ಕರ್ನಾಟಕದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಬಹುಮತ ಪಡೆಯುವ ಮೂಲಕ ಗೆದ್ದು ಬೀಗಿ, ಅಧಿಕಾರದ ಗದ್ದುಗೆಯನ್ನು ಏರಿ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದೆ. ಸರ್ಕಾರ ರಚನೆಯಾಗಿ ಈಗ ಎರಡು ತಿಂಗಳು ಕಳೆದಿದ್ದು, ಶಾಸಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ಹೊರ ಹಾಕಿದ್ದರು. ಇದನ್ನು ಶಮನ ಮಾಡಲು ಸಿಎಂ ಮತ್ತು ಡಿಸಿಎಂ ಇಂದು ಜಿಲ್ಲಾವಾರು ಶಾಸಕರ ಮತ್ತು ಸಚಿವರ ಸಭೆ ಕರೆದಿದ್ದು, ಇಂದು ಬೆಳಗ್ಗೆ ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳ ಹಾಗೂ ಸಂಜೆ ಬೆಳಗಾವಿ, ಹಾವೇರಿ, ಕಲಬುರಗಿ ಜಿಲ್ಲೆಗಳ ಶಾಸಕರು ಸೇರಿ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಇನ್ನು ನಿನ್ನೆ ಹೃದಯಾಘಾತದಿಂದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರು ನಿಧನರಾಗಿದ್ದು, ಇಂದು ಸಂಜೆ 7 ಗಂಟೆಗೆ ಥೈಲ್ಯಾಂಡ್‌ನಿಂದ ವಿಮಾನದಲ್ಲಿ ಮೃತದೇಹ ರವಾನೆಯಾಗಲಿದೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್‌ಪೋರ್ಟ್ ತಲುಪಲಿದೆ. ಇನ್ನು ಬಿಜೆಪಿ ಪಾಳಯದಲ್ಲಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಕಂಗ್ಗಂಟಾಗಿದೆ. ಇದರೊಂದಿಗೆ ಇಂದಿನ ಅಪರಾಧ, ಮಳೆ ಕುರಿತು ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ನೆಲಮಂಗಲ: ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಸ್ಪಂದನಾ ಮೃತದೇಹ ತಲುಪಲಿರುವ ಹಿನ್ನೆಲೆ ಬಿಕೆ ಹರಿಪ್ರಸಾದ್, ಸ್ಪಂದನಾ ಸಹೋದರ ರಕ್ಷಿತ್ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಮನೆಯ ಹಿಂಬಾಗಿಲ ಮೂಲಕ ಕಾರಿನಲ್ಲಿ ಏರ್ಪೋರ್ಟ್ಗೆ ಪ್ರಯಾಣ ಮಾಡುತ್ತಿದ್ದಾರೆ. ಇವರ ಜೊತೆ ಸ್ನೇಹಿತರೂ ಇದ್ದಾರೆ.
ರಾಜ್ಯ ಸರ್ಕಾರವು ಸಾರಿಗೆ ನಿಗಮಗಳಿಗೆ ಮತ್ತೆ ಅನುದಾನ ಬಿಡುಗಡೆ ಮಾಡಿದೆ. ಶಕ್ತಿ ಯೋಜನೆ ಅಡಿ 70.51 ಕೋಟಿ ಹಣ ಬಿಡುಗಡೆ ಮಾಡಿದೆ.
ಮಂಗಳೂರು: ಸ್ಪಂದನಾ ಮೃತದೇಹ ಹೊತ್ತ ವಿಮಾನ ಬ್ಯಾಂಕಾಕ್‌ನ ಸುವರ್ಣ ಭೂಮಿ ಏರ್‌ಪೋರ್ಟ್‌ನಿಂದ ನಿರ್ಗಮಿಸಿದೆ. ಇಂದು ರಾತ್ರಿ ಬೆಂಗಳೂರಿಗೆ ವಿಮಾನ ಲ್ಯಾಂಡ್ ಆಗಲಿದೆ. ಥಾಯ್ ಏರ್ವೇಸ್ ವಿಮಾನದಲ್ಲಿ ಸ್ಪಂದನಾ ಮೃತದೇಹ ರವಾನಿಸಲಾಗಿದೆ. ರಾತ್ರಿ 12 ಗಂಟೆಗೆ ಕೆಂಪೇಗೌಡ ಏರ್‌ಪೋರ್ಟ್ ತಲುಪಲಿದೆ.
ಹತ್ತು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೊಹಮ್ಮದ್ ಮೊಹ್ಸಿನ್ ಅವರನ್ನು ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ, ಟಿಹೆಚ್ಎಂ ಕುಮಾರ್ ಅವರನ್ನು ಕೆಎಸ್ಎಸ್ಐಡಿಸಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ, ಆರ್.ಸ್ನೇಹಲ್ ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿರ್ದೇಶಕರನ್ನಾಗಿ, ಪ್ರಭುಲಿಂಗ್ ಕವಲಿಕಟ್ಟಿ ಅವರನ್ನು ಪಶುಸಂಗೋಪನಾ ಇಲಾಖೆ ಆಯುಕ್ತರನ್ನಾಗಿ, ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು KUIDFC ಜಂಟಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ, ಪಾಂಡೆ ರಾಹುಲ್ ತುಕಾರಾಮ್ ಅವರನ್ನು ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ಆಗಿ, ಎಸ್.ಜೆ.ಸೋಮಶೇಖರ್ ಅವರನ್ನು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಆಗಿ, ಎಸ್.ರಾಜಪ್ಪ ಅವರನ್ನು ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಿಚಾರವಾಗಿ ವಾಗ್ದಾಳಿ ನಡೆಸಿದ ಸಚಿವ ಎಂ.ಸಿ.ಸುಧಾಕರ್, ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಆಸೆ ಇಟ್ಟುಕೊಂಡಿದ್ದರು. ಯಾರೇ ಸರ್ಕಾರ ಮಾಡಿದರೂ ಮನೆಬಾಗಿಲಿಗೆ ಬರಬೇಕೆಂಬ ಆಸೆ ಇತ್ತು. ಆಸೆ ನೆರವೇರಲಿಲ್ಲ ಅಂತಾ ಹೆಚ್.ಡಿ.ಕುಮಾರಸ್ವಾಮಿ ಬೇಸರದಲ್ಲಿದ್ದಾರೆ. ಬೇಸರದಲ್ಲೇ ತಾನು ಅಸ್ತಿತ್ವದಲ್ಲಿದ್ದೇನೆ ಅಂತಾ ತೋರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಕುಮಾರಸ್ವಾಮಿ ದಿನಕ್ಕೊಂದು ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕುಮಾರಸ್ವಾಮಿ ಸಿಂಗಾಪುರದಿಂದ ಬಂದು ಒಂದು ಹೇಳಿಕೆ ಕೊಟ್ಟಿದ್ದರು. ಈಗ ಕಾಂಬೋಡಿಯಾಗೆ ಹೋಗಿದ್ದಾರೆ, ಅಲ್ಲಿ ಏನು ಹೇಳುತ್ತಾರೋ ಎಂದು ಹೇಳಿದರು.
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ನಂತರ ಬಸ್ಗಳು ರಶ್ ಆಗುತ್ತಿವೆ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ತೆರಳಲಾಗುತ್ತಿಲ್ಲ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೆಚ್ಚಿನ ಬಸ್ಗಳನ್ನು ಬಿಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ: ಭದ್ರಾವತಿಯ ಸರ್ ಎಂ. ವಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳನ್ನು ಹೊರಗಿಟ್ಟು ಪ್ರಕಾಶ್ ರೈ ಜೊತೆ ಸಂವಾದ ಕಾರ್ಯಕ್ರಮ ನಡೆಸಲಾಯಿತು. ಇದರಿಂದ ಇನ್ನಷ್ಟು ಕೆರಳಿದ ವಿದ್ಯಾರ್ಥಿಗಳು ದೇಶ ವಿರೋಧಿ ಶಕ್ತಿಗಳಿಗೆ ಸದಾ ಬೆಂಬಲಿಸುವ ಪ್ರಕಾಶ್ ರೈಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ, ಕಾರ್ಯಕ್ರಮದ ನಂತರ ಕಾರ್ಯಕ್ರಮ ನಡೆದ ಸ್ಥಳವನ್ನು ಶುದ್ಧೀಕರಣ ಮಾಡಿದರು.
ಬಿಲ್ ಪಾವತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಗುತ್ತಿಗೆದಾರರ ದೂರು ನೀಡಿದ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲರಿಗೆ ದೂರು ಕೊಡಲಿ, ಸಿಎಂಗೂ ದೂರು ಕೊಡಲಿ. ನಮಗೂ ಸಾಕಷ್ಟು ವರದಿ ಬಂದಿದೆ, ನೈಜತೆ ಪರಿಶೀಲಿಸಿ ಎಂದಿದ್ದಾರೆ. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಪಾವತಿ ಮಾಡುತ್ತೇವೆ, ಹಲವು ನಕಲಿ ಬಿಲ್ಗಳು ನನ್ನ ಗಮನಕ್ಕೆ ಗಮನಕ್ಕೆ ಬಂದಿವೆ. ಈ ಬಗ್ಗೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುತ್ತಿಗೆದಾರರು ಬ್ಲ್ಯಾಕ್ಮೇಲ್ ಅಲ್ಲ, ಪ್ರೀತಿ ತೋರಿಸುತ್ತಿದ್ದಾರೆ. ನ್ಯಾಯಬದ್ಧವಾಗಿ ಕೆಲಸ ಮಾಡಿದವರಿಗೆ ಹಣ ಸಿಗಲೇಬೇಕು ಎಂದರು.
ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ವಿಚಾರವಾಗಿ ಮಾತನಾಡಿದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ದುರ್ಬಳಕೆ ಮಾಡುವ ಪ್ರಯತ್ನ ಮಾಡುತ್ತಿದೆ. ಸಚಿವರ ವಿರುದ್ಧದ ಪತ್ರದ ಬಗ್ಗೆ ಸಿಎಸ್ಗೆ ಗವರ್ನರ್ ಸೂಚಿಸಿದ್ದಾರೆ. ಈ ರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಪತ್ರದ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಸಿಐಡಿ ತನಿಖೆಯಿಂದ ಸತ್ಯಾಂಶ ಹೊರಗಡೆ ಬರಲಿ ಎಂದರು.
ಸಹಾಯಕ ಕೃಷಿ ನಿರ್ದೇಶಕರ ಬಳಿ ಸಚಿವರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ದುರುದ್ದೇಶಪೂರಿತ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಗೃಹಸಚಿವರಿಗೆ ದೂರು ನೀಡಿದ್ದಾರೆ. ನಕಲಿ ಪತ್ರದ ಹಿಂದಿನ ಶಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಸಚಿವರ ವಿರುದ್ಧದ ತೇಜೋವಧೆ ಕೇಸ್ ಗಂಭೀರವಾಗಿ ಪರಿಗಣಿಸುವಂತೆ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ ಭೇಟಿಯಾಗಿ ದಿನೇಶ್ ಗೂಳಿಗೌಡ, ರಮೇಶ್ ಬಾಬು ಹಾಗೂ ಮುಖಂಡರು ಮನವಿ ಸಲ್ಲಿಸಿದರು.
ಮೈಸೂರು: ವಕೀಲರ ಸಂಘದಿಂದ ಶಾಸಕ ದರ್ಶನ್ ಧ್ರುವನಾರಾಯಣ್ ಅವರಿಗೆ ಸನ್ಮಾನ ಮಾಡಲಾಯಿತು. ಮೈಸೂರು ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ದರ್ಶನ್ ಧ್ರುವನಾರಾಯಣ್ ನಂತರ ನಂಜನಗೂಡು ಶಾಸಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಧ್ರುವನಾರಾಯಣ್‌ಗೆ ಮೈಸೂರು ಜಿಲ್ಲಾ ವಕೀಲರ ಸಂಘದಿಂದ ಸನ್ಮಾನ ಮಾಡಲಾಯಿತು.
ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಭೇಟಿಯಾಗಿ, ಕಾಮಗಾರಿಗಳ ಬಿಲ್ ಬಿಡುಗಡೆಗೆ ಮನವಿ ಮಾಡಿದರು. ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಇದೆ. BBMP ವ್ಯಾಪ್ತಿಯಲ್ಲಿ 28 ತಿಂಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿ ಚುನಾವಣೆ, ಹೊಸ ಸರ್ಕಾರ ರಚನೆ ಕಾರಣಕ್ಕಾಗಿ ಬಿಡುಗಡೆ ಆಗಿಲ್ಲ. 8 ತಿಂಗಳಿನಿಂದ ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆ ಆಗಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಹೀಗೆಯೇ ಮುಂದುವರಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗುತ್ತದೆ ಎಂದು ಸಂಘದ ಅಧ್ಯಕ್ಷ ಆರ್.ಅಂಬಿಕಾಪತಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಹುಬ್ಬಳ್ಳಿ: ಇನ್ಸ್ಟಾಗ್ರಾಮ್ ವಿಚಾರದಲ್ಲಿ ಸಮರ್ಥ ಕಾಲೇಜ್ ವಿದ್ಯಾರ್ಥಿನಿಯರ ಟಾರ್ಗೆಟ್ ಮಾಡಿರುವ ವಿಚಾರ ಹಿನ್ನಲೆ ಘಟನೆಯನ್ನ ಖಂಡಿಸಿ ABVP ಸಂಘಟನೆಯಿಂದ ಇಂದು ಹುಬ್ಬಳ್ಳಿಯ ಚೆನ್ಮಮ್ಮ ಸರ್ಕಲ್ನಿಂದ ಮಿನಿ ವಿಧಾನಸೌಧದವರೆಗೂ ಪ್ರತಿಭಟನೆ ನಡೆಸಲಾಯಿತು. ಇನ್ಸ್ಟಾದಲ್ಲಿ ಕಿಡಗೇಡಿಗಳು ಕಾಲೇಜ್ ವಿದ್ಯಾರ್ಥಿನಿಯರ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ: ಜಿಲ್ಲೆಯ ಕೃಷಿ ಅಧಿಕಾರಿಗಳು ಕೃಷಿ ಸಚಿವರ ವಿರುದ್ಧ ಬರೆದಿದ್ದಾರೆನ್ನಲಾದ ವಿಚಾರವನ್ನ ಸಿಐಡಿ ತನಿಖೆ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಅಧಿಕಾರಿಗಳ ಪತ್ರ ಸಂಬಂಧ ಗೃಹ ಸಚಿವರ ಜೊತೆ ಸಮಾಲೋಚನೆ ನಡೆಸಿದ ಸಿಎಂ, ಸುಧೀರ್ಘ ಚರ್ಚೆ ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಜುಲೈ 28ರಂದು ಸ್ಟೀಮರ್ ಪೈಪ್ ಸ್ಫೋಟವಾಗಿ ಗಾಯಗೊಂಡಿದ್ದ ನೌಕರ ಅಪ್ಪಾಜಿ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿವಂತೆ ನೌಕರರು ಆಗ್ರಹಿಸಿದ್ದಾರೆ.
ಕೋಲಾರ: ಹುಬ್ಬಳ್ಳಿ ಕಿಮ್ಸ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಶುಶ್ರುಕಿಯರ ಮೇಲೆ ಅಸಭ್ಯವಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ಹಿನ್ನಲೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಶುಶ್ರುಕಿಯರು ಹಾಗೂ ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು: ಲೋಕಸಭೆ ಚುನಾವಣೆಗೆ ಉಭಯ ಪಕ್ಷಗಳು ಸಿದ್ಧತೆ ನಡೆಸಿಕೊಂಡಿದೆ. ಅದರಂತೆ ಇದೀಗ ಶೀಘ್ರದಲ್ಲೇ ಜೆಡಿಎಸ್ ರಾಜ್ಯ ಪ್ರವಾಸ ಆರಂಭ ಮಾಡಲಿದೆ ಎಂದು ಜೆಡಿಎಸ್ ಕೋರ್ ಕಮೀಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನು 7 ರಿಂದ 8 ತಿಂಗಳು ಬಾಕಿ ಇದೆ. ಈಗಾಗಲೇ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಇದಕ್ಕಾಗಿ ಶೀಘ್ರದಲ್ಲೇ ರಾಜ್ಯ ಪ್ರವಾಸ ಮಾಡಲಾಗುವುದು ಎಂದರು.
ಮಂಡ್ಯ: ಸಹಾಯಕ ಕೃಷಿ ನಿರ್ದೇಶಕರಿಗೆ ಸಚಿವ ಚಲುವರಾಯಸ್ವಾಮಿಯವರಿಂದ ಹಣಕ್ಕೆ ಬೇಡಿಕೆ ಆರೋಪ ಹಿನ್ನಲೆ ಸಹಾಯಕ ಕೃಷಿ ನಿರ್ದೇಶಕರು ರಾಜಪಾಲರಿಗೆ ಪತ್ರ ಬರೆದಿರುವ ವಿಚಾರವಾಗಿ ಇಂದು ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತುಮಕೂರು: KSRTC ಬಸ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಧುಗಿರಿ ತಾಲೂಕಿನ ಜಯಮಂಗಲಿ ಬ್ರಿಡ್ಜ್ ಬಳಿ ನಡೆದಿದೆ. ಆಟೋದಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದು, 9 ಮಂದಿಗೆ ಗಂಭೀರ ಗಾಯಗಳಾಗಿವೆ. ಮಧುಗಿರಿ ತಾಲೂಕಿನ ಜೋಗೇನೇಹಳ್ಳಿಯ ಲಕ್ಷ್ಮೀದೇವಿ(33) ಮೃತ ರ್ದುದೈವಿ. ಇನ್ನು ಗಾಯಾಳುಗಳಿಗೆ ಮಧುಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು: ನಾಳೆ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಇಂದು ರಾತ್ರಿ 11 ಗಂಟೆ ಸುಮಾರಿಗೆ ಏರ್ ಪೋರ್ಟ್ ಗೆ ಮೃತದೇಹ ಬರಲಿದೆ. 12 ಗಂಟೆ ವೇಳೆಗೆ ಮಲ್ಲೇಶ್ವರಂ ಮನೆಗೆ ತಲುಪಲಿದ್ದು, ಮನೆಯ ಬಳಿಯೇ ನಾಳೆ ಮಧ್ಯಾಹ್ನದ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ದಾವಣಗೆರೆ: ತಾಲೂಕಿನ ಮಲ್ಲಶೆಟ್ಟಿಹಳ್ಳಿಯ ಕ್ರಾಸ್ ಬಳಿ ಹಳೇ ದ್ವೇಷದ ಹಿನ್ನೆಲೆ ಬಡಿಗೆಯಿಂದ ಹೊಡೆದು ಯುವಕನ ಕೊಲೆ ಮಾಡಿದ ಘಟನೆ ನಡೆದಿದೆ. ದಾವಣಗೆರೆಯ ರಾಮನಗರ ನಿವಾಸಿ ನರಸಿಂಹ(26) ಕೊಲೆಯಾದ ವ್ಯಕ್ತಿ. ಹಣಕಾಸು ವಿಚಾರಕ್ಕೆ ಮೃತ ನರಸಿಂಹ ಹಾಗೂ ಇದೇ ರಾಮನಗರದ ನಿವಾಸಿ ಶಿವಯೋಗೀಶ್ ನಡುವೆ ಗಲಾಟೆಯಾಗಿ ಶಿವಯೋಗೀಶ್ ಎಂಬುವವನೇ ಕೊಲೆ ಮಾಡಿ ಆರೋಪ ಕೇಳಿಬಂದಿದೆ.
ಬೆಂಗಳೂರು: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಅಕಾಲಿಕ ಸಾವನ್ನಪ್ಪಿದ್ದು, ಇದೀಗ ಸ್ಪಂದನ ಅಂತ್ಯಸಂಸ್ಕಾರ ಎಲ್ಲಿ ನಡೆಸಲಾಗುವುದು ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಮೃತದೇಹ ಬೆಂಗಳೂರಿಗೆ ಬಂದ ನಂತರ ವಿಜಯ ರಾಘವೇಂದ್ರ ಬಳಿ ಎರಡೂ ಕುಟುಂಬಸ್ಥರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಮಾಹಿತಿ ಪ್ರಕಾರ ಅವರ ತಂದೆ ಬಿ ಕೆ ಶಿವರಾಮ್ ಅವರ ಫಾರ್ಮ್ ಹೌಸ್ ನಲ್ಲಿ, ಈಡಿಗ ಸಂಪ್ರದಾಯದಂತೆಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.
ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಭಿಷೇಕ್ 23,ಆದರ್ಶ22, ಉದಯ್ ಕುಮಾರ್22 ಬಂಧಿತ ಆರೋಪಿಗಳು. ಭಕ್ತರಿಗೆ ಮಾರಾಟ ಮಾಡಲು ಒಣ ಗಾಂಜಾ ತಂದಿದ್ದ ಯುವಕರು, ಪೊಲೀಸರ ಕೈಗೆ ಮಾಲು ಸಮೇತ ಲಾಕ್ ಆಗಿದ್ದಾರೆ.
ಬೆಂಗಳೂರು: ಲೋಕಸಭೆ ಚುನಾವಣೆ ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಮತ್ತೆ ಆರು ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳು ಹಾಗೂ ಸಂಜೆ ಬೆಳಗಾವಿ, ಹಾವೇರಿ, ಕಲಬುರಗಿ ಜಿಲ್ಲೆಗಳ ಶಾಸಕರು, ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಜೊತೆಗೆ ಸಂಜೆ 7 ಗಂಟೆಯಿಂದ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಪರಿಷತ್ ಸದಸ್ಯರ ಜತೆ ವಿಡಿಯೋ ಸಂವಾದ ಮಾಡಲಿದ್ದಾರೆ.
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿದ್ದು, ಇಂದು ಸಂಜೆ 7 ಗಂಟೆಗೆ ಥೈಲ್ಯಾಂಡ್‌ನಿಂದ ಸ್ಪಂದನ ಪಾರ್ಥಿವ ಶರೀರ ರವಾನೆಯಾಗಲಿದ್ದು, ರಾತ್ರಿ 1 ಗಂಟೆಗೆ ದೇವನಹಳ್ಳಿಯ ಕೆಂಪೇಗೌಡ ಏರ್ ಪೋರ್ಟ್ ಗೆ ತಲುಪಲಿದೆ. ಬೆಂಗಳೂರು ಅಥವಾ ಬೆಳ್ತಂಗಡಿಯಲ್ಲಿ ಸ್ಪಂದನ ಅಂತ್ಯಕ್ರಿಯೆ ಇಂದು ಅಂತ್ಯಕ್ರಿಯೆ ಸಮಯ ಕುಟುಂಬಸ್ಥರಿಂದ ನಿಗದಿಯಾಗಲಿದ್ದು, ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರು: ಥಾಯ್ಲೆಂಡ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಮಧ್ಯಾಹ್ನದ ವೇಳೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಮುಗಿಲಿದ್ದು, ಥೈಲ್ಯಾಂಡ್‌ನಿಂದ ಇಂದು ಸಂಜೆ 7 ಗಂಟೆಗೆ ವಿಮಾನದಲ್ಲಿ ರವಾನೆ ಆಗಲಿದೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್‌ಪೋರ್ಟ್ ತಲುಪಲಿದೆ.
ಬೆಂಗಳೂರು: ಥಾಯ್ಲೆಂಡ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಮೃತದೇಹ ಥೈಲ್ಯಾಂಡ್‌ನಿಂದ ಇಂದು ಸಂಜೆ 7 ಗಂಟೆಗೆ ವಿಮಾನದಲ್ಲಿ ರವಾನೆ ಆಗಲಿದೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್‌ಪೋರ್ಟ್ ತಲುಪಲಿದೆ.
Published On - 7:39 am, Tue, 8 August 23