ಪ್ರತಿದಿನ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಏಕೆ? ಈ ಪಾತ್ರೆಯಲ್ಲಿ ಯಾರೆಲ್ಲ ನೀರು ಕುಡಿಯಬಾರದು
ತಾಮ್ರದಲ್ಲಿ ಕುಡಿಯುವ ನೀರು ಹಿಮೋಗ್ಲೋಬಿನ್ ಎಣಿಕೆಯನ್ನು ಹೆಚ್ಚಿಸುತ್ತದೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡುತ್ತದೆ, ಕೀಲು ನೋವನ್ನು ಶಮನಗೊಳಿಸುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಆದರೆ ತಾಮ್ರದ ಪಾತ್ರಯಲ್ಲಿ ಕುಡಿಯುವ ನೀರಿನಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯುಂಟಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ತಾಮ್ರದ ಬಾಟಲಿಯಿಂದ ನೀರನ್ನು ಕುಡಿಯುವುದು ಸ್ವಾಸ್ಥ್ಯ ಜಗತ್ತಿನಲ್ಲಿ ಹೊಸ ವಿಷಯವೆಂದು ತೋರಬಹುದು, ಆದರೆ ಇದು ತಲೆಮಾರುಗಳನ್ನು ಮೀರಿದ ಅಭ್ಯಾಸವಾಗಿದೆ. ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳೊಂದಿಗೆ, ತಾಮ್ರವು ನೀರಿಗೆ ನೈಸರ್ಗಿಕ ಶುದ್ಧೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀವನದ ಈ ಮೂಲಭೂತ ಅಗತ್ಯಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ತಾಮ್ರದ ಪಾತ್ರೆಗಳು ಮತ್ತು ತಾಮ್ರದ ಬಾಟಲಿಗಳು ದಿನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ ಹೆಚ್ಚು ತಾಮ್ರದ ನೀರನ್ನು ಕುಡಿಯುವುದು ಸಹ ನಿಮಗೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಹೌದು ಎನ್ನುತ್ತಾರೆ ತಜ್ಞರು.
ಅತಿಯಾದ ತಾಮ್ರದ ನೀರನ್ನು ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಹೆಲ್ತ್ ಶಾಟ್ಸ್ ಫರಿದಾಬಾದ್ನ ಅಮೃತಾ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಹಿರಿಯ ಸಲಹೆಗಾರ ಡಾ. ವೀಣು ಗುಪ್ತಾ ಅವರನ್ನು ಸಂಪರ್ಕಿಸಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.
ಅತಿಯಾದ ತಾಮ್ರದ ನೀರು ದೇಹಕ್ಕೆ ಹಾನಿಕಾರಕವಾಗಬಹುದೇ?
ತಾಮ್ರದ ನೀರು ಹಿಮೋಗ್ಲೋಬಿನ್ ಎಣಿಕೆಯನ್ನು ಹೆಚ್ಚಿಸುತ್ತದೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಸೋಂಕುಗಳ ವಿರುದ್ಧ ಹೋರಾಡುತ್ತದೆ, ಕೀಲು ನೋವನ್ನು ಶಮನಗೊಳಿಸುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ ಎಂದು ಡಾ. ವೀಣು ಗುಪ್ತಾ ಹೇಳುತ್ತಾರೆ. ಆದರೆ ಹೆಚ್ಚು ತಾಮ್ರದ ನೀರನ್ನು ಕುಡಿಯುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯುಂಟಾಗುತ್ತದೆ ಎಂದಿದ್ದಾರೆ.
ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದರಿಂದ ಉಂಟಾಗುವ ಕೆಲವು ಅಡ್ಡಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ;
1. ತಾಮ್ರದ ವಿಷಕಾರಿ ಗುಣ:
ತಾಮ್ರವು ನಮ್ಮ ದೇಹಕ್ಕೆ ಅಗತ್ಯವಿರುವ ಅತ್ಯಗತ್ಯ ಖನಿಜಾಂಶವನ್ನು ನೀಡುತ್ತದೆ ಆದರೆ ಅತಿಯಾದ ತಾಮ್ರದ ನೀರು ವಿಷಕ್ಕೆ ಕಾರಣವಾಗಬಹುದು. ನೀವು ವಾಕರಿಕೆ, ಕಿಬ್ಬೊಟ್ಟೆ ನೋವು, ಅತಿಸಾರಕ್ಕೆ ಒಳಗಾಗಬಹುದು ಮತ್ತು ವಿಪರೀತ ಸಂದರ್ಭಗಳಲ್ಲಿ, ಇದು ನಿಮ್ಮ ಯಕೃತ್ತಿಗೆ ಹಾನಿ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
2. ಜೀರ್ಣಕಾರಿ ಸಮಸ್ಯೆಗಳು:
ತಾಮ್ರದ ಬಾಟಲಿಗಳು ಅಥವಾ ಪಾತ್ರೆಗಳಲ್ಲಿ ದೀರ್ಘಕಾಲದವರೆಗೆ ಸಂಗ್ರಹಿಸಲಾದ ನೀರನ್ನು ಕುಡಿಯುವುದರಿಂದ ತಾಮ್ರದ ಅಯಾನುಗಳು ನೀರಿಗೆ ಸೋರಿಕೆಯಾಗಬಹುದು. ಇದು ನಿಮ್ಮ ದೇಹಕ್ಕೆ ಸರಿಹೊಂದದಿದ್ದರೆ ಗ್ಯಾಸ್, ಅತಿಸಾರ ಅಥವಾ ಹೊಟ್ಟೆ ಸೆಳೆತದಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
3. ಲೋಹದ ಪ್ರತಿಕ್ರಿಯೆಗಳು:
ತಾಮ್ರವು ನೀರಿನಲ್ಲಿರುವ ಇತರ ಲೋಹಗಳು ಅಥವಾ ಖನಿಜಗಳೊಂದಿಗೆ ಬೆರೆಯುವ ಸಾಧ್ಯತೆಗಳಿವೆ. ಇದು ಅಪಾಯಕಾರಿಯಾದ ಸಂಯುಕ್ತಗಳ ಉತ್ಪಾದನೆಗೆ ಕಾರಣವಾಗುತ್ತದೆ. ಉದಾಹರಣೆಗೆ, ತಾಮ್ರವು ಕಬ್ಬಿಣದೊಂದಿಗೆ ಸಂಯೋಜಿಸಿ ಸ್ವತಂತ್ರ ರಾಡಿಕಲ್ಗಳನ್ನು ರೂಪಿಸಬಹುದು. ಇದು ಜೀವಕೋಶಗಳಿಗೆ ಹಾನಿ ಮಾಡಬಹುದು ಮತ್ತು ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಬಹುದು.
4. ಅಲರ್ಜಿ ಉಂಟಾಗಬಹುದು:
ಕೆಲವರಿಗೆ ತಾಮ್ರದ ಅಲರ್ಜಿ ಇರುತ್ತದೆ. ಅಂತಹ ಸಂದರ್ಭಗಳಲ್ಲಿ, ತಾಮ್ರದ ನೀರನ್ನು ಕುಡಿಯುವುದರಿಂದ ಚರ್ಮದ ದದ್ದುಗಳು ಅಥವಾ ಕಿರಿಕಿರಿ ಉಂಟಾಗಬಹುದು.
5. ಜಠರದ ಕಾಯಿಲೆಗಳಿಗೆ ಕಾರಣವಾಗುತ್ತದೆ:
ತಾಮ್ರದ ಬಾಟಲಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅದು ಬ್ಯಾಕ್ಟೀರಿಯಾ ಅಥವಾ ಅಚ್ಚುಗಳು ಸಂಗ್ರಹವಾಗಲು ಅನುವು ಮಾಡಿಕೊಡುತ್ತದೆ. ಕಲುಷಿತ ನೀರನ್ನು ಕುಡಿಯುವುದರಿಂದ ಜಠರದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಡಾ. ವೀಣು ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ:ತಾಮ್ರದ ಪಾತ್ರೆಯಿಂದ ನೀರು ಕುಡಿಯುವುದರ ಆಯುರ್ವೇದ ಪ್ರಯೋಜನಗಳು
ತಾಮ್ರದ ಬಾಟಲಿಗಳನ್ನು ಬಳಸುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ:
• ಶುದ್ಧ ತಾಮ್ರದಿಂದ ಮಾಡಿದ ಬಾಟಲಿಗಳನ್ನೂ ಮಾತ್ರ ಖರೀದಿಸಿ. ನಂತರ ಅದನ್ನು ನೀರಿನಿಂದ ತುಂಬಿಸಿ, ರಾತ್ರಿಯಿಡೀ ಶುಷ್ಕ ಸ್ಥಳದಲ್ಲಿ ಸಂಗ್ರಹಿಸಿ.
• ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಮ್ರದ ಬಾಟಲಿಯಿಂದ ನೀರು ಕುಡಿಯಲು ಉತ್ತಮ ಸಮಯವಾಗಿದೆ.
• ತಾಮ್ರದ ಬಾಟಲಿಯಲ್ಲಿರುವ ನೀರನ್ನು ಅತಿಯಾಗಿ ಕುಡಿಯಬೇಡಿ. ನಿಮ್ಮ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶ ಒದಗಿಸಲು ದಿನಕ್ಕೆ ಎರಡು ಬಾರಿ (ಬೆಳಿಗ್ಗೆ ಮತ್ತು ಸಂಜೆ) ನೀರು ಕುಡಿದರೆ ಸಾಕು.
• ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದಕ್ಕೆ ವಿರಾಮ ತೆಗೆದುಕೊಳ್ಳಿ. ಅಂದರೆ ಎರಡು ತಿಂಗಳ ಕಾಲ ನಿಯಮಿತವಾಗಿ ತಾಮ್ರದ ನೀರನ್ನು ಸೇವಿಸಿದ ನಂತರ ನೀವು ಒಂದು ತಿಂಗಳ ವಿರಾಮ ತೆಗೆದುಕೊಳ್ಳಬಹುದು. ಇದು ನಿಮ್ಮ ದೇಹವು ಹೆಚ್ಚುವರಿ ತಾಮ್ರವನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ.
ತಾಮ್ರದ ನೀರನ್ನು ಯಾರು ತಪ್ಪಿಸಬೇಕು?
ದುರದೃಷ್ಟವಶಾತ್, ಪ್ರತಿಯೊಬ್ಬ ವ್ಯಕ್ತಿಯು ತಾಮ್ರದ ನೀರನ್ನು ಕುಡಿಯಲು ಸಾಧ್ಯವಿಲ್ಲ. ನಿಮ್ಮ ದೇಹದಿಂದ ಹೆಚ್ಚುವರಿ ತಾಮ್ರವನ್ನು ತೆಗೆದುಹಾಕುವ ನಿಮ್ಮ ಯಕೃತ್ತಿನ ಸಾಮರ್ಥ್ಯವು ಕಡಿಮೆಯಿದ್ದರೆ, ಅದು ತಾಮ್ರದ ವಿಷತ್ವಕ್ಕೆ ಕಾರಣವಾಗಬಹುದು. ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಕಾಯಿಲೆ ಇರುವವರು ತಾಮ್ರದ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: