ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರತ್ನಮಾಲಾ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹರ್ಷನ ಮನಸ್ಸು ಕಲ್ಲಾಗಿ ಹೋಗಿದೆ. ಆತನಿಗೆ ಮಾತೇ ಬರುತ್ತಿಲ್ಲ. ಮತ್ತೊಂದು ಕಡೆ ಭುವಿ ವಿರುದ್ಧ ವರುಧಿನಿ ತಿರುಗಿ ಬೀಳುವ ನಿರ್ಧಾರಕ್ಕೆ ಬಂದಿದ್ದಾಳೆ. ಹರ್ಷ ಸದ್ಯ ಬೇಸರದಲ್ಲಿದ್ದಾನೆ. ಹೇಗಾದರೂ ಮಾಡಿ ಆತನಿಗೆ ಹತ್ತಿರ ಆಗಬೇಕು ಎಂಬ ಆಲೋಚನೆಯಲ್ಲಿ ವರುಧಿನಿ ಇದ್ದಾಳೆ.
ಮೌನಿಯಾದ ಹರ್ಷ
ಹರ್ಷನಿಗೆ ಹಳೆಯ ನೆನಪು ಅತಿಯಾಗಿ ಕಾಡುತ್ತಿದೆ. ತಾಯಿ ರತ್ನಮಾಲಾಳನ್ನು ಕಳೆದುಕೊಂಡು ಆತನಿಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಆತ ಎಲ್ಲಿ ಹೋಗುತ್ತಾನೋ ಅಲ್ಲಿಯೇ ನಿಲ್ಲುತ್ತಿದ್ದಾನೆ. ಆತನ ಪತ್ನಿ ಭುವಿಯು ಹರ್ಷನಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾಳೆ. ಆದರೆ, ಹರ್ಷ ಅದನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ. ಹರ್ಷನ ಸ್ಥಿತಿ ನೋಡಿ ಮನೆ ಮಂದಿ ಕೊರಗಿದ್ದಾರೆ. ಭುವಿಗಂತೂ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ.
ರತ್ನಮಾಲಾ ಅಂತ್ಯಕ್ರಿಯೆ
ರತ್ನಮಾಲಾ ಮೃತಪಡಬಹುದು ಎಂಬ ಬಗ್ಗೆ ವೀಕ್ಷಕರಿಗೆ ಅನುಮಾನ ಇತ್ತು. ಈ ಮೊದಲು ಹರ್ಷ ಹಾಗೂ ಭುವಿ ಮದುವೆ ಸಂದರ್ಭದಲ್ಲಿ ರತ್ನಮಾಲಾ ಪಾತ್ರ ಕೊನೆಯಾಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಹಾಗಾಗಲಿಲ್ಲ. ರತ್ನಮಾಲಾ ಬದುಕಿದಿದ್ದಳು. ಇತ್ತೀಚೆಗೆ ಆಸ್ಪತ್ರೆಯ ವಿಚಾರವನ್ನೇ ಹೆಚ್ಚು ಹೈಲೈಟ್ ಮಾಡಲಾಗುತ್ತಿತ್ತು. ಈ ಬಗ್ಗೆ ವೀಕ್ಷಕರು ಕೂಡ ಬೇಸರ ತೋಡಿಕೊಂಡಿದ್ದರು. ಈಗ ಅಚ್ಚರಿ ಎಂಬಂತೆ ರತ್ನಮಾಲಾ ಪಾತ್ರವನ್ನೇ ಕೊನೆ ಮಾಡಿದ್ದಾರೆ ನಿರ್ದೇಶಕರು.
ರತ್ನಮಾಲಾ ಮೃತಪಟ್ಟಿದ್ದಾಳೆ. ಆಕೆಯ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಹರ್ಷ ಮಗ ಆದ್ದರಿಂದ ಆತನೇ ಮುಂದೆ ನಿಂತು ಎಲ್ಲ ಕಾರ್ಯವನ್ನು ಮಾಡಬೇಕಿದೆ. ಆದರೆ, ಆತನ ಮನಸ್ಸು ಕಲ್ಲಾಗಿದೆ. ತಾನು ಏನು ಮಾಡುತ್ತಿದ್ದೇನೆ ಎಂಬುದು ಆತನಿಗೆ ತಿಳಿಯುತ್ತಿಲ್ಲ. ಮತ್ತೊಂದು ಕಡೆಯಲ್ಲಿ ಮನೆ ಮಂದಿ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಆದಿ, ದೇವ್ ಎಲ್ಲರೂ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ರತ್ನಮಾಲಾಳನ್ನು ಕಳೆದುಕೊಂಡು ಅವರು ಕೂಡ ನೋವಿನಲ್ಲಿದ್ದಾರೆ.
ವರುಧಿನಿಗೆ ಹರ್ಷನ ಚಿಂತೆ
ವರುಧಿನಿ ಈ ಸಂದರ್ಭದಲ್ಲೂ ಸ್ವಾರ್ಥ ಮೆರೆಯುತ್ತಿದ್ದಾಳೆ. ಹರ್ಷನನ್ನು ಹೇಗೆ ಕೆಡವಿಕೊಳ್ಳಬಹುದು ಎನ್ನುವ ಆಲೋಚನೆಯಲ್ಲಿ ಅವಳಿದ್ದಾಳೆ. ಹರ್ಷನನ್ನು ಆಕೆ ಪ್ರೀತಿಸುತ್ತಿದ್ದಳು. ಆದರೆ, ಹರ್ಷ ಎಂದಿಗೂ ಆಕೆಯನ್ನು ಪ್ರೀತಿಸಿಲ್ಲ. ಈ ವಿಚಾರವನ್ನು ಆತ ಹಲವು ಬಾರಿ ಹೇಳಿದ್ದಾನೆ. ಆದರೆ, ವರುಧಿನಿಗೆ ಮಾತ್ರ ಈ ವಿಚಾರದಲ್ಲಿ ಬುದ್ಧಿ ಬಂದಿಲ್ಲ. ಆಕೆ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾಳೆ.
ಹರ್ಷನನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಅವಳಿದ್ದಾಳೆ. ಅದಕ್ಕೆ ತಕ್ಕಂತೆ ಆಕೆ ಪ್ಲ್ಯಾನ್ ರೂಪಿಸುತ್ತಿದ್ದಾಳೆ. ರತ್ನಮಾಲಾಳ ಶವವನ್ನು ತೆಗೆದುಕೊಂಡು ಹೋಗುವಾಗಲೇ ಭುವಿಯ ಎದುರು ವರುಧಿನಿ ಬಂದಿದ್ದಾಳೆ. ‘ನಾನು ನಿನ್ನ ಬಳಿ ಒಂದು ಪ್ರಮುಖ ವಿಷಯದ ಬಗ್ಗೆ ಮಾತನಾಡಬೇಕು. ಅದೂ ಈಗಲೇ’ ಎಂದು ಹೇಳಿದ್ದಾಳೆ ವರುಧಿನಿ. ಭುವಿಗೆ ಆಶ್ಚರ್ಯವಾಗಿದೆ. ಆ ವಿಚಾರ ಏನು ಎಂಬ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ವರುಧಿನಿ ‘ರತ್ನಮಾಲಾ ಬಗ್ಗೆ’ ಎಂದು ಹೇಳಿದ್ದಾಳೆ.
ರತ್ನಮಾಲಾ ವಿಲ್ ಬರೆದಿಟ್ಟ ವಿಚಾರ ಹೇಳಿದರೆ ಅದರಿಂದ ವರುಧಿನಿಗೆ ಹೆಚ್ಚು ಸಮಸ್ಯೆ. ಹೀಗಾಗಿ, ಆಕೆ ಈ ವಿಚಾರವನ್ನು ಪ್ರಸ್ತಾಪ ಮಾಡದೆ ಇರಬಹುದು. ವಿಲ್ ವಿಚಾರದಲ್ಲಿ ಆಕೆ ಏನಾದರೂ ಹೊಸ ಕಟ್ಟು ಕಥೆ ಹೇಳಬಹುದು. ಭುವಿ ಎದುರು ಆಕೆ ಏನು ಹೇಳುತ್ತಾಳೆ ಅನ್ನೋದು ಸದ್ಯ ಇರುವ ಕುತೂಹಲ.
ಶ್ರೀಲಕ್ಷ್ಮಿ ಎಚ್.