ಬೆಂಗಳೂರು, ಆಗಸ್ಟ್ 23: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bangalore Mysore Expressway) ದ್ವಿಚಕ್ರ ವಾಹನ (Two Wheelers) ಸಂಚಾರಕ್ಕೆ ನಿರ್ಬಂಧವಿದ್ದರೂ ಹಲವೆಡೆ ಹೆದ್ದಾರಿ ತಡೆ ಬೇಲಿಗಳನ್ನು ಸರಿಸಿ ಸವಾರರು ನುಗ್ಗುವ ಪ್ರಕರಣಗಳು ಕಂಡುಬಂದಿವೆ. ಅಪಘಾತಗಳ ತಡೆಗೆ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಇತರ ಕೆಲವು ಸಣ್ಣ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಆದಾಗ್ಯೂ ಇದೀಗ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಸಂಚರಿಸುವವರಿಗೆ ಹೊಸ ಸಮಸ್ಯೆ ತಲೆದೋರಿದೆ.
ಕೆಲವು ದ್ವಿಚಕ್ರ ವಾಹನ ಸವಾರರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಲು ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ. ಸೇವಾ ರಸ್ತೆಗಳನ್ನು ಬಳಸಿಕೊಳ್ಳುವ ಮೂಲಕ ಅನಧಿಕೃತವಾಗಿ ಎಕ್ಸ್‌ಪ್ರೆಸ್ ವೇ ಪ್ರವೇಶಿಸುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇಗೆ ಹಾಕಿರುವ ತಂತಿ ಬೇಲಿಯ ಕಳವಿನ ಸಮಸ್ಯೆ ಒಂದೆಡೆಯಾದರೆ, ತಂತಿ ಬೇಲಿ ಕಳವಾದ ಜಾಗದಲ್ಲಿರುವ ಅಂತರದ ಲಾಭವನ್ನು ಪಡೆದುಕೊಂಡು ದ್ವಿಚಕ್ರ ವಾಹನ ಸವಾರರು ಒಳನುಸುಳುತ್ತಾರೆ.
ವಿವಿಧ ಸ್ಥಳಗಳಲ್ಲಿ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಇರುವ ಬೇಲಿಗಳ ತಂತಿಯ ಕಳ್ಳತನವು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ದುಷ್ಕರ್ಮಿಗಳು ಈ ತಂತಿ ಬೇಲಿಗಳನ್ನು ಕತ್ತರಿಸಿ ಲೋಹವನ್ನು ರದ್ದಿಗೆ ಮಾರಾಟ ಮಾಡುತ್ತಾರೆ. ಅನೇಕ ಸ್ಥಳಗಳಲ್ಲಿ ಈ ಸಮಸ್ಯೆಯಿಂದಾಗಿ ಎಕ್ಸ್‌ಪ್ರೆಸ್‌ವೇಗೆ ಪ್ರವೇಶಿಸಲು ದ್ವಿಚಕ್ರ ವಾಹನಗಳಿಗೆ ಅಮನುಕೂಲ ಮಾಡಿಕೊಟ್ಟಂತಾಗುತ್ತಿದೆ.
ಇತ್ತೀಚಿನ ಘಟನೆಯೊಂದರಲ್ಲಿ, ದ್ವಿಚಕ್ರ ವಾಹನ ಸವಾರರು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತ್ತಿರುವುದನ್ನು ಸಾರ್ವಜನಿಕರೊಬ್ಬರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ವೀಡಿಯೊ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರ ಗಮನ ಸೆಳೆದಿದ್ದು, ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
Action will be taken against the violator https://t.co/HjfEmQBhoA
— alok kumar (@alokkumar6994) August 21, 2023
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ; ದ್ವಿಚಕ್ರ, ತ್ರಿಚಕ್ರ ಸೇರಿ ಕೆಲವು ವಾಹನಗಳಿಗೆ ನಿಷೇಧ, ಇನ್ನೂ ಕೆಲವು ಕಠಿಣ ನಿಯಮ
ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಗಸ್ಟ್ 1ರಿಂದ ಬೈಕ್, ಆಟೋ, ಟ್ರಾಕ್ಟರ್ ಹಾಗೂ ಇತರ ಸಣ್ಣ ವಾಹನಗಳಿಗೆ ಎಕ್ಸ್‌ಪ್ರೆಸ್ ವೇ ಬಳಕೆ ನಿಷೇಧ ಹೇರಿ ಅಧಿಸೂಚನೆ ಹೊರಡಿಸಿತ್ತು. ಮೋಟರ್ ಸೈಕಲ್ (ಸ್ಕೂಟರ್ ಮತ್ತು ಇತರೆ ದ್ವಿಚಕ್ರವಾಹನ), ತ್ರಿಚಕ್ರವಾಹನ (ಆಟೋ ರಿಕ್ಷಾ ಸೇರಿದಂತೆ), ಮೋಟಾರು ರಹಿತ ವಾಹನಗಳು, ಟ್ರಾಕ್ಟರ್‌ಗಳು, ಮಲ್ಟಿ ಆಕ್ಸೇಲ್ ಹೈಡ್ರಾಲಿಕ್ ವಾಹನಗಳು ಹಾಗೂ ಕ್ವಾಡ್ರಿ ಚಕ್ರ ವಾಹನಗಳಿಗೆ ಎಕ್ಸ್ಪ್ರೆಸ್ವೇಯಲ್ಲಿ ನಿಷೇಧ ಹೇರಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Wed, 23 August 23