ಬಿಬಿಎಂಪಿ ಅಭಿವೃದ್ಧಿಪಡಿಸಿದ್ದ ಪಾರ್ಕ್ನಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಆಸ್ತಿ ಎಂದು ಬೋರ್ಡ್; ಸ್ಥಳೀಯರಿಂದ ಆಕ್ರೋಶ
ಉತ್ತರಹಳ್ಳಿಯಲ್ಲಿರುವ ಈ ಪಾರ್ಕ್ಗೆ ಪ್ರತಿ ನಿತ್ಯ ನೂರಾರು ಜನ ಬೆಳಿಗ್ಗೆ, ಸಾಯಂಕಾಲ ವಾಯು ವಿಹಾರಕ್ಕೆ ಬರುತ್ತಾರೆ. ಆದರೆ ಈಗ ಈ ಜಾಗದಲ್ಲಿ ಶುಭಾಂಗಿ ಬಲ್ದೋಟಾ ಎಂಬ ಹೆಸರಿನ ವ್ಯಕ್ತಿಗೆ ಸೇರಿದ ಆಸ್ತಿ ಎಂದು ಬೋರ್ಡ್ ಅಳವಡಿಸಲಾಗಿದೆ. ಬೋರ್ಡ್ ಹಾಕಿ ಗೇಟ್ ಲಾಕ್ ಮಾಡಲಾಗಿದ್ದು ವಾಕಿಂಗ್ ಪಾತ್‌ಗೆ ಅಳವಡಿಸಿದ್ದ ಬ್ರಿಕ್ಸ್‌ಗಳನ್ನ ಸಹ ತೆಗೆದು ಹಾಕಲಾಗಿದೆ.
ಬೆಂಗಳೂರು, ಆ.20: ಸಾರ್ವಜನಿಕ ಆಸ್ತಿ ಮೇಲೆ ಭೂ ಮಾಫಿಯಾ ಕಣ್ಣು ಬಿದ್ದಿದೆ. ಬಿಬಿಎಂಪಿ(BBMP) ದಕ್ಷಿಣ ವಲಯ ವ್ಯಾಪ್ತಿಯ ಉತ್ತರಹಳ್ಳಿಯ(Uttarahalli) ವಾರ್ಡ್ 184 ರ ಸರ್ವೆ ನಂಬರ್ 77 ರಲ್ಲಿ ಸುಮಾರು 7 ಎಕರೆ ಪ್ರದೇಶದಲ್ಲಿ ಬಿಬಿಎಂಪಿಯು 2014ರಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೆರೆ ಮತ್ತು ಪಾರ್ಕ್ ಅಭಿವೃದ್ಧಿ ಪಡಿಸಿದೆ. ಅಲ್ಲದೆ ಕಳೆದ 6 ತಿಂಗಳ ಹಿಂದಷ್ಟೇ 50 ಲಕ್ಷ ಖರ್ಚು ಮಾಡಿ ಪಾರ್ಕ್ನಲ್ಲಿ ವಾಕಿಂಗ್ ಪಾತ್ ಮಾಡಲಾಗಿದೆ. ಆದ್ರೆ ಈಗ ಇದ್ದಕ್ಕಿದ್ದಂತೆ ಈ ಜಾಗದಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಆಸ್ತಿ ಎಂದು ಬೋರ್ಡ್ ಅಳವಡಿಸಲಾಗಿದೆ. ಕೆರೆ, ಪಾರ್ಕ್ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಉತ್ತರಹಳ್ಳಿಯಲ್ಲಿರುವ ಈ ಪಾರ್ಕ್ಗೆ ಪ್ರತಿ ನಿತ್ಯ ನೂರಾರು ಜನ ಬೆಳಿಗ್ಗೆ, ಸಾಯಂಕಾಲ ವಾಯು ವಿಹಾರಕ್ಕೆ ಬರುತ್ತಾರೆ. ಆದರೆ ಈಗ ಈ ಜಾಗದಲ್ಲಿ ಶುಭಾಂಗಿ ಬಲ್ದೋಟಾ ಎಂಬ ಹೆಸರಿನ ವ್ಯಕ್ತಿಗೆ ಸೇರಿದ ಆಸ್ತಿ ಎಂದು ಬೋರ್ಡ್ ಅಳವಡಿಸಲಾಗಿದೆ. ಬೋರ್ಡ್ ಹಾಕಿ ಗೇಟ್ ಲಾಕ್ ಮಾಡಲಾಗಿದ್ದು ವಾಕಿಂಗ್ ಪಾತ್‌ಗೆ ಅಳವಡಿಸಿದ್ದ ಬ್ರಿಕ್ಸ್‌ಗಳನ್ನ ಸಹ ತೆಗೆದು ಹಾಕಲಾಗಿದೆ. ಹೀಗೆ ಏಕಾಏಕಿ ಹೇಳದೆ ಕೇಳದೆ ಗೇಟ್ ಲಾಕ್ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ದೇವರಾಜು ಅರಸು ಕಾರಿನಲ್ಲೇ ವಿಧಾನಸೌಧ ಸಭಾಂಗಣಕ್ಕೆ ಬಂದ ಸಿಎಂ ಸಿದ್ದರಾಮಯ್ಯ
ಖಾಸಗಿ ವ್ಯಕ್ತಿಗೆ ಸೇರಿದ ಆಸ್ತಿಯಲ್ಲಿ ಬಿಬಿಎಂಪಿ ಹೇಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಮಾಡಿತು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಖಾಸಗಿ ವ್ಯಕ್ತಿಗೆ ಸೇರಿದ ಆಸ್ತಿಯಾದಲ್ಲಿ ಬಿಬಿಎಂಪಿ ಅಭಿವೃದ್ಧಿ ಪಡಿಸುತ್ತಿದ್ದರೂ ಆ ಖಾಸಗಿ ವ್ಯಕ್ತಿ ಏಕೆ ಇಷ್ಟು ದಿನ ಸುಮ್ಮನಿದ್ದರು? ಹಾಗೇನಾದರು ಭೂ ವಿವಾದ ಇದ್ದಿದ್ದೆ ಆದಲ್ಲಿ ಕೋರ್ಟ್ ಆದೇಶ ಬರುವ ವರೆಗೆ ಆದರೂ ವಾಕಿಂಗ್‌ಗೆ ಅವಕಾಶ ಕೊಡಬೇಕು ಅಂತ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಏಕಾಏಕಿ ಖಾಸಗಿ ವ್ಯಕ್ತಿಗೆ ಸೇರಿದ ಆಸ್ತಿ ಎಂದು ಬೋರ್ಡ್ ಅಳವಡಿಸಿದರೂ ಬಿಬಿಎಂಪಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನ ಸಂಪರ್ಕಿಸಿದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಬಿಬಿಎಂಪಿ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು ಮತ್ತೊಂದೆಡೆ ಪಾರ್ಕ್ ಬೇಕೆ ಬೇಕು ಎಂದು ಮಕ್ಕಳು ಕೂಡ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು ಈ ವಿಚಾರದಲ್ಲಿ ಭೂ ಮಾಫಿಯಾ ಜೊತೆ ಬಿಬಿಎಂಪಿ ಕೂಡ ಕೈಜೋಡಿಸಿದೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ. ಆದಷ್ಟು ಬೇಗ ಬಿಬಿಎಂಪಿ ಈ ಗೊಂದಲಕ್ಕೆ ತೆರೆ ಎಳೆಯಬೇಕಿದೆ.
ಬೆಂಗಳೂರಿಗೆ ಸೇರಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:29 pm, Sun, 20 August 23