ಬೆಂಗಳೂರು, ಆಗಸ್ಟ್ 20: ಸರಗಳ್ಳತನ (Chain Snatching) ಮಾಡಿದ ನಂತರ ಹೊತ್ತುಕೊಂಡಿದ್ದ ಹರಕೆಯನ್ನು ಸಂದಾಯ ಮಾಡಲು ಕಳ್ಳರು ಮಲೆ ಮಹದೇಶ್ವರನ ಬೆಟ್ಟಕ್ಕೆ (Male Mahadeshwara Hills) ಹೋಗಿ ಮುಡಿಕೊಟ್ಟು ಮಾದೇಶ್ವರನ ದರ್ಶನ ಪಡೆದು ಹೊರಬರುತ್ತಿದ್ದಂತೆ ಬೆಂಗಳೂರಿನ (Bengaluru) ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಹಾಗೂ ಯತೀಶ್ ಬಂಧಿತ ಆರೋಪಿಗಳಾಗಿದ್ದಾರೆ. ಐಶಾರಾಮಿ ಜೀವನ ನಡೆಸಲು ಆರೋಪಿಗಳು ಸರಗಳ್ಳತನಕ್ಕೆ ಇಳಿದಿದ್ದರು. ಅದರಂತೆ ಸರಗಳ್ಳತನ ಯಶಸ್ವಿಯಾಗಲೆಂದು ಮಲೆ ಮಹದೇಶ್ವರನಿಗೆ ಹರಕೆ ಹೊತ್ತುಕೊಂಡಿದ್ದರಂತೆ. ಅದರಂತೆ ಆಗಸ್ಟ್ 13 ರಂದು ಬೆಳಗಿನ ಜಾವ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ಶ್ಯಾಮಲ ಎಂಬ ವೃದ್ಧೆಯ ಸರ ಕಳ್ಳತನ ಮಾಡಿ ಪರಾರಿಯಾಗಿದ್ದರು.
ಇದನ್ನೂ ಓದಿ: ಬೆಂಗಳೂರು: ಅಪರಿಚಿತನ ಬಳಿ ಕ್ವಾಟರ್ ಎಣ್ಣೆ ಆಸೆಗೆ ಬಿದ್ದು ಆಟೋ ಕಳ್ಕೊಂಡ ಚಾಲಕ; ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಸರಗಳ್ಳತನ ನಡೆಸಿದ ನಂತರ ಆರೋಪಿ ಮಂಜುನಾಥ್ ತಾನು ಹೊತ್ತುಕೊಂಡಿದ್ದ ಹರಕೆಯನ್ನು ಸಂದಾಯ ಮಾಡಲೆಂದು ಮತ್ತೊಬ್ಬ ಆರೋಪಿ ಯತೀಶ್ ಜೊತೆ ಸೇರಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದಾರೆ. ಇಬ್ಬರು ಹರಕೆ ಸಂದಾಯ ಮಾಡಿ ಹೊರಬರುತ್ತಿದ್ದಂತೆ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಬೈಕ್ ಕಳ್ಳತನ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ, ಕಳವು ಮಾಡಿದ ಬೈಕ್ನಲ್ಲೇ ಸರಗಳ್ಳತನ ಮಾಡಿರುವ ಬಗ್ಗೆಯೂ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಸದ್ಯ ಬಂಧಿತರಿಂದ 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳನ್ನು ಪರಪ್ಪನ ಅಗ್ರಹಾರದ ಜೈಲಿಗೆ ಕಳುಹಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ