ಚಾಮರಾಜನಗರ, ಆ.11: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ದಿನವೂ ಒಂದಾದರೂ ಇಂತಹ ಘಟನೆ ಬೆಳಕಿಗೆ ಬರುತ್ತಿದೆ. ಈ ಮಧ್ಯೆ ಇದೀಗ ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಮಟ ಮಟ ಮಧ್ಯಾಹ್ನವೇ ನಡು ರಸ್ತೆಯಲ್ಲಿಯೇ ರಾಬರಿ(Robbery) ನಡೆದಿತ್ತು. ಹೌದು, ಗಡಿ ನಾಡು ಚಾಮರಾಜನಗರದಲ್ಲಿ ಕಳ್ಳರು ಕೈ ಚಳಕ ತೋರಿದ್ದರು. ಚಿನ್ನದ ವ್ಯಾಪಾರಿಯೊಬ್ಬರು ಕಾರಿನಲ್ಲಿ ಹೋಗುವಾಗ ಅಡ್ಡಗಟ್ಟಿದ ಕೇರಳ ಮೂಲದ ನಂಬರ್ ಪ್ಲೇಟ್ ಹೊಂದಿದ್ದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು 40 ಲಕ್ಷ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದರು. ಕೇರಳ ಮೂಲದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು. ಈ ಕುರಿತು ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸೋಮಹಳ್ಳಿ ಗ್ರಾಮಸ್ಥರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಚಿನ್ನದ ವ್ಯಾಪಾರಿ ಬಳಿ 40 ಲಕ್ಷ ದರೋಡೆ ಮಾಡಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳು ಇನೋವಾ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಈ ವೇಳೆ ಕಾರನ್ನ ರಸ್ತೆಗೆ ಕಲ್ಲನ್ನಿಟ್ಟು ಸೋಮಹಳ್ಳಿ ಗ್ರಾಮಸ್ಥರು ಅಡ್ಡಗಟ್ಟಿ ಕಾರಿನಲ್ಲಿದ್ದ ನಾಲ್ವರು ದುಷ್ಕರ್ಮಿಗಳನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಒಟ್ಟು ಮೂರು ಕಾರಿನಲ್ಲಿ ಬಂದು ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ರಾಬರಿ ಮಾಡಿದ್ದರು.
ರಾಮನಗರ: ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಿಡದಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಅಂದಾಜು 35 ವರ್ಷದ ವ್ಯಕ್ತಿಯ ಮೃತದೇಹ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ಹೌದು, ಚಾಮರಾಜನಗರ ಪ್ಯಾಸೆಂಜರ್ ರೈಲಿಗೆ ಸಿಲುಕಿ ಈ ಘಟನೆ ಸಂಭವಿಸಿದ್ದು, ದೇಹ ತುಂಡಾಗಿದೆ. ಈ ಹಿನ್ನಲೆ ಮೃತ ವ್ಯಕ್ತಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಇನ್ನು ಈ ಕುರಿತು ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಗೃಹಿಣಿಯೋರ್ವಳು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೈಸೂರಿನ ದರ್ಶಿನಿ(21) ಮೃತ ರ್ದುದೈವಿ. ಇವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತಿ ಹೇಳಿದ್ದಾರೆ. ಹೌದು, ಕೆ.ಆರ್.ಆಸ್ಪತ್ರೆಗೆ ಪತ್ನಿಯನ್ನು ತಂದು ಸೇರಿಸಿ ಮನೆಯವರಿಗೆ ತಿಳಿಸಿದ್ದರು. ಅಷ್ಟರಲ್ಲಿ ದರ್ಶಿನಿ ಸಾವನ್ನಪ್ಪಿದ್ದರು. ಇದೀಗ ಗಂಡ ಸೂರ್ಯ ಎಂಬುವವರೇ ಕೊಲೆ ಮಾಡಿದ್ದಾರೆ ಎಂದು ದರ್ಶಿನಿ ಕುಟುಂಬಸ್ಥರು ಆರೋಪಿಸಿದ್ದಾರೆ. ಒಂದುವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯ ಎಂಬುವವರ ಜೊತೆಗೆ ಪ್ರೇಮ ವಿವಾಹವಾಗಿತ್ತು. ಮನೆಯವರ ವಿರೋಧದ ನಡುವೆಯೂ ದರ್ಶಿನಿ ಅವರನ್ನು ಸೂರ್ಯ ಮದುವೆಯಾಗಿದ್ದರು.
ಹೌದು, ಮದುವೆಯಾದ 4 ತಿಂಗಳಿಂದ ಸೂರ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನಂತೆ. ನನ್ನ ಮಗಳಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ. ವರದಕ್ಷಿಣೆ ತರುವಂತೆ ಮಗಳನ್ನ ಹಿಂಸಿಸುತ್ತಿದ್ದ. ನನ್ನ ಮಗಳನ್ನು ಕೊಲೆ ಮಾಡಿ ನಮ್ಮ ಮೇಲು ಹಲ್ಲೆ ಮಾಡಿದ್ದಾನೆ. ಬದುಕಿ ಬಾಳಬೇಕಿದ್ದ ನನ್ನ ಮಗಳ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸೂರ್ಯ ಮತ್ತು ಆತನ ಕುಟುಂಬಸ್ಥರನ್ನು ಬಂಧಿಸಬೇಕು ಎಂದು ಮೃತ ಗೃಹಿಣಿ ತಾಯಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಕೆ.ಆರ್.ಎಸ್ ಠಾಣೆಗೆ ಪತಿ ಹಾಗೂ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Fri, 11 August 23