ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ಕಾವೇರಿ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ರಾಜ್ಯದ ಅನೇಕ ಕಡೆ ಈ ಸಂಬಂಧ ಪ್ರತಿಬಟನೆಗಳು ನಡೆಯುತ್ತಿವೆ. ಇನ್ನು ಮತ್ತೊಂದೆಡೆ ದ್ವಿತೀಯ PU ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಗುಡ್ನ್ಯೂಸ್ ಕೊಟ್ಟಿದೆ. ಇದೇ ತಿಂಗಳ 21ರಿಂದ ಸೆಪ್ಟೆಂಬರ್ 2ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಉಚಿತ ಸೇವೆ ಕೊಡ್ತಿದೆ. ಹಾಲ್ ಟಿಕೆಟ್ ತೋರಿಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆ ಇನ್ಮುಂದೆ ಮೊಟ್ಟೆ ಸಿಗಲಿದೆ. ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸುವ ಯೋಜನೆಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ನಿನ್ನೆ ಚಾಲನೆ ನೀಡಿದರು. ಮತ್ತೊಂದೆಡೆ ಇಂದು ಶ್ರಾವಣ ಮಾಸದ ಮೊದಲ ಶನಿವಾರ ಹಿನ್ನೆಲೆ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಪೂಜೆಗಳನ್ನು ಮಾಡಲಾಗುತ್ತಿದೆ. ದೇವಾಲಯ ಭಕ್ತ ಗಣದಿಂದ ತುಂಬಿ ತುಳುಕುತ್ತಿದೆ. ಇದೆಲ್ಲದರ ನಡುವೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಬೆಂಗಳೂರು: ಇಂದಿರಾ ಕ್ಯಾಂಟೀನ್ ಊಟದ ಬೆಲೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಕಾನೂನು ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ. ಯಥಾ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತೆ ದರ ಇರಲಿದೆ ಎಂದರು. ಇನ್ನು ಇಂದಿರಾ ಕ್ಯಾಂಟೀನ್‌ನಲ್ಲಿ 1 ಊಟದ ಬೆಲೆ 62 ರೂ. ಎಂದು ಹೆಚ್‌ಕೆಪಿ ಹೇಳಿತ್ತು.
ಮೈಸೂರು: ಮೈಸೂರಿನಲ್ಲಿ ಆ.30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಹಿನ್ನೆಲೆ ನಾಳೆ ಮಧ್ಯಾಹ್ನ 12 ಗಂಟೆಗೆ ಮೈಸೂರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ, ಪೂರ್ವಭಾವಿ ಸಭೆ ನಡೆಸಲಿದ್ದಾರೆ. ನಾಳೆ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸೋಮವಾರ(ಆ.21) ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಲಿದ್ದಾರೆ.
ಬೆಂಗಳೂರು: ಹವಾ ಮಾಡುವ ಉದ್ದೇಶದಿಂದ ಅಮಾಯಕ ಹುಡುಗನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಭಿಷೇಕ್ ಹಾಗೂ ದರ್ಶನ್ ಬಂಧಿತ ಆರೋಪಿಗಳು. ಇವರು ಹವಾ ಮಾಡಲು ಯುವಕನೊಬ್ಬನನ್ನ ರೂಂ ಒಳಗೆ ಕರೆದುಕೊಂಡು ಉಲ್ಟಾ ಮಚ್ಚಿನಿಂದ ಹಲ್ಲೆ ಮಾಡಿದ್ದರು. ಜೊತೆಗೆ ಅದನ್ನು ವಿಡಿಯೋ ಮಾಡಿಕೊಂಡು ಇನ್ಸ್ಟಾಗ್ರಾಮ್ ಫೋಸ್ಟ್ ಮಾಡಿದ್ದರು.
ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ನೀಡುತ್ತಿದ್ದ ಊಟದ ದರ ಹೆಚ್ಚಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಆದರೆ, BBMP ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ಗಳಲ್ಲಿ ಹಳೇ ದರ ಮುಂದುವರಿಕೆಯಾಗಲಿದೆ. ಇನ್ನು ಮುಂದೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಂದು ಊಟದ ಬೆಲೆ 27 ರೂ. ನಿಗದಿ ಮಾಡಲಾಗಿದೆ.
ಬೆಂಗಳೂರು: ಖಾಸಗಿ ಸಾರಿಗೆ ಕ್ಷೇತ್ರದಲ್ಲಿನ ಸಮಸ್ಯೆಗಳ ಹಿನ್ನಲೆ ಆಗಸ್ಟ್ 21ರಂದು ಸಿಎಂ ಸಿದ್ದರಾಮಯ್ಯ ವಿವಿಧ ಸಂಘಟನೆಗಳ ಜೊತೆ ಸಭೆ ನಡೆಸಲಿದ್ದಾರೆ. ಹೌದು, ಸೋಮವಾರ ಸಂಜೆ 6.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಿದ್ದು, ಸಿಎಂ ನೇತೃತ್ವದ ಸಭೆಗೆ 25 ಸಂಘಟನೆಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಭದ್ರತಾ ಸಿಬ್ಬಂದಿಗೆ ಗುರುತಿನ ಚೀಟಿ ನೀಡಿ ಸಭೆಗೆ ಹಾಜರಾಗಲು ಸೂಚಿಸಿದ್ದಾರೆ.
ಮಂಗಳೂರು: ಕುಖ್ಯಾತ ಡ್ರಗ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಹಸನ್ ಸಾದಿಕ್ ಅಲಿಯಾಸ್ ಬ್ಲೇಡ್ ಸಾದಿಕ್ ಬಂಧಿತ ಆರೋಪಿ. ಇತನಿಂದ 2.50 ಲಕ್ಷ ರೂ ಮೌಲ್ಯದ 50 ಗ್ರಾಂ MDMA ಜೊತೆಗೆ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಒಟ್ಟು 3 ಲಕ್ಷ 65 ಸಾವಿರ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಡ್ಯ: ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸೇರ್ಪಡೆ ಮಾಡಿಕೊಳ್ತೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ‘ ನಾವು ಯಾರಿಗೂ ಗಾಳ ಹಾಕಿಲ್ಲ. ಸ್ವಯಂ ಆಗಿ ಬಂದರೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ರಾಜಕಾರಣದಲ್ಲಿ ಏನು ಬೇಕಾದ್ರೂ ಆಗಬಹುದು ಎಂದರು.
ಮಂಡ್ಯ: ಕಾಂಗ್ರೆಸ್ ಸರ್ಕಾರದ ಬಂದ ಮೇಲೆ ಮಳೆ ಬರುತ್ತಿಲ್ಲವೆಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದರು. ಅವರ ಮಾತಿಗೆ ಇದೀಗ ಚಲುವರಾಯಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ‘ಪಾಪ ಕುಮಾರಸ್ವಾಮಿ ಸತ್ಯಹರಿಶ್ಚಂದ್ರರು, ಅವರೂ ರಾಜ್ಯದಲ್ಲಿದ್ದಾರೆ. ನಮ್ಮನ್ನ ನೋಡಿ ಮಳೆ ಬರುತ್ತಿಲ್ಲ, ಅವರನ್ನ ನೋಡಿಯಾದರೂ ಬರಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮನೆಗೆ ಮುತ್ತಿಗೆ ಹಾಕಲಾಗಿತ್ತು. ಇದೀಗ ಹುಬ್ಬಳ್ಳಿಯಲ್ಲಿ ರೈತರ ಭೇಟಿಯಾಗಿರುವ ಜೋಶಿಯವರು ‘ನರೇಂದ್ರ ಮೋದಿಯವರ ಸರ್ಕಾರ ಡಿಪಿಎಆರ್ಗೆ ಅನುಮತಿ ನೀಡಿದೆ. ನೋಟಿಫಿಕೇಶನ್ ನಾವೇ ಮಾಡಿಸಿ ಪರಿಸರ ವಿನಾಯ್ತಿ ಕೊಡಿಸಿದ್ದೆವು. ಗೆಜೆಟ್ ನೋಟಿಫಿಕೇಶನ್ ಜೊತೆ DPAR ಅನುಮೋದನೆ ಮಾಡಿದ್ದೇವೆ. ಟೈಗರ್ ಕಾರಿಡಾರ್ ಹಾಗೂ ಇಕೋ ಸೆನ್ಸಿಟಿವ್ ಝೋನ್ ಕಾರಣಕ್ಕೆ ವಿಳಂಬವಾಗಿದೆ ಎಂದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ. ಇನ್ನು ಈ ಸಂಪುಟ ಸಭೆ ವಿಧಾನಸೌಧದಲ್ಲಿ ನಡೆಯುತ್ತಿದೆ.
ಬೆಂಗಳೂರು: ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ‘ ಹಿರಿಯ ಸಚಿವರು, ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ಗೆ ಆಗುತ್ತಿಲ್ಲ. ಅತಿರೇಕಕ್ಕೆ ಕೈ ಹಾಕಿದ್ರೆ ಮುಂದೆ ಏನು ಮಾಡಬೇಕೆಂದು ನಮಗೆ ಗೊತ್ತು. ಶಾಸಕ ಎಸ್.ಟಿ ಸೋಮಶೇಖರ್ಗೆ ಪಕ್ಷ ಬಿಡುವ ಯೋಚನೆ ಇಲ್ಲ ಎಂದರು.
ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಅಮಾಯಕ ಯುವಕ ಸಾವನ್ನಪ್ಪಿದ ಆರೋಪ ಕೇಳಿಬಂದಿದೆ. ಅಮರ್ ಶೆಟ್ಟಿ (31) ಮೃತ ಯುವಕ. ಇತ ಆಗಸ್ಟ್ 13 ರಂದು ಜ್ವರವೆಂದು ಮಾಗಡಿಯ ಭಾಗ್ಯಶ್ರೀ ಆಸ್ಪತ್ರೆಗೆ ಹೋಗಿದ್ದ. ಈ ವೇಳೆ ವೈದ್ಯರು ಇಂಜೆಕ್ಷನ್ ನೀಡಿದ್ದರು. ಇದೀಗ ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಆಗಿ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರ ಆರೋಪಿಸಿ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಬೆಂಗಳೂರು: ಯಮಹ ಆರ್ಎಕ್ಸ್ ಬೈಕ್ ಕಳ್ಳತನ ಮಾಡಿ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಅರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಿತಿಕ್ ಮತ್ತು ಪವನ್ ಬಂಧಿತ ಅರೋಪಿಗಳು. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆರ್ಎಕ್ಸ್ ಬೈಕ್ಗಳನ್ನು ಹುಡುಕುತಿದ್ದರು. ನಂತರ ಹ್ಯಾಂಡ್ ಲಾಲ್ ಮುರಿದು ಬೈಕ್ ಕಳ್ಳತನ ಮಾಡುತ್ತಿದ್ದರು. ಬಳಿಕ ಇದೇ ಬೈಕ್ಗಳಿಂದ ವೀಲಿಂಗ್ ಮಾಡಿ, ವಿಡಿಯೋವನ್ನು ತೆಗೆದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.
ಬೆಳಗಾವಿ: ಶಾಲಾ ಕಟ್ಟಡ ಕಾಮಗಾರಿ ಮುಗಿಸಿದರೂ ಬಾಕಿ ಬಿಲ್ ಬಾರದ ಹಿನ್ನಲೆ ಅದೇ ಶಾಲಾ ಕಟ್ಟಡದಿಂದ ಹಾರಿ ಗುತ್ತಿಗೆದಾರ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೆಣಚಿನಮರಡಿಯಲ್ಲಿ ನಡೆದಿದೆ. ಗುತ್ತಿಗೆದಾರ ರಾಮಣ್ಣ ಅಡಿವೆಪ್ಪ ಸರಕಪ್ಪಗೋಳ ಆತ್ಮಹತ್ಯೆಗೆ ಯತ್ನಿಸಿದವರು. 2018ರಲ್ಲಿ ಪ್ರೌಢ ಶಾಲಾ ಕಟ್ಟಡ ಕಾಮಗಾರಿ ಕೈಗೊಂಡಿದ್ದ ರಾಮಣ್ಣ ಅವರು ಎನ್ಸಿಸಿ ಕಂಪನಿಯಿಂದ ಬಿಲ್ ಬಾಕಿ ಉಳಿಸಿಕೊಂಡಿರುವುದಾಗಿ ಆರೋಪಿಸಿ ಈ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆ.26ರಂದು ನಡೆಯಬೇಕಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಮುಂದೂಡಿಕೆ ಮಾಡಲಾಗಿದ್ದು, ಮುಂದಿನ ತಿಂಗಳು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಕೆಲ ಬಿಜೆಪಿ ಶಾಸಕರು, ಮಾಜಿ ಶಾಸಕರಿಗೆ ತೆಲಂಗಾಣ ಚುನಾವಣಾ ಹೊಣೆಯಿದ್ದು, ವರಿಷ್ಠರ ಸಮಯ ಸಿಗಬೇಕಿರುವ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆ ಮಾಡಲಾಗಿದೆ.
ಬೆಂಗಳೂರು: ಹೊಸ ರಾಜ್ಯಾಧ್ಯಕ್ಷರ ನೇಮಕ ಆಗುವ ತನಕ ನೀವೇ ನಾಯಕತ್ವ ವಹಿಸಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಬಿಜೆಪಿ ಶಾಸಕರು ಒತ್ತಾಯ ಮಾಡಿದ್ದಾರೆ. ನಿನ್ನೆ(ಆ.19) ರಾತ್ರಿ ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದಾರೆ. ‘ನಿಮಗೆ ಮಾತ್ರ ಕಾಂಗ್ರೆಸ್ ಪಕ್ಷ ಹೆದರುತ್ತದೆ. ಪಕ್ಷದ ನಾಯಕತ್ವದ ಕೊರತೆಯ ಲಾಭ ಪಡೆಯಲು ಕಾಂಗ್ರೆಸ್ ನೋಡುತ್ತಿದೆ. ಇದಕ್ಕೆ ನಾವು ಬ್ರೇಕ್ ಹಾಕಲೇಬೇಕಾಗಿದೆ ಎಂದಿದ್ದಾರೆ.
ರಾಯಚೂರು: ವಿದ್ಯುತ್ ಸ್ಪರ್ಶದಿಂದ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ನಿಂಗಪ್ಪ(45)ಮೃತ ಕಾರ್ಮಿಕ. ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿರುವ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದ ಯುನಿಟ್ 4 ನ ಇಎಸ್ಪಿಸಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಿಂಗಪ್ಪ ಅವರು ಇಂದು(ಆ.19) ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿದೆ. ಈ ವೇಳೆ ಕಾರ್ಮಿಕ ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಕರ್ನಾಟಕದ ಜನರನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ ಎಂದು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಬೆಂಗಳೂರಿನ ನಗರದಲ್ಲೇ ಬೇಕಾದಷ್ಟು ನೀರನ್ನು ಬಿಡುತ್ತಿಲ್ಲ. ಒಂದೆಡೆ ನೀರು, ವಿದ್ಯುತ್ ಇಲ್ಲ, ಮತ್ತೊಂದೆಡೆ ಮಳೆಯೂ ಬಂದಿಲ್ಲ. ಮಂಡ್ಯ, ಮೈಸೂರು, ಬೆಂಗಳೂರು ಕಡೆ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ ಜನರ ದೃಷ್ಟಿಯಲ್ಲಿ ಯೋಚನೆ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರ ಹಾಕಿದರು.
8 ವರ್ಷಗಳ ಹಿಂದೆ ಹೊಟ್ಟೆ ಸೇರಿದ್ದ ನೈಲ್ ಕಟ್ಟರ್ ಅನ್ನು ಬೆಂಗಳೂರಿನ ಮಣಿಪಾಲ್ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಪಾನಮತ್ತ ವ್ಯಕ್ತಿ ನುಂಗಿದ್ದ ನೈಲ್ ಕಟ್ಟರ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. 40 ವರ್ಷದ ಸರ್ಜಾಪುರ ನಿವಾಸಿ ಮದ್ಯದ ಅಮಲಿನಲ್ಲಿ ನೈಲ್ ಕಟ್ಟರ್ ನುಂಗಿದ್ರು. ಸದ್ಯ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು 9 ಹಾಗೂ 10 ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಹಂಚಿದರು. ಬಾಳೆಹಣ್ಣು, ಚಿಕ್ಕಿ ವಿತರಣೆ ಮಾಡಿದರು. ಈ ವೇಳೆ ಡಿಸಿಎಂಗೆ ಸಚಿವ ರಾಮಲಿಂಗಾರೆಡ್ಡಿ ಸಾಥ್ ಕೊಟ್ರು.
ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದ ಸ್ಥಳ, ದಿನಾಂಕ ಬದಲಾವಣೆಯಾಗಿದೆ. ಆ.27ರ ಬದಲು ಆ.30ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಹಿಂದೆ ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು. ಆಗಸ್ಟ್ 30ಕ್ಕೆ ಬೆಂಗಳೂರಿಗೆ ರಾಹುಲ್ ಗಾಂಧಿ ಬರುತ್ತಿದ್ದಾರೆ.
ಹೀಗಾಗಿ ಮೈಸೂರಿನಲ್ಲಿ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಿದ್ದೇವೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಈಜಿಪುರ ಮೇಲ್ಸೇತುವೆ ಸ್ಥಿತಿ ಗತಿ ವೀಕ್ಷಣೆ ಮಾಡಲಿದ್ದಾರೆ. ಇಟ್ಟಮಡುನಲ್ಲಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಪ್ರತಿಮೆ ವಿನ್ಯಾಸ ವೀಕ್ಷಿಸಲಿದ್ದು ಬನಶಂಕರಿ ಬಸ್ ನಿಲ್ದಾಣ, ಗಾಂಧಿ ಬಜಾರ್ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.
‘ತಮ್ಮ ಲೋಪ ಮುಚ್ಚಿಕೊಳ್ಳಲು ಬಿಜೆಪಿ ಶಾಸಕರನ್ನು ಸೇರಿಸಿಕೊಳ್ತಿದ್ದಾರೆ’ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಯಾರು ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಬೇಕು. ದೇಶ ಉಳಿಸಬೇಕು ಅಂತಾ ತೀರ್ಮಾನ ಮಾಡಿದ್ದಾರೆ, ಒಳ್ಳೆಯದು. ಬೇರೆ ರಾಜ್ಯಗಳಲ್ಲಿ ಬಿಜೆಪಿ ರಾಜಕಾರಣ ಮಾಡಿದಾಗ ಏನಾಗಿತ್ತು? ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕದಲ್ಲಿ BJP ಮಾಡಿದ್ದು ಸರಿನಾ? ಅವರ ಅನುಕೂಲಕ್ಕೆ ತಕ್ಕಂತೆ ಅವರು ತೀರ್ಮಾನ ತೆಗೆದುಕೊಳ್ತಾರೆ. ನಾವು ನೀವು ನಿರ್ಬಂಧ ಮಾಡಲು ಆಗುತ್ತಾ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ನಾಡು, ನುಡಿ, ಜಲ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಜ್ಯದ ರೈತರು, ಜನರಿಗೆ ಸಮಸ್ಯೆಯಾದರೆ ಎಲ್ಲರೂ ಒಂದಾಗಬೇಕು. ಪಕ್ಷದ ಭೇದಮರೆತು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು. ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ 4 ವರ್ಷ ಉತ್ತಮ ಮಳೆಯಾಗಿತ್ತು. ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ಮನವರಿಕೆ ಮಾಡಬೇಕು. ಕಾವೇರಿ ನದಿ ನೀರಿನ ಸಮಸ್ಯೆ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಎಂದರು.
ಗೋಕಾಕ್, ಚಿಕ್ಕೋಡಿ ಜಿಲ್ಲೆ ಕೂಗಿನ ನಡುವೆ ಮತ್ತೊಂದು ತಾಲೂಕಿನಲ್ಲಿ ಜಿಲ್ಲಾ ಕೂಗು ಶುರುವಾಗಿದೆ. ಬೆಳಗಾವಿ, ಗೋಕಾಕ್, ಚಿಕ್ಕೋಡಿ ಜಿಲ್ಲೆ ಮಾಡಲು ಹೊರಟ ಸತೀಶ್ ಜಾರಕಿಹೊಳಿ ವಿರುದ್ಧ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಆಕ್ರೋಶ ಹೊರ ಹಾಕಿದ್ದು ಬೆಳಗಾವಿ-ಬೈಲಹೊಂಗಲ ಮುಖ್ಯ ರಸ್ತೆ ತಡೆದು ಜಿಲ್ಲಾ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿದೆ. ಈ ವೇಳೆ ಬೈಲಹೊಂಗಲ ಜಿಲ್ಲೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದೆ.
ಶಾಲಾ ಮಕ್ಕಳ ಬಿಸಿಯೂಟ ರೇಷನ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಹಾವೇರಿ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಂಡಿದೆ. ಕಳೆದ 20 ದಿನಗಳಿಂದ ಬಿಸಿಯೂಟ ರೇಷನ್ ಪೂರೈಸದ ಹಿನ್ನೆಲೆ ಮನೆಯಿಂದ ಊಟ ತರುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಸೂಚನೆ ನೀಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಬರುವ ರೇಷನ್ ಇದುವರೆಗೂ ಪೂರೈಕೆ ಆಗಿಲ್ಲ. ಅಕ್ಕಿ, ಬೇಳೆ ಸಪ್ಲೈ ಆಗದ ಹಿನ್ನೆಲೆ ಮುಖ್ಯೋಪಾಧ್ಯಾಯರು ಪರದಾಡುವಂತಾಗಿದೆ. ಕೆಲವೆಡೆ ಶಿಕ್ಷಕರು ಅಂಗಡಿಯಿಂದ ರೇಷನ್ ಖರೀದಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೆಪಿಎಸ್ಸಿ ಸದಸ್ಯರ ಹುದ್ದೆಗೆ ಮೂವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಬೀದರ್ನ ಬಸವರಾಜ್ ಮಲ್ಗೆ, ಬೆಂಗಳೂರಿನ ಡಾ.ಆರ್.ಕಾವಾಲಮ್ಮ, ಕುವೆಂಪು ವಿವಿ ಮಾಜಿ ರಿಜಿಸ್ಟ್ರಾರ್ ಡಾ.H.S.ಭೋಜ್ಯನಾಯ್ಕ್ ಹೆಸರು ಶಿಫಾರಸು ಮಾಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಶಾಸಕರು ಅಸಮಾಧಾನಗೊಂಡ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಜೊತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಮಾಲೋಚನೆ ನಡೆಸಿದ್ದಾರೆ. ಶಾಸಕರ ಅಸಮಾಧಾನ ಕುರಿತು ವರಿಷ್ಠರ ಗಮನಕ್ಕೆ ತರಲು ಚಿಂತನೆ ನಡೆದಿದೆ. ಅಸಮಾಧಾನಿತ ಶಾಸಕರಾದ S.T.ಸೋಮಶೇಖರ್, ಶಿವರಾಂ ಹೆಬ್ಬಾರ್, ಇಬ್ಬರನ್ನೂ ಸಮಾಧಾನಿಸುವ ಜವಾಬ್ದಾರಿ ಬಸವರಾಜ ಬೊಮ್ಮಾಯಿ ಹೆಗಲಿಗಿದ್ದು ಉಭಯ ಶಾಸಕರು ಇನ್ನೆರಡು ದಿನಗಳಲ್ಲಿ ಬೊಮ್ಮಾಯಿ ಭೇಟಿ ಮಾಡಲಿದ್ದಾರೆ.
ವಲಸಿಗರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರಕ್ಕೆ ಸಂಬಂಧಿಸಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿ, ಷರತ್ತು ಹಾಕದೆ ಬಂದರೆ ಸ್ವಾಗತ ಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ನಾವು ಆಪರೇಷನ್ ಹಸ್ತ ಮಾಡುವುದಕ್ಕೆ ಹೊರಟಿಲ್ಲ. ಬಿಜೆಪಿ, ಜೆಡಿಎಸ್ ಪಕ್ಷ ಒಡೆಯಲು ಹೋಗುತ್ತಿಲ್ಲಾ. ಯಾರ ಅಸ್ತಿತ್ವ ಏನು ಅಂತಾ ಜನರೇ ತೋರಿಸಿಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ತನ್ನ ಅಸ್ತಿತ್ವ ಕಾಪಾಡಿಕೊಂಡು ಹೋಗಲಿ ಎಂದರು.
ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ನಂದಿದೆ. ಬಹಿರ್ದೆಸೆಗೆ ತೆರಳಿದ್ದಾಗ ಯುವಕ ನಾಗೇಶ್ನನ್ನು ಆನೆ ಸೊಂಡಲಿನಿಂದ ಎತ್ತಿ ಎಸೆದಿದೆ. ರಾತ್ರಿಯಿಡೀ ಕಾಡಿನಲ್ಲೇ ನರಳಾಡಿದ್ದು ಬೆಳಗ್ಗೆ ಸ್ಥಳೀಯರು ಯುವಕನನ್ನು ಗಮನಿಸಿ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ತಪಾಸಣೆ ವೇಳೆ ಬಲಗಾಲು ಸ್ವಾಧೀನ ತಪ್ಪಿರುವುದು ಪತ್ತೆಯಾಗಿದೆ.
ಈ ಬಾರಿ ಮುಂಗಾರು ಮಳೆ ಕೊರತೆ ಆಗಿದೆ. ರೈತರು ಕಂಗಾಲಾಗಿ ಜೀವನ ಸಾಗಿಸುತ್ತಿದ್ದಾರೆ. ಶೇ 36% ರಷ್ಟು ಮಳೆ ಕೊರತೆ ಆಗಿದೆ. ಮಳೆಗಾಲದಲ್ಲಿ ಸರಾಸರಿ ಶೇ40% ರಷ್ಟು ಮಳೆ ಕೊರತೆ ಆಗಿದೆ. ಅನೇಕ ಸಮಸ್ಯೆಯನ್ನು ರೈತರು ಅನುಭವಿಸುತ್ತಿದ್ದಾರೆ. ಬರಗಾಲದ ಛಾಯೆ ಆವರಿಸಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ಕಳವಳ ವ್ಯಕ್ತಪಡಿಸಿದರು.
ಹಾಸನ ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಮಧ್ಯ ರಾತ್ರಿ ಹಾಸನ ಜೈಲಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು 60 ಜನ ಪೊಲೀಸ್ ಸಿಬ್ಬಂದಿ ತಂಡದಿಂದ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಿಢೀರ್ ದಾಳಿ ನಡೆದಿದೆ. ದಾಳಿ ವೇಳೆ ಬರೋಬ್ಬರಿ 17 ಮೊಬೈಲ್ ಜಪ್ತಿ ಮಾಡಲಾಗಿದೆ. ಗಾಂಜ, ಬೀಡಿ, ಸಿಗರೇಟ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ಗ್ರಾಮದ ಹೊರವಲಯದ ತೋಟದಲ್ಲಿ ಮಹಾದೇವ ಮೋಹಿತೆ ಎಂಬುವವರಿಗೆ ಸೇರಿದ ಐದು ಮೇಕೆಗಳು ನಾಯಿಗಳ ದಾಳಿಗೆ ಮೃತಪಟ್ಟಿವೆ. ತೋಟದ ವಸತಿಯ ಜನ ಬಿಡಾಡಿ ನಾಯಿಗಳ ಹಾವಳಿಗೆ ಬೇಸತ್ತಿದ್ದಾರೆ. ಈ ಹಿಂದೆಯೂ ಸಹ ನಾಯಿಗಳು ದನ ಕರುಗಳ ಮೇಲೆ ದಾಳಿ ಮಾಡಿದ್ದವು. ಕುಟುಂಬ ಸಮೇತ ಊರಲ್ಲಿದ್ದ ಮನೆಗೆ ತೆರಳಿದಾಗ ಬೀದಿ ನಾಯಿಗಳು ದಾಳಿ ಮಾಡಿವೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೇರಟ್ಟಿ ಗ್ರಾಮದ ಕಾಡಂಚಿನ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಕೊನೆಗೂ ಸೆರೆಯಾಗಿದೆ. ಕೂಂಬಿಂಗ್ ಕಿಂಗ್ ಬಲರಾಮ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಗೇರಟ್ಟಿ ಸಮೀಪದ ಕತ್ರಿ ಉಪ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಹಿಡಿದಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಜನರಿಗೆ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಸಾಕಾನೆಗಳ ಜೊತೆಗೆ 100ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 107 ಅಡಿಗೆ ಕುಸಿದಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುತ್ತಿದೆ. ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಸದ್ಯ ಈಗ 107 ಅಡಿಗೆ ಕುಸಿದಿದೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್ನಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ಗೆ ಹಲಸೂರು ಗೇಟ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹಲವೆಡೆ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ರಂಗಯ್ಯದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತ 15 ಕಡೆ ಸ್ಫೋಟಕ ಬಳಕೆಯಾಗಿದೆ. ಜಗಳೂರು ತಾಲೂಕಿನ ರಂಗಯ್ಯದುರ್ಗ ಅರಣ್ಯ ಪ್ರದೇಶದಲ್ಲಿ ಸ್ಫೋಟಕ ಇಟ್ಟಿರುವುದನ್ನು ಅರಣ್ಯ ಇಲಾಖೆ ಪರಿಣಿತರ ತಂಡ ಪತ್ತೆ ಹಚ್ಚಿದೆ. ಸ್ಫೋಟಕವಿಟ್ಟು ಕಾಡುಪ್ರಾಣಿಗಳನ್ನ ಬೇಟೆಯಾಡುತ್ತಿದ್ದ ವಂಚಕರನ್ನು ವಶಕ್ಕೆ ಪಡೆಯಲಾಗಿದೆ.
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಇಂಜಿನ್ ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದು ಪ್ರಯಾಣಿಕರು ಆತಂಕಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದ ಪತ್ನಿಯ ಕೊಲೆ ನಡೆದಿದೆ. ಪತ್ನಿ ಸುಲೋಚನಾ(45) ಕೊಲೆ ಮಾಡಿದ ಪತಿ ನಾಗರಾಜಪ್ಪ(48). ನಿತ್ಯ ಕುಡಿದು ಬಂದು ಪತ್ನಿ ಜತೆ ಗಲಾಟೆ ಮಾಡುತ್ತಿದ್ದ ನಾಗರಾಜಪ್ಪ ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆಗೈದು ಕೊಲೆ ಮಾಡಿದ್ದಾನೆ. ಪತ್ನಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಸಂತೇಬೆನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ವಿಧಾನಸೌಧದ ಕ್ಯಾಬಿನೆಟ್ ಹಾಲ್ ನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
ಇಂದಿನಿಂದ ಶ್ರಾವಣ ಮಾಸ ಆರಂಭ ಹಿನ್ನೆಲೆ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಶ್ರಾವಣದ ಮೊದಲ ಶನಿವಾರದ ಪ್ರಯುಕ್ತ ಬೆಂಗಳೂರಿನ ಹಲವು ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿದೆ. ಬೆಂಗಳೂರಿನ ಶ್ರೀನಿವಾಸ, ವೆಂಕಟೇಶ್ವರ ದೇವಸ್ಥಾನಗಳಲ್ಲಿ ಹಾಗೂ ಮೈಸೂರಿನಲ್ಲೂ ಶ್ರೀನಿವಾಸ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು ಇಂದು ಮಂಡ್ಯದ ಬಿಜೆಪಿ ಕಚೇರಿಯಲ್ಲಿ ನಾಯಕರ ಸಭೆ ಕರೆಯಲಾಗಿದೆ.
Published On - 7:57 am, Sat, 19 August 23