Chorla Ghat: ಗೋವಾ ಆಡಳಿತದೊಂದಿಗೆ ಬೆಳಗಾವಿ ಡಿಸಿ ಸಂಧಾನ ಯಶಸ್ವಿ: ಸರಕು ವಾಹನಗಳ ಸಂಚಾರಕ್ಕೆ ಮತ್ತೆ ಅವಕಾಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 28, 2022 | 10:42 AM

ಈ ಮೊದಲು ಚೋರ್ಲಾ ಘಾಟ್​ನಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧವಿತ್ತು.

Chorla Ghat: ಗೋವಾ ಆಡಳಿತದೊಂದಿಗೆ ಬೆಳಗಾವಿ ಡಿಸಿ ಸಂಧಾನ ಯಶಸ್ವಿ: ಸರಕು ವಾಹನಗಳ ಸಂಚಾರಕ್ಕೆ ಮತ್ತೆ ಅವಕಾಶ
ಗೋವಾದ ಚೋರ್ಲಾ ಘಾಟ್ ಗಡಿಯಲ್ಲಿ ಸಾಲುಗಟ್ಟಿ ನಿಂತಿರುವ ಸರಕು ಸಾಗಣೆ ವಾಹನಗಳು
Follow us on

ಬೆಂಗಳೂರು: ಗೋವಾ ರಾಜ್ಯಕ್ಕೆ ರಾತ್ರಿ ಹೊತ್ತಿನಲ್ಲಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಕೊನೆಗೂ ಅವಕಾಶ ಸಿಕ್ಕಿದೆ. ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಗೋವಾ ಉತ್ತರ ಜಿಲ್ಲಾಧಿಕಾರಿ ಮಮು ಹಗೆ ನಡುವಣ ಸಂಧಾನ ಯಶಸ್ವಿಯಾಗಿದ್ದು, ಚೋರ್ಲಾ ಘಾಟ್​ (Chorla Ghat) ಮೂಲಕ ತೆರಳಲು ಲಾರಿಗಳಿಗೆ ಅವಕಾಶ ಸಿಕ್ಕಿದೆ. ಈ ಮೊದಲು ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧವಿತ್ತು. ಸಂಚಾರ ದಟ್ಟಣೆ, ರಸ್ತೆ ಹಾಳಾಗುವ ನೆಪವೊಡ್ಡಿ ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಗೋವಾದ ಕೇರಿ ಚೆಕ್‌ಪೋಸ್ಟ್ ಬಳಿಯ ಗಡಿ ಭಾಗದಲ್ಲಿ ಐದು ದಿನಗಳಿಂದ ನೂರಾರು ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಆದೇಶ ಪರಿಷ್ಕರಣೆ ಹಿನ್ನೆಲೆ ಗೂಡ್ಸ್​ ಲಾರಿಗಳ ಸಂಚಾರ ಮತ್ತೆ ಆರಂಭವಾಗಿದೆ.

ಸಂಚಾರ ದಟ್ಟಣೆ ಹಾಗೂ ರಸ್ತೆ ಹಾಳಾಗುವ ನೆಪವೊಡ್ಡಿ ಚೋರ್ಲಾ ಘಾಟ್ ಮೂಲಕ ತೆರಳುವ ಲಾರಿಗಳಿಗೆ ರಾತ್ರಿ ವೇಳೆ ಸಂಚಾರಕ್ಕೆ ಗೋವಾದ ಉತ್ತರ ಡಿಸಿ ಸೆಪ್ಟೆಂಬರ್ 21 ರಿಂದ ಮುಂದಿನ ವರ್ಷ ಮಾರ್ಚ್ 19ರವರೆಗೆ ನಿಷೇಧ ಹೇರಿದ್ದರು. ಈ ಆದೇಶದಿಂದ ಲಾರಿ ಮಾಲೀಕರು, ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಇದೇಗ ಆದೇಶವು ಪರಿಷ್ಕೃತಗೊಂಡ ಹಿನ್ನೆಲೆಯಲ್ಲಿ ಲಾರಿಗಳ ಸಂಚಾರ ಮತ್ತೆ ಆರಂಭವಾಗಿದೆ.

ಬೆಳಗಾವಿಯಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ರಾಮನಗರ-ಗೋವಾ ರಸ್ತೆಯು ಕಳೆದ ಮೂರು ವರ್ಷಗಳಿಂದ ಬಂದ್ ಆಗಿತ್ತು. ಹೀಗಾಗಿ ಚೋರ್ಲಾ ಘಾಟ್ ಮೂಲಕವೇ ಸರಕು ವಾಹನಗಳು ಸಂಚರಿಸುತ್ತಿದ್ದವು. ಕೇರಿ-ಬೆಳಗಾವಿ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದೆ, ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಉತ್ತರ ಗೋವಾದ ಟ್ರಾಫಿಕ್ ವಿಭಾಗದ ಎಸ್​ಪಿ ಮನವಿ ಮೇರೆ ಡಿಸಿ ಮಮು ಹಗೆ ಸಂಚಾರ ನಿಷೇಧದ ಆದೇಶ ಹೊರಡಿಸಿದ್ದರು.

ಈ ಆದೇಶವನ್ನು ಮೊದಲಿನಿಂದಲೂ ಲಾರಿ ಮಾಲೀಕರು ವಿರೋಧಿಸುತ್ತಿದ್ದರು. ಹಲವು ಬಾರಿ ಮನವಿಯನ್ನೂ ಸಲ್ಲಿಸಿದ್ದರು. ರಾಮನಗರ-ಗೋವಾ ರಸ್ತೆ ದುರಸ್ತಿಯಾಗುವವರೆಗೂ ಚೋರ್ಲಾ ಘಾಟ್ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕೊಡಬೇಕು ಎಂದು ಕೋರಿದ್ದರು. ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಿರುವ ಉತ್ಪನ್ನಗಳು, ಆಹಾರ ಸಾಮಗ್ರಿಗಳನ್ನು ಹೊತ್ತ ಲಾರಿಗಳನ್ನು ತಡೆಯಬಾರದು ಎಂದು ವಿನಂತಿಸಿದ್ದರು. ಇದೀಗ ಬೆಳಗಾವಿ ಜಿಲ್ಲಾಧಿಕಾರಿ ತಮ್ಮ ಗೋವಾದ ಸಹವರ್ತಿಯೊಂದಿಗೆ ಮಾತನಾಡುವ ಮೂಲಕ ಸಮಸ್ಯೆ ಪರಿಹರಿಸಿದ್ದಾರೆ.

Published On - 10:42 am, Wed, 28 September 22