ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಮತ್ತೊಂದು ಕಾರ್ಡ್ ಪರಿಚಯಿಸುತ್ತಿದೆ. ಇಂದಿನಿಂದ ನಮ್ಮ ಮೆಟ್ರೋದಲ್ಲಿ ಒನ್ ನೇಷನ್ ಒನ್ ಕಾರ್ಡ್ ಬರಲಿದೆ. ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ಗಳ ಮಾರಾಟ ಮಾಡಲಾಗ್ತಿದೆ. ಈ ಕಾರ್ಡನ್ನ ಮೆಟ್ರೋ ಜತೆ ಶಾಪಿಂಗ್‌ಗೂ ಬಳಸಬಹುದು. ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಹಮ್ಮಿಕೊಳ್ಳಲಾಗಿದ್ದು ಸಭೆಯಲ್ಲಿ ರಾಜ್ಯ ನಾಯಕರು ಮಾತ್ರ ಭಾಗಿಯಾಗಲಿದ್ದಾರೆ. 5 ರಾಜ್ಯಗಳ ಚುನಾವಣೆಯಲ್ಲಿ ಹೈಕಮಾಂಡ್ ಬ್ಯುಸಿಯಾಗಿದ್ದು ಸರ್ಕಾರ ವಿರುದ್ಧ ಹೋರಾಟ, ಲೋಕಸಭೆ ಚುನಾವಣಾ ತಯಾರಿ, ಬಿಬಿಎಂಪಿ ಚುನಾವಣೆ, ಆಪರೇಷನ್ ಹಸ್ತ ವಿಫಲಗೊಳಿಸುವುದು, ಕಾವೇರಿ ವಿಚಾರದಲ್ಲಿ ಹೋರಾಟ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತೆ. ಇದರ ಜೊತೆಗೆ ಮತ್ತೊಂದೆಡೆ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಗೋಕರ್ಣ ಶ್ರೀ ಮಹಾಬಲೇಶ್ವರ ದೇಗುಲದ ಉಪಾಧಿವಂತರ ಬದಲಾವಣೆಗೆ ಹೈಕೋರ್ಟ್ ತಡೆ ನೀಡಿದೆ. ಇಬ್ಬರು ಉಪಾಧಿವಂತರು, ಇಬ್ಬರು ವಿದ್ವಾಂಸರನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇವರು ಆಡಳಿತ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್ ಆದೇಶಾನುಸಾರ ನೇಮಕವಾಗಿದ್ದರು. ಆದರೆ ಸರ್ಕಾರದ ಕ್ರಮ ಪ್ರಶ್ನಿಸಿ ರಾಮಚಂದ್ರಾಪುರ ಮಠ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಮೈಸೂರು: ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿರುವ ಹಿನ್ನೆಲೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು. ಸಭೆಯಲ್ಲಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ, ಕೆ.ವೆಂಕಟೇಶ್ ಎನ್.ಎಸ್ ಬೋಸರಾಜು, ಶಾಸಕರಾದ ತನ್ವಿರ್ ಸೇಠ್,ಪುಟ್ಟರಂಗ ಶೆಟ್ಟಿ, ಕೆ.ಹರೀಶ್ ಗೌಡ,ವದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು, ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಂಡಿಸಿದ್ದೇಗೌಡ ಮಂಥರ್ ಗೌಡ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನರೇಂದ್ರ ಸೇರಿ ಹಲವು ಕಾಂಗ್ರೆಸ್ ಮುಖಂಡರು ಇದ್ದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಅನ್ಯ ಪಕ್ಷದ ಕಾರ್ಯಕರ್ತರು, ಮುಖಂಡರು ಇಂದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ನಂಬಿ ಪಕ್ಷ ಸೇರ್ಪಡೆಯಾದರು. ಅವರನ್ನು ಸ್ವಾಗತಿಸಿ, ಶುಭ ಹಾರೈಸಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಸಂವಿಧಾನ, ರಾಷ್ಟ್ರಧ್ವಜ ನೀಡಿದ ಪಕ್ಷ ನಮ್ಮದು. ಕಾಂಗ್ರೆಸ್ ಪಕ್ಷ ಪ್ರತಿಯೊಂದು ವರ್ಗದ ಜನರ ಬದುಕು ಉತ್ತಮಗೊಳಿಸಲು ಹಲವಾರು ಯೋಜನೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕಾಂಗ್ರೆಸ್‌ನ ಅನ್ನಭಾಗ್ಯ, ಕ್ಷೀರಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಹಲವು ಯೋಜನೆಗಳು ಜನರ ಜೀವನಕ್ಕೆ ಆಸರೆಯಾಗಿವೆ. ನುಡಿದಂತೆ ನಡೆಯುವ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನಪರ ಆಡಳಿತ ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ತಿಳಿಸಿದ್ದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಅನ್ಯ ಪಕ್ಷದ ಕಾರ್ಯಕರ್ತರು, ಮುಖಂಡರು ಇಂದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ನಂಬಿ ಪಕ್ಷ ಸೇರ್ಪಡೆಯಾದರು. ಅವರನ್ನು ಸ್ವಾಗತಿಸಿ, ಶುಭ ಹಾರೈಸಿದೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಸಂವಿಧಾನ, ರಾಷ್ಟ್ರಧ್ವಜ ನೀಡಿದ ಪಕ್ಷ ನಮ್ಮದು. ಕಾಂಗ್ರೆಸ್ ಪಕ್ಷ ಪ್ರತಿಯೊಂದು ವರ್ಗದ ಜನರ ಬದುಕು… pic.twitter.com/FlqMfK4UFw— DK Shivakumar (@DKShivakumar) August 21, 2023
ಹಳೇ ಲಾರಿಗಳಿಗೂ ಕೂಡ ಟ್ಯಾಕ್ಸ್ ಕಟ್ಟಬೇಕಿದೆ. ಇದನ್ನು ತೆಗೆಯುವಂತೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಲಾರಿಗೆ ಟ್ಯಾಕ್ಸ್ ವಿಧಿಸಿದ್ದನ್ನು ತೆಗೆಯುವಂತೆ ಸಿಎಂಗೆ ಮನವಿ ಮಾಡಲಾಗಿದೆ. ನಮ್ಮ ಮನವಿಗೆ ಸಿಎಂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈ ರೀತಿಯಾಗಿ ಟ್ಯಾಕ್ಸ್ ಕಟ್ಟಿದರೆ ನಾವು ಸಾಯಬೇಕಷ್ಟೆ. ನೈಸ್ ರೋಡ್ನಲ್ಲಿ ಲಾರಿ ಮಾಲೀಕರನ್ನ ಸುಲಿಗೆ ಮಾಡಲಾಗುತ್ತಿದೆ. ನೈಸ್ ರೋಡ್ನ ಟ್ಯಾಕ್ಸ್ ಕಲೆಕ್ಟ್ ಹಾಗೂ ಏರಿಕೆ ಮಾಡಲಾಗಿದೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಂಘ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಟ್ಯಾಕ್ಸ್, 10 ರಿಂದ 15 ಲಕ್ಷ ಬೆಲೆಯ ತೆರಿಗೆ, ಶಕ್ತಿ ಯೋಜನೆಗೆ ಖಾಸಗಿಯವರನ್ನು ಸೇರ್ಪಡೆ ಮಾಡುವ ಬಗ್ಗೆ, ಪರ್ಮಿಟ್ ಸೇರಿ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆಟೋ, ಕ್ಯಾಬ್ಗಳಿಗೆ ಪ್ರತ್ಯೇಕವಾದ ಆ್ಯಪ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದರು.
ಕೆಪಿಸಿಸಿ ಸಭೆಯಲ್ಲಿ ಆನೆಕಲ್ ಶಾಸಕ ಶಿವಣ್ಣ ಅವರು ಎಸ್ಟಿ ಸೋಮಶೇಖರ್ ಹೆಸರು ಹೇಳಿದ್ದಾರೆ. ಈ ವೇಳೆ ಸೋಮಶೇಖರ್ ಹೆಸರು ಹೇಳದಂತೆ ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ತಡೆದಿದ್ದಾರೆ. ಕೂಡಲೇ ಮಾತು ಬದಲಾಯಿಸಿ ಸೋಮಶೇಖರ್ ರಾಜಕೀಯ ಬೆಳವಣಿಗೆ ಹೇಳಿದರು. ನಾನು ಮತ್ತು ಎಸ್ಟಿ ಸೋಮಶೇಖರ್ ಒಂದೆ ಬಾರಿಗೆ ಚುನಾವಣೆಗೆ ಸ್ಫರ್ಧೆ ಮಾಡಿದ್ದೆವು. 2004 ರಲ್ಲಿ ನಮಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಎರಡು ಬಾರಿ ಸೋತರೂ ಮತ್ತೆ ಟಿಕೆಟ್ ನೀಡಿತ್ತು. ಇದರರ್ಥ ಕಾಂಗ್ರೆಸ್ ನಮ್ಮ ಕೈಬಿಡಲ್ಲ. ಕೆಲವೊಂದು ಕಾರಣಗಳಿಂದ ಸೋಮಶೇಖರ್ ಬಿಜೆಪಿ ಹೋಗಿದ್ದಾರೆ ಎಂದರು.
ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮುಂದುವರಿಸಲ್ಲ. ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರಿಸುತ್ತೇವೆ. ಸದ್ಯದಲ್ಲೇ ಸಮಿತಿ ರಚನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ ಬಗ್ಗೆ ಸಿಎಂ ಸಭೆ ಮಾಡಿದ್ದಾರೆ. ಸಭೆಯಲ್ಲಿ ಎನ್ಇಪಿಯ ಸಾಧಕ ಬಾಧಕ ಬಗ್ಗೆಯೂ ಚರ್ಚಿಸಿದ್ದಾರೆ. ರಾಜ್ಯದ ಶಿಕ್ಷಣ ಮಟ್ಟ ಉತ್ತಮವಾಗಿದೆ ಎಂದು ವಿಸಿಗಳು ಹೇಳಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿ ಹಲವೆಡೆ NEP ಜಾರಿ ಮಾಡಿಲ್ಲ. ಆದರೆ ಕರ್ನಾಟಕದಲ್ಲಿ ತರಾತುರಿಯಲ್ಲಿ ತರಲು ಪ್ರಯತ್ನ ಮಾಡಿದ್ದರು. ರಾಜ್ಯ ಸರ್ಕಾರ ಹೊಸ ಪಾಲಿಸಿ ತರುತ್ತೆ, ಅದಕ್ಕಾಗಿ ಸಮಿತಿ ರಚನೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಬಿಜೆಪಿಯವರು ಆತುರದಿಂದ NEP ಜಾರಿಗೊಳಿಸಿದ್ದರು. ಸರಿಯಾದ ಸಿದ್ದತೆ ಮಾಡಿಲ್ಲ. ಇದಕ್ಕೆ ಹಣ ಮೀಸಲು ಇಟ್ಟಿಲ್ಲ. ನಮ್ಮ ಕಾಲೇಜುಗಳು ನಡೆಯುತ್ತಿರೋದು ಅತಿಥಿ ಉಪನ್ಯಾಸಕರ ಮೇಲೆ ನಡೆಯುತ್ತಿದೆ. ಇದೆಲ್ಲವನ್ನೂ ಗಮನ ಹರಿಸಿ ರದ್ದು ಮಾಡುತ್ತಿದ್ದೇವೆ ಎಂದು ಸಚಿವ ಸುಧಾಕರ್ ಹೇಳಿದರು. ಬಿಜೆಪಿ ಸಿದ್ದಾಂತವನ್ನ ಪಠ್ಯ ಸೇರ್ಪಡೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇತಿಹಾಸವನ್ನ ತಿರುಚುವ ಕೆಲಸ ಮಾಡಿದ್ದಾರೆ. ಇದನ್ನ ಸರಿ ಮಾಡಬೇಕು. ಇದಕ್ಕಾಗಿ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದೇವೆ. NEP ಅಡಿಯಲ್ಲಿ ಈಗಾಗಲೇ ದಾಖಲಾಗಿರೋ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಇವರಿಗೆ ಅನುಕೂಲ ಆಗೋ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ. ತಜ್ಞರ ವರದಿ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುವುದರಲ್ಲಿ ಲೋಪವಾಗಬಾರದು ಎಂದು ವಿವಿಯ ಕುಲಪತಿಗಳ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆ ನೀಡಿದರು. ವಿದ್ಯಾರ್ಥಿಗಳು ಮನುಷ್ಯತ್ವ ಇರುವ ವ್ಯಕ್ತಿಗಳಾಗಿ ಬೆಳೆಯಬೇಕು. ಈ ಹಿಂದೆ ಶೇಕಡಾ 3ಕ್ಕಿಂತ ಹೆಚ್ಚು ಅನುದಾನ ನೀಡಲಾಗಿತ್ತು. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನ ನಡೆಸಲಾಗಿತ್ತು. ಒಂದೇ ಬಾರಿ ಎಲ್ಲಾ ಪರಿಹಾರ ಒದಗಿಸಲಾಗದು. ನಿಮ್ಮ ಸಮಸ್ಯೆ ಬಗೆಹರಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು.
ನೈಸ್ ಹಗರಣ ವಿಚಾರವಾಗಿ ಕುಮಾರಸ್ವಾಮಿ ಅವರು ನಾಳೆ ದಾಖಲೆ ಬಿಡುಗಡೆ ಮಾಡುವ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ವರದಿ ಕೊಟ್ಟ ಮೇಲೆ ಮುಗಿದೋಯ್ತು. 2016 ರ ಡಿಸೆಂಬರ್‌ನಲ್ಲೇ ವರದಿ ಕೊಟ್ಟಿದ್ದೇನೆ. ಮೂರು ಪಕ್ಷಗಳ ಶಾಸಕರು ಕುಳಿತು ವರದಿ ಕೊಟ್ಟಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯಿಸಿದ್ದರು. ಸರ್ಕಾರ ಕೂಡ ಅದಕ್ಕೆ ಉತ್ತರ ಕೊಟ್ಟಿದೆ. ನಮ್ಮ ಶಿಫಾರಸು ಬಗ್ಗೆ ಸಲಹೆ ಕೊಟ್ಟಿದ್ದೇವೆ. 101 ಕೇಸ್ ಇದಕ್ಕೆ ಸಂಬಂಧಿಸಿದಂತೆ ಇದ್ದವು. ಮೂರು ಜನರ ಕಮಿಟಿ ರಚನೆ ಮಾಡಬೇಕು. ಅವರ ನೇತೃತ್ವದಲ್ಲಿ ಇದರ ತನಿಖೆ ಆಗಬೇಕು ಎಂದಿದ್ದೆವು. ನಾವು ಸಮಿತಿಯಲ್ಲಿ ಚರ್ಚಿಸಿ ವರದಿ ಕೊಟ್ಟಿದ್ದೇವೆ. ಶಿಫಾರಸು ಮಾಡಿದ್ದನ್ನ ಸರ್ಕಾರ ತೀರ್ಮಾನಿಸಬೇಕು. ಯೋಜನೆಯ ಹೆಚ್ಚುವರಿ ಭೂಮಿ ಪಡೆದುಕೊಳ್ಳಬೇಕು. ನಮ್ಮವರದಿ ಮೇಲೆ ಸರ್ಕಾರ ಕ್ರಮ ಜರುಗಿಸಬೇಕು ಎಂದರು.
ಆಪರೇಷನ್ ಹಸ್ತ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅವರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಇಂದು ಸಂಜೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸೋಮಶೇಖರ್ ಭೇಟಿ ಮಾಡಲಿದ್ದಾರೆ.
ಕದ್ದು ಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ರಕ್ಷಣೆ ಮಾಡುತ್ತೇವೆ ಎಂಬ ನೆಪ ಇಟ್ಟುಕೊಂಡು ಮೈತ್ರಿ ಪಕ್ಷಕ್ಕೆ ಲಾಭ ಮಾಡಲು ನೀರು ಬಿಡುತ್ತಿದ್ದಾರೆ. ನೇರವಾಗಿ ತಮಿಳುನಾಡಿಗೆ ನೀರು ಹೋಗಲು ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಹೈಕಮಾಂಡ್ ಸಂತೋಷ ಪಡಿಸಲು ನೀರು ಬಿಡುತ್ತಿದ್ದಾರೆ. ತಮಿಳುನಾಡಿಗೆ ಅನುಕೂಲ ಮಾಡಿದ್ದಾರೆ. ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡಿದ್ದರು ಎಂದರು. ಸರ್ವಪಕ್ಷ ಸಭೆಗೆ ಗೈರು ಆಗುವ ಬಗ್ಗೆ ನಿರ್ಧಾರ ಆಗಿಲ್ಲ. ಆದರೆ ಸರ್ಕಾರದ ನಡೆ ವಿರೋಧ ಮಾಡುತ್ತೇವೆ ಎಂದರು.
ಕಾವೇರಿ ನದಿ ನೀರು ವಿಚಾರಕ್ಕೆ ಸುಪ್ರೀಂಕೋರ್ಟ್ ಪ್ರತ್ಯೇಕ ಪೀಠ ರಚನೆ ವಿಚಾರವಾಗಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೋರ್ಟ್ ಹೇಳಿದಂತೆ ಪೂರ್ಣ ಪ್ರಮಾಣ ನೀರು ಹರಿಸಲು ಸಾಧ್ಯವಾಗಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈಗ ಸಿಜೆಐ ನೇತೃತ್ವದಲ್ಲಿ ಪ್ರತ್ಯೇಕ ಪೀಠ ರಚನೆ ಮಾಡಿದೆ. ಹಿಂದೆ ಕುಮಾರಸ್ವಾಮಿ ಅವರು ಕರ್ನಾಟಕ-ತಮಿಳುನಾಡಿನ ಜನ ಅಣ್ಣತಮ್ಮಂದಿರಿದ್ದಂತೆ ಎಂದಿದ್ದರು. ಹೀಗಾಗಿ ಮಾಜಿ ಸಿಎಂ ಅವರ ಹೇಳಿಕೆಯನ್ನು ನಾವು ಫಾಲೋ ಮಾಡುತ್ತಿದ್ದೇವೆ. ನಮಗೆ ರಾಜ್ಯದ ಜನರ ಹಿತಾಸಕ್ತಿ ಮುಖ್ಯ ಎಂದರು.
‘ಗೃಹಲಕ್ಷ್ಮೀ’ ಚಾಲನೆ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ಮಾಡಿದ ವಿಚಾರವಾಗಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಇದು ಮುಖ್ಯಮಂತ್ರಿ ತೀರ್ಮಾನ, ಸಿಎಂಕ್ಕಿಂತ ನಾವು ದೊಡ್ಡವರಲ್ಲ. ಬೆಳಗಾವಿಗೆ ನಿಗದಿಯಾಗಿದ್ದು ಗೊತ್ತಿಲ್ಲ, ಇಲ್ಲಿಂದ ಹೋಗಿದ್ದೂ ಗೊತ್ತಿಲ್ಲ. ರಾಹುಲ್ ಗಾಂಧಿಗೆ ವಯನಾಡು ಕಾರ್ಯಕ್ರಮ ಇದೆ. ವಯನಾಡಿಗೆ ಮೈಸೂರಿನಿಂದ ಹೋಗಲು ಹತ್ತಿರ ಆಗುತ್ತೆ ಎಂದಿದ್ದರು. ಹಾಗಾಗಿ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ. ಅದು ಜಿಲ್ಲೆಯ ಕಾರ್ಯಕ್ರಮ ಅಲ್ಲ, ರಾಜ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಎಂದರು.
ಟೂಲ್ ಕಿಟ್ ರಾಜಕೀಯ ಮಾಡಲು ನಾಗಮೋಹನ್ ದಾಸ್ ಕಮಿಟಿ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಈ ಹಿಂದೆ ದತ್ತಪೀಠದಲ್ಲೂ ಹೀಗೆ ಮಾಡಿದ್ದರು. ಕಾಂಗ್ರೆಸ್ ಮರ್ಜಿಯಲ್ಲಿ ಇರುವವರು ನಾಗಮೋಹನ್ ದಾಸ್. ನಿರ್ದಿಷ್ಟ ಪ್ರಕರಣದ ಬಗ್ಗೆ ಲೋಕಾಯುಕ್ತಕ್ಕೆ ಎಸಿಬಿಗೆ ದೂರು ನೀಡಲು ಅವಕಾಶ ಇದೆ. ಆದರೆ ಫೇಕ್ ನರೆಟಿವ್ ಸೃಷ್ಟಿ ಮಾಡಲು ಟೂಲ್ ಕಿಟ್ ಭಾಗವಾಗಿ ನಾಗಮೋಹನ್ ದಾಸ್ ಕಮಿಟಿ ರಚನೆ ಮಾಡಿದ್ದಾರೆ. ಹಾಗೆ ಆದರೆ 2013 ರಿಂದ ತನಿಖೆ ಮಾಡಲಿ ಎಂದರು.
ಶಕ್ತಿ ಯೋಜನೆ ಬಳಿಕ ಸಾರಿಗೆ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್. ಶೀಘ್ರದಲ್ಲೇ ರಸ್ತೆಗೆ ಇಳಿಯಲಿವೆ ಎಕ್ಸ್ ಪ್ರೆಸ್ ಬಸ್. ಹೊಸ ವಿನ್ಯಾಸದ ಮೂಲಕ ವಿನೂತನ ಮಾದರಿಯ KSRTC ಬಸ್ ರಸ್ತೆಗಿಳಿಯಲಿವೆ. ರಾಜಹಂಸ ಮಾದರಿಯ ವ್ಯವಸ್ಥೆ ಇನ್ಮುಂದೆ ಸಾಮಾನ್ಯ ಸಾರಿಗೆಯಲ್ಲೂ ಸಿಗಲಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿನೂತನ ಮಾದರಿಯ ಬಸ್ ಪರಿಶೀಲನೆ ಮಾಡಿದರು.
ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಲಿಫ್ಟ್ನಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಲಾಕ್ ಆಗಿದ್ದರು. ಸುಮಾರು ಅರ್ಧ ಗಂಟೆ ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ನಾಗರ ಪಂಚಮಿ ಹಿನ್ನೆಲೆ ಗರ್ಭಿಣಿಯರಿಗೆ ಹಾಲು, ಹಣ್ಣು ವಿತರಣೆ ಮಾಡಲು ಆಸ್ಪತ್ರೆಗೆ ಬಂದಿದ್ದಾಗ ಘಟನೆ ನಡೆದಿದೆ.
ಲೋಕಸಭೆ ಚುನಾವಣೆಯಲ್ಲಿ ಪ್ರೀತಂಗೌಡ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿ ನಾನು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಇರುತ್ತೇನೆ. ಹಾಸನ ವಿಧಾನಸಭಾ ಕ್ಷೇತ್ರ ಬಿಟ್ಟು ಬೇರೆ ಯೋಚನೆಯನ್ನು ಮಾಡಲ್ಲ ಎಂದು ಹಾಸನದಲ್ಲಿ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ಸಂಬಂಧ ಮಾತನಾಡಿದ ಅವರು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಶಕ್ತಿ ಹೊಂದಿದೆ. ಹಾಗಾಗಿ ಬಹುಶಃ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಬಹುಶಃ ಹಾಸನದಲ್ಲಿ ಜೆಡಿಎಸ್ನವರು ನಮಗೆ ಬೆಂಬಲ ನೀಡಬಹುದು ಎಂದರು.
ನಾನು ಬಿಜೆಪಿಯಲ್ಲೇ ಇರುತ್ತೇನೆ, ಕಾಂಗ್ರೆಸ್ ಸೇರಲ್ಲ ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿಕೆ ನೀಡಿದರು. ನಾನು ಲೋಕಸಭೆ ಚುಣಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತೇನೆ. ಬೇಕಾದ್ರೇ ರಕ್ತದಲ್ಲಿ ಬರೆದು ಕೊಡುತ್ತೇನೆ ಕಾಂಗ್ರೆಸ್ ಸೇರಲ್ಲ. ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುತ್ತೆ ಎಂಬ ವಿಶ್ವಾಸ ಇದೆ. ಟಿಕೆಟ್ ನೀಡದಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡ್ತೇನೆ. ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಬಿಜೆಪಿ ಬಿಡುವುದಿಲ್ಲ ಎಂದರು.
ಇಂಡಿಗೋ ವಿಮಾನದಲ್ಲಿ ಗಗನಸಖಿಗೆ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಲೈಂಗಿಕ ಕಿರುಕುಳ ನೀಡಿದ್ದ ವಿದೇಶಿ ಪ್ರಜೆ ಅಕ್ರಂ ಅಹಮದ್ನನ್ನು ಬಂಧಿಸಲಾಗಿದೆ. ಮಾಲ್ಡೀವ್ಸ್ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಿಸಿನೆಸ್ ವೀಸಾದಲ್ಲಿ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದ ಆರೋಪಿ ಅಕ್ರಂ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದ. ಘಟನೆ ಸಂಬಂಧ ದೇವನಹಳ್ಳಿ ಏರ್ಪೋರ್ಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಶಕ್ತಿ ಯೋಜನೆ ಅಡಿ ಮಹಿಳೆಯರ ಉಚಿತ ಪ್ರಯಾಣ ಆರಂಭವಾಗಿ ಎರಡು ತಿಂಗಳಾಗುತ್ತಿದ್ದು ಈಗಾಗಲೇ ಉಚಿತ ಟಿಕೆಟ್ ಮೌಲ್ಯ ಸಾವಿರ ಕೋಟಿ ದಾಟಿದೆ. ಕಳೆದ ಜೂನ್ 11 ರಿಂದ ಸರ್ಕಾರದ ಮೊದಲ ಗ್ಯಾರೆಂಟಿ ಯೋಜನೆಯಾದ ಶಕ್ತಿ ಯೋಜನೆ ಆರಂಭವಾಗಿತ್ತು. ಸದ್ಯ ಈ ಯೋಜನೆ ಅಡಿ ಒಟ್ಟು 43 ಕೋಟಿ ಮಹಿಳೆಯರು ಓಡಾಡಿದ್ದಾರೆ. ಒಟ್ಟು ಇಲ್ಲಿ ತನಕ 1000,37,63,308 ಮೊತ್ತದ ಟಿಕೆಟ್ ಹರಿಯಲಾಗಿದೆ. ಕೆಎಸ್ಆರ್ಟಿಸಿ- 378,19,90,932, ಬಿಎಂಟಿಸಿ – 181,43,92,688, ಎನ್ಡಬ್ಲ್ಯೂಆರ್ಟಿಸಿ – 250,37,04,865, ಕೆಕೆಆರ್ಟಿಸಿ – 190,36,74,823.
ದಸರಾ ಗಜಪಡೆ ಮೈಸೂರು ಆಗಮನಕ್ಕೆ 10 ದಿನ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 1 ರಂದು ಗಜಪಯಣದ ಮೂಲಕ ಮೈಸೂರಿಗೆ ಅಭಿಮನ್ಯು ನೇತೃತ್ವದ ಗಜಪಡೆ ಆಗಮಿಸಲಿದೆ. ಗಜಪಡೆ ಸೆ.4ರಂದು ಮೈಸೂರು ಅರಮನೆ ಆವರಣ ಪ್ರವೇಶಿಸಲಿದೆ. ಗಜಪಡೆ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಮಾವುತರು ಕಾವಾಡಿಗಳ ಕುಟುಂಬಕ್ಕೂ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗುತ್ತಿದೆ.
ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಆರಂಭವಾಗಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಕೋರ್ ಕಮಿಟಿ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಮಡಿಕೇರಿ ನಗರದ ಹೊರವಲಯದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ವಿಕೃತ ಕಾಮಿಯ ಕಾಟ ಶುರುವಾಗಿದೆ. ಲೇಡಿಸ್ ಹಾಸ್ಟೆಲ್ ಎದುರು ಕಾಮುಕ ಅಶ್ಲೀಲ ವರ್ತನೆ ತೋರುತ್ತಿದ್ದಾನೆ. ಹುಡುಗಿಯರ ಎದುರು ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ತೋರುತ್ತಿದ್ದಾನೆ ಎಂದು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಘಟನೆ ಸಂಬಂಧ ದೂರು ನೀಡಿದರೂ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತರಗತಿ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಆಪರೇಷನ್ ಹಸ್ತದ ಜೊತೆ ಆಪರೇಷನ್ ಬಿಬಿಎಂಪಿ ಶುರು. KRಪುರ ಕ್ಷೇತ್ರದ ಬಿಜೆಪಿಯ ಮಾಜಿ ಕಾರ್ಪೊರೇಟರ್ಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ, DCM ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಾಜಿ ಕಾರ್ಪೊರೇಟರ್‌ಗಳಾದ ವೀರಣ್ಣ, ಶ್ರೀನಿವಾಸ ಕಾಂಗ್ರೆಸ್ ಸೇರ್ಪಡೆಯಾದರು.
ಕಾವೇರಿ ನದಿ ನೀರಿಗಾಗಿ ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಬರದ ಪರಿಸ್ಥಿತಿಯಲ್ಲೂ ತನ್ನ ಪಾಲು ಕೇಳುತ್ತಿದೆ. ಸುಪ್ರೀಂಕೋರ್ಟ್ನಲ್ಲಿ ಸಿಜೆಐ ಪೀಠದ ಮುಂದೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದೆ. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅರ್ಜಿ ಪ್ರಸ್ತಾಪಿಸಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ನಾನು ಕ್ಷೇತ್ರದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದೆ. ಕ್ಷೇತ್ರದ ವಿಚಾರವಾಗಿ ಸಿಎಂ ಭೇಟಿಯಾಗುವುದು ತಪ್ಪಾ? ಪಕ್ಷದ ಕೆಲ ಮುಖಂಡರು ಕಾಂಗ್ರೆಸ್ ಸೇರ್ತಾರೆಂದು ವದಂತಿ ಇದೆ ಎಂದು ಬೆಂಗಳೂರಿನಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಕೋಲಾರದ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಕುಸಿದಿದೆ. ಹದಿನೈದು ಕೆಜಿ ಬಾಕ್ಸ್ ಟೊಮೆಟೊ 200-400 ರೂಪಾಯಿಗೆ ಹರಾಜಾಗುತ್ತಿದೆ. ಒಂದು ಕೆಜಿ ಟೊಮೆಟೊ 15-25 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದೊಂದು ತಿಂಗಳಲ್ಲಿ 2700 ರೂಪಾಯಿ ವರೆಗೆ ಏರಿಕೆ ಕಂಡಿದ್ದ ಟೊಮೆಟೊ ಈಗ ಭಾರಿ ಕುಸಿತ ಕಂಡಿದೆ.
ಪುತ್ರನಿಗೆ ಅನಾರೋಗ್ಯ ಹಿನ್ನೆಲೆ ಜಿಗುಪ್ಸೆಗೊಂಡು ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಜಿಗಿದು ತಾಯಿ ಆತ್ಮಹತ್ಯೆ ಮಾಡಿಕೊಮಡ ಘಟನೆ ನಡೆದಿದೆ. ಧಾರವಾಡ ನಗರದ ಸಪ್ತಾಪುರ ನಿವಾಸಿ ಪ್ರಿಯದರ್ಶಿನಿ ಲಿಂಗರಾಜ್ ಪಾಟೀಲ್(40) ಆತ್ಮಹತ್ಯೆ ಮಾಡಿಕೊಂಡ ತಾಯಿ. ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪ್ರಿಯದರ್ಶಿನಿ ಹಾಗೂ ಪತಿ ಲಿಂಗರಾಜ್ ಅವರ ಪುತ್ರ ಅಮರ್ಥ್ಯನಿಗೆ ಅನಾರೋಗ್ಯ ಹಿನ್ನೆಲೆ ಆ.18ರಂದು ರಾಜ್ಯಕ್ಕೆ ಮರಳಿದ್ದರು.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ಟ್ರಕ್ ಹರಿದು ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ನಡೆದಿದೆ. ಶಿಗ್ಗಾಂವಿ ತಾಲೂಕಿನ ಚಾಕಾಪೂರ ಗ್ರಾಮದ ಬೈಕ ಸವಾರರಾದ ನಿಂಗಪ್ಪ(40), ಶರೀಫ್(45) ಮೃತರು.
ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದೆ. ಹಳೇ ಹಾಗೂ ನೂತನ ಜಿಲ್ಲಾ ಆರೋಗ್ಯಾಧಿಕಾರಿಗಳ ನಡುವೆ ಕಿತ್ತಾಟವಾಗಿದ್ದು ವರ್ಗಾವಣೆ ಆದೇಶಕ್ಕೆ ತಡೆ ತಂದಿದ್ದಕ್ಕೆ ಡಿಹೆಚ್ಒ ಕಚೇರಿಗೆ ಬೀಗ ಹಾಕಲಾಗಿದೆ. ಹಳೇ ಡಿಹೆಚ್ಒ ವಿಜಯೇಂದ್ರ ವರ್ಗಾವಣೆ ಆದೇಶಕ್ಕೆ ತಡೆತಂದ ಹಿನ್ನೆಲೆ ಹೊಸ ಡಿಹೆಚ್ಒ ಸುನೀಲ್ ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರ ಕಲ್ಲು ಬಳಿಯ ಡಿಹೆಚ್ಒ ಕಚೇರಿಗೆ ಬೀಗ ಹಾಕಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿರುವ ದತ್ತನ ಹುಂಡಿಗೆ ಲಕ್ಷಾಂತರ ಹಣ, ಚಿನ್ನಾಭರಣ ಹರಿದು ಬಂದಿದೆ. ಶ್ರೀ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು 97 ಲಕ್ಷ 10,152 ರೂ ನಗದು ಹಣ ಸಂಗ್ರಹವಾಗಿದೆ. ಭಕ್ತರಿಂದ 26 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಜಮೆಗೊಂಡಿದೆ.
ಪೊಲೀಸ್ ಹಾಗೂ RAW ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಕೇರಳದ ಇಡುಕಿ ಮೂಲದ ಆರೋಪಿ ಬೆನೆಡಿಕ್ಟ್ ಸಾಬು ಬಂಧಿತ ಆರೋಪಿ. 6 ತಿಂಗಳ ಹಿಂದೆ ಜಿಎನ್ಎಂ ಕೋರ್ಸ್ಗೆ ಸೇರಿದ್ದ ಬೆನೆಡಿಕ್ಟ್ ಸಾಬು ತಾನು ಕೇರಳದ ಕೃಷಿ ಅಧಿಕಾರಿ ಎಂದು ಪ್ರಿನ್ಸಿಪಾಲ್ ಬಳಿ ಹೇಳಿದ್ದ. ಬಳಿಕ ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡಿದ್ದ. ಸದ್ಯ RAW ಫೀಲ್ಡ್ ಏಜೆಂಟ್ ಆಗಿರುವುದಾಗಿ ಹೇಳಿಕೊಂಡಿದ್ದ. ಕಾಲೇಜಿನಲ್ಲಿ ಡ್ರಗ್ಸ್ ಅವೇರ್ನೆಸ್ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯ ಕಳ್ಳಾಟ ಬೆಳಕಿಗೆ ಬಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ರಾಜ್ಯದಲ್ಲಿ ಮತ್ತೆ ಕೊರೊನಾ ರೂಪಾಂತರಿ ವೈರಸ್ ಆತಂಕ ಹುಟ್ಟುಕೊಂಡಿದೆ. ಆರೋಗ್ಯದ ಬಗ್ಗೆ ಎಚ್ಚರವಹಿಸಲು ಆರೋಗ್ಯ ಇಲಾಖೆ ಸೂಚನೆ ಕೊಟ್ಟಿದೆ. ಕೊರೊನಾ ರೂಪಾಂತರಿ ಎರಿಸ್ EG.5 ವಿದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಒಮಿಕ್ರಾನ್ ರೂಪಾಂತರಿಯ ಉಪ ತಳಿ ಎರಿಸ್ EG.5 ವೈರಸ್ ಅತಿವೇಗವಾಗಿ ಹರಡುವ ಆತಂಕವಿದೆ. ಅಮೆರಿಕ, ಜಪಾನ್, ಬ್ರಿಟನ್‌ನಲ್ಲಿ ಎರಿಸ್ EG.5 ವೈರಸ್ ಭೀತಿ ಹೆಚ್ಚಿದೆ. ಹೀಗಾಗಿ ರಾಜ್ಯದಲ್ಲೂ ಮತ್ತೆ ಕೊವಿಡ್ ಹರಡುವ ಆತಂಕ ಉಂಟಾಗಿದೆ.
ಇಂದು ಜೆಡಿಎಸ್, ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಇಂದು ಆಯನೂರು ಮಂಜುನಾಥ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಬಿಜೆಪಿ ಮುಖಂಡ ಶಿಕಾರಿಪುರ ನಾಗರಾಜ್ ಗೌಡ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇನ್ನು ಎಸ್.ಟಿ.ಸೋಮಶೇಖರ್ ಬೆಂಬಲಿಗರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಸಂಜೆ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ 15ಕ್ಕೂ ಅಧಿಕ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬೃಂದಾವನದಲ್ಲಿ ಐವರು ಪ್ರವಾಸಿಗರ ಮೇಲೆ ಹುಚ್ಚುನಾಯಿಗಳು ದಾಳಿ ನಡೆಸಿವೆ. ಗಾಯಾಳುಗಳಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೃಂದಾವನ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರನ್ನು ಹುಚ್ಚುನಾಯಿಗಳು ಕಚ್ಚಿವೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕಿಡಿಗೇಡಿಗಳು ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಹೊಳೆಹೊನ್ನೂರು ಗ್ರಾಮಸ್ಥರು ಖಂಡನೆ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಬಾಗಲಕೋಟೆಯ ಟ್ರಾಫಿಕ್ ಸರ್ಕಲ್ನಿಂದ ಛತ್ರಪತಿ ಶಿವಾಜಿ ಮಹರಾಜ್ ಪ್ರತಿಮೆ ತೆರವುಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಸ್ವಪಕ್ಷದ ಎಎಲ್ಸಿ ಪಿ.ಹೆಚ್. ಪೂಜಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ನೀರು ಬಿಡುಗಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ. ಮಂಡ್ಯದ ಸಂಜಯ್ ವೃತ್ತದಲ್ಲಿ ಇಂದು ಬಿಜೆಪಿ ಪ್ರತಿಭಟನೆ ನಡೆಸಲಿದ್ದು ಮೈಸೂರು, ಬೆಂಗಳೂರು ಸಂಸದರು ಭಾಗಿಯಾಗಲಿದ್ದಾರೆ. BJP ಪ್ರತಿಭಟನೆಗೆ ಮಂಡ್ಯ ಸಂಸದೆ ಸುಮಲತಾ ಕೂಡ ಸಾಥ್ ನೀಡಲಿದ್ದಾರೆ.
ರಾಜ್ಯ ಸರಕಾರ ಜುಲೈ ತಿಂಗಳಲ್ಲಿ ಮದ್ಯ ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಈ ಮೂಲಕ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಿತ್ತು. ಆದರೆ ಮದ್ಯಪ್ರಿಯರು ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ. ಭಾರತೀಯ ಮದ್ಯ(ಐಎಂಎಲ್) ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ ಕಂಡಿದೆ. ಆದರೆ, ಬಿಯರ್ ಮಾರಾಟದಲ್ಲಿ ಅಂತಹ ವ್ಯತ್ಯಯವೇನೂ ಆಗಿಲ್ಲ.
Published On - 8:02 am, Mon, 21 August 23