ಬಳ್ಳಾರಿ, ಜುಲೈ 28: ತುಂಗಭದ್ರಾ ಜಲಾಶಯದಲ್ಲಿ ಈ ಭಾರಿ ನೀರಿನ ಕೊರತೆಯಿಂದ ಕಾಲುವೆಗಳಿಗೆ ಸಕಾಲಕ್ಕೆ ನೀರು ಹರಿಸುವುದು ವಿಳಂಬವಾಗುವುದರಿಂದ ಭತ್ತ (Paddy) ನಾಟಿ ಬದಲು ಭತ್ತದ ಕೂರಿಗೆ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರಿಗೆ ವಿಜ್ಞಾನಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಸಹಾಯಕ ಕೃಷಿ ನಿರ್ದೇಶಕ ದಯಾನಂದ, ಈ ವರ್ಷ ಸಮರ್ಪಕ ಮಳೆ ಬೀಳದ ಕಾರಣ ರೈತರು ಭತ್ತದ ಸಸಿ ಮಾಡಿ, ನಾಟಿ ಪದ್ಧತಿ ಕೈಬಿಟ್ಟು ಭತ್ತದ ಕೂರಿಗೆ ಬಿತ್ತನೆ ಆಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು. ಕೂರಿಗೆ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಭತ್ತದ ಸಸಿ ಆರೈಕೆ, ಸಸಿ ಮಡಿ ಸಿದ್ಧತೆ ಮಾಡುವ ಖರ್ಚನ್ನು ಉಳಿಸಬಹುದು. ಇಳುವರಿ ಪ್ರಮಾಣವೂ ಹೆಚ್ಚು ಪಡೆಯಬಹುದು ಎಂದು ತಿಳಿಸಿದ್ದಾರೆ.
ಕೂರಿಗೆ ಬಿತ್ತನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ತಿಳಿಸಿದ್ದಾರೆ.
2023-24ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ. ಭತ್ತ, ಮುಸುಕಿನ ಜೋಳ, ಜೋಳ, ರಾಗಿ, ಸಜ್ಜೆ, ನವಣೆ, ತೊಗರಿ, ಸೂರ್ಯಕಾಂತಿ, ನೆಲಗಡಲೆ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮುಂತಾದ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ: KRS ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷ, ನೀರಿನಲ್ಲಿ ಮರೆಯಾಗುತ್ತಿರುವ ದೃಶ್ಯ ಇಲ್ಲಿದೆ
ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಬೆಳೆ ವಿಮೆ ನೊಂದಣಿಗಾಗಿ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ತಮ್ಮ ವ್ಯವಹಾರದ ಬ್ಯಾಂಕ್ಗಳಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಪ್ಯೂಚರ್ ಜನರಲ್ ವಿಮಾ ಸಂಸ್ಥೆಯ ತಾಲೂಕು ಪ್ರತಿನಿಧಿ (ಮೊ.9743442928) ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಕೃಷಿಯಲ್ಲಿ ರೈತರನ್ನು ಪೋತ್ಸಾಹಿಸಲು ಹಾಗೂ ಕೃಷಿಯತ್ತಾ ಆಕರ್ಷಿಸಲು ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಮತ್ತು ರೈತ ಮಹಿಳೆಯರಿಂದ ಅರ್ಜಿ ಅಹ್ವಾನಿಸಲಾಗಿದೆ. 2023-24ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಾದ ನೀರಾವರಿ ಬೆಳೆ ಭತ್ತ ಮತ್ತು ಮಳೆಯಾಶ್ರಿತ ಬೆಳೆಗಳಾದ ರಾಗಿ, ಮುಂಗಾರು ಜೋಳ, ಶೇಂಗಾ, ತೊಗರಿ ಪೂರ್ಣ ಬೆಳೆ, ಹಿಂಗಾರಿ ಜೋಳ, ಸೂರ್ಯಕಾಂತಿ, ಕಡಲೆ ಬೆಳೆಗಳಿಗೆ ಕೃಷಿ ಪ್ರಶಸ್ತಿ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಪಂಡಿತಾ ಪ್ರಶಸ್ತಿ ಯೋಜನೆಯಡಿ ಕೃಷಿ ಕ್ಷೇತ್ರದಲ್ಲಿ ವಿನೂತನ ಅಥವಾ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿರುವ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಮುಂಗಾರು ಹಂಗಾಮಿನ ಬೆಳೆಗಳಿಗೆ ಆಗಸ್ಟ್ 31 ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ನವೆಂಬರ್ 30 ಅಂತಿಮ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ