ಚಾಮರಾಜನಗರ, ( ಆಗಸ್ಟ್ 18): ಕರ್ನಾಟಕದ ಹಲವೆಡೆ ಕಾಡಾನೆಗಳ (Elephant) ಹಾವಳಿ ಮಿತಿ ಮೀರಿದೆ. ಇದರಿಂದ ರೈತರು ರೋಸಿಹೋಗಿದ್ದಾರೆ. ಹೊಲ-ಗದ್ದೆ ತೋಟಗಳಿಗೆ ನುಗ್ಗಿ ರೈತ ಬೆಳೆದ ಬೆಳಗಳನ್ನು ನಾಶ ಮಾಡುತ್ತಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಆನೆಗಳಿಗೆ ಕಡಿವಾಣ ಹಾಕುವಂತೆ ರೈತರು, ಅರಣ್ಯ ಇಲಾಖೆಗೆ ಮನವಿ ಮಾಡುತ್ತಲ್ಲೇ ಇದ್ದಾರೆ. ಆದರೂ ಪದೇ ಪದೇ ಕಾಡಾನೆಗಳ ದಾಂಧಲೆ ಪ್ರಕರಣಗಳು ಹೆಚ್ಚುತ್ತಲ್ಲೇ ಇವೆ. ಹೀಗಾಗಿ ಆನೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟಲು ಚಾಮರಾಜನಗರದ (Chamarajanagara) ಅರಣ್ಯಾಧಿಕಾರಿಗಳು (Forest Department ) ಹೊಸ ಮಾದರಿಯೊಂದನ್ನು ಕಂಡುಕೊಂಡಿದ್ದಾರೆ.
ಅರಣ್ಯದಂಚಿನಲ್ಲಿ ರೈಲ್ ಬ್ಯಾರಿಕೇಡ್ ಗಳನ್ನು ನಿರ್ಮಾಣ ಮಾಡುವ ಮೂಲಕ ರೈತರಿಗೆ ನೆರವಾಗಿದ್ದಾರೆ. ರಾಜ್ಯದ ವಿವಿಧ ಅರಣ್ಯಗಳ ಅಂಚಿನಲ್ಲಿ ಈವರೆಗೆ 312ಕಿಲೋಮೀಟರ್ ಉದ್ದದ ರೈಲು ಕಂಬಗಳ ತಡೆಗೋಡೆಯನ್ನು ನಿರ್ಮಿಸಿ, ಸಂಘರ್ಷ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಧಾನದ ವಿಡಿಯೋ ತುಣುಕನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಕಾಡಿನಂಚಿನ ರೈತರು ಬೆಳೆದ ಬೆಳೆ, ಜನರ ಅಮೂಲ್ಯ ಜೀವ ರಕ್ಷಣೆಗೆ ಅರಣ್ಯ ಇಲಾಖೆ ರೈಲ್ವೆ ಬ್ಯಾರಿಕೇಡ್, ಸೌರ ತಂತಿ ಬೇಲಿ ಹಾಗೂ ಕಂದಕ ಸೇರಿದಂತೆ ಕೈಗೊಂಡಿರುವ ವಿವಿಧ ಕ್ರಮಗಳು.@aranya_kfd @CMofKarnataka @siddaramaiah @DKShivakumar @moefcc pic.twitter.com/9bldXn0zfx
— Eshwar Khandre (@eshwar_khandre) August 17, 2023
ಅರಣ್ಯದಂಚಿನಲ್ಲಿ ಯಾವುದೇ ಅಡೆತಡೆ ಇಲ್ಲದೆ ಬೆಳೆ ಬೆಳೆಯುತ್ತಿದ್ದರು. ಬೆಳೆಗಳಿಗೆ ಆನೆ ದಾಳಿಯಿಂದಾಗುವ ನಷ್ಟದಿಂದ ರೈತರು ಬೇಸತ್ತಿದ್ದರು. ಇದೀಗ ತಡೆಗೋಡೆಯನ್ನು ನಿರ್ಮಿಸಿದ್ದರಿಂದ ಆನೆ ದಾಳಿಯಿಂದ ಆ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಲಾರ್ ಬೇಲಿ, ಆನೆಕಂದಕಗಳಿಗಿಂತ ರೈಲ್ ಬ್ಯಾರಿಕೇಡ್ಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಆದರೆ, ಸಂಪೂರ್ಣವಾಗಿ ಆನೆ ದಾಳಿಯನ್ನು ನಿಯಂತ್ರಿಸಲು ಇನ್ನೂ 331 ಕಿ.ಮೀ ಉದ್ದದ ರೈಲು ಬ್ಯಾರಿಕೇಡ್ ನಿರ್ಮಾಣದ ಅಗತ್ಯವಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ಕುರಿತು ಅರಣ್ಯ ರಕ್ಷಕ ಆಯಾಜ್ ನೇರ್ಲಿ ಮಾಡಿದ 2 ನಿಮಿಷ 22 ಸೆಕೆಂಡ್ಗಳ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಹಾಸನದಲ್ಲಿ ಮುಂದುವರೆದ ಕಾಡಾನೆ ಹಾವಳಿ, ಒಂಟಿ ಸಲಗ ದಾಳಿಗೆ ಮತ್ತೊಂದು ಬಲಿ
ಈ ಮೊದಲು ಸೊಲಾರ್ ಬೇಲಿಗಳನ್ನು ನಿರ್ಮಾಣ ಮಾಡುವುದು, ಆನೆ ಕಂದಕಗಳನ್ನು ನಿರ್ಮಿಸುವುದು ಹೀಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆನೆಗಳು ಜೇನುಹುಳುಗಳಿಗೆ ಹೆದರುವುದರಿಂದ ಜೇನುಗೂಡಿನ ಬೇಲಿಗಳನ್ನು ನಿರ್ಮಿಸಿ ಆನೆ ದಾಳಿಯನ್ನು ತಡೆಯುವ ಪ್ರಯತ್ನ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ರೈಲು ಬ್ಯಾರಿಕೇಡ್ಗಳ ನಿರ್ಮಾಣವು, ಆನೆ ಮತ್ತು ಮಾನವರ ನಡುವೆ ಸಾಮರಸ್ಯ ಕಲ್ಪಿಸುವ ಈ ವಿನೂತನ ಮಾದರಿಯು ಸಹಕಾರಿಯಾಗಲಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ