಆದರೆ ಶಕ್ತಿಯೋಜನೆಯಿಂದ ಬಹುತೇಕ ಕೆಂಪು ಬಸ್ಸುಗಳಲ್ಲಿ ಒಂದೇ ಸಮಯದಲ್ಲಿ ನೂರಾರು ಜನ ಪ್ರಯಾಣ ಮಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ಸ್ವತಃ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಧಾವಂತದಲ್ಲಿದ್ದ ರಾಮನಗರ ಆಯುಕ್ತ: ಹಿಂದಿನಿಂದ ಬೈಕ್ಗೆ ಗುದ್ದಿದ ಆಯುಕ್ತ ನಾಗೇಶ್ ಕಾರು, 21 ವರ್ಷದ ಯುವತಿ ಸ್ಥಳದಲ್ಲೇ ಸಾವು
ಇನ್ನು ರಾಜ್ಯ ಕೆಎಸ್‌ಆರ್‌ಟಿಸಿಯಲ್ಲಿ ನಿರೀಕ್ಷೆಯಷ್ಟು ಬಸ್ಸುಗಳಿಲ್ಲ. ಶಕ್ತಿ ಯೋಜನೆ ಜಾರಿ ನಂತರ ಇರೋಬರೋ ಮಹಿಳೆಯರು ಬಸ್ಸುಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಇರೋ ಕೆಲವು ಬಸ್ಸುಗಳು ಗುಜರಿ ಸೇರಿವೆ. ಇರೋ ಬಸ್ಸುಗಳು ಫುಲ್ ರಶ್ ಆಗುತ್ತಿವೆ. ಅನಿವಾರ್ಯವಾಗಿ ಅಧಿಕಾರಿಗಳು ನೀತಿ, ನಿಯಮ, ಕಾನೂನುಗಳನ್ನು ಮೀರಿ ಪ್ರಯಾಣಿಕರನ್ನು ಸಾಗಿಸುತ್ತಿದ್ದಾರೆ. ಬಸ್ಸುಗಳ ಓವರ್‌ಲೋಡ್‌ನಿಂದ ಅವಘಡ, ಅಪಘಾತ, ಪ್ರಾಣಹಾನಿ ಆಗುವುದಕ್ಕೂ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಗೊಳ್ಳಬೇಕಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ