ಬಾಗಲಕೋಟೆ, ಆಗಸ್ಟ್ 17: ಇತ್ತೀಚೆಗೆ ಮಗಿದ ರಾಜ್ಯ ಅಸೆಂಬ್ಲಿ ಚುನಾವಣಾ (Karnataka Assembly Election 2023) ಪ್ರಚಾರ ಭಾಷಣದ ವೇಳೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ದ ಪೋಸ್ಟ್ ಹಾಕಿದ್ದ ಹಿನ್ನೆಲೆ ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಮಾನಹಾನಿ ಕೇಸ್ (defamation case) ಹಾಕಲು ಮುಂದಾಗಿದ್ದಾರೆ. ಭಾಷಣ ಮಾಡಿದ ಮತ್ತು ಫೇಸ್ ಬುಕ್ ಪೋಸ್ಟ್ ಹಾಕಿದ್ದ ಯಲ್ಲಪ್ಪ ಹೆಗಡೆಗೆ ತಮ್ಮ ವಕೀಲರ ಮೂಲಕ ನಿರಾಣಿ ಮಾನಹಾನಿ ಬಗ್ಗೆ ಲೀಗಲ್ ನೊಟೀಸ್ ಜಾರಿಗೊಳಿಸಿದ್ದಾರೆ. ಅಂದಹಾಗೆ ಯಲ್ಲಪ್ಪ ಹೆಗಡೆ ಅವರು ರೈತ ಸಂಘದ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅದೇ ಕ್ಷೇತ್ರದಿಂದ ನಿರಾಣಿ ಬಿಜೆಪಿ ಅಭ್ಯರ್ಥಿ ಆಗಿದ್ದರು. 2023ರ ಫೆಬ್ರವರಿ, ಮಾರ್ಚ್, ಮೇ ತಿಂಗಳಲ್ಲಿ ಮಾಡಿದ್ದ ಪೋಸ್ಟ್ ಹಾಗೂ ಭಾಷಣಗಳ ವಿರುದ್ಧ ಮಾಜಿ ಸಚಿವ ಮುರುಗೇಶ್ ನಿರಾಣಿ ಇದೀಗ ತಿರುಗಿಬಿದ್ದಿದ್ದಾರೆ.
ಮಾಜಿ ಸಚಿವ ಮುರುಗೇಶ್ ನಿರಾಣಿ ಅಲಾರಾಂ, ಸಕ್ಕರೆ, ಸೀರೆ, ಆರತಿ ಸೆಟ್ ಹಂಚಿದ್ದಾರೆ. ಸಕ್ಕರೆ ಕಾರ್ಖಾನೆ ಟ್ಯಾಕ್ಸ್ ಕಟ್ಟಿಲ್ಲ ಎಂದೆಲ್ಲಾ ಉಲ್ಲೇಖಿಸಿ, ಭಾಷಣ ಹಾಗೂ ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ ಎಂಬುದು ಆರೋಪ. ನಿನ್ನೆ ಅಗಸ್ಟ್ ೧೬ ರಂದು ಯಲ್ಲಪ್ಪ ಹೆಗಡೆಗೆ ವಕೀಲ ಎಮ್ ಎಸ್ ಟಂಕಸಾಲಿ ಮೂಲಕ ಲೀಗಲ್ ನೊಟೀಸ್ ತಲುಪಿಸಲಾಗಿದೆ.
ಎಮ್ ಎಸ್ ಟಂಕಸಾಲಿ ಮುಧೋಳ ತಾಲ್ಲೂಕಾ ನ್ಯಾಯಾಲಯದ ವಕೀಲ. 5 ಕೋಟಿ ರೂಪಾಯಿ ಪರಿಹಾರ ಕೇಳಿ ಮಾನಹಾನಿ ನೊಟೀಸ್ ಜಾರಿಗೊಳಿಸಲಾಗಿದೆ. ಚುನಾವಣೆ ವೇಳೆ ತಮ್ಮ ಭಾಷಣದಿಂದ ಮತ್ತು ಫೇಸ್ಬುಕ್ ಪೋಸ್ಟ್ ನಿಂದ ನಮ್ಮ ಕಕ್ಷಿದಾರ ಮುರುಗೇಶ್ ನಿರಾಣಿ ಅವರಿಗೆ ದೈಹಿಕ ಹಾಗೂ ಮಾನಸಿಕ ಆಘಾತ ಆಗಿದೆ. ಆದ್ದರಿಂದ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮೂಲಕ ಕಕ್ಷಿದಾರರಾದ ಮುರುಗೇಶ್ ನಿರಾಣಿ ಅವರ ಕ್ಷಮೆ ಕೇಳಬೇಕು. ಜೊತೆಗೆ ಮಾನಹಾನಿ ಪರಿಹಾರಾರ್ಥವಾಗಿ ಐದು ಕೋಟಿ ರೂಪಾಯಿ ನೀಡಬೇಕು. ಒಂದು ವಾರದೊಳಗೆ ಈ ಷರತ್ತು ಈಡೇರಿಸದಿದ್ದರೆ, ಕೋರ್ಟ್ ನಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಕೇಸ್ ದಾಖಲು ಮಾಡೋದಾಗಿ ವಕೀಲ ಟಂಕಸಾಲಿ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:52 am, Thu, 17 August 23