ಗೃಹಜ್ಯೋತಿ ಸಂತಸದಲ್ಲಿರುವ ಜನರಿಗೆ ಬಿಗ್ ಶಾಕ್, ಬೆಳಗಾವಿಯಲ್ಲಿ ಲೋಡ್ ಶೆಡ್ಡಿಂಗ್​ನಿಂದ ಅನ್ನದಾತ ಕಂಗಾಲು

| Updated By: Ayesha Banu

Updated on: Aug 20, 2023 | 1:35 PM

ಬೆಳಗಾವಿ ತಾಲೂಕಿನ ಕಡೋಲಿ ಎಂಬ ಗ್ರಾಮದಲ್ಲಿ ಸುಮಾರು 1200 ಎಕರೆ ಪ್ರದೇಶದಲ್ಲಿ ರೈತರು ವಿವಿಧ ಜಾತಿಯ ಭತ್ತವನ್ನು ಬೆಳೆಯುತ್ತಾರೆ.‌ ಆದರೆ ಕಳೆದ ಒಂದು ತಿಂಗಳಿನಿಂದ ಅವರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗ್ತಿಲ್ಲವಂತೆ. ಎಕರೆಗೆ 30 ಸಾವಿರ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದೇವೆ. ಆದರೆ ಲೋಡ್ ಶೆಡ್ಡಿಂಗ್ ಮಾಡಿ ಹೆಸ್ಕಾಂ ಅಧಿಕಾರಿಗಳು ಸರಿಯಾಗಿ ಕರೆಂಟ್ ಕೊಡ್ತಿಲ್ಲ ಅಂತ ರೈತರು ಆರೋಪಿಸಿದ್ದಾರೆ.

ಗೃಹಜ್ಯೋತಿ ಸಂತಸದಲ್ಲಿರುವ ಜನರಿಗೆ ಬಿಗ್ ಶಾಕ್, ಬೆಳಗಾವಿಯಲ್ಲಿ ಲೋಡ್ ಶೆಡ್ಡಿಂಗ್​ನಿಂದ ಅನ್ನದಾತ ಕಂಗಾಲು
ಕರೆಂಟ್‌ ಕಟ್‌ಗೆ ನೀರಿಲ್ಲದೆ ಒಣಗಿದ ಬೆಳೆ
Follow us on

ಬೆಳಗಾವಿ, ಆ.20: ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ(Gruha Jyothi Scheme) ಜಾರಿಗೆ ತಂದಿದ್ದರಿಂದ ಇಡೀ ರಾಜ್ಯದ ಜನ ಈಗ ಖುಷ್ ಆಗಿದ್ದಾರೆ. ಐನೂರು, ಸಾವಿರ ಬಿಲ್ ಬರ್ತಿದ್ದವರೆಲ್ಲ ಈಗ ಜಿರೋ ಬಿಲ್ ಕೈಲಿ ಹಿಡಿದು ಅಬ್ಬಾ ಅಂತ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಆ ಒಂದು ಸಮುದಾಯ ಮಾತ್ರ ಸರಿಯಾಗಿ ಕರೆಂಟ್ ಸಿಗದೆ ನೊಂದಿದೆ. ಸರಿಯಾಗಿ ವಿದ್ಯುತ್ ಸಿಗದೆ ನಾಡಿಗೆ ಅನ್ನ ನೀಡುವ ರೈತನ ಪರಿಸ್ಥಿತಿ ಹೇಗಾಗಿದೆ ಗೊತ್ತಾ?

ಬೆಳಗಾವಿ ತಾಲೂಕಿನ ಕಡೋಲಿ ಎಂಬ ಗ್ರಾಮದಲ್ಲಿ ಸುಮಾರು 1200 ಎಕರೆ ಪ್ರದೇಶದಲ್ಲಿ ರೈತರು ವಿವಿಧ ಜಾತಿಯ ಭತ್ತವನ್ನು ಬೆಳೆಯುತ್ತಾರೆ.‌ ಆದರೆ ಕಳೆದ ಒಂದು ತಿಂಗಳಿನಿಂದ ಅವರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗ್ತಿಲ್ಲವಂತೆ. ಎಕರೆಗೆ 30 ಸಾವಿರ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದೇವೆ. ಆದರೆ ಲೋಡ್ ಶೆಡ್ಡಿಂಗ್ ಮಾಡಿ ಹೆಸ್ಕಾಂ ಅಧಿಕಾರಿಗಳು ಸರಿಯಾಗಿ ಕರೆಂಟ್ ಕೊಡ್ತಿಲ್ಲ ಅಂತ ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಉತ್ತಮ ಮಳೆ ಬೆಳೆಗೆ ಪ್ರಾರ್ಥಿಸಿ 120 ಮಂದಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ

ಕಳೆದ ವರ್ಷಕ್ಕಿಂತ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣವೂ ಸಹ ಕಡಿಮೆಯಾಗಿದೆ. ಕಳೆದ ವರ್ಷ ಈ ಅವಧಿಗೆ 540 ಮಿಲಿ ಮೀಟರ್ ಮಳೆಯಾಗಿದ್ದರೆ ಈ ವರ್ಷ ಕೇವಲ 386 ಮಿಲಿ ಮೀಟರ್ ಮಳೆಯಾಗಿದೆ. ಪ್ರಮುಖವಾಗಿ ಭತ್ತದ ಬೆಳೆಗೆ ನೀರು ಅತೀ ಮುಖ್ಯವಾಗಿ ಬೇಕೆ ಬೇಕು. ಇತ್ತ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಒಂದು ಕಡೆಯಾದ್ರೆ, ಇರೋ ನೀರನ್ನು ಬಳಸಿ ಭತ್ತದ ಗದ್ದೆಗಳಿಗೆ ನೀರು ಬಿಡಬೇಕು ಅಂದ್ರೆ ಅದಕ್ಕೂ ಸಹ ಲೋಡ್ ಶೆಡ್ಡಿಂಗ್ ಮಾಡ್ತಿದ್ದಾರೆ. ಇದೆ ವಿಚಾರಕ್ಕೆ ಮೊನ್ನೆಯಷ್ಟೆ ರಾಜ್ಯಸಭಾ ಸದಸ್ಯ ಈರಣ್ಣ ಕಾಡಾಡಿ ಸುದ್ದಿಗೋಷ್ಠಿ ನಡೆಸಿ ಲೋಡ್ ಶೆಡ್ಡಿಂಗ್ ನಡೆಸಿದರೆ ಎಲ್ಲಾ ವಿದ್ಯುತ್ ವಿತರಣಾ ಕೇಂದ್ರಗಳ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತೆ ಅಂತ ರಾಜ್ಯ ಸರ್ಕಾರ ಹಾಗೂ ಇಂಧನ ಇಲಾಖೆಗೆ ಎಚ್ಚರಿಕೆ ನೀಡಿದ್ದರು.

ಒಟ್ಟಿನಲ್ಲಿ ಗೃಹಜ್ಯೋತಿ ಹೆಸರಿನಲ್ಲಿ ರಾಜ್ಯಕ್ಕೆಲ್ಲ ಫ್ರೀಯಾಗಿ ವಿದ್ಯುತ್ ನೀಡುತ್ತಿದ್ದರೆ ಮತ್ತೊಂದು ಕಡೆ ರೈತರ ಪಂಪ್ ಸೆಟ್​ಗಳಿಗೆ ಸರಿಯಾಗಿ ವಿದ್ಯುತ್ ನೀಡ್ತಿಲ್ಲ ಎನ್ನುವ ಆರೋಪ ರೈತಾಪಿ ವರ್ಗದಿಂದ ಕೇಳಿ ಬಂದಿದೆ. ಸರ್ಕಾರ ಹೊರಗಿನಿಂದ ವಿದ್ಯುತ್ ಖರೀದಿ ಮಾಡುತ್ತೋ ಅಥವಾ ರೈತರಿಗೆ ವಿದ್ಯುತ್ ನೀಡಲು ಮತ್ಯಾವುದಾದರು ಪ್ಲಾನ್ ಮಾಡತ್ತೋ ಕಾದು ನೋಡಬೇಕು. ಆದರೆ ದೇಶದ ಬೆನ್ನೆಲುಬು ರೈತನ ಹಿತ ಕಾಯುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ ಎನ್ನುವುದನ್ನು ಸರ್ಕಾರಗಳು ಮರೆಯದಿದ್ದರೆ ಒಳ್ಳೆಯದು.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ