ಬಳ್ಳಾರಿ, ಜುಲೈ 30: ಸದಾ ಸುದ್ದಿಯಲ್ಲಿರುವ ವಿಜಯನಗರ ಶ್ರೀಕೃಷ್ಣ ದೇವರಾಯ (Vijayanagara Sree Krishna Devaraya University) ಇದೀಗ ಮತ್ತೊಂದು ಗೋಲಮಾಲ್ ಮೂಲಕ ಸುದ್ದಿಯಾಗುತ್ತಿದೆ. ಈ ವಿಶ್ವವಿದ್ಯಾಲಯದಲ್ಲಿ ನಿತ್ಯ ನೂರಾರು ಜನರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಪಾವತಿಯಾಗುವ ಸಂಬಳದಲ್ಲಿ ಪ್ರತಿ ತಿಂಗಳು ಕಾರಣವಿಲ್ಲದೇ 2,800 ರಿಂದ 3 ಸಾವಿರ ರೂಪಾಯಿ ಕಡಿತ ಮಾಡಲಾಗುತ್ತಿದೆ.
ಈ ರೀತಿ ವೇತನದಲ್ಲಿ ಕಡಿತ ಮಾಡುತ್ತಿರುವುದು ಇದು ಮೊದಲೇನಲ್ಲ. ಕಳೆದ 28 ತಿಂಗಳಿಂದ ವೇತನಕ್ಕೆ ಕತ್ತರಿ ಬಿಳುತ್ತಿದೆ. ಧಾರವಾಡದ ‘ಇಂಡಸ್ ಸೆಕ್ಯುರಿಟಿ ಸರ್ವಿಸಸ್ ಮತ್ತು ಡಿಟೆಕ್ಟಿವ್ ಏಜೆನ್ಸಿ ವಿಶ್ವವಿದ್ಯಾಲಯದೊಂದಿಗೆ ಮಾಡಿಕೊಂಡ ಒಪ್ಪಂದದ ವೇತನದ ಪ್ರಕಾರ ಸಂಬಳ ಪಾವತಿಸಿಲ್ಲ. ಹೀಗಾಗಿ ಹೊರಗುತ್ತಿಗೆ ನೌಕರರು ನಮ್ಮ ಸಂಬಳದಲ್ಲಿ ಕಡಿತ ಮಾಡಿದ ಹಣ ನಮಗೆ ಕೊಡಿ ಅಂತಾ ಬೀದಿಗೀಳಿದಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ನೀರಿನ ಕೊರೆತೆ, ಭತ್ತ ನಾಟಿ ಬದಲು ಕೂರಿಗೆ ಬಿತ್ತನೆ ಮಾಡುವಂತೆ ರೈತರಿಗೆ ಸಲಹೆ ನೀಡಿದ ಕೃಷಿ ಇಲಾಖೆ
137 ಹೊರ ಗುತ್ತಿಗೆ ನೌಕರರ ಸಂಬಳದಲ್ಲಿ ಕಾರಣವಿಲ್ಲದೇ ಕಡಿತವಾಗುತ್ತಿರುವ ವಿಚಾರ ಸಿಂಡಿಕೇಟ್ ಸಭೆಯ ಗಮನಕ್ಕೂ ಈಗಾಗಲೇ ಬಂದಾಗಿದೆ. ಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ವಿಚಾರಣೆಗೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸತ್ಯಶೋಧನಾ ಸಮಿತಿ ರಚಿಸಿ ವರದಿ ಸಹ ನೀಡಿದೆ. ವರದಿ ಕೊಟ್ಟು 9 ತಿಂಗಳಾದರೂ ಯಾರ ಮೇಲೂ ಕ್ರಮ ಕೈಗೊಳ್ಳದೆ ವಿ.ವಿ. ಹಿರಿಯ ಅಧಿಕಾರಿಗಳು ತಟಸ್ಥವಾಗಿದ್ದಾರೆ. ಹೀಗಾಗಿ ಹೊರಗುತ್ತಿಗೆ ನೌಕರರ ಸಂಬಳದಿಂದ ಕಡಿತಗೊಳಿಸಿರುವ ಸುಮಾರು ಒಂದು ಕೋಟಿಗೂ ಅಧಿಕ ಹಣವನ್ನು ನಮಗೆ ಪಾವತಿ ಮಾಡಿ ಅಂತಾ ಹೊರಗುತ್ತಿಗೆ ನೌಕರರು ಇದೀಗ ಪಟ್ಟು ಹಿಡಿದಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಪಿ ಅಲಗೂರ ಹಾಗೂ ಕುಲಸಚಿವ ಎಸ್ಸಿ ಪಾಟೀಲ್ ಅವರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ವಿಶ್ವವಿದ್ಯಾಲಯ ನೌಕರರ ವೇತನದ ಹಣವನ್ನ ಕುಲಪತಿಗಳು ಲಪಟಾಯಿಸಿದ್ದಾರೆ ಅನ್ನೋ ಆರೋಪ ಸಹ ಇದೆ. ಹೀಗಾಗಿ ನಿವೃತ್ತಿ ಅಂಚಿನಲ್ಲಿರುವ ಕುಲಪತಿಗಳಿಂದ ನಮಗೆ ನಮ್ಮ ಸಂಬಳದ ಹಣವನ್ನ ಕೊಡಿಸಿ ಅಂತಾ ಹೊರಗುತ್ತಿಗೆ ನೌಕರರು ಬೀದಿಗೀಳಿದಿದ್ದಾರೆ. ಆದರೆ ಕುಲಪತಿಗಳು ತಪ್ಪು ಮಾಡಿದ್ದಾರೋ ಅಥವಾ ತಪ್ಪು ಮಾಡಿದವರ ರಕ್ಷಣೆ ಮಾಡುತ್ತಿದ್ದಾರೋ ಅನ್ನೋ ಅನುಮಾನ ಇದೀಗ ಮೂಡಿದೆ. ಹೀಗಾಗಿ ಹೊರಗುತ್ತಿಗೆ ನೌಕರರಿಗೆ ಸೇರಬೇಕಾದ ಹಣದ ಬಗ್ಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಕಡಿತಗೊಂಡ ಹಣ ಎನಾಯಿತು? ಯಾರು ಕತ್ತರಿ ಹಾಕಿ ಜೇಬಿಗೆ ಇಳಿಸಿಕೊಂಡಿದ್ದಾರೆ? ಅನ್ನೋದು ಪೊಲೀಸರು ತನಿಖೆಯಿಂದ ಬಯಲಿಗೆ ಬರಬೇಕಾಗಿದೆ
ರಾಜ್ಯದ ಮತ್ತಷ್ಟು ಸುದ್ದಿಗಳಣ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Sun, 30 July 23