ಬೆಂಗಳೂರು, ಆ.20: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘ (Karnataka Contractors Association) ಸಮರ ಸಾರಲು ಮುಂದಾಗಿದೆ. ಹೌದು, ಕಾಮಗಾರಿ ಬಿಲ್ ಬಾಕಿ ಇರಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ನೀಡಲು ಕಾಮಗಾರಿ ಸ್ಥಗಿತಕ್ಕೆ ಚಿಂತನೆ ನಡೆಸಿದೆ. ಈಗಾಗಲೇ ಬಿಬಿಎಂಪಿ ಗುತ್ತಿಗೆದಾರರ (Contractors)ಸಂಘ ಸಚಿವರ ವಿರುದ್ಧ ಕಮಿಷನ್ ಆರೋಪ ಮಾಡಿದೆ. ಇದರ ಮಧ್ಯೆ ಇದೀಗ ರಾಜ್ಯ ಗುತ್ತಿಗೆದಾರರ ಸಂಘವೂ ಸರ್ಕಾರಕ್ಕೆ ಶಾಕ್ ಕೊಡಲು ಮುಂದಾಗಿದ್ದು, ಈ ಕುರಿತು ‘ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಕಾಮಗಾರಿ ಪೂರ್ಣ ಮಾಡಲು ಕಷ್ಟವಾಗುತ್ತೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಮಗಾರಿ ನಿಲ್ಲಿಸುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಹೌದು, ಸರ್ಕಾರವು 7ಕ್ಕೂ ಹೆಚ್ಚು ಇಲಾಖೆಗಳಿಂದ 25 ಸಾವಿರ ಕೋಟಿಗೂ ಹೆಚ್ಚು ಬಿಲ್ ಬಾಕಿ ಉಳಿಸಿಕೊಂಡಿದ್ದು, ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕೆಲಸ ನಿಲ್ಲಿಸುವುದು ಅನಿವಾರ್ಯವಾಗಲಿದೆ. ಈ ಹಿನ್ನಲೆ ಆಗಸ್ಟ್ 31ರೊಳಗೆ ಸರ್ಕಾರ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಸಭೆ ನಡೆಸಲಿದ್ದು, 61 ವಿವಿಧ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಕೆಂಪಣ್ಣ ಹೇಳಿದ್ದಾರೆ. ಇನ್ನು ಗುತ್ತಿಗೆದಾರರ ಸಂಘ ಈಗಾಗಲೇ ಬಾಕಿ ಬಿಲ್ ಕ್ಲಿಯರ್ ಮಾಡಲು ಸಂಬಂಧಪಟ್ಟ ಇಲಾಖೆ ಸಚಿವರಿಗೂ ಸೇರಿ ಸಿಎಂ, ಡಿಸಿಎಂಗೆ ಮನವಿ ಸಲ್ಲಿಸಿದರೂ, ಪ್ರಯೋಜನ ಆಗಿಲ್ಲ.
ಇದನ್ನೂ ಓದಿ:ನಾವೂ ಯಾವುದೇ ರೀತಿ ಕಮೀಷನ್ ಆರೋಪ ಮಾಡಿಲ್ಲ: ಸ್ಪಷ್ಟಪಡಿಸಿದ ಬಿಬಿಎಂಪಿ ಗುತ್ತಿಗೆದಾರರ ಸಂಘ
ಕಳೆದ 3 ವರ್ಷಗಳಿಂದ ಬಾಕಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರು ಸರ್ಕಸ್ ಮಾಡುತ್ತಿದ್ದು, ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಹಾಗಾದರೆ, ಸರ್ಕಾರ ಕೊಡುತ್ತಿರುವ ಕಾರಣಗಳೇನು? ಇಲ್ಲಿದೆ ನೋಡಿ.
1) ಗ್ಯಾರೆಂಟಿ ಯೋಜನೆಗಳಿಗೆ ಎಲ್ಲ ಹಣ ಖರ್ಚು.
2) ಸರ್ಕಾರ ಬಂದು 3 ತಿಂಗಳಾಗಿದೆ, ಸ್ಟೇಬಲ್ ಆಗಲು ಟೈಂ ಕೊಡಿ ಅಂತಿದ್ಯಂತೆ.
3) ಬಿಜೆಪಿ ಸರ್ಕಾರದ ಅವಧಿಯಲ್ಲೇ ಯಾಕೆ ಬಿಡುಗಡೆ ಮಾಡಿಸಿಕೊಂಡಿಲ್ಲ ಎಂದು ಗುತ್ತಿಗೆದಾರರಿಗೆ ಪ್ರಶ್ನೆ.
ಈ ರೀತಿಯಾಗಿ ಕಾರಣಗಳನ್ನು ಸರ್ಕಾರ ಕೊಡುತ್ತಿದೆ. ಇನ್ನು ಈ ಹಿಂದೆ ಕೆಂಪಣ್ಣ ಅವರು ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿ, ಅಂದು ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರವೇ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸದೇ ಪೆಂಡಿಂಗ್ ಇಟ್ಟಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:30 pm, Sun, 20 August 23