ಕಾವೇರಿ ನದಿ ನೀರು ವಿವಾದ: ಸುಪ್ರೀಂಕೋರ್ಟ್​ಗೆ ಅಫಿಡೆವಿಟ್​ ಸಲ್ಲಿಸಿದ ಕರ್ನಾಟಕ

| Updated By: ರಮೇಶ್ ಬಿ. ಜವಳಗೇರಾ

Updated on: Aug 24, 2023 | 1:30 PM

ಕಾವೇರಿ ನದಿ ನೀರಿನ ವಿವಾದ ಮತ್ತೆ ಸುಪ್ರೀಕೋರ್ಟ್​ ಅಂಗಳಕ್ಕೆ ಹೋಗಿದ್ದು, ನಾಳೆ (ಆಗಸ್ಟ್ 25) ಸುಪ್ರೀಂಕೋರ್ಟ್​ನಲ್ಲಿ ತಮಿಳುನಾಡಿನ ಅರ್ಜಿ ವಿಚಾರಣೆ ನಡೆಯಲಿದೆ, ಈ ಹಿನ್ನೆಲೆಯಲ್ಲಿ ಕರ್ನಾಟಕ ಸಹ ತಮಿಳುನಾಡಿನ ವಿರುದ್ಧ ಕೋರ್ಟ್​ಗೆ ಅಫಿಡೆವಿಟ್​ ಸಲ್ಲಿಸಿದೆ. ಹಾಗಾದ್ರೆ, ಕರ್ನಾಟಕ ಸಲ್ಲಿಸಿದ ಅಫಿಡೆವಿಟ್​​ನಲ್ಲೇನಿದೆ? ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಕಾವೇರಿ ನದಿ ನೀರು ವಿವಾದ: ಸುಪ್ರೀಂಕೋರ್ಟ್​ಗೆ ಅಫಿಡೆವಿಟ್​ ಸಲ್ಲಿಸಿದ ಕರ್ನಾಟಕ
ಸುಪ್ರೀಂಕೋರ್ಟ್
Follow us on

ನವದೆಹಲಿ, (ಆಗಸ್ಟ್ 24): ಕಾವೇರಿ ನೀರಿಗಾಗಿ ತಮಿಳುನಾಡು (Tamil Nadu) ಮತ್ತೆ ಕ್ಯಾತೆ ತೆಗೆದಿದ್ದು, ನಾಳೆ ಸುಪ್ರೀಂಕೋರ್ಟ್​ನಲ್ಲಿ (Supreme Court) ತಮಿಳುನಾಡು ಅರ್ಜಿ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವು ಸಹ ಅಫಿಡವಿಟ್ ಸಲ್ಲಿಸಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಈಗಾಗಲೇ ಕರ್ನಾಟಕ ಸರ್ಕಾರ, ತಮಿಳುನಾಡಿಗೆ ನೀರು ಬಿಟ್ಟಿದೆ. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ನಡೆವೆಯೂ ಸಹ ನೀರು ಹರಿಸಿ ಪ್ರಾಧಿಕಾರದ ಆದೇಶ ಪಾಲನೆ ಮಾಡಲಾಗಿದೆ. ಆದರೂ ತಮಿಳುನಾಡು ಇನ್ನೂ ಬೇಕು ಬೇಕು ಎಂದು ಎಂದು ಹೇಳುವ ಮೂಲಕ ಕಾವೇರಿ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ಅಫಿಡೆವಿಟ್​ನಲ್ಲಿ ಆರೋಪಿಸಿದೆ.

ಕರ್ನಾಟಕದ ಅಫಿಡೆವಿಟ್​ನಲ್ಲಿ ಏನಿದೆ?

ಈ ಬಾರಿ ಕಾವೇರಿ ಕೊಳ್ಳದಲ್ಲಿ ಶೇ.42ರಷ್ಟು ಮಳೆ ಕೊರತೆಯಿದೆ. ಕರ್ನಾಟಕ ಸಿಡಬ್ಲ್ಯುಎಂಎ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದೆ. ಸಾಮಾನ್ಯ ವರ್ಷದಂತೆ ನೀರು ಹರಿಸಲು ತಮಿಳುನಾಡು ಕೇಳುತ್ತಿದೆ. ತಮಿಳುನಾಡು 36.76 ಟಿಎಂಸಿ‌ ನೀರು ಹರಿಸುವಂತೆ ಕೇಳುತ್ತಿದೆ. ಆದ್ರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಕರ್ನಾಟಕದ ಜಲಾಶಯಗಳಲ್ಲಿ 42% ಕಡಿಮೆ ನೀರು ಸಂಗ್ರಹವಾಗಿದೆ. ಕಾವೇರಿ ಜಲಾನಯನದಲ್ಲಿರುವ ನೀರು ಕರ್ನಾಟಕಕ್ಕೆ ಸಾಕಾಗುವುದಿಲ್ಲ. ಬೆಳೆ ಮತ್ತು ಕುಡಿಯುವ ನೀರಿಗೆ ಕೊರತೆಯಾಗಲಿದೆ. ಬೆಂಗಳೂರಿನಂತಹ ಮಹಾ ನಗರಕ್ಕೂ ನೀರಿನ ಕೊರತೆಯಾಗಲಿದೆ. ಅದಾಗ್ಯೂ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿ CWMA ಆದೇಶವನ್ನು ಕರ್ನಾಟಕ ಪಾಲಿಸಿದೆ ಎಂದಿದೆ.

ಇದನ್ನೂ ಓದಿ: ಕರ್ನಾಟಕದ ನೀರಾವರಿ ಸಮಸ್ಯೆ: ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ- ಸಿದ್ದರಾಮಯ್ಯ

ಜಲವರ್ಷದ ಆರಂಭದಲ್ಲಿ ತಮಿಳುನಾಡು ಜಲಾಶಯಗಳಲ್ಲಿ 69 ಟಿಎಂಸಿ ನೀರಿತ್ತು. ಕರ್ನಾಟಕ ಅಗಸ್ಟ್ 22 ವರೆಗೂ 26 ಟಿಎಂಸಿ ನೀರು ಹರಿಸಿದೆ. ಇದರಿಂದ 96 ಟಿಎಂಸಿ ನೀರು ತಮಿಳುನಾಡು ಬಳಿ ಸಂಗ್ರಹವಾದಂತಾಯಿತು. ಸದ್ಯ ತಮಿಳುನಾಡು 21 ಟಿಎಂಸಿ ನೀರಿದೆ ಎಂದು ಹೇಳುತ್ತಿದೆ. ಕುರುವೈ ಬೆಳೆಗೆ 32 ಟಿಎಂಸಿ ನೀರು ಬೇಕಾಗಿದೆ. ಈಗಾಗಲೇ 22 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ. ಬಾಕಿ 9.83 ಟಿಎಂಸಿ ನೀರು ಸೆಪ್ಟೆಂಬರ್ ಅಂತ್ಯದವರೆಗೂ ಬಳಸಬಹುದು. ಆದರೆ ಹೆಚ್ಚು ಪ್ರದೇಶದಲ್ಲಿ ಕುರುವೈ ಬೆಳೆದು ಅಗತ್ಯಕ್ಕಿಂತ ಹೆಚ್ಚು ನೀರಿನ ಬಳಕೆ ಮಾಡುತ್ತಿದೆ. 1.85 ಲಕ್ಷ ಎಕರೆ ಮೀರಿ ಕುರುವೈ ಬೆಳೆ ಬೆಳೆದಿದ್ದು,.ಟ್ರುಬ್ಯುನಲ್ ಆದೇಶದ ಉಲ್ಲಂಘನೆಯಾಗಿದೆ. ಹೀಗೆ ತಮಿಳುನಾಡು ಕಾವೇರಿ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ತನ್ನ ಅಫಿಡೆವಿಟ್ ನಲ್ಲಿ ಆರೋಪಿಸಿದೆ. ಆದ್ರೆ, ನಾಳೆ ಸುಪ್ರೀಂಕೋರ್ಟ್ ತಮಿಳುನಾಡಿನ ಅರ್ಜಿ ವಿಚಾರಣೆ ನಡೆಸಲಿದ್ದು, ಯಾವ ತೀರ್ಪು ನೀಡಲಿದೆ ಎಂದು ಕಾದುನೋಡಬೇಕಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:26 pm, Thu, 24 August 23