69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡದ ಮೂರು ಸಿನಿಮಾಗಳಿಗೆ ಅವಾರ್ಡ್
69 National Film Award 2023: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಪಾರುಪತ್ಯ ಮೆರೆದಿವೆ. ಆದರೆ ಕನ್ನಡ ಸಿನಿಮಾಗಳು ನಿರೀಕ್ಷಿತ ಪ್ರಮಾಣದಲ್ಲಿ ಪ್ರಶಸ್ತಿ ಗೆದ್ದಿಲ್ಲವೆಂದೇ ಹೇಳಬಹುದು. ಕೇವಲ ಮೂರು ಸಿನಿಮಾ ಅಥವಾ ಡಾಕ್ಯುಮೆಂಟರಿಗಳಿಗೆ ಪ್ರಶಸ್ತಿ ಹಾಗೂ ಗುರುತು ಲಭಿಸಿದೆ.
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (National Film Award 2023) ಪ್ರೆಸ್ ಇನ್ಫಾರ್ಮೆಷನ್ ಬ್ಯೂರೋ ಇಂದು (ಆಗಸ್ಟ್ 24) ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ಘೋಷಿಸಿತು. ಕಳೆದಬಾರಿಯಂತೆಯೇ ಈ ಬಾರಿಯೂ ದಕ್ಷಿಣ ಭಾರತದ ಸಿನಿಮಾಗಳು ಪ್ರಶಸ್ತಿ ಗೆಲ್ಲುವಲ್ಲಿ ಪಾರುಪತ್ಯ ಪ್ರದರ್ಶಿಸಿವೆ. ಆದರೆ ಕನ್ನಡದ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದಿಲ್ಲ. ಪ್ರಶಸ್ತಿ ಘೋಷಣೆಯಾದ ಸುಮಾರು 50ಕ್ಕೂ ಹೆಚ್ಚು ವಿಭಾಗದಲ್ಲಿ ಕನ್ನಡದ ಮೂರು ಸಿನಿಮಾಗಳಿಗಷ್ಟೆ ಪ್ರಶಸ್ತಿ ದೊರಕಿದೆ. ಅದರಲ್ಲಿ ಒಂದು ಕನ್ನಡ ಭಾಷೆಗೆ ಮೀಸಲಾಗಿದ್ದ ಪ್ರಶಸ್ತಿ.
ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿ, ಕಿರಣ್ ರಾಜ್ ನಿರ್ದೇಶನ ಮಾಡಿರುವ ಸೂಪರ್ ಹಿಟ್ ಸಿನಿಮಾ ‘777 ಚಾರ್ಲಿ’ಗೆ ಕನ್ನಡ ಭಾಷೆಯ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರಕಿದೆ. ಇದು ಕನ್ನಡ ಭಾಷೆಗಷ್ಟೆ ಸೀಮಿತವಾಗಿದ್ದ ವಿಭಾಗ.
ನಾನ್ ಫೀಚರ್ ವಿಭಾಗದಲ್ಲಿ ಅನಿರುದ್ಧ್ ಜತ್ಕಾರ್ ನಿರ್ದೇಶನ ಮಾಡಿರುವ ‘ಬಾಳೆ ಬಂಗಾರ’ ಡಾಕ್ಯುಮೆಂಟರಿಗೆ ತೀರ್ಪುಗಾರರ ವಿಶೇಷ ಮೆಚ್ಚುಗೆ ಲಭಿಸಿದೆ. ಈ ಡಾಕ್ಯುಮೆಂಟರಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಜೀವನ, ಚಲನಚಿತ್ರ ಜೀವನ ಆಧರಿಸಿದ್ದಾಗಿದೆ.
ಇದನ್ನೂ ಓದಿ:69th National Film Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪಟ್ಟಿ
ನಾನ್ ಫೀಚರ್ ಭಾಗ ಅತ್ಯುತ್ತಮ ಅನ್ವೇಷಣೆ ಸಿನಿಮಾ ವಿಭಾಗದಲ್ಲಿ ಕನ್ನಡದ ಆಯುಷ್ಮಾನ್ ಸಿನಿಮಾಕ್ಕೆ ಪ್ರಶಸ್ತಿ ಲಭಿಸಿದೆ. ಈ ಸಿನಿಮಾವನ್ನು ಜೇಖಬ್ ವರ್ಗೀಸ್ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಮ್ಯಾಥ್ಯೂ ವರ್ಗೀಸ್, ದಿನೇಶ್ ರಾಜ್ಕುಮಾರ್ ಮತ್ತು ನವೀನ್ ಫ್ರಾನ್ಸಿಸ್. ಜೇಖಬ್ ವರ್ಗೀಸ್ ಈ ಹಿಂದೆ ಪುನೀತ್ ರಾಜ್ಕುಮಾರ್ ನಟನೆಯ ‘ಪೃಥ್ವಿ’, ‘ಸವಾರಿ’, ‘ಚಂಬಲ್’ ಇನ್ನೂ ಕೆಲವು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಇನ್ನು ಅತ್ಯುತ್ತಮ ಸಿನಿಮಾ ವಿಮರ್ಶೆಗೆ ನೀಡುವ ಪ್ರಶಸ್ತಿ ತೆಲುಗು ಸಿನಿಮಾ ವಿಮರ್ಶಕರೊಬ್ಬರ ಪಾಲಾಗಿದೆಯಾದರೂ, ತೀರ್ಪುಗಾರರ ವಿಶೇಷ ಮೆನ್ಷನ್ ಕನ್ನಡದ ಸುಬ್ರಹ್ಮಣ್ಯ ಬದೂರು ಅವರಿಗೆ ದೊರೆಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Thu, 24 August 23