ಬೆಂಗಳೂರು, ಆಗಸ್ಟ್ 13: ಮುಸ್ಲಿಮರಿಗಷ್ಟೆ (Muslim) ಗಂಡಸ್ತನ, ಮೀಸೆ ಇರುವುದಲ್ಲ. ಹಿಂದೂ (Hindu) ಹುಡುಗರಿಗೂ ಇದೆ. ಹಿಂದೂ ಹುಡುಗರು ಕೂಡ ಮುಸ್ಲಿಂ ಹುಡುಗಿಯರನ್ನ ಲವ್ ಮಾಡಿ ಮತಾಂತರ ಮಾಡಬೇಕಾಗುತ್ತದೆ ಎಂದು ಸಿದ್ದರೂಢ ಇಂಟರ್ನ್ಯಾಷನಲ್ ಗುರುಕುಲಮ್ನ ಆರೂಢ ಭಾರತೀ ಸ್ವಾಮೀಜಿ (Aruda Bharathi Swamiji) ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರವು ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆಗಳ ವಾಪಸ್ ಪಡೆಯಲು ಮುಂದಾಗುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಇಂದು ಸಂತರ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ನಂತರ ಹಿಂದೂ, ಜೈನ, ಸಿಖ್, ಬೌದ್ದರ ಜನಸಂಖ್ಯೆ ಇಳಿಕೆಯಾಗುತ್ತಿದೆ. ಮುಸ್ಲಿಂ, ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಬಲವಂತದ ಮತಾಂತರದ ಸಂಕೇತ ಎಂದರು.
ಮುಸ್ಲಿಂ, ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಾಗಿದ್ದೆ ಹಿಂದೂಗಳಿಂದ. ಲವ್ ಜಿಹಾದ್, ಮತಾಂತರ ಮೂಲಕ ಜನಸಂಖ್ಯೆ ಹೆಚ್ಚು ಮಾಡುತ್ತಿದ್ದಾರೆ. ಸ್ವಪ್ರೇರಣೆಯಿಂದ ಮತಾಂತರ ಆದರೆ ತಪ್ಪಿಲ್ಲ. ಆದರೆ ಬಲವಂತವಾಗಿ ಮಾಡುವುದು ಅಪರಾಧ. ಹಿಂದೂಗಳು ಸಂಕುಚಿತ ಅಲ್ಲ ಎಂದು ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದರೇ ವಿಧಾನಸೌಧಕ್ಕೆ ಮುತ್ತಿಗೆ: ಸರ್ಕಾರಕ್ಕೆ ಸಂತರ ಎಚ್ಚರಿಕೆ
ನಾನು ಬೈಬಲ್ ಹಾಗೂ ಕುರಾನ್ ಓದಿದ್ದೇನೆ. ಹಿಂದೂಗಳ ದೇವಸ್ಥಾನ, ಮಂದಿರಗಳನ್ನ ಒಡೆದು ಹಾಕಿ, ಆ ಧರ್ಮದ ಅನುಯಾಯಿಗಳು ನೆಲೆನಿಲ್ಲದಂತೆ ನಾಶ ಮಾಡಬೇಕು ಅಂತ ಬೈಬಲ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರಿಂದ ಮುಸ್ಲಿಮರು ಕೂಡ ಹೊರತಾಗಿಲ್ಲ ಎಂದು ಭಾರತೀ ಸ್ವಾಮೀಜಿ ಹೇಳಿದರು.
ಸಭೆಯಲ್ಲಿ ಮಾತನಾಡಿದ ಮೇಲುಕೋಟೆಯ ಮಠದ ಪೀಠಾಧೀಧ್ಯಕ್ಷ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ನಮ್ಮ ರಾಷ್ಟ್ರದ ಹಲವಾರು ವಿಚಾರ ವಿನಿಮಯ ಮಾಡಲು, ಮುಖ್ಯವಾಗಿ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ವಿಚಾರವಾಗಿ ಇಂದು ಎಲ್ಲಾ ಸಾಧು ಸಂತರ, ಸನ್ಯಾಸಿಗಳ ಸಮಾವೇಶವನ್ನು ವಿಶ್ವ ಹಿಂದೂ ಪರಿಷತ್ ಆಯೋಜನೆ ಮಾಡಿದೆ.
ಮತಾಂತರ ಹಾಗೂ ಗೋಹತ್ಯೆ ಬಗ್ಗೆ ಸಾಧು ಸಂತರು ಚರ್ಚೆ ಮಾಡಬೇಕು. ಮತಾಂತರ ಹಾಗೂ ಗೋಹತ್ಯೆ ನಿಲ್ಲಬೇಕು. ಇದರಿಂದ ನಮ್ಮ ಸನಾತನ ಧರ್ಮಕ್ಕೆ ಪುಷ್ಟಿ ನೀಡಿದಂತೆ ಆಗುತ್ತದೆ. ಯಾವತ್ತೂ ನಮ್ಮ ಧರ್ಮ ಸಹಿಷ್ಣುತೆಯನ್ನೆ ಪ್ರತಿಪಾದಿಸುತ್ತದೆ. ಭಾರತದಲ್ಲಿ ಎಲ್ಲಾ ಧರ್ಮಿಗಳು ವಾಸ ಮಾಡುತ್ತಾರೆ. ಸೌಹಾರ್ದವಾದಂತ ವಾತವರಣದಲ್ಲಿ ಇರಬೇಕು ಎನ್ನುವುದು ನಮ್ಮ ಎಲ್ಲಾ ಹಿರಿಯರ ಚಿಂತನೆಯಾಗಿದೆ. ಹೀಗಾಗಿ ಮತಾಂತ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ಎಲ್ಲಾ ಯತಿಗಳು ಇಲ್ಲಿ ಸೇರಿ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದರು.
ಇವತ್ತಿನ ಸಭೆಯ ನಿರ್ಣಯವನ್ನು ರಾಜ್ಯ ಸರ್ಕಾರಕ್ಕೆ ನೀಡಿ ಒತ್ತಾಯ ಮಾಡಲಿದ್ದೇವೆ. ಸರ್ಕಾರ ಸ್ಪಂದಿಸುವ ವಿಶ್ವಾಸ ನಮ್ಮಲಿದೆ. ಇದರಲ್ಲಿ ಪಕ್ಷ ಮುಖ್ಯ ಆಗುವುದಿಲ್ಲ. ವಿಚಾರ ಮುಖ್ಯವಾಗಿರುತ್ತದೆ. ಈ ವೇದಿಕೆಯ ನಿರ್ಣಯದ ನಂತರ ರಾಷ್ಟ್ರ ಮಟ್ಟದ ನಾಯಕರ ಗಮನಕ್ಕೂ ತರುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Sun, 13 August 23