ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ(Independence day) ಹಿನ್ನೆಲೆ ರಾಜ್ಯದಲ್ಲಿ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದೆ. ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ(Narendra Modi) ಕರೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲೂ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಸಿದ್ಧತೆಗಳು ಜೋರಾಗಿವೆ. ಜೊತೆಗೆ ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ(Siddaramaiah) ಪತ್ರ ಬರೆದು ಬರಪೀಡಿತ ತಾಲೂಕು ಘೋಷಣೆಗೆ ಅಗತ್ಯವಿರುವ ನಿಯಮಗಳ ಸಡಿಲಿಕೆಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ವಿದೇಶ ಪ್ರವಾಸ ಮುಗಿಸಿ H.D.ಕುಮಾರಸ್ವಾಮಿ ಬೆಂಗಳೂರಿಗೆ ಮರಳಿದ್ದಾರೆ. ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ
ಅಧಿಕಾರದ ಆಸೆಗಾಗಿ ಕಾಂಗ್ರೆಸ್ನವರು ದೇಶವನ್ನು ತುಂಡು ಮಾಡಿದರು ಎಂದು ಶಿವಮೊಗ್ಗದಲ್ಲಿ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು. ಅಧಿಕಾರದ ಆಸೆಗೆ ದೇಶವನ್ನು ಭಾರತ, ಪಾಕ್ ಎಂದು ಇಬ್ಭಾಗ ಮಾಡಿದರು. ಈ ವಿಚಾರ ಒಪ್ಪಿಕೊಂಡು ದೇಶದ ಜನರಲ್ಲಿ ಕಾಂಗ್ರೆಸ್ ಕ್ಷಮೆ ಕೇಳಬೇಕು. ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ನವರೇ ಕಾರಣ ಎಂದರು. ಮೋದಿ ಪಾಕಿಸ್ತಾನದ ಪ್ರಧಾನಿ ಆಗಲೆಂದು ಅಲ್ಲಿನ ಜನ ಈಗ ಹೇಳುತ್ತಿದ್ದಾರೆ. ಪಾಕ್ ಭಾರತಕ್ಕೆ ಸೇರುತ್ತೆ, ಅಖಂಡ ಭಾರತ ಆಗುವುದರಲ್ಲಿ ಅನುಮಾನವಿಲ್ಲ ಎಂದರು.
ಸ್ವಾತಂತ್ರ್ಯೋತ್ಸವಕ್ಕೂ ಒಂದು ದಿನ ಮೊದಲು ರಕ್ತದೋಕುಳಿ ನಡೆಯಿತು. ವಿಶ್ವದ ಇತಿಹಾಸದಲ್ಲಿ ಈ ರೀತಿ ಘಟನೆ ನಡೆದಿಲ್ಲ. ಆದರೆ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಈ ವಿಷಯ ಮರೆಮಾಚಿತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹೃದಯವನ್ನು ಕತ್ತರಿಸಿರುವ ಗಾಯ ಇನ್ನೂ ಮಾಸಿಲ್ಲ. ದೇಶದ ಜನರಿಗೆ ಸ್ವಾತಂತ್ರ್ಯ ಹೋರಾಟವನ್ನು ಕಲಿಸಲು ಯಾರೂ ಬರೆಕಾಗಿರಲಿಲ್ಲ. ಕಾಂಗ್ರೆಸ್ ಸ್ಥಾಪನೆಗೆ ನೂರಾರು ವರ್ಷ ಮೊದಲು ಕಿತ್ತೂರು ಚೆನ್ನಮ್ಮ, ರಾಯಣ್ಣ, ವೀರಸಿಂಧೂರ ಲಕ್ಷ್ಮಣ ಸೇರಿ ಅನೇಕರು ಬ್ರಿಟಿಷರ ವಿರುದ್ಧ ಕತ್ತಿ ಎತ್ತಿದ್ದರು. ಸ್ವಾತಂತ್ರ್ಯ ಹೋರಾಟ ಎಂದ ಕೂಡಲೆ ಗಾಂಧಿ, ನೆಹರೂ ಎನ್ನುತ್ತಾರೆ. ಇತಿಹಾಸ ಬಲ್ಲವರು ಭವಿಷ್ಯ ನಿರ್ಮಾಣ ಮಾಡುತ್ತಾರೆ ಎಂದು ಹೇಳಿದರು. ಅಲ್ಲದೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ತನ್ನ ತಾಯಿ ಹೇಳಿದ ಸತ್ಯ ಘಟನೆಯ ಬಗ್ಗೆ ನೆನೆದು ಬೊಮ್ಮಾಯಿ ಭಾವುಕರಾದರು.
ಮಹಿಳೆಯರು ಭಾರತದ ಅಭಿವೃದ್ಧಿಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾಗವಹಿಸುತ್ತಿದ್ದಾರೆ, ಅವರು ಈಗ ಅನೇಕ ವರ್ಷಗಳ ಹಿಂದೆ ನಾವು ಯೋಚಿಸದ ದೊಡ್ಡ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದಾರೆ. ದೇಶದ ಹೆಣ್ಣುಮಕ್ಕಳು ಮುಂದೆ ಸಾಗಬೇಕೆಂದು ನಾನು ಬಯಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಆನೇಕಲ್: ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣ ಸಂಬಂಧ ಬನ್ನೇರುಘಟ್ಟದ ಬ್ಯಾಟರಾಯನದೊಡ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಐಜಿ ರವಿಕಾಂತೇಗೌಡ, ಮಧ್ಯ ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ ಬಳಿಕ ಕೊಲೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬನ್ನೇರುಘಟ್ಟ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ರೀತಿ ತನಿಖೆ ನಡೆಯುತ್ತಿದೆ ಎನ್ನುವುದನ್ನ ಪರಿಶೀಲನೆ ನಡೆಸಿ ಮಾಹಿತಿ ತೆಗೆದುಕೊಂಡಿದ್ದೇನೆ. ಆರೋಪಿಗಳ ಬಂಧನಕ್ಕಾಗಿ ನಾಲ್ಕು ತಂಡಗಳನ್ನ ರಚನೆ ಮಾಡಲಾಗಿದೆ. ನಿರ್ಜನ ಪ್ರದೇಶದಲ್ಲಿ ಘಟನೆ ಆಗಿರುವುದರಿಂದ ಸಿಕ್ಕಿರುವ ಸಾಕ್ಷ್ಯದಾರಗಳ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಬೇಕಿದೆ. ಅಡಿಷನಲ್ ಎಸ್ಪಿ, ಓರ್ವ ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ಗಳ ನೇತೃತ್ವದ ತಂಡಗಳನ್ನ ಮಾಡಿ ತನಿಖೆ ಕೈಗೊಳ್ಳಲಾಗಿದೆ. ಇದೊಂದು ಸವಾಲಿನ ಪ್ರಕರಣವಾಗಿ ಸ್ವೀಕರಿಸಿ ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಲಾಗುವುದು ಎಂದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷರಾಗಿ ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕಲಬುರಗಿ ನಗರದ KKRDB ಭವನದಲ್ಲಿ ಅಧಿಕಾರ ಸ್ವೀಕರಿಸಿದರು. ಸಚಿವ ಸ್ಥಾನ ಸಿಗದೇ ಪರೋಕ್ಷವಾಗಿ ಮುನಿಸಿಕೊಂಡಿದ್ದ ಅಜಯ್‌ಸಿಂಗ್, ರಾಜ್ಯ ಕಾಂಗ್ರೆಸ್ ಸರ್ಕಾರವು ಕೆಕೆಆರ್ಡಿಬಿ ಅಧ್ಯಕ್ಷ ಸ್ಥಾನ ನೀಡಿ ಮುನಿಸು ಶಮನಕ್ಕೆ ಯತ್ನಿಸಿದೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ.ಅಜಯಸಿಂಗ್ ಅವರನ್ನು ತಬ್ಬಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಭಾಶಯ ಕೋರಿದರು.
ಗದಗ: ನಗರದಲ್ಲಿ ವೀರಶೈವ ಲಿಂಗಾಯತ ಮಠಾಧೀಶರು ಸಭೆ ನಡೆಸಿ ವೀರಶೈವ ಲಿಂಗಾಯತ ಒಳಪಂಗಡಗಳನ್ನು ಒಬಿಸಿ ಮೀಸಲಾತಿಗಾಗಿ ಹಕ್ಕೊತ್ತಾಯ ಮಂಡಿಸಿದ್ದಾರೆ. ಈ ವೇಳೆ ಮಾತನಾಡಿದ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಬಂದಿರುವ ಸ್ವಾಮೀಜಿಗಳಿಗೆ ಪಾಠ ಹೇಳುವ ಬದಲು, ಯಾರು ಬಂದಿಲ್ಲಾ ಆ ಸ್ವಾಮೀಜಿಗಳಿಗೆ ಪಾಠ ಮಾಡಿ. ವೀರಶೈವ, ಲಿಂಗಾಯತ ಸ್ವಾಮೀಜಿಗಳು ತಮ್ಮ ತಮ್ಮ ನೋವುಗಳನ್ನು ಮರೆಯಬೇಕು. ತಮ್ಮ ತಮ್ಮ ವಿಚಾರಗಳನ್ನು ಬದಲಾವಣೆ ಮಾಡಬೇಕಾಗಿದೆ. ಸಮಾಜದ ಹಿತದೃಷ್ಟಿಯಿಂದ ಬದಲಾವಣೆಯಾಗಬೇಕಾಗಿದೆ, ನಾಲ್ಕು ಜನ ಪೀಠಾಧೀಶರು ಬಹಳ ಎತ್ತರದಲ್ಲಿ ಇರೋದ ಸರಿಯಲ್ಲ ಅಂತಾ ತಿರ್ಮಾನ ಮಾಡಿದ್ದಾರೆ. ನಾಲ್ಕು ಜನ ಪೀಠಾಧೀಶರು ಜನರ ಹತ್ತಿರ ಬಂದಿದ್ದಾರೆ. ಬಂದವರಿಗೆ ಹೇಳುವ ಬದಲು, ಯಾರು ಬಂದಿಲ್ಲಾ ಅವರಿಗೆ ಹೆಸರನ್ನು ಸಭೆಯಲ್ಲಿ ಹೇಳುವ ದಾರ್ಶ ನಿಮ್ಮದಾಗಬೇಕು. ಅವರಿಗೆ ಎಚ್ಚರಿಕೆ ಮುಟ್ಟುತ್ತೇ ಎಂದರು.
ವಿಜಯಪುರ: ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಆರೋಪ ಸಂಬಂಧ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಲ್ಲೆಲ್ಲಿ ಹೊಂದಾಣಿಕೆ ಆಗಿದೆ ಎಂದು ನಮ್ಮ ಹೈಕಮಾಂಡ್ಗೆ ಗೊತ್ತಾಗಿದೆ. ಯಾರ ಜೊತೆ ಹೊಂದಾಣಿಕೆ ಮಾಡಿದ್ದಾರೆಂದು ವರಿಷ್ಠರಿಗೆ ಗೊತ್ತಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ನೇಮಕ ಮಾಡುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣದಿಂದ ಪ್ರಧಾನಿ ನರೇಂದ್ರ ಮೋದಿಗೆ ಬೇಸರವಿದೆ ಎಂದರು. ಅಲ್ಲದೆ, ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುತ್ತೇವೆ ಎಂದಿದರು.
ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರವಾಗಿ ಸದಾಶಿವನಗರದಲ್ಲಿರುವ ನಟ ಉಪೇಂದ್ರ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ಕೆಎಸ್‌ಆರ್‌ಪಿ ತುಕಡಿ, ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸದ್ಯ ಉಪೇಂದ್ರ ಅವರು ನಿವಾಸದಿಂದ ಹೊರಗಿದ್ದಾರೆ ಎನ್ನಲಾಗುತ್ತಿದೆ.
ನಾನು ಗುತ್ತಿಗೆದಾರರ ಬಗ್ಗೆ ಮಾತನಾಡಲ್ಲ, ಅವರು ಕಷ್ಟದಲ್ಲಿದ್ದಾರೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಗುತ್ತಿಗೆದಾರರರನ್ನು ನವರಂಗಿ ನಾರಾಯಣ, ಸಿಟಿ ರವಿ ಬಳಸಿಕೊಂಡಿದ್ದಾರೆ. ಮಹಾಲಕ್ಷ್ಮೀಲೇಔಟ್ ಗೋಪಾಲಸ್ವಾಮಿ ಬಗ್ಗೆ ಮಾತಾಡಬೇಕಿದೆ. ನನ್ನ ಬಳಿ ಒಬ್ಬೊಬ್ಬರಾಗಿ ಬರ್ತಾ ಇದ್ದಾರೆ ಎಂದರು.
ಜಾತಿ ನಿಂದನೆ ಪ್ರಕರಣಕ್ಕೆ ತಡೆಕೋರಿ ನಟ ಉಪೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಗಾದೆ ಮಾತು ಉಲ್ಲೇಖಿಸಿ ಉಪೇಂದ್ರ ಹೇಳಿಕೆ ನೀಡಿದ್ದು, ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಉಪೇಂದ್ರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದಮಂಡನೆ ಮಾಡಿದರು. ಇದೊಂದೇ ಪದವನ್ನು ಮಾತ್ರ ಉಪಯೋಗಿಸಿದರಾ? ಗಾದೆ ಬಳಸಿದ್ದಾರೆ, ಅದಕ್ಕೇಕೆ ಇಷ್ಟೊಂದು ಪ್ರಕರಣ ದಾಖಲು ಎಂದು ನ್ಯಾ. ಹೇಮಂತ್ ಚಂದನ್ ಗೌಡರ್ ಪ್ರಶ್ನಿಸಿ ಉಪೇಂದ್ರ ವಿರುದ್ಧದ ಎಫ್ಐಆರ್ಗೆ ತಡೆ ನೀಡಿದರು.
ಫೇಸ್ಬುಕ್ ಲೈವ್ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಸಂಬಂಧ ನಟ ಉಪೇಂದ್ರ ಅವರನ್ನು ಚಿತ್ರರಂಗದಿಂದ ಐದು ವರ್ಷ ಬ್ಯಾನ್ ಮಾಡುವಂತೆ ಫಿಲ್ಮ್ ಚೇಂಬರ್ಗೆ ಸಾಮಾಜಿಕ ಕಾರ್ಯಕರ್ತ ನವೀನ್ ಮನವಿ ಮಾಡಿದ್ದಾರೆ. ಗಲಭೆ, ಅಶಾಂತಿ ಸೃಷ್ಟಿ ಮಾಡಲು ನಟ ಉಪೇಂದ್ರ ಹೊರಟಿದ್ದಾರೆ. ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಈ ಪ್ರಕರಣವನ್ನು ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.
ರಾಯಚೂರು ತಾಲ್ಲೂಕಿನ ಶಕ್ತಿನಗರದ ಬಳಿಯ ಆರ್ ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದ ಮೇಲೇರಿ ಕಾರ್ಮಿಕ ದೇಶ ಪ್ರೇಮ ಮೆರೆದಿದ್ದು ಆರ್ ಟಿಪಿಎಸ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗೆ ತಲೆ ಬಿಸಿಯಾಗಿದೆ. 150 ಮೀಟರ್ ಮೇಲೆರಿ ದೇಶಪ್ರೇಮ ಮೆರೆಯಲು ಹೋಗಿ ಕಾರ್ಮಿಕನ ಹುಚ್ಚಾಟ ಮೆರೆದಿದ್ದಾನೆ.
ಸರ್ಕಾರ ಬಂದ ಮೇಲೆ ಸಚಿವರ ಮೇಲೆ ಭ್ರಷ್ಟಾಚಾರ ಆರೋಪ ಬರುತ್ತಿದೆ. ಆರೋಪ ಕೇಳಿಬಂದ ಸಚಿವರ ವಿರುದ್ಧ ತನಿಖೆ ಮಾಡಿ ಎಂದು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತಪ್ಪು ಮಾಡಿರುವುದು ಕಂಡುಬಂದ್ರೆ ಅವರನ್ನು ಸಂಪುಟದಿಂದ ಕೈಬಿಡಬೇಕು. ಎನ್.ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳೇ ಆರೋಪ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ ಎಂದರು.
6 ತಿಂಗಳಲ್ಲಿ ಸರ್ಕಾರ ಬಳಲಿದೆ ಎಂದು ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ, ಜೆಡಿಎಸ್ನಿಂದಲೇ ನಮ್ಮ ಪಕ್ಷಕ್ಕೆ ಬರಲು ತಯಾರಿದ್ದಾರೆ ಎಂದು ಮೈಸೂರಿನಲ್ಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿರುಗೇಟು ನೀಡಿದರು. ನಾವು ಯಾರನ್ನೂ ಕರೆಯುತ್ತಿಲ್ಲ ಅವರೇ ಬರಲು ಸಿದ್ಧರಾಗಿದ್ದಾರೆ. ಈ ಸ್ಥಿತಿಯಲ್ಲಿ ಸರ್ಕಾರ ಹೇಗೆ ಅಸ್ಥಿರವಾಗುತ್ತದೆ ಎಂದರು.
ನವರಂಗಿ ನಾರಾಯಣ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಅಶ್ವತ್ಥ್‌ನಾರಾಯ ತಿರುಗೇಟು ಕೊಟ್ಟಿದ್ದಾರೆ. ವೈಯಕ್ತಿವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ನನಗೆ ಯಾರ ಮೇಲೂ ವೈಯಕ್ತಿವಾಗಿ ದ್ವೇಷ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ ಹಾಗೂ ಶಾಸಕ ಅಶ್ವತ್ಥ್‌ನಾರಾಯಣ ತಿರುಗೇಟು ಕೊಟ್ಟರು. ರಾಮನಗರದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ, ಸ್ವಯಂ ಅಭಿವೃದ್ದಿಯಾಗಿದೆ. ರಾಮನಗದಲ್ಲಿ ರಾಮನದೇವಾಲಯ ಮಾಡಲು ಬಿಜೆಪಿಯೇ ಬರಬೇಕಾ? ಇವರ ಕೈಯಲ್ಲಿ ದೇವಾಲಯ ಮಾಡಲು ಆಗುವುದಿಲ್ವಾ?ನಾವು ಪ್ರೀತಿ ಮತ್ತು ಗೌರವ ಕೊಡಲು ಸದಾ ಸಿದ್ದರಾಗಿದೇವೆ. ಬೆಂಗಳೂರು ನಮ್ಮ ಜೀವಾಳ, ಬೆಂಗಳೂರಿಗೆ ವಿಶ್ವದಲ್ಲಿ ಹೆಸರಿದೆ. ಇವರಿಗೆ ಬೆಂಗಳೂರಿಗೆ ಏನ್ ಸಂಬಂಧ? ಎಂದು ವಾಗ್ದಾಳಿ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ನೀಡಿದ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ನಟ ಉಪೇಂದ್ರರನ್ನ ಗಡಿಪಾರು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ನಟ ಉಪೇಂದ್ರ ವಿರುದ್ಧ ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಗೆ ದಸಂಸ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಎಸ್.ಎಂ.ವೆಂಕಟೇಶ್ ಹಾಗೂ ವಿಜಿ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಾಗಿಲು ಮುಚ್ಚಿದೆ ಎಂದು ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದರು. ಕೆಪಿಸಿಸಿ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಡಿಕೆಶಿ, ಯೋಗ ಬರುತ್ತದೆ, ಯೋಗಕ್ಕಿಂತ ಯೋಗಕ್ಷೇಮ ಬಹಳ ಮುಖ್ಯ. ಬಂದಿರುವ ಯೋಗವನ್ನು ಕಾಪಾಡಿಕೊಂಡು ಹೋಗಬೇಕು. ಟೀಂ ಎಫರ್ಟ್ನಿಂದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದೇವೆ. 224ರ ಪೈಕಿ 218 ಅಭ್ಯರ್ಥಿಗಳಿಗೆ ಒಮ್ಮತದ ಟಿಕೆಟ್ ನೀಡಿದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂಬುದಷ್ಟೇ ನಮ್ಮ ಗುರಿಯಾಗಿತ್ತು. ವೈಯಕ್ತಿಕ ಭಿನ್ನಾಭಿಪ್ರಾಯವಿದ್ದರೂ ಕೂಡ ನಾವು ಕೆಲಸ ಮಾಡಿದ್ದೇವೆ. ಹಳೆ ಪದ್ಧತಿಯಲ್ಲೇ ಪಕ್ಷ ನಡೆಯುತ್ತೆ ಅಂತಾ ಕೆಲವರು ಭಾವಿಸಿದ್ದರು. ನನ್ನ ಆಲೋಚನೆ ಇನ್ನೂ ಡೀಪ್ ಆಗಿತ್ತು ಎಂದರು.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು 76ನೇ ಸ್ವಾತಂತ್ರ್ಯೊತ್ಸವ ಸಂಭ್ರಮಕ್ಕೆ 2.70 ಲಕ್ಷ ಲಡ್ಡು ವಿತರಿಸಲು ಮುಂದಾಗಿದ್ದಾರೆ. ಜಿಲ್ಲೆಯ 5 ತಾಲೂಕಿನ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಲಾಡು ಹಂಚಲು ಒರೋಬ್ಬರಿ 2 ಲಕ್ಷದ 70 ಸಾವಿರ ಲಾಡು ತಯಾರಿಸಲು ಆರ್ಡರ್ ಕೊಡಲಾಗಿದೆ. ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಲಾಡು ತಯಾರಿ ಕಾರ್ಯ ಜೋರಾಗಿದೆ.
ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ, ಈ ಸರ್ಕಾರ ಬಹಳ ದಿನ ಇರಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಕಮಿಷನ್ ಸರ್ಕಾರ, ಎಟಿಎಂ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಈಗಾಗಲೇ ಬಿಜೆಪಿ ಹೋರಾಟ ಆರಂಭವಾಗಿದೆ. ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.
ಧಾರವಾಡ ತಾಲೂಕಿನ ತೇಗೂರು ಬಳಿ ಹೆದ್ದಾರಿಯಲ್ಲಿ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಕಾರು ಪಲ್ಟಿyಆಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ವಿನಯ ಹಿರೇಮಠ(28), ಸಂದೀಪ್(29) ಸಾವು. ಘಟನೆಯಲ್ಲಿ ಮತ್ತೊಬ್ಬನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು ಅಭಿವೃದ್ಧಿ ಸಚಿವರಲ್ಲ ನಿರ್ನಾಮ ಸಚಿವರು ಎಂಬ ಡಾ.ಅಶ್ವತ್ಥ್ ನಾರಾಯಣ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಅವನು ಅಶ್ವತ್ಥ್ ನಾರಾಯಣ ಅಲ್ಲ ನವರಂಗಿ ನಾರಾಯಣ ಎಂದು ಕಿಡಿಕಾರಿದ್ದಾರೆ. ಅಶ್ವತ್ಥ್ ನಾರಾಯಣ ರಾಮನಗರಕ್ಕೆ ಬಂದು ಕ್ಲೀನ್ ಮಾಡ್ತೀನಿ ಎಂದೇಳಿ ಅವರ ಪಾರ್ಟಿ ಕ್ಲೀನ್ ಮಾಡಿ ಹೋದ್ರು. ಅಶ್ವತ್ಥ್ ನಾರಾಯಣ ಸಚಿವರಾಗಿದ್ದಾಗ ಬೆಂಗಳೂರಿಗೆ ಏನು ಮಾಡಿದ್ದಾರೆ? ಬೆಂಗಳೂರು ನಗರದಲ್ಲಿ ಏನು ಮಾಡಿದ್ದಾರೆ ಎಂದು ನಾವು ಇನ್ನೂ ಬಿಚ್ಚಿಲ್ಲ. ಏನೇನು ಆಟ ಆಡ್ತಿದ್ದಾರೆ, ಯಾರನ್ನ ಎತ್ತಿಕಟ್ಟುತ್ತಿದ್ದಾರೆಂದು ಗೊತ್ತು. ಸ್ವಾತಂತ್ರ್ಯ ದಿನಾಚರಣೆ ನಂತರ ಎಲ್ಲದರ ಬಗ್ಗೆ ಮಾತಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಗ್ಯಾರಂಟಿ ಯೋಜನೆಯಿಂದಾಗಿ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಹಣ ಸಂಪಾದನೆಗಾಗಿ ಪೈಪೋಟಿ ನಡೆಸಿದ್ದಾರೆ ಎಂದು ಔತಣಕೂಟ ಸಭೆಯಲ್ಲಿ BJP ಶಾಸಕ ಬಸನಗೌಡ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಕ್ಷೇತ್ರದ ಕಾರ್ಯಕರ್ತರಿಗೆ ಅಭಿನಂದನಾ ಹಾಗೂ ಔತಣಕೂಟ ಸಭೆಯಲ್ಲಿ ಬಸನಗೌಡ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಕೊನೆ ಚುನಾವಣೆ ಅಂತಾ ಹೇಳಿ ಸಿದ್ದರಾಮಯ್ಯ ದುಡ್ಡು ಮಾಡ್ತಿದ್ದಾರೆ. ಲೋಕಸಭಾ ಬಳಿಕ ಮುಖ್ಯಮಂತ್ರಿ ಆಗಬೇಕೆಂದು ಡಿಕೆ ಹೊರಟಿದ್ದಾರೆ. ಇವರಿಬ್ಬರ ಮಧ್ಯೆ ನಮಗೇನು ಸಿಗ್ತಿಲ್ಲ ಅಂತ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದರು.
ವಿಧಾನಸೌಧದಲ್ಲಿ ನವೀಕರಣಗೊಂಡ SBI ಬ್ಯಾಂಕ್ ಶಾಖೆಯನ್ನು ಸಿಎಂ ಸಿದ್ದರಾಮಯ್ಯಗೆ ಉದ್ಘಾಟಿಸಿದರು. ಈ ವೇಳೆ SBI ಬ್ಯಾಂಕ್ ಅಧಿಕಾರಿಗಳು ಸಾಥ್ ಕೊಟ್ರು.
ಫೇಸ್ಬುಕ್ ಲೈವ್ನಲ್ಲಿ ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಕೇಸ್ಗೆ ಸಂಬಂಧಿಸಿ ನಟ ಉಪೇಂದ್ರ ಮನೆಗೆ ವಿವಿಪುರಂ ವಿಭಾಗದ ಎಸಿಪಿ ನಾಗರಾಜ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ನಟ ಉಪೇಂದ್ರ ಮನೆಗೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ವಿಜಯಪುರ ನಗರದಲ್ಲಿ ಬೃಹತ್ ರಾಷ್ಟ್ರ ಧ್ವಜ ಪ್ರದರ್ಶನ ನಡೆದಿದೆ. ನಗರದ ದರಬಾರ್ ಹೈಸ್ಕೂಲ್‌ನಿಂದ ಕನಕದಾಸ ವೃತ್ತ, ಅಂಬೇಡ್ಕರ್ ಸರ್ಕಲ್, ಬಸವೇಶ್ವರ ಸರ್ಕಲ್, ಗಾಂಧಿಚೌಕ್ ಮಾರ್ಗವಾಗಿ ಸಿದ್ದೇಶ್ವರ ದೇವಸ್ಥಾನದವರೆಗೂ 250 ಮೀಟರ್ ಉದ್ದರ ರಾಷ್ಟ್ರ ಧ್ವಜ ಮೆರವಣಿಗೆ ನಡೆದಿದೆ. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.
ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಿದ್ಧಗಂಗಾ ಮಠಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದ್ದಾರೆ. ಈ ವೇಳೆ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ್ರು. ಬಳಿಕ ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ.ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರ ಬಳಿ ಘಟನೆ ಕುರಿತು ಮಾಹಿತಿ ಪಡೆದರು.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬಂಗರಗಾ, ಸಾಲೆಗಾಂವ್ ಸೇರಿ ಕೆಲ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬಂಗರಗಾ ಗ್ರಾಮದ ಕೆರೆಯಲ್ಲಿ ಚಿರತೆ ಹೆಜ್ಕೆ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ನಟ ಉಪೇಂದ್ರರ ಪದ ಬಳಕೆಗೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಉಪೇಂದ್ರ ಅವರು ಒಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯುತ್ತಿರುವುದನ್ನು ನೋಡಿದರೆ ಇದು ಸಮುದಾಯಕ್ಕೆ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳು ಅಟ್ಟಹಾಸ ಮೆರೆದಿವೆ. ಮನಬಂದಂತೆ ಕಚ್ಚಿ ಗಾಯಗೊಳಿಸಿವೆ. ನಾಯಿಗಳು ಬಾಲಕನ ಮೇಲೆ ದಾಳಿ ಮಾಡಿದ್ದನ್ನು ಗಮನಿಸಿದ ಸ್ಥಳೀಯರು ನಾಯಿಗಳನ್ನ ಓಡಿಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಬೆಳಗಾವಿಯ ಸಂಗಮೇಶ್ವರ ನಗರದ ಅರ್ಕಾನ್ ರಿಯಾಜ್ (08) ಗಾಯಗೊಂಡ ಬಾಲಕ. ನಾಯಿ ದಾಳಿಯಿಂದ ಬಾಲಕನ ತಲೆ, ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಟೊಮೆಟೊ ಬೆಲೆ ಕುಸಿದು ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರಿಯಾಗುತ್ತಿದೆ. ಕೆಜೆ ಬೆಳ್ಳುಳ್ಳಿಗೆ 200 ರೂಪಾಯಿ ಇದೆ. ಹೊಸ ಕ್ರಾಫ್ಟ್ ಬರುವವರಿಗೂ ಇದೆ ಬೆಲೆ ಮುಂದುವರಿಯುವ ಸಾಧ್ಯಾತೆ. ಕಳೆದ ಎರಡು ತಿಂಗಳಿನಿಂದ ಬೆಳ್ಳುಳ್ಳಿ ಬೆಲೆ ಜಾಸ್ತಿಯಾಗಿದೆ.
ಮಳೆ ಕಡಿಮೆಯಾದ ಹಿನ್ನೆಲೆ ಟೊಮೆಟೊ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆಯಾಗುತ್ತಿದ್ದಂತೆ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಆದ್ರೆ ಮತ್ತೊಂದು ಕಡೆ ಸದ್ದಿಲ್ಲದೆ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆ ಕಂಡು ಬಂದಿದೆ. ಮುಂಗಾರು ಮಳೆ ಕೈಕೊಟ್ಟು ಚಿತ್ರದುರ್ಗ, ದಾವಣಗೆರೆ ಹಾಗೂ ಕರ್ನಾಟಕದ ಇತರೆಡೆಯಿಂದ ಈರುಳ್ಳಿ ಲಭ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್‌ನಲ್ಲಿ ಬೆಳೆ ಕೊರತೆ ಇದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಪತ್ನಿ ಕೊಂದ ಘಟನೆ ನಡೆದಿದೆ. ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಪತಿ ಸಂಜಯ್ನನ್ನು ಪತ್ನಿ ಪಾವನಾ ಕೊಂದಿದ್ದಾಳೆ. ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಸಹಜ ಸಾವಲ್ಲ, ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಯಗಟಿ ಪೊಲೀಸ್ ಠಾಣೆಯಲ್ಲಿ ನವೀನ್ ಪೋಷಕರು ದೂರು ದಾಖಲಿಸಿದ್ದರು. ತನಿಖೆ ವೇಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದಿದ್ದು ಬೆಳಕಿಗೆ ಬಂದಿದೆ.
ಫೇಸ್ಬುಕ್ ಲೈವ್ನಲ್ಲಿ ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಕೇಸ್ ಸಂಬಂಧ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ನಟ ಉಪೇಂದ್ರಗೆ ನೋಟಿಸ್ ನೀಡಿದ್ದಾರೆ. ತಕ್ಷಣ ವಿಚಾರಣೆಗೆ ಹಾಜರಾಗುವಂತೆ ವಾಟ್ಸಾಪ್ ಮೂಲಕ ನೋಟಿಸ್ ರವಾನಿಸಿದ್ದಾರೆ. ಆಕ್ಷೇಪಾರ್ಹ ಪದ ಬಳಕೆ ಸಂಬಂಧ ಪೊಲೀಸರು ವಿಡಿಯೋ ಮಾಡಿದ ಜಾಗದ ಸ್ಥಳ ಮಹಜರು ಮಾಡಲಿದ್ದಾರೆ. ದೂರುದಾರರ ಸಮ್ಮುಖದಲ್ಲೇ ಸ್ಥಳ ಮಹಜರು ನಡೆಯಲಿದೆ.
ಹಾಸನ ನಗರದ ಎನ್.ಆರ್.ವೃತ್ತದ ಸಮೀಪ ಇರೋ ಪ್ರವಾಸಿ ಮಂದಿರದಲ್ಲಿ ಕೆಎಸ್‌ಆರ್‌ಪಿ ಹೆಡ್‌ಕಾನ್ಸ್‌ಟೇಬಲ್ ರಾಜೇಂದ್ರ(51) ಮೃತ ದೇಹ ಪತ್ತೆಯಾಗಿದೆ. ರಾತ್ರಿ ವೇಳೆ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ತಲೆಗೆ ಬಲವಾದ ಪೆಟ್ಟು ಬಿದ್ದು ಅಥವಾ ನೆಲಕ್ಕೆ ಬಿದ್ದ ವೇಳೆ ಹೃದಯಾಘಾತದಿಂದಲೋ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ರಾಜೇಂದ್ರ ಕೆಎಸ್‌ಆರ್‌ಪಿ ಹನ್ನೊಂದನೆ ಬ್ಯಟಾಲಿಯನ್‌ನ ಹೆಡ್‌ಕಾನ್ಸ್‌ಟೇಬಲ್.
ಲೋ ಬಿಪಿಯಿಂದ ಹೃದಯಾಘಾತವಾಗಿ ನರ್ಸಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ಸುಮಾ(19) ಮೃತ ವಿದ್ಯಾರ್ಥಿನಿ. ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಸುಮಾ ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮತ್ತೆ ಆ.11 ರಂದು ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ರು. ಆದ್ರೆ ಆ.13 ರ ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಆಸ್ತಿ ಮಾರಿ ಬಂದ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು ಇಬ್ಬರ ಕೊಲೆಯಾಗಿದೆ. ಹಣದ ವಿಚಾರಕ್ಕೆ ಮಗ ತನ್ನ ಸ್ವಂತ ತಂದೆ, ತಾಯಿ, ಮಧ್ಯವರ್ತಿ ಸೇರಿ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತಂದೆ ಭಾಸ್ಕರ್ ಗೌಡ, ಮಧ್ಯವರ್ತಿ ಕಾರ್ತಿಕ್(45) ಮೃತಪಟ್ಟಿದ್ದು ತಾಯಿ ಸ್ಥಿತಿ ಗಂಭೀರವಾಗಿದೆ. ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ತಂದ್ರೆಕೊಪ್ಪಲು ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ರೈತ ಅಶೋಕ್(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಿಗ್ರಾಮದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ 2.67 ಲಕ್ಷ ರೂ., 5 ಲಕ್ಷ ಕೈಸಾಲ ಮಾಡಿದ್ದ ಮೃತ ಅಶೋಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ಆವರಣದಲ್ಲಿ ರೌಡಿಗಳಿಗೆ ಪರೇಡ್ ತೆಗೆದುಕೊಳ್ಳಲಾಯಿತು. ಸಮಾಜಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಎಚ್ಚರಿಕೆ ಕೊಟ್ಟರು. ಜಯಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳನ್ನ ಠಾಣೆಗೆ ಕರೆಸಿ ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಗೂಂಡಾ ಕಾಯ್ದೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟರು.
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶು ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಶವಾಗಾರದ ಮುಂದೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಾವಣಗೆರೆ ತಾಲೂಕಿನ ಕಲ್ಕಕೇರಿ ಕ್ಯಾಂಪ್ ನಿವಾಸಿ ನೇತ್ರಾವತಿ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು ಒಂದು ಕೆಜಿ 700 ಗ್ರಾಂ. ಹಾಗೂ ಗಂಡು ಮಗು ಒಂದು ಕೆಜಿ 800 ಗ್ರಾಂ ಇತ್ತು. ಗಂಡು ಮಗು ಸಾವನ್ನಪ್ಪಿದ್ದು ಕುಟುಂಬಸ್ಥರು ವೈದ್ಯರ ವಿರುದ್ಧ ಆರೋಪ ಮಾಡಿದ್ದಾರೆ.
ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳಗ್ಗೆಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತೆ ಶೋಧ ಕಾರ್ಯ ಆರಂಭಿಸಿದ್ದಾರೆ. ಮಹದೇವಪ್ಪ(40), ಶಂಕರ್(11) ಶವಗಳಿಗಾಗಿ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಿನ್ನೆ ಸತತ 6 ಗಂಟೆ ಕಾಲ ಶೋಧ ನಡೆಸಿದರೂ ಇಬ್ಬರ ಶವ ಪತ್ತೆಯಾಗಿಲ್ಲ.
ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಕಟ್ಟೆಮಾಡು ದೇವಪ್ಪ ಅವರು ಬಲಿಯಾಗಿದ್ದಾರೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಯ ಹಲವು ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
H.D.ಕುಮಾರಸ್ವಾಮಿ ವಿದೇಶ ಪ್ರವಾಸ ಮುಗಿಸಿ ಮಲೇಷಿಯಾದಿಂದ ಕೆಐಎಬಿಗೆ ಹಿಂದಿರುಗಿದ್ದಾರೆ. ರಾತ್ರಿ 11.30ರ ವಿಮಾನದಲ್ಲಿ ಕೌಲಾಲಂಪುರದಿಂದ ಕೆಐಎಬಿಗೆ ಆಗಮಿಸಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆ ಹಿನ್ನೆಲೆ ರಾತ್ರಿ 10 ಗಂಟೆ ಸುಮಾರಿಗೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾದ ರಾಜ್ಯಪಾಲ ಗೆಹ್ಲೋಟ್ ಅವರು ಡಿಲಕ್ಸ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆದು ರಾತ್ರಿ 12.50ಕ್ಕೆ ರಾಜ ಭವನಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Published On - 7:52 am, Mon, 14 August 23