ಟ್ವೀಟ್ ಮೂಲಕ ಡಿಕೆಶಿಗೆ ರಮ್ಯಾ ಉಪದೇಶ; ನೀನೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ ಅಸಹಾಯಕ ಡಿಕೆ ಶಿವಕುಮಾರ್ ಎಂದು ಅಪಹಾಸ್ಯ ಮಾಡಿದ ಬಿಜೆಪಿ

| Updated By: Ayesha Banu

Updated on: May 12, 2022 | 4:09 PM

ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ನೀವು ನಿಜಕ್ಕೂ ಕೆಪಿಸಿಸಿ ಅಧ್ಯಕ್ಷರೇ? ಸಾರ್ವಜನಿಕ ಬದುಕಿನಿಂದ ಕಳೆದು ಹೋದವರೆಲ್ಲ ಈಗ ಬಂದು ಕೆಪಿಸಿಸಿ ಅಧ್ಯಕ್ಷರಿಗೆ ಪಾಠ ಹೇಳುತ್ತಿರುವುದನ್ನು ನೋಡಿದರೆ, ಕನಕಪುರದ ಬಂಡೆ ಎಷ್ಟು ಗಟ್ಟಿ ಎಂದು ಯೋಚಿಸಬೇಕಲ್ಲವೇ?

ಟ್ವೀಟ್ ಮೂಲಕ ಡಿಕೆಶಿಗೆ ರಮ್ಯಾ ಉಪದೇಶ; ನೀನೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ ಅಸಹಾಯಕ ಡಿಕೆ ಶಿವಕುಮಾರ್ ಎಂದು ಅಪಹಾಸ್ಯ ಮಾಡಿದ ಬಿಜೆಪಿ
ಡಿಕೆ ಶಿವಕುಮಾರ್
Follow us on

ಬೆಂಗಳೂರು: ಟ್ವೀಟ್ ಮೂಲಕ ಎಂಬಿ ಪಾಟೀಲ್(MB Patil) ಪರ ರಮ್ಯಾ(Ramya) ಬ್ಯಾಟಿಂಗ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಿರುದ್ಧ ಬಿಜೆಪಿ ಟ್ವೀಟ್ ಮಾಡಿ ಅಪಹಾಸ್ಯ ಮಾಡಿದ್ದಾರೆ. ಡಿಕೆಶಿ ವಿರುದ್ಧ ಮಾಜಿ ಸಂಸದೆ ರಮ್ಯಾ ತಿರುಗಿಬಿದ್ದಿದ್ದಾರೆ. ಅಸಹಾಯಕ ಡಿ.ಕೆ.ಶಿವಕುಮಾರ್ ಅವರೇ, ನೀವೇ ಬೆಳೆಸಿದ Social Media Encounter Specialist ರಮ್ಯಾ ನೇತೃತ್ವದಲ್ಲಿ ಮತ್ತಷ್ಟು ನಕಲಿ ಖಾತೆ ಜನಿಸಲಿದ್ದು, ನಿಮ್ಮದೇ ಮೂಗಿನ ಕೆಳಗೆ ನಿಮ್ಮ ವಿರುದ್ಧವೇ ಟೋಲ್ ಕಿಟ್ ಹಣೆಯಲಾಗುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ನೀವು ನಿಜಕ್ಕೂ ಕೆಪಿಸಿಸಿ ಅಧ್ಯಕ್ಷರೇ? ಸಾರ್ವಜನಿಕ ಬದುಕಿನಿಂದ ಕಳೆದು ಹೋದವರೆಲ್ಲ ಈಗ ಬಂದು ಕೆಪಿಸಿಸಿ ಅಧ್ಯಕ್ಷರಿಗೆ ಪಾಠ ಹೇಳುತ್ತಿರುವುದನ್ನು ನೋಡಿದರೆ, ಕನಕಪುರದ ಬಂಡೆ ಎಷ್ಟು ಗಟ್ಟಿ ಎಂದು ಯೋಚಿಸಬೇಕಲ್ಲವೇ? ಡಿಕೆಶಿ ಅವರನ್ನು ಅಧೀರರನ್ನಾಗಿಸುವ ಹಿಂದೆ ಮೀರ್‌ ಸಾದಿಕ್‌ ತಂತ್ರವಿದೆಯೇ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ಅಪಹಾಸ್ಯ ಮಾಡಿದ್ದಾರೆ.

“ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ”, ಇದು ಅಸಹಾಯಕ ಡಿಕೆಶಿ ಅವರ ಸದ್ಯದ ಸ್ಥಿತಿ. ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಾರೆ. ರಮ್ಯಾ ಅವರನ್ನು ಭ್ರಷ್ಟಾಧ್ಯಕ್ಷರ ವಿರುದ್ಧ ಛೂಬಿಟ್ಟಿದ್ದು ಮೀರ್‌ ಸಾದಿಕ್‌ ಅವರಿರಬಹುದೇ? ಎಂದು ಡಿಕೆಶಿ ಅವರನ್ನು ಅಸಹಾಯಕ ಡಿಕೆಶಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ರಮ್ಯಾ ಟ್ವೀಟ್​ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ
ಇನ್ನು ಟ್ವೀಟ್​ ಮೂಲಕ ಎಂಬಿಪಿ ಪರ ರಮ್ಯಾ ಬ್ಯಾಟಿಂಗ್​ ವಿಚಾರಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ರಮ್ಯಾ ಟ್ವೀಟ್​ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಎಂ.ಬಿ.ಪಾಟೀಲ್, ರಮ್ಯಾ ಇಬ್ಬರು ನಮ್ಮ ಪಕ್ಷದವರೇ. ರಮ್ಯಾ ಟ್ವೀಟ್ ವಿಚಾರದಲ್ಲಿ ಎಲ್ಲೋ ಗೊಂದಲವಾಗಿರಬೇಕು. ಗೊಂದಲವನ್ನ ನಾವು ಸರಿಪಡಿಸಿಕೊಳ್ತೇವೆ ಎಂದರು.

ರಮ್ಯಾ ವಿರುದ್ಧ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಆಕ್ರೋಶ
ಇನ್ನು ಅಶ್ವತ್ಥ್ ನಾರಾಯಣ್ ಹಾಗೂ ಎಂ.ಬಿ. ಪಾಟೀಲ್ ಭೇಟಿ ಬಗ್ಗೆ ಡಿಕೆಶಿ ಹೇಳಿಕೆಗೆ ರಮ್ಯಾ ಪ್ರತಿಕ್ರಿಯೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಂಸದೆ ರಮ್ಯಾ ವಿರುದ್ಧ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಆಕ್ರೋಶ ಹೊರ ಹಾಕಿದ್ದಾರೆ. ರಮ್ಯಾ ಅವರು ಬಹಳ ದಿನಗಳಿಂದ ರಾಜಕಾರಣದಿಂದ ದೂರ ಉಳಿದವರು. ಈಗ ಮತ್ತೆ ಏಕಾಏಕಿ ಬಂದು ಅವರೇಕೆ ಸ್ಟೇಟ್‌ಮೆಂಟ್ ಕೊಡಬೇಕು? ಎಂದು ಬೆಳಗಾವಿಯಲ್ಲಿ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಪ್ರಶ್ನೆ ಮಾಡಿದ್ದಾರೆ. ಎಂ.ಬಿ‌.ಪಾಟೀಲ್ ಸಾಹೇಬ್ರು‌ ಬಹಳ ದೊಡ್ಡವರು, ಡಿಕೆಶಿ ಸಾಹೇಬ್ರು ಬಹಳ ದೊಡ್ಡವರು. ವೈಯಕ್ತಿಕವಾಗಿ ನಾವು ಅನೇಕ ಸಾರಿ ಯಡಿಯೂರಪ್ಪ ಸಾಹೇಬ್ರ ಭೇಟಿಯಾಗಿದ್ದೇವೆ. ವೈಯಕ್ತಿಕವಾಗಿ ಬೊಮ್ಮಾಯಿ ಸಾಹೇಬರನ್ನು ಭೇಟಿಯಾಗಿದ್ದೇವೆ. ವೈಯಕ್ತಿಕ ಸಂಬಂಧ ಬೇರೆ ರಾಜಕಾರಣ ಸಂಬಂಧ ಬೇರೆ. ಎಂ.ಬಿ.ಪಾಟೀಲ್ ಅಶ್ವತ್ಥ್ ನಾರಾಯಣ್ ಭೇಟಿಯಾಗಿದ್ರಲ್ಲಿ ಏನು ತಪ್ಪಿಲ್ಲ. ಅವರೆಲ್ಲ ಬಹಳ ದೊಡ್ಡವರು, ಭೇಟಿಯಾದ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ನನ್ನ ಮಗ ಹಾಗೂ ಅವರ ಮನೆಯಲ್ಲಿರೋರಿಗೆ ಫ್ರೆಂಡ್ಶಿಪ್ ಇದೆ. ನಾವು ಅವರ ಮನೆಗೆ ಊಟಕ್ಕೆ ಹೋಗ್ತೇವೆ, ಅವರು ನಮ್ಮ ಮನೆಗೆ ಊಟಕ್ಕೆ ಬರ್ತಾರೆ. ಅಶ್ವತ್ಥ್ ನಾರಾಯಣ್ – ಎಂ.ಬಿ. ಪಾಟೀಲ್ ಭೇಟಿ ಬಗ್ಗೆ ಬೇರೆ ಅರ್ಥ ಕಲ್ಪಿಸೋದು ಸಮಂಜಸವಲ್ಲ. ರಮ್ಯಾ ಅವರು ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಬೇಕು ಎಂದು ಮಾಜಿ ಸಂಸದೆ ರಮ್ಯಾ ವಿರುದ್ಧ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:21 pm, Thu, 12 May 22