ಜ್ಯೋತಿಷ್ಯದಲ್ಲಿ ಗಣಿತ ಬಹಳ ಮುಖ್ಯ. ಆ ವಿಭಾಗವನ್ನು ಜ್ಯೋತಿಷ್ಯ ಗಣಿತ ಎಂದು ಕರೆದು, ಅದನ್ನು ಮಾತ್ರವೇ ಅಧ್ಯಯನ ಮಾಡಿದರೂ ಜ್ಞಾನ ಸಂಪಾದನೆಗೆ ಅದೆಷ್ಟು ಸಮಯ ಬೇಕಾಗುತ್ತದೋ! ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬದುಕಿನ ಉದ್ದಕ್ಕೂ ನಿತ್ಯದ ಅಧ್ಯಯನ ನಡೆಯುತ್ತಲೇ ಇರಬೇಕು. ಈ ದಿನದ ಲೇಖನದಲ್ಲಿ ತುಂಬ ಆಸಕ್ತಿಕರವಾದ ಹಾಗೂ ಹಲವರಿಗೆ ಮೂಡಿರಬಹುದಾದ ಪ್ರಶ್ನೆಗೆ ಉತ್ತರ ನೀಡಲಾಗುತ್ತಿದೆ. ಮೇಷಾದಿಯಾಗಿ ಮೀನದ ತನಕ ಹನ್ನೆರಡು ರಾಶಿಗೆ ಡಿಗ್ರಿ ಲೆಕ್ಕ ಹಾಕಲಾಗುತ್ತದೆ. ಅಂದರೆ ಮೇಷ 0.0° (ಡಿಗ್ರಿ) ಎಂದು ಆರಂಭಿಸಿ, ಮೀನಕ್ಕೆ 360° (ಡಿಗ್ರಿ) ಕೊನೆ. ಅಂದರೆ ಪ್ರತಿ ರಾಶಿಗೆ ಮೂವತ್ತು ಡಿಗ್ರಿ. ಗ್ರಹಗಳ ಗೋಚರವನ್ನು ಡಿಗ್ರಿ ಲೆಕ್ಕದಲ್ಲಿ ನೋಡಿ, ಇಂಥ ನಕ್ಷತ್ರ, ಇಷ್ಟನೇ ಪಾದದಲ್ಲಿ ಗ್ರಹ ಸ್ಥಿತವಾಗಿದೆ ಎಂದು ಲೆಕ್ಕ ಹಾಕಿಕೊಳ್ಳಲಾಗುತ್ತದೆ. ಆಸಕ್ತರು ಹಲವರು ಈ ಹಿಂದೆಯೂ ಹಾಗೂ ಈಗಲೂ ಪ್ರಶ್ನೆ ಮಾಡುತ್ತಾರೆ: ಗುರುಗಳೇ ಕಲಿಯುಗ ಅಂತ್ಯ ಯಾವಾಗ, ಜ್ಯೋತಿಷ್ಯ ರೀತಿಯಾಗಿ ಏನಾದರೂ ಪ್ರಮಾಣ ಇದೆಯಾ? ಇದು ಅವರ ಪ್ರಶ್ನೆ ಆಗಿರುತ್ತದೆ. ಕಲಿಯುಗ ಮಾತ್ರವಲ್ಲ, ಇತರ ಯುಗಗಳ ಅಂತ್ಯಕ್ಕೆ ಸಂಬಂಧಿಸಿದಂತೆಯೂ ಗ್ರಹ ಸ್ಥಿತಿಯ ಉಲ್ಲೇಖ ಇದೆ.
ಯಾವಾಗ ಮೀನ ರಾಶಿಯಲ್ಲಿ ಕೇತುವನ್ನು ಹೊರತುಪಡಿಸಿ ಅಷ್ಟಗ್ರಹರು (ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು) 30° (ಡಿಗ್ರಿ) ಯಲ್ಲಿ ಅಸ್ತವಾಗುವ ದಿನವೇ ಕಲಿಯುಗದ ಅಂತ್ಯ. ಇನ್ನು ಅದೇ ಗ್ರಹರು ಮೇಷ ರಾಶಿಯಲ್ಲಿ 0.0° (ಡಿಗ್ರಿ)ಯಲ್ಲಿ ಉದಯವಾಗುವ ದಿನವೇ ಕೃತಯುಗ.
ಇನ್ನು ಧನುಸ್ಸು ರಾಶಿಯಲ್ಲಿ ಅದೇ ಗ್ರಹರು ಅದೇ ಸ್ಥಿತಿಯಲ್ಲಿ (30°) ಅಸ್ತವಾಗುವ ದಿನವೇ ಕೃತ ಯುಗದ ಅಂತ್ಯ. ಮಕರದಲ್ಲಿ ಅದೇ ಗ್ರಹರು ಅದೇ ಸ್ಥಿತಿಯಲ್ಲಿ (0.0°) ಉದಯವಾಗುವ ದಿನವೇ ತ್ರೇತಾಯುಗ.
ಕನ್ಯಾ ರಾಶಿಯಲ್ಲಿ ಅದೇ ಗ್ರಹರು ಅದೇ ಸ್ಥಿತಿಯಲ್ಲಿ (30°) ಅಸ್ತವಾಗುವ ಕಾಲವೇ ತ್ರೇತಾಯುಗದ ಅಂತ್ಯ. ತುಲಾ ರಾಶಿಯಲ್ಲಿ ಅದೇ ಸ್ಥಿತಿಯಲ್ಲಿ (0.0°) ಅದೇ ಗ್ರಹರು ಉದಯವಾಗುವ ಕಾಲದಿಂದ ದ್ವಾಪರ ಯುಗದ ಆರಂಭ.
ಮಿಥುನ ರಾಶಿಯಲ್ಲಿ ಅದೇ ಸ್ಥಿತಿಯಲ್ಲಿ ಅದೇ ಗ್ರಹರು (30°) ಅಸ್ತವಾದರೆ ಅದು ದ್ವಾಪರದ ಅಂತ್ಯವೂ, ಕರ್ಕಾಟಕದಲ್ಲಿ ಅದೇ ಸ್ಥಿಯಲ್ಲಿ ಆ ಗ್ರಹರು 0.0° (ಡಿಗ್ರಿ) ಯಲ್ಲಿ ಉದಯ ಆಗುವ ಕಾಲವೇ ಕಲಿಯುಗಾರಂಭ.
ಇದನ್ನೂ ಓದಿ: ಕನಸಿನಲ್ಲಿ ಹಾವನ್ನು ನೋಡುವುದು ಮಂಗಳಕರವೇ ಅಥವಾ ಅಶುಭವೇ? ಈ ಕನಸು ಭವಿಷ್ಯ ನಿರ್ಧಾರ ಮಾಡುತ್ತದೆಯೇ?
ಅಂದರೆ ‘ಭ’ ಚಕ್ರದಲ್ಲಿ ನಾಲ್ಕು ತಿಕೋಣಗಳು- ಮೇಷ ತ್ರಿಕೋಣ, ಮಕರ ತ್ರಿಕೋಣ, ತುಲಾ ತ್ರಿಕೋಣ, ಕರ್ಕ ತ್ರಿಕೋಣ.
ಮೇಷ- ಸಿಂಹ- ಧನುಸ್ಸು
(ಮೇಷ ತ್ರಿಕೋಣ)
ಮಕರ- ವೃಷಭ- ಕನ್ಯಾ
(ಮಕರ ತ್ರಿಕೋಣ)
ತುಲಾ, ಕುಂಭ, ಮಿಥುನ
(ತುಲಾ ತ್ರಿಕೋಣ)
ಕರ್ಕಾಟಕ- ವೃಶ್ಚಿಕ- ಮೀನ
(ಕರ್ಕಾಟಕ ತ್ರಿಕೋಣ)
{90°+90°+90°+90°= 360°}
ತ್ರಿಕೋಣ ರಾಶಿಗಳು ಯಾವಾಗಲೂ ಮಿತ್ರರು. ಜನ್ಮ, ಪಂಚಮ, ನವಮ. ಅಂದರೆ ಜನ್ಮ, ಪುನರ್ಜನ್ಮ, ಪೂರ್ವ ಜನ್ಮ.
ಸಾಮಾನ್ಯ ಜ್ಯೋತಿಷ್ಯ ಅಂದರೆ ಭವಿಷ್ಯ ಹೇಳುವ ಶಾಸ್ತ್ರ ಎಂದೇ ಆಗಿದೆ. ನಿಜವಾಗಿಯೂ ಖಗೋಲ ಗಣಿತವು ಕಾಲಮಾನ ತಿಳಿಯುವ ಒಂದು ವಿಧಾನ. ಕಾರ್ಬನ್ ಡೇಟಿಂಗ್, ಸ್ಟೋನ್ ಏಜ್ ಇತ್ಯಾದಿ ಆಧುನಿಕ ಪದ್ಧತಿಯ ಗಣನೆಗಳಿವೆ. ಅವೆಲ್ಲವೂ ಆ ಕಾಲದ ಅವಶೇಷಗಳಿದ್ದರೆ ಮಾತ್ರ ಹೇಳುವಂಥದ್ದು. ಅವಶೇಷಗಳೇ ಇಲ್ಲದಿದ್ದರೆ? ರಾಮಾಯಣ, ಅದಕ್ಕಿಂತಲೂ ಪೂರ್ವದ ಅಷ್ಟಾದಶ ಪುರಾಣಗಳ ಅವಶೇಷಗಳೇ ಇಲ್ಲ. ಇದ್ದರೂ ಅವೆಲ್ಲ ಮುಳುಗಿರಬಹುದು, ಜ್ವಾಲಾಮುಖಿ ಇತ್ಯಾದಿ ವಿಕೋಪಗಳಿಂದ ನಾಶವಾಗಿರಬಹುದು.
ಉದಾಹರಣೆಗೆ, ಹಿಂದೊಮ್ಮೆ ಅರಸೀಕೆರೆಯಲ್ಲಿ ಒಂದು ಅಷ್ಟಮಂಗಲ ಪ್ರಶ್ನೆ ಹಾಕಲಾಗಿತ್ತು. ಆ ವೇಳೆಯಲ್ಲಿ ರಂಗನಾಥಸ್ವಾಮಿ ದೇವಸ್ಥಾನ ನಾಶವಾದ ವಿಚಾರ ಬಂತು. ಆದರೆ ಅಲ್ಲಿ ನಾಶದ ಕುರುಹುಗಳೇ ಇಲ್ಲ. ಮತ್ತೆ ಹೇಗೆ ತಿಳಿಯೋದು? ಪ್ರಶ್ನೆಯಲ್ಲಿ ಈ ಮೂಲ ದೇವಸ್ಥಾನ ಹಿಂಬಾಗದ ಒಂದು ಬೆಟ್ಟವು ಜರಿದು ಬಿದ್ದು, ಅಲ್ಲಿದ್ದ ಬೃಹತ್ ಬಂಡೆಯೊಂದು ಉರುಳಿ ದೇವಸ್ಥಾನವನ್ನು ಭೂಗತ ಮಾಡಿತ್ತು. ಬಹುಶಃ ಆಗಿನ ಕಾಲದವರು ಆ ಬಂಡೆಗೆ ತಾಗಿಯೇ ಮಂದಿರ ಕಟ್ಟಿದರು. ಈಗಲೂ ಹಾಗೆಯೇ ಇದೆ. ಈಗ ಆ ಬಂಡೆಯನ್ನು ಒಡೆದರೆ ಭೂಗತವಾಗಿದ್ದ ಮಂದಿರವು ಸಿಗಬಹುದು. ಆದರೆ ಒಡೆದರೆ ದೇವಸ್ಥಾನಕ್ಕೆ, ಪಕ್ಕದ ಮನೆಗಳಿಗೆ ಅಪಾಯ.
ಸುಮಾರು ಐನೂರು ಚದರ ಮೀಟರ್ ಸುತ್ತಳತೆ, ಎಂಬತ್ತು ಅಡಿ ಎತ್ತರದ ಬಂಡೆಯನ್ನು ಒಡೆಯುವುದು ಸಾಮಾನ್ಯ ಕೆಲಸವೂ ಅಲ್ಲ, ಅದನ್ನು ಮಾಡಿದರೆ ಅಪಾಯವೂ ಇರುತ್ತದೆ. ಆಗ ಈ ಲೆಕ್ಕಾಚಾರಗಳು ಗಣನೆಗೆ ಬರುತ್ತದೆ. ಇದೊಂದು ಸಂಕ್ಷಿಪ್ತ ಲೆಕ್ಕವಷ್ಟೆ.
ಅಂದರೆ, ಭೂಮಿಯ ಚರಾಚರಗಳು ನಾಶವಾದರೆ ಗಣನೆ ಮಾಡಲು ಆಧಾರ ಇರುವುದಿಲ್ಲ. ಆದರೆ ಕೋಟ್ಯಂತರ ವರ್ಷಗಳ ಆಯುಷ್ಯ ಇರುವ ಗ್ರಹರು, ತಮ್ಮದೇ ಆದಂತಹ ನಿಯಮ ಬದ್ಧವಾದ ಗತಿಯಲ್ಲಿ ಪರಿಭ್ರಮಣೆ ಮಾಡುತ್ತಿರುತ್ತವೆ. ಜ್ಯೋತಿಷ್ಯಕ್ಕೆ ಅದುವೇ ಆಧಾರ. ಅಲ್ಲಿಯೂ ಗ್ರಹಗಳ ಆಯನಾಂಶ (angle) ವ್ಯತ್ಯಾಸ ಇರುತ್ತದೆ. ಅದಕ್ಕೂ ಒಂದು ಲೆಕ್ಕಾಚಾರ ಇದೆ. ನಕ್ಷತ್ರಗಳ ಆಯನಾಂಶ, ಅಗಸ್ತ್ಯ ನಕ್ಷತ್ರದ ಸ್ಥಿತಿ, ಧ್ರುವ ನಕ್ಷತ್ರದ ಸ್ಥಿತಿಯಲ್ಲಿ ಈ ಗ್ರಹರ ಪರಿಭ್ರಮಣೆಯಲ್ಲಿ ವ್ಯತ್ಯಾಸ ಆದುದನ್ನು ಸರಿಪಡಿಸಿಕೊಂಡು ಜ್ಯೋತಿರ್ಗಣಿತ ನಡೆಯುತ್ತದೆ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ