ಬಳ್ಳಾರಿ: ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ತೃತೀಯಲಿಂಗಿ

|

Updated on: Aug 08, 2023 | 10:53 AM

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೃತೀಯಲಿಂಗಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಳ್ಳಾರಿ: ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ತೃತೀಯಲಿಂಗಿ
ಸಿ.ಆಂಜಿನಮ್ಮ
Follow us on

ಬಳ್ಳಾರಿ, ಆ.8: ಛಲವೊಂದು ಇದ್ದರೆ ಯಾರು ಏನನ್ನು ಬೇಕಾದರು ಗೆಲ್ಲಬಹುದು ಎಂಬುದಕ್ಕೆ ಈ ಮಂಗಳಾಮುಖಿ ಉತ್ತಮ ಉದಾಹರಣೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ (Gram Panchayat President) ತೃತೀಯಲಿಂಗಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಸಿ.ಆಂಜಿನಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಗ್ರಾಮಸ್ಥರು ಕಣಕ್ಕಿಳಿಸಿದ್ದರು. ಪರಿಶಿಷ್ಟ ವರ್ಗದ ಅಭ್ಯರ್ಥಿಗೆ ಮೀಸಲಾದ ಸ್ಥಾನದಲ್ಲಿ ಆಂಜಿನಮ್ಮ ಪ್ರತಿನಿಧಿಸಿದ್ದಾರೆ. ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯ 19 ಸದಸ್ಯರು ಸರ್ವಾನುಮತದಿಂದ ನಿರ್ಣಯಿಸಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಒಟ್ಟು ಮೂವರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದರು, ಆದರೆ ಹಿರಿಯರು ಮತ್ತು ಗ್ರಾಮಸ್ಥರ ಒತ್ತಾಯಕ್ಕೆ ಹಾಗೂ ಅವರಿಗೂ ಒಂದು ಅವಕಾಶ ನೀಡಬೇಕು ಎಂದು ನಿರ್ಧರಿಸಿ, ಸಿ.ಆಂಜಿನಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಏಳು ಗ್ರಾಮಗಳು ಒಳಗೊಂಡಿದೆ. ಆಂಜಿನಮ್ಮ ಅವರು ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ಮೂಲಕ ತಮ್ಮ ಕೆಲಸದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿರುವ ಇವರು ತಮ್ಮ ಗ್ರಾಮದ ಅಭಿವೃದ್ಧಿಗೆ ಖಂಡಿತ ಶ್ರಮಿಸುತ್ತಾರೆ ಎಂಬ ನಂಬಿಕೆಯಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಸದಸ್ಯೆ ಅಪಹರಣ ಆರೋಪ

ಡೆಕ್ಕನ್ ಹೆರಾಲ್ಡ್ (ಡಿಎಚ್‌ಡಿ) ಜತೆಗೆ ಮಾತನಾಡಿ ಆಂಜಿನಮ್ಮ ಅವರು ತನ್ನ ಗೆಲುವಿನ ಶ್ರೇಯಸು ಗ್ರಾಮಸ್ಥರಿಗೆ ಸಲ್ಲುತ್ತದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿರಲಿಲ್ಲ. ಆದರೆ ಗ್ರಾಮದ ಹಿರಿಯರು ನನ್ನನ್ನು ಸ್ಪರ್ಧಿಸುವಂತೆ ಕೇಳಿದರು, ಇದೀಗ ನನಗೆ ದೊಡ್ಡ ಪಟ್ಟವನ್ನೇ ನೀಡಿದ್ದಾರೆ. ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಕಾಮಗಾರಿಗಳನ್ನು ತರಲು ಶ್ರಮಿಸುತ್ತೇನೆ. ನಿವಾಸಿಗಳಿಗೆ ಉತ್ತಮ ಕುಡಿಯುವ ನೀರು, ಬೀದಿ ದೀಪಗಳು, ರಸ್ತೆಗಳು ಮತ್ತು ಇತರ ಮೂಲ ಸೌಕರ್ಯಗಳ ಅವಶ್ಯಕತೆ ಇದೆ. ಖಂಡಿತ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಗ್ರಾಮ ಪಂಚಾಯಿತಿಗೆ ಹಣ ತರಲು ಅಧಿಕಾರಿಗಳು ಮತ್ತು ಶಾಸಕರೊಂದಿಗೆ ಮಾತುಕತೆ ನಡೆಸುವೆ, ಜತೆಗೆ ನಮ್ಮಂತಹ ಅನೇಕ ಮಂಗಳಾಮುಖಿ ಮಹಿಳೆಯರನ್ನು ಗ್ರಾಮಮಟ್ಟದಲ್ಲಿ ಸಬಲೀಕರಣ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.