ಬಳ್ಳಾರಿ: ಒಂದೇ ಶಾಲೆಯಲ್ಲಿ ಒಂದು ದಶಕಗಳಕಾಲ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡ ಶಿಕ್ಷಕಿಗೆ (Teacher) ಗ್ರಾಮಸ್ಥರು ಪೂರ್ಣಕುಂಭದೊಂದಿಗೆ, ಬೆಳ್ಳಿ ರಥದಲ್ಲಿ ಕೂಡಿಸಿ ಮೆರವಣಿಗೆ ಮಾಡಿ ಬೀಳ್ಕೊಟ್ಟಿರುವ ಘಟನೆ ಜಿಲ್ಲೆಯ ಸಿರುಗುಪ್ಪ (Siruguppa) ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ನಡೆದಿದೆ. ಶಿಕ್ಷಕಿ ಜ್ಯೋತಿ ಕುರುವಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದಾರೆ. ಇದೀಗ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹಲಸಿನಮರ ದೊಡ್ಡಿ ಗ್ರಾಮಕ್ಕೆ ವರ್ಗವಣೆಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ. ಬೆಳ್ಳಿ ರಥದಲ್ಲಿ ಕೂಡಿಸಿ, ಪೂರ್ಣಕುಂಭದೊಂದಿಗೆ ವಾದ್ಯಗಳನ್ನು ಬಾರಿಸುತ್ತಾ ಊರ ತುಂಬ ಮೆರವಣಿಗೆ ಮಾಡಿದ್ದಾರೆ. ನಂತರ ಗ್ರಾಮಸ್ಥರು ಸಾಮೂಹಿಕ ಹೋಳಿಗೆ ಊಟ ಹಾಕಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ಗೆ ಭೂಮಿ ಗುರುತಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಈ ವೇಳೆ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಲೆ ಶಿಕ್ಷಕಿಯ ಆಶೀರ್ವಾದ ಪಡೆದರು. ಶಿಕ್ಷಕಿಯ ಕಣ್ಣುಗಳು ಒದ್ದೆಯಾದವು. ಈ ಸನ್ನಿವೇಶ ನೆರೆದಿದ್ದವರ ಕಣ್ಣೀರು ತರಿಸಿತ್ತು. ಶಾಲಾವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕಿಗೆ ಗ್ರಾಮಸ್ಥರು, ವಿದ್ಯಾರ್ಥಿಗಳು, ಮುಖಂಡರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಅವರ ಸೇವೆ ಸ್ಮರಿಸಿದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಕ ವೃತ್ತಿ ಎಂದರೆ ಕೇವಲ ಸರಕಾರಿ ನೌಕರಿ ಎನ್ನುವರ ನಡುವೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಹೃದಯ ಮೆಚ್ಚುವಂತೆ ಶಿಕ್ಷಕಿ ಜ್ಯೋತಿ ಕಾರ್ಯನಿರ್ವಹಿಸಿದ್ದು, ಎಲ್ಲರಿಗೂ ಮಾದರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ