ಬಾಗಲಕೋಟೆ, ಆಗಸ್ಟ್ 19: ಅದು ಬ್ರಿಟೀಷರು ಕಟ್ಟಿಸಿದ ಐತಿಹಾಸಿಕ ಕೆರೆ (historic lake) . ಆ ಜಿಲ್ಲೆಯಲ್ಲೇ ವಿಸ್ತೀರ್ಣದ ಬೃಹತ್ ಕೆರೆ. ಆದರೆ ಎರಡು ದಶಕಗಳ ಕಾಲ ಆದರೂ ಒಂದು ಸಾರಿಯೂ ಸಂಪೂರ್ಣವಾಗಿ ತುಂಬಿಲ್ಲ. ಕೆರೆ ತುಂಬಿಸಲು 12 ಕೋಟಿ ರೂ. ಪೈಪ್ಲೈನ್ ಮಾಡಿದರೂ ತುಂಬಿಸಲು ಆಗಲಿಲ್ಲ. ಈಗ ಮತ್ತೆ ಕೆರೆ ತುಂಬಿಸುವ ಕಾರ್ಯ ಶುರುವಾಗಿದೆ. ಜೊತೆಗೆ ಐದು ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣವಾಗುತ್ತಿದೆ. ಈಗಲಾದರೂ ಕೆರೆ ತುಂಬುತ್ತಾ? ಉದ್ಯಾನವನ ಜನರನ್ನು ಸೆಳೆಯುತ್ತಾ ಎಂಬ ಪ್ರಶ್ನೆ ಶುರುವಾಗಿದೆ.
ಬಾಗಲಕೋಟೆ ನಗರದ ಪಕ್ಕದಲ್ಲೇ ಇರುವ ಮುಚಖಂಡಿ ಕೆರೆ 1882 ರಲ್ಲಿ ನಿರ್ಮಾಣವಾದ 750 ಎಕರೆ ವಿಸ್ತೀರ್ಣದ ಕೆರೆ. ಆದರೆ ಈ ಕೆರೆ ಬಹುಕೋಟಿ ಯೋಜನೆಗಳ ಮೂಲಕ ಹಣದ ಬ್ಯಾಂಕ್ ಆಯಿತೆ ಹೊರತು ಇದರ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಮೇಲಿಂದ ಮೇಲೆ ಕೆರೆ ತುಂಬಿಸಲು ಕೋಟಿ ಕೋಟಿ ಪ್ರಾಜೆಕ್ಟ್ ಆಗಿದ್ದೇ ಆಯ್ತು, ನೀರು ಭರ್ತಿ ಆಗಲಿಲ್ಲ. 2015 ರ ಅವಧಿಯಲ್ಲಿ ಹೆಚ್ ವೈ ಮೇಟಿ ಶಾಸಕರಾಗಿದ್ದಾಗ 12 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ನದಿಯಿಂದ ಪೈಪ್ಲೈನ್ ಅಳವಡಿಸಿ ನೀರು ಹರಿಸಲಾಗಿತ್ತು. ಆದರೆ ಕೆರೆ ಮಾತ್ರ ತುಂಬಲಿಲ್ಲ.
ಬಳಿಕ 12 ಕೋಟಿ ರೂ. ಪೈಪ್ ಲೈನ್ ಅವೈಜ್ಞಾನಿಕ ಅಂತ ಬಿಜೆಪಿ ಸರಕಾರ 36 ಕೋಟಿ ರೂ. ಪ್ರಾಜೆಕ್ಟ್ ನಾಡಿ ಟೆಂಡರ್ ಕರೆಯಲಾಯಿತು. ಸರಕಾರ ಬಿದ್ದ ಕಾರಣ ಅದು ಸ್ಥಗಿತವಾಗಿದೆ. ಆದರೆ ಈಗ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದಿದ್ದು 36 ಕೋಟಿ ರೂ. ಯೋಜನೆಗೆ ಚಾಲನೆ ಸಿಗುತ್ತಾ ನೋಡಬೇಕಿದೆ. ಆದರೆ 12 ಕೋಟಿ ರೂ. ಪೈಪ್ ಲೈನ್ ಮೂಲಕ ಪುನಃ ಈಗ ನೀರು ಹರಿಸುತ್ತಿದ್ದು, ಈಗಲಾದರೂ ಕೆರೆ ತುಂಬುತ್ತಾ ನೋಡಬೇಕಿದೆ. ಬಾಗಲಕೋಟೆ ಶಾಸಕ ಮೇಟಿ ಅವರು ಕೆರೆ ತುಂಬಿಸಿ ಪ್ರವಾಸಿ ತಾಣವನ್ನಾಗಿ ಅತಿ ಶೀಘ್ರದಲ್ಲಿ ಮಾಡುತ್ತೇವೆ ಅಂತ ಭರವಸೆ ನೀಡುತ್ತಿದ್ದಾರೆ.
ಇದನ್ನೂ ಓದಿ: 5 ಕೋಟಿ ಪರಿಹಾರ ಕೋರಿ ಪ್ರತಿಸ್ಪರ್ಧಿಗೆ ಮಾನಹಾನಿ ನೋಟಿಸ್ ನೀಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ
ಮೇಲಿಂದ ಮೇಲೆ ಮುಚಖಂಡಿ ಕೆರೆ ತುಂಬಿಸುವ ಹೆಸರಲ್ಲಿ, ಪ್ರವಾಸಿ ತಾಣದ ಹೆಸರಲ್ಲಿ ಕೋಟಿ ಕೋಟಿ ರೂ. ಪ್ರಾಜೆಕ್ಟ್ಗಳು ಆಗುತ್ತವೆ ಹೊರತು ಕೆರೆ ಮಾತ್ರ ತುಂಬೋದಿಲ್ಲ. ಆದರೆ ಇದೀಗ ಪುನಃ ಕೆರೆ ತುಂಬಿಸುತ್ತಿದ್ದು, ಇಲ್ಲಿ ಬರುವ ನೀರು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಒಂದು ವೇಳೆ ಈ ಕೆರೆ ತುಂಬಿದ್ದೇ ಆದಲ್ಲಿ ಬಾಗಲಕೋಟೆ ನಗರ ಸೇರಿದಂತೆ ನಾಲ್ಕೈದು ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ.
ಈ ಬಾರಿ ಆದರೂ ತುಂಬಿಸುತ್ತಾರಾ ಅಂತ ನಿರೀಕ್ಷೆಯಲ್ಲಿ ಇದಾರೆ ಜನರು. ಇದೀಗ ಒಂದು ಸಮಾಧಾನ ಸಂಗತಿ ಅಂದರೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆರೆ ವ್ಯಾಪ್ತಿಯಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೆರೆ ಪಕ್ಕದಲ್ಲೇ ವೀಭದ್ರ ದೇವಸ್ಥಾನ ಇದ್ದು, ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗ ಆಗಿದೆ.
ಆದ ಕಾರಣ ಕೆರೆ ಪಕ್ಕ ಉದ್ಯಾನವನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಐದು ಕೋಟಿ ರೂ. ವೆಚ್ಚದಲ್ಲಿ ಮ್ಯುಜಿಕ್ ಪೌಂಟೇನ್, ಎಮ್ ಪಿ ಥೇಟರ್, ಮಕ್ಕಳ ಆಟಿಕೆ ಸಾಮಗ್ರಿ, ಗ್ರಿಲ್, ಲೈಟಿಂಗ್, ವ್ಯೂವ್ ಪಾಯಿಂಟ್, ಕುಟೀರಗಳು, ಕಾರಂಜಿ, ವೇದಿಕೆ ಕಾರ್ಯ ಎಲ್ಲವೂ ನಿರ್ಮಾಣವಾಗಲಿದೆ. ಜನೇವರಿ 2024 ರಲ್ಲಿ ಈ ಉದ್ಯಾನವನ ಲೋಕಾರ್ಪಣೆಯಾಗಲಿದೆ. ಕೆರೆಯನ್ನು ಈ ಬಾರಿ ಆದರೂ ಸಂಪೂರ್ಣ ತುಂಬಿಸಲಿ. ಉದ್ಯಾನವನ ಕಾಮಗಾರಿ ಆದಷ್ಟು ಬೇಗ ಮುಕ್ತಾಯವಾಗಲಿ ಎಂಬುದು ಜನರ ಆಶಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.