ಕಾವೇರಿ ನೀರು(Cauvery Water) ಹರಿಸಲು ಒತ್ತಡ ಹೇರಿ ತಮಿಳುನಾಡು(Tamil Nadu) ಮತ್ತೆ ಕ್ಯಾತೆ ಶುರುಮಾಡಿದೆ. ಕರ್ನಾಟಕ ಬಾಕಿ ಉಳಿಸಿಕೊಂಡಿರುವ ನೀರನ್ನು ತಮಿಳುನಾಡಿಗೆ ಹರಿಸುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟ್ ನಲ್ಲಿ(Suprem Court) ತಮಿಳುನಾಡು ವಕೀಲರು ಅರ್ಜಿ ಪ್ರಸ್ತಾಪ ಮಾಡಿದ್ದಾರೆ. ಅರ್ಜಿ ವಿಚಾರಣೆಗೆ ಹೊಸ ಪೀಠ ರಚಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಇದು ಒಂದು ಕಡೆಯಾದ್ರೆ ಮತ್ತೊಂದೆಡೆ ಕಾವೇರಿ ವಿಚಾರವಾಗಿ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ವಿಧಾನಸೌಧದಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದ್ದು ಕಾವೇರಿ, ಮಹದಾಯಿ, ಕಳಸಾ ಬಂಡೂರಿ ವಿಚಾರವಾಗಿ ಚರ್ಚೆಯಾಗಲಿದೆ. ಕಾವೇರಿ ನೀರು ವಿಚಾರವಾಗಿ ಮಂಡ್ಯದಲ್ಲಿ ಪತಿಭಟನೆ ಮುಂದುವರೆದಿದೆ. ಇನ್ನು ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಬೆಂಗಳೂರು: ಕುಡಿಯುವ ನೀರಿನ ಕುರಿತು ಗೃಹ ಕಛೇರಿ ಕೃಷ್ಣಾದಲ್ಲಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ‘ಕಲುಷಿತ ನೀರು ಸೇವನೆಯಿಂದ ಮರಣ ಪ್ರಕರಣಗಳು ಮರುಕಳಿಸಿದರೆ ಜಿ.ಪಂಚಾಯತಿ ಸಿಇಒ ಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು ಮತ್ತು ನಗರಸಭೆಗಳ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.
ಉಡುಪಿ: ಚಂದ್ರಯಾನ-3 ವಿಕ್ರಮ್ ಯಶಸ್ವಿ ಲ್ಯಾಂಡಿಂಗ್ಗಾಗಿ ಉಡುಪಿಯ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಹಮ್ಮಿಕೊಳ್ಳಲಾಗಿದೆ. ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸೇಫಾಗಿ ಇಳಿಯುವಂತೆ ಪ್ರಾರ್ಥನೆ ಹೂವಿನ ಪೂಜೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಧಾರವಾಡ: ಹತ್ಯೆಯಾಗಿದ್ದ ಖ್ಯಾತ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಮನೆಗೆ ಇಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಭೇಟಿ ನೀಡಿದರು. ಧಾರವಾಡದ ಕಲ್ಯಾಣ ನಗರದಲ್ಲಿರೋ ಕಲಬುರ್ಗಿ ಮನೆಗೆ ಭೇಟಿ ನೀಡಿದ ಅವರು, ಕಲ್ಬುರ್ಗಿಯವರ ಪತ್ನಿ ಹಾಗೂ ಕುಟುಂಬ ಸದಸ್ಯರ ಜೊತೆ ಸೌಹಾರ್ದಯುತ ಮಾತುಕತೆ ನಡೆಸಿದರು.
ಬೆಂಗಳೂರು: ಇಂದು ಮಧ್ಯರಾತ್ರಿಯಿಂದಲೇ ಡಾಲಿ ಉತ್ಸವಕ್ಕೆ ಸಜ್ಜು ಮಾಡಿಕೊಂಡ ಅಭಿಮಾನಿಗಳು, ನಂದಿ ಲಿಂಕ್ ಗ್ರೌಂಡ್ನಲ್ಲಿ ಬರ್ತಡೇ ಆಚರಣೆಗಾಗಿ ಬೃಹತ್ ವೇದಿಕೆ ಸಿದ್ಧವಾಗಿದೆ. ಎಲ್ಇಡಿ ಬಲ್ಬ್ಗಳನ್ನು ಹಾಕಿ, 30 ಬೈ 50 ಅದ್ಧೂರಿ ವೇದಿಕೆ ಹಾಕಲಾಗಿದೆ . ಜೊತೆಗೆ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ.
ಬೆಂಗಳೂರು: NEP ರದ್ದು ಮಾಡಿದ್ದಕ್ಕೆ ಆಶ್ಚರ್ಯವಾಗಿಲ್ಲ, ಇದು ಅವರ ಮನಸ್ಥಿತಿ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಸಾಧಕ, ಭಾದಕಗಳನ್ನು ತಿಳಿಯುವುದಕ್ಕೂ ಮೊದಲು ಎನ್ಇಪಿ ರದ್ದು ಮಾಡಿದ್ದಾರೆ. ನಿನ್ನೆ(ಆ.21) ನಡೆದ ಸಿಎಂ ಸಭೆಯಲ್ಲಿ ಸಾಕಷ್ಡು ಜನ ಶಿಕ್ಷಣ ತಜ್ಞರು ಇದ್ದರು. ಆ ತಜ್ಞರಲ್ಲಿ ಒಬ್ಬರೂ NEP ರದ್ದತಿ ಬಗ್ಗೆ ಮಾತನಾಡಿಲ್ಲ ಎಂದರು.
ಕೊಪ್ಪಳ: ಅನಾರೋಗ್ಯದಿಂದ ಮಾಜಿ ಶಾಸಕ ಶ್ರೀರಂಗದೇವರಾಯಲು(87) ನಿಧನವಾಗಿದ್ದಾರೆ. ಇವರು ಕನಕಗಿರಿ, ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಐದು ಬಾರೀ ಶಾಸಕರಾಗಿದ್ದರು. ಇಂದು(ಆ.22)ಕೊಪ್ಪಳ ಜಿಲ್ಲೆಯ ಗಂಗಾವತಿಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಇವರು ವಿಜಯಸಾಮ್ರಾಜ್ಯದ ವಂಶಸ್ಥರಾಗಿದ್ದರು. ಶ್ರೀರಂಗದೇವರಾಯಲು ನಿಧನಕ್ಕೆ ಗಣ್ಯರ ಕಂಬನಿ ಮಿಡಿದಿದ್ದಾರೆ.
ಚಿಕ್ಕಮಗಳೂರು: ಎಸ್‌ಪಿ ಉಮಾ ಪ್ರಶಾಂತ್ ವರ್ಗಾವಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಅವರು ದಾವಣಗೆರೆ ಎಸ್‌ಪಿಯಾಗಿ ನೇಮಕಗೊಂಡಿದ್ದಾರೆ. ಜೊತೆಗೆ ಚಿಕ್ಕಮಗಳೂರು ನೂತನ ಎಸ್‌ಪಿಯಾಗಿ ಆಮಟೆ ವಿಕ್ರಂ ಅವರನ್ನು ಸರ್ಕಾರ ಆದೇಶಿಸಿದೆ.
ಬೆಂಗಳೂರು: NEP ರದ್ದು ಮಾಡಿರುವ ಹಿನ್ನೆಲೆ ಸರ್ಕಾರಕ್ಕೆ ಕೌಂಟರ್ ಕೊಡಲು, ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಜಾರಿಗಾಗಿ ಇಂದು(ಆ.22) ಬಿಜೆಪಿ ಶಿಕ್ಷಣ ತಜ್ಞರ ಜೊತೆ ಸಭೆ ನಡೆಸುತ್ತಿದೆ. ಪೀಪಲ್ಸ್ ಪೋರಮ್ ಫಾರ್ ಕರ್ನಾಟಕ ಎಜುಕೇಶನ್ನಿಂದ ಈ ಸಭೆ ಆಯೋಜನೆ ಮಾಡಲಾಗಿದೆ. ಸಭೆಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಯಿ, ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮಾಜಿ ಸಚಿವ ಆಸ್ವಥ್ ನಾರಾಯಣ್, ವಿಶ್ವೇಶ್ವರ ಹೆಗಡೆ, ಅರವಿಂದ್ ಲಿಂಬಾವಳಿ, ಸಿಟಿರವಿ, ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಬೆಳಗಾವಿ: ವಲಸಿಗ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಮರು ಸೇರ್ಪಡೆ ವಿಚಾರ ‘ಕಾಂಗ್ರೆಸ್ 135 ಸೀಟ್ ಗೆದ್ದಿದೆ, ಅವರಿಗೆ ಬೇರೆ ಶಾಸಕರ ಅವಶ್ಯಕತೆಯಿಲ್ಲವೆಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ ಪಕ್ಷದಲ್ಲಿ ಪತ್ರ ಸಮರ ಸೇರಿ ಏನೇನೋ ನಡೆಯುತ್ತಿದೆ. ತಮ್ಮ ಶಾಸಕರನ್ನು ಹೆದರಿಸಲು ಈ ರೀತಿ ಮಾಡುತ್ತಿರಬಹುದು ಎಂದಿದ್ದಾರೆ.
ಶಿವಮೊಗ್ಗ: ತಾಲೂಕಿನ ಹೊಳಲೂರಿನ ನಾಡ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಉಪ ತಹಸೀಲ್ದಾರ್ ಪರಮೇಶ್ವರಪ್ಪ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ ನೇತೃತ್ವದಲ್ಲಿ ದಾಳಿ ಮಾಡಿದ್ದರು. ಉಪ ತಹಸೀಲ್ದಾರ್ ಪರಮೇಶ್ವರಪ್ಪ ಅವರು 40 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು 30 ಸಾವಿರ ರೂಪಾಯಿ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು: ಸರ್ಕಾರ ತಮಿಳುನಾಡಿಗೆ ನೀರು ಬಿಡುವ ವಿಚಾರ ‘ನೀರಿಗಾಗಿ ರೈತರು ಪ್ರತಿಭಟನೆ ಮಾಡಿ, ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರ್ತಿದ್ದಾರೆ ಅದು ಒಳ್ಳೆಯದು. ಆದರೆ, ಬಿಜೆಪಿ ಪ್ರತಿಭಟನೆ ಬಗ್ಗೆ ಏನು ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ. ಬಿಜೆಪಿ ಸಂಸದರು, ಹೈಕಮಾಂಡ್ ನಾಯಕರಿಗೆ ತಿಳುವಳಿಕೆ ಇಲ್ಲ ಅನ್ಸುತ್ತೆ. ನಾವು ತಮಿಳುನಾಡಿನ ರಾಜಕೀಯವಾಗಿ ಹೊಂದಾಣಿಕೆ ಇರಬಹುದು. ಆದರೆ, ಕಾವೇರಿ ನೀರಿಗಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಕೋಲಾರ: ಚಂದ್ರಯಾನ 3 ಯಶಸ್ವಿ ಕುರಿತು ನಟ ಪ್ರಕಾಶ್ ರಾಜ್ ವ್ಯಂಗ್ಯ ಹಿನ್ನಲೆ, ಮಾತನಾಡಿದ ಸಂಸದ ಮುನಿಸ್ವಾಮಿ ‘ಪ್ರಕಾಶ್ ರಾಜ್ಗೆ ಭಾರತ ಸೂಕ್ತವಾದ ಸ್ಥಳ ಅಲ್ಲ, ಅವರಿಗೆ ಪಾಕಿಸ್ತಾನ ಅಥವಾ ಆಫ್ಘಾನಿಸ್ತಾನ ಸೂಕ್ತವಾದ ಸ್ಥಳ. ಪ್ರಕಾಶ್ ರಾಜ್ ಭಾರತದಲ್ಲಿ ಇರಲು ಅರ್ಹರಲ್ಲ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಪೀಠ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ವಿವಾದಿತ ಸ್ಥಳದಲ್ಲಿರುವ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಪಟ್ಟು ಹಿಡಿದಿದೆ. ಅರ್ಚಕರ ನೇಮಕ, ದತ್ತಪೀಠ ವ್ಯವಸ್ಥಾಪನಾ ಸಮಿತಿ ರದ್ದು ಮಾಡದಂತೆ ಆಗ್ರಹಿಸಿ ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ಗೆ ಶ್ರೀರಾಮಸೇನೆ ಮನವಿ ಮಾಡಿದೆ. ಗೋರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ದತ್ತಮಾಲಾ ಅಭಿಯಾನಕ್ಕೆ ನಿರ್ಧಾರ ಮಾಡಿದ್ದು ಅಕ್ಟೋಬರ್ 30ರಿಂದ ನವೆಂಬರ್ 3ರವರೆಗೆ ಅಭಿಯಾನ ನಡೆಯಲಿದೆ.
ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ರಾಮನಗರದಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮಲ್ಲಿ ಸಾಕಷ್ಟು ನೀರು ಇದ್ದಿದ್ರೆ ತಮಿಳುನಾಡಿಗೆ ಬಿಡಬಹುದಿತ್ತು. ನೀರು ಬಿಡುವುದಿಲ್ಲ ಎಂಬುದು ಕೂಡ ಕಷ್ಟ. ಕಳೆದ ಬಾರಿ ಮಳೆಯಾಗಿದ್ದಾಗ ತಮಿಳುನಾಡಿಗೆ ನೀರು ಬಿಡಲಾಗಿತ್ತು. ಈಗ ಮಳೆ ಇಲ್ಲ, ನಮ್ಮಲ್ಲೇ ನೀರಿನ ಕೊರತೆಯಿದೆ. ಮಳೆ ಬರಲಿ ಎಂದು ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.
ಬಂಡಿಪುರಕ್ಕೆ ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲು ಅರಣ್ಯಾಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆನೆಗಳ ಸಂಖ್ಯೆಯಲ್ಲಿ ಬಂಡಿಪುರಕ್ಕೆ ಮೊದಲ ಸ್ಥಾನ ಬಂದ ಬೆನ್ನಲ್ಲೆ ಹೊಸ ಯೋಜನೆಗೆ ಇಲಾಖೆ ಮುಂದಾಗಿದೆ. ರಾಮಪುರ ಆನೆ ಬಿಡಾರದಲ್ಲಿ ಎಲೆಫ್ಯಾಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಗೆ ಚಿಂತನೆ ನಡೆದಿದೆ. ಈ ಕುರಿತು ಬಂಡಿಪುರ ಸಿಎಫ್ ರಮೇಶ್ ಕುಮಾರ್ ಪಿಸಿಸಿಎಫ್ ಗೆ ವರದಿ ಸಲ್ಲಿಸಿದ್ದಾರೆ.
ಪುತ್ರ ಕಾಂತೇಶ್ಗೆ ಈಶ್ವರಪ್ಪ ಹಾವೇರಿ ಕ್ಷೇತ್ರ ಟಿಕೆಟ್ ಕೇಳಿದ ವಿಚಾರಕ್ಕೆ ಸಂಬಂಧಿಸಿ ಹಾವೇರಿಯಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಇಲ್ಲಿಯೂ ಪುತ್ರನನ್ನು ಬಿಟ್ಟು ವಾತಾವರಣ ಕೆಡಿಸುತ್ತಿದ್ದಾರೆ. ಈ ಹಿಂದೆ K.S.ಈಶ್ವರಪ್ಪ ವಲಸಿಗ ಶಾಸಕರ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಕಾಲ್ ಮಾಡಿದಾಗ ನಾನು ಹೇಳಿಲ್ಲ, ಕ್ಷಮಿಸಿ ಎಂದು ಹೇಳ್ತಾರೆ. ಹಿರಿಯ ನಾಯಕರಾಗಿ ಮಕ್ಕಳಾಟದ ರೀತಿ ಮಾತನಾಡಿದರೆ ಹೇಗೆ? ಸರ್ವೆ ನೋಡಿ ಹಾವೇರಿ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಏನೂ ಇಲ್ಲದೆ ಸುಮ್ಮನೆ ಇಲ್ಲಿಗೆ ಬಂದು ವಾತಾವರಣ ಕೆಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಸರ್ವಪಕ್ಷ ಸಭೆಗೆ ಬಿಜೆಪಿಯ ಮೂವರು ಮಾಜಿ ಸಿಎಂಗಳಿಗೆ ಆಹ್ವಾನಿಸಲಾಗಿದೆ. ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿವಿ ಸದಾನಂದ ಗೌಡರಿಗೆ ಆಹ್ವಾನ ನೀಡಲಾಗದೆ. ಪತ್ರದ ಮೂಲಕ ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿಗೆ ಆಹ್ವಾನಿಸಿದ್ದು ದೂರವಾಣಿ ಕರೆ ಮೂಲಕ ಡಿ.ವಿ.ಸದಾನಂದಗೌಡಗೆ ಆಹ್ವಾನ ನೀಡಲಾಗಿದೆ.
ರಾಮನಗರ ತಾಲೂಕಿನ ಬಿಡದಿ ಬಳಿಯ ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಮೇಲಿಂದ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾನೆ. ಜಡೇನಹಳ್ಳಿ ನಿವಾಸಿ 35 ವರ್ಷದ ರಾಜು ಮೃತ ದುರ್ದೈವಿ. ಸ್ಥಳಕ್ಕೆ ಬಿಡದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರದ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ಕುಮಾರಸ್ವಾಮಿ ಏನೋ ಕನಸು ಇಟ್ಟುಕೊಂಡಿದ್ದರು. ಕಿಂಗ್ ಮೇಕರ್ ಆಗುತ್ತೇನೆ ಎಂದುಕೊಂಡಿದ್ದರು, ಆದ್ರೆ ಆಗಲಿಲ್ಲ ಎಂದರು.
ಹೃದಯಾಘಾತವಾಗಿ ಆಟೋ ಚಾಲಕ ಸ್ಥಳದಲ್ಲೆ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಿಮ್ಮೇಶ್ (53) ಮೃತ ದುರ್ದೈವಿ. ಸಂಪಂಗಿ ರಾಮನಗರದಲ್ಲಿ ಟೀ ಕುಡಿಯಲು ಆಟೋ ನಿಲ್ಲಿಸಿ ತೆರಳುತ್ತಿದ್ದ ತಿಮ್ಮೇಶ್ ಮೃತಪಟ್ಟಿದ್ದಾರೆ. ಆಟೋದಿಂದಲೇ ಇಳಿಯುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಎದೆಯನ್ನ ಸವರಿಸಿಕೊಳ್ಳುತ್ತ ಆಟೋದಿಂದ ತಿಮ್ಮೇಶ್ ಇಳಿದು ಹೋಗುವ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊನೆಗೂ ಬಿಬಿಎಂಪಿ ಗುತ್ತಿಗೆದಾರರ ಹೋರಾಟಕ್ಕೆ BBMP ಮಣಿದಿದ್ದು 25 ಲಕ್ಷದೊಳಗೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ 42 ಕೋಟಿ ಹಣ ಬಿಡುಗಡೆ ಮಾಡಿದೆ. ಸಣ್ಣ ಗುತ್ತಿಗೆದಾರರಿಗೆ ಬಿಲ್ ಕ್ಲಿಯರ್ಗೆ ಮೊದಲ ಹಂತದ ಹಣ ರಿಲೀಸ್ ಮಾಡಲಾಗಿದೆ. ತನಿಖಾ ವರದಿ ಬಂದ ಬಳಿಕ ಉಳಿದ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಲಾಗುತ್ತೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 16 ಕಡೆ ಅಪಘಾತ ಸಂಭವಿಸಿದೆ. 16 ಅಪಘಾತದಲ್ಲಿ ಐವರು ಮೃತಪಟ್ಟಿದ್ದು, 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಜಾಜಿನಗರ, ಬಸವನಗುಡಿ, ಹೆಣ್ಣೂರು, ವೈಟ್ಫೀಲ್ಡ್, ಹುಳಿಮಾವಿನಲ್ಲಿ ತಲಾ ಎರಡು ಕಡೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಹಾಗೂ ಹೆಬ್ಬಾಳ, ಸದಾಶಿವನಗರ, ಕೆ.ಆರ್.ಪುರಂನಲ್ಲಿ ತಲಾ 1 ಅಪಘಾತ ಕೇಸ್ ದಾಖಲಾಗಿದೆ. ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ. ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದು ರಾಜಾಜಿನಗರದಲ್ಲಿ ನಡೆದ ಅಪಘಾತದಲ್ಲಿ ರಾಹುಲ್(19)ಮೃತಪಟ್ಟಿದ್ದಾನೆ.
ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ 14 ಕಡೆ ಲೋಕಾಯುಕ್ತ ದಾಳಿ ನಡೆಸಿದೆ. ಸರ್ವೆ ಅಧಿಕಾರಿ ಮನೆಗಳು, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಕೆ.ಆರ್.ಪುರ ತಾಲೂಕು ಕಚೇರಿಯ ಸರ್ವೆ ಸೂಪರ್ವೈಸರ್ ಕೆ.ಟಿ ಶ್ರೀನಿವಾಸಮೂರ್ತಿ ಮನೆಗಳು, ಕಚೇರಿಗಳ ಮೇಲೆ ದಾಳಿ ಆಗಿದೆ.
ನಾಳೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸರ್ವಪಕ್ಷ ಸಭೆಗೆ ಮಾಜಿ ಸಿಎಂ H.D.ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ. ಸಿಎಂ ಸಿದ್ದರಾಮಯ್ಯನವರು H.D.ಕುಮಾರಸ್ವಾಮಿಗೆ ಆಹ್ವಾನ ನೀಡಿದ್ದಾರೆ.
ಕಾಂಗ್ರೆಸ್‌ಗೆ ಯಾರು ಬೇಕಾದರೂ ಬರಬಹುದು ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ H.C.ಮಹದೇವಪ್ಪ ಹೇಳಿದರು. ನಾವು ಮನೆ ಮನೆಗೆ ಹೋಗಿ ನೀವು ಬನ್ನಿ ಬನ್ನಿ ಅಂತಾ ಕರೆಯುತ್ತಿಲ್ಲ. ನಮ್ಮ ಪಕ್ಷದ ಬಾಗಿಲು ತೆರೆದಿದೆ. ಸರ್ಕಾರದ ಯೋಜನೆ ನೋಡಿ ಯಾರು ಬೇಕಾದರೂ ಬರಬಹುದು. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ನಡೆಸಿದ ನಗರ. ಮೈಸೂರಿನಲ್ಲಿ ಯಾವುದೇ ಮುಖಂಡರು ಪಕ್ಷಕ್ಕೆ ಬಂದರೇ ಸ್ವಾಗತ. ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಂಗಡಿ, ಗೂಡಂಗಡಿ, ಪುಟ್ಟ ಹೋಟೆಲ್ಗಳಲ್ಲಿಯೂ ಮದ್ಯ ಲಭ್ಯವಾಗುತ್ತಿದೆ. ಕಣ್ಮುಚ್ಚಿ ಕುಳಿತಿದ್ದಾರೆಂದು ಅಬಕಾರಿ ಪೊಲೀಸರ ವಿರುದ್ದ ಜನ ಆರೋಪ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ನೇಣು ಹಾಕಿಕೊಂಡು ಕಾಲೇಜು ಪ್ರಿನ್ಸಿಪಾಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಾಗರಾಜ ಮುದಗಲ್(56) ಆತ್ಮಹತ್ಯೆ ಮಾಡಿಕೊಂಡ ಪ್ರಿನ್ಸಿಪಾಲ್. ಇಂದು “ಜಾನಪದ ಜಾತ್ರೆ ಹೊನ್ನ ಸಂಭ್ರಮ ಎಂಬ ಕಾರ್ಯಕ್ರಮ ಇತ್ತು. ನಿನ್ನೆ ವಿವಿಧ ಕಡೆ ತೆರಳಿ ಆಮಂತ್ರಣ ಕೊಟ್ಟು ಬಂದಿದ್ದ ಪ್ರಿನ್ಸಿಪಾಲ್ ಇಂದು ಬೆಳಿಗ್ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಲಿದೆ. ರಾಜ್ಯವನ್ನು ಕಗ್ಗತ್ತಲಲ್ಲಿ ಮುಳುಗಿಸುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಮಂಡ್ಯದಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಮಧ್ಯಮ ವರ್ಗದವರ ಕರೆಂಟ್ ಬಿಲ್ ಡಬಲ್ ಬರುತ್ತಿದೆ. ಇದರಿಂದ ಸಣ್ಣ, ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಒಬ್ಬರಿಂದ ಕಿತ್ತುಕೊಂಡು ಮತ್ತೊಬ್ಬರಿಗೆ ಕೊಡುವ ಕೆಲಸ ಆಗ್ತಿದೆ. ಉಚಿತ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ವಸ್ತುಗಳ ಬೆಲೆ ಏರಿಕೆಯಾಗಿ ಸಂಕಷ್ಟ ಎದುರಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅನಧಿಕೃತವಾಗಿ ಒಮ್ನಿ ಕಾರುಗಳಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಬೆಂಗಳೂರಿನಲ್ಲಿ RTO ಅಧಿಕಾರಿಗಳಿಂದ 15ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ವೈಟ್ಬೋರ್ಡ್ ವಾಹನಗಳಲ್ಲಿ ಕರೆದೊಯ್ಯುವ ಕುರಿತು ದೂರು ಹಿನ್ನೆಲೆ ಶಾಲಾ ಬಸ್ಗಳನ್ನು ತಡೆದು RTO ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಅನಧಿಕೃತವಾಗಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಮುಜರಾಜಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಅರಿಶಿಣ, ಕುಂಕುಮ, ಬಳೆ ವಿತರಿಸುವಂತೆ ಸುತ್ತೊಲೆ ಹೊರಡಿಸಲಾಗಿದೆ. ವೆಚ್ಚವನ್ನು ಆಯಾ ದೇವಸ್ಥಾನದ ನಿಧಿಯಿಂದ ಭರಿಸಲು ಇಲಾಖೆ ಸೂಚಿಸಿದೆ.
2023-24ನೇ ಸಾಲಿನ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸರಬರಾಜಿನ ಸಹಾಯಧನ ಬಿಡುಗಡೆ ಮಾಡಲಾಗಿದೆ. ರಾಜ್ಯದ ಎಲ್ಲಾ ವಿದ್ಯುತ್ ಪೂರೈಕೆ ಸಂಸ್ಥೆ (ಎಸ್ಕಾಂ)ಗಳಿಗೆ ಸರ್ಕಾರ ಮುಂಗಡ ಸಹಾಯಧನ ಬಿಡುಗಡೆ ಮಾಡಿದೆ. ಜುಲೈ-2023ರ ಮಾಹೆಗೆ ಒಟ್ಟು 476 ಕೋಟಿ ರೂಪಾಯಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲೆ ಕುಂದಾಪುರದ ಕೋಟೇಶ್ವರ ಮುಖ್ಯ ರಸ್ತೆಯಲ್ಲಿ ಮಹಿಳೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಸರೋಜಾ ದಾಸ್ ಎಂಬ ಮಹಿಳೆ ಹಲ್ಲೆಗೆ ಯತ್ನಿಸಿದ್ದಾರೆ. ರಸ್ತೆ ಮೇಲೆ ವ್ಯಾಪಾರ ನಡೆಸುತ್ತಿದ್ದ ಹಿನ್ನೆಲೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ವಾಹನ ಸವಾರರ ದೂರಿನ ಮೇರೆಗೆ ಸ್ಥಳಕ್ಕೆ ಬಂದಿದ್ದ ಪೊಲೀಸರು ವಿಚಾರಣೆಗೆ ಮುಂದಾದಾಗ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಮಹಿಳೆ ಯತ್ನಿಸಿದ್ದಾಳೆ. ಕೋಲಿನ ತುದಿಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾಳೆ.
ಕೋಲಾರದಲ್ಲಿ ಸಿದ್ದರಾಮಯ್ಯ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ. ಇಂದಿರಾ ಕ್ಯಾಂಟೀನ್ ಸುತ್ತಲೂ ಕಸದ ರಾಶಿ ತುಂಬಿದೆ. ಕೋಲಾರದ ಹಳೇ ಬಸ್ ನಿಲ್ದಾಣದ ಹೂವಿನ ಮಾರುಕಟ್ಟೆ ಹಿಂಭಾಗದಲ್ಲಿ ಮಾಡಿರುವ ಕ್ಯಾಂಟೀನ್ ಅವ್ಯವಸ್ಥೆಯ ಆಗರವಾಗಿದೆ. ಇದು ಜನ ಊಟ ಮಾಡಲು ಸೂಕ್ತವಲ್ಲದ ಜಾಗವಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಹಾಸನ ಪ್ರವಾಸ ಕೈಗೊಳ್ಳಲಿದ್ದಾರೆ. ಎತ್ತಿನ ಹೊಳೆ ಕಾಮಗಾರಿಯ ವಿವಿಧ ಹಂತಗಳನ್ನು ವೀಕ್ಷಣೆ ಮಾಡಲಿದ್ದಾರೆ. 11 ಗಂಟೆಗೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಎಲೆಕ್ಟ್ರಿಕ್ ಸಬ್ ಸ್ಟೇಷನ್ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ.
ನಾಳೆ(ಆಗಸ್ಟ್ 23) ಚಂದ್ರಯಾನ 3ನ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿನ ಧ್ರುವದ ಭಾಗದಲ್ಲಿ ಇಳಿಯಲಿದೆ. ಸರಿಯಾಗಿ ನಾಳೆ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರ ಮೇಲೆ ಲ್ಯಾಂಡ್ ಆಗಲಿದೆ. ಲ್ಯಾಂಡಿಂಗ್ ಕ್ಷಣವನ್ನ ಇಡೀ ಜಗತ್ತಿಗೆ ತಿಳಿಸಲು ಇಸ್ರೋ ಲೈವ್ ವ್ಯವಸ್ಥೆ ಕೂಡ ಮಾಡಿದೆ.
ಕಲಬುರಗಿ ನಗರದಲ್ಲಿನ ಏಳು ಇಂದಿರಾ ಕ್ಯಾಂಟಿನ್ಗಳು ಬಂದ್ ಆಗಿವೆ. ಕಳೆದ ಎಂಟು ತಿಂಗಳಿಂದ ಸಂಪೂರ್ಣ ಬಂದಾಗಿವೆ. ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.
KRS ಡ್ಯಾಮ್ನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಇಂದು ಮಂಡ್ಯ ತಾಲೂಕಿನ ಇಂಡವಾಳು ಬಳಿ ರೈತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಬೆಳಗ್ಗೆ 11 ಗಂಟೆಗೆ ಜಾನುವಾರು, ಎತ್ತಿನಗಾಡಿ ಸಮೇತ ಧರಣಿ ನಡೆಸಲಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಹೆದ್ದಾರಿಯಲ್ಲೇ ಅಡುಗೆಮಾಡಿ ಆಕ್ರೋಶ ಹೊರ ಹಾಕಲಿದ್ದಾರೆ.
Published On - 8:02 am, Tue, 22 August 23