ಚಿಕ್ಕೋಡಿ, ಆಗಸ್ಟ್ 17: ಬೆಳಗಾವಿ (Belagavi) ಜಿಲ್ಲೆಯಲ್ಲಿ ಸರ್ಕಾರಿ ಬಸ್ ಮೇಲೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಚಿತ್ರ ಅಂಟಿಸಿರುವುದ ಇದೀಗ ವಿವಾದಕ್ಕೆ ಕಾರಣವಾಗಿದೆ. ಚಿಕ್ಕೋಡಿ ಮತ್ತು ಯಡೂರ ಮಾರ್ಗದ ಮಧ್ಯೆ ಸಂಚರಿಸುವ ಸರ್ಕಾರಿ ಬಸ್ ಮೇಲೆ ಸಾವರ್ಕರ್ ಚಿತ್ರ ಅಂಟಿಸಿದ್ದಕ್ಕೆ ನಿಷೇಧಿತ ಪಿಎಫ್ಐ ಸಂಘಟನೆಯ ರಾಜಕೀಯ ಪಕ್ಷ ಎಸ್‌ಡಿಪಿಐ ಆಕ್ಷೇಪ ವ್ಯಕ್ತಪಡಿಸಿದೆ.
KA 23 F 904 ಸಂಖ್ಯೆಯ ಚಿಕ್ಕೋಡಿ – ಯಡೂರ ಮಾರ್ಗಮಧ್ಯ ಸಂಚರಿಸುವ ಬಸ್ ಮೇಲೆ ಸಾವರ್ಕರ್ ಚಿತ್ರ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಡಿಪೋಗೆ ಸೇರಿದ NWKRTC ಬಸ್ ಇದಾಗಿದೆ.
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ದನಿಗೂಡಿಸಿದ ಬಿಜೆಪಿ ಸಂಸದ ಜೊಲ್ಲೆ, ಬೆಳಗಾವಿ ವಿಭಜಿಸುತ್ತಾ ಕಾಂಗ್ರೆಸ್ ಸರ್ಕಾರ?
ಫೋಟೋ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಆಗಸ್ಟ್ 15 ರಂದು ಟ್ವೀಟ್ ಮಾಡಿದ ಎಸ್‌ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ, ಸರ್ಕಾರಿ ಬಸ್ಸುಗಳ ಮೇಲೆ ವಿವಾದಾತ್ಮಕ ವ್ಯಕ್ತಿಗಳ ಫೋಟೋ ಹಾಕುವುದು ಎಷ್ಟು ಸರಿ? ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ, ಬ್ರಿಟೀಷರೊಂದಿಗೆ ರಾಜಿ ಮಾಡಿಕೊಂಡ ಸ್ವಯಂ ಘೋಷಿತ ವೀರ ಸಾವರ್ಕರ್ ಈ ಚಿತ್ರ ಚಿಕ್ಕೋಡಿ ಬಸ್ಸುಗಳಲ್ಲಿ ಬಳಸುವುದು ಸ್ವಾತಂತ್ರ್ಯ ಸೇನಾನಿಗಳಿಗೆ ಮಾಡುವ ಅವಮಾನವಲ್ಲವೇ? ಎಂದು ಬರೆದುಕೊಂಡಿದ್ದಾರೆ.
ಮಾನ್ಯ @RLR_BTM ರವರೆ ಸರ್ಕಾರಿ ಬಸ್ಸುಗಳ ಮೇಲೆ ವಿವಾದಾತ್ಮಕ ವ್ಯಕ್ತಿಗಳ ಫೋಟೋ ಹಾಕುವುದು ಎಷ್ಟು ಸರಿ? ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ, ಬ್ರಿಟೀಷರೊಂದಿಗೆ ರಾಜಿ ಮಾಡಿಕೊಂಡ ಸ್ವಯಂ ಘೋಷಿತ “ವೀರ” ಸಾವರ್ಕರ್ ಚಿತ್ರ ಚಿಕ್ಕೋಡಿ @KSRTC_Journeys ಬಸ್ಸುಗಳಲ್ಲಿ ಬಳಸುವುದು ಸ್ವಾತಂತ್ರ್ಯ ಸೇನಾನಿಗಳಿಗೆ ಮಾಡುವ ಅವಮಾನವಲ್ಲವೇ? pic.twitter.com/Qh1hiLNC15
— afsarkodlipet (@afsarkodlipet) August 15, 2023
ಅಫ್ಸರ್ ಕೊಡ್ಲಿಪೇಟೆಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ, ಮುಂದಿನ ಪರಿಶೀಲನೆಗೆ NWKRTCಗೆ ವರ್ಗಾಯಿಸುತ್ತೇವೆ ಎಂದು ಹೇಳಿದೆ. ಅಫ್ಸರ್ ಕೊಡ್ಲಿಪೇಟೆ ಟ್ವೀಟ್ ಮಾಡಿದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಸ್ ಮೇಲೆ ಸಾವರ್ಕರ್ ಚಿತ್ರ ಅಂಟಿಸಿದ ಬಗ್ಗೆ ಮಾಹಿತಿ ಇಲ್ಲ ಎಂದು NWKRTC ಚಿಕ್ಕೋಡಿ ವಿಭಾಗದ ಅಧಿಕಾರಿಗಳು ಹೇಳುತ್ತಿದ್ದಾರೆ. ಸದ್ಯ ಆ ಬಸ್ನಲ್ಲಿ ಫೋಟೋ ತೆರವು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ