ಬಂಧನ ಭೀತಿಯಲ್ಲಿದ್ದ ಉಪೇಂದ್ರ ಪರವಾಗಿ ವಕೀಲರು ಮಂಡಿಸಿದ ವಾದ ಏನು? ಇಲ್ಲಿದೆ ಪೂರ್ತಿ ವಿವರ

| Updated By: ಮದನ್​ ಕುಮಾರ್​

Updated on: Aug 14, 2023 | 7:51 PM

ಗಾದೆ ಮಾತು ಹೇಳಿ ಸಂಕಷ್ಟಕ್ಕೆ ಸಿಲುಕಿದ್ದ ನಟ ರಿಯಲ್ ಸ್ಟಾರ್ ಉಪೇಂದ್ರಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ಬಂಧನದ ಭೀತಿ ಎದುರಿಸುತ್ತಿದ್ದ ಉಪೇಂದ್ರ ನಿಟ್ಟುಸಿರು ಬಿಡುವಂತಾಗಿದೆ.

ಬಂಧನ ಭೀತಿಯಲ್ಲಿದ್ದ ಉಪೇಂದ್ರ ಪರವಾಗಿ ವಕೀಲರು ಮಂಡಿಸಿದ ವಾದ ಏನು? ಇಲ್ಲಿದೆ ಪೂರ್ತಿ ವಿವರ
ಉಪೇಂದ್ರ, ಹೈಕೋರ್ಟ್
Follow us on

ಸಾಮಾಜಿಕ ಜಾಲತಾಣದಲ್ಲಿ ಬಳಸಿದ ಹಳೇ ಗಾದೆಮಾತು ರಿಯಲ್ ಸ್ಟಾರ್ ಉಪೇಂದ್ರರನ್ನು ಅಕ್ಷರಶಃ ಸಂಕಷ್ಟಕ್ಕೆ ತಳ್ಳಿತ್ತು. ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಚನ್ನಮ್ಮನ್ನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಕ್ಷಣ ಎಫ್‌ಐಆರ್ (FIR) ದಾಖಲಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ವಿ.ವಿ. ಪುರ ಉಪವಿಭಾಗದ ಎಸಿಪಿ ವಿಚಾರಣೆಗೆ ಹಾಜರಾಗುವಂತೆ ಉಪೇಂದ್ರ (Upendra) ಅವರಿಗೆ ಸಿಆರ್‌ಪಿಸಿ ಸೆಕ್ಷನ್ 40ರಡಿ ನೋಟಿಸ್ ನೀಡಿದ್ದರು. ವಾಟ್ಸಾಪ್ ಮೂಲಕ ತಲುಪಿಸಲಾಗಿದ್ದ ನೋಟೀಸ್ ಪಾಲಿಸಿ ಉಪೇಂದ್ರ ಪೊಲೀಸರ ಮಂದೆ ಹಾಜರಾಗಿದ್ದರೆ ಅವರನ್ನು ತಕ್ಷಣ ಬಂಧಿಸುವ ಸಾಧ್ಯತೆ ಇತ್ತು. ಏಕೆಂದರೆ ಸಿಆರ್‌ಪಿಸಿ ಸೆಕ್ಷನ್ 40ರಡಿಯ ನೋಟೀಸ್​ನಲ್ಲಿ ಪೊಲೀಸರಿಗೆ ಬಂಧನದ ಸಂಪೂರ್ಣ ಅಧಿಕಾರವಿದೆ. ಹೀಗಾಗಿ ಉಪೇಂದ್ರ ಹೈಕೋರ್ಟ್ (High Court) ಮೊರೆ ಹೊಕ್ಕರು. ಹಿರಿಯ ವಕೀಲ ಉದಯ್ ಹೊಳ್ಳರ ಮೂಲಕ ಹೈಕೋರ್ಟ್​ನಲ್ಲಿ ಪ್ರಕರಣ ರದ್ದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.

ಉಪೇಂದ್ರ ಪರ ವಕೀಲರ ವಾದ ಏನು?

‘ಉಪೇಂದ್ರ ಯಾವುದೇ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಒಳ್ಳೆಯದನ್ನು ಮಾಡುವಾಗಲೂ ಟೀಕಿಸುವವರು ಇದ್ದೇ ಇರುತ್ತಾರೆ ಎಂಬ ಈ ಮಾತಿಗೆ ಪೂರಕವಾಗಿ ಮಾತ್ರವೇ ಒಂದು ಗಾದೆಮಾತನ್ನು ಆಡಿದ್ದಾರೆ. ಆಕ್ಷೇಪ ವ್ಯಕ್ತವಾದ ಕೂಡಲೇ ಹೇಳಿಕೆ ಡಿಲೀಟ್ ಮಾಡಿ ಕ್ಷಮೆ ಕೋರಿದ್ದಾರೆ. ಹಳೆಯ ಗಾದೆ ಮಾತನ್ನು ಉಲ್ಲೇಖಿಸಿದ್ದು ಜಾತಿನಿಂದನೆಯಲ್ಲ. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಉಪೇಂದ್ರ ಅಪರಾಧ ಎಸಗಿಲ್ಲ. ಸಮಾಜದಲ್ಲಿನ ತಾರತಮ್ಯದ ವಿರುದ್ಧ ಉಪೇಂದ್ರ ಹೋರಾಡುತ್ತಿದ್ದಾರೆ. ಜಾತಿ, ಸಮುದಾಯಗಳ ನಡುವೆ ಸಾಮರಸ್ಯಕ್ಕೆ ಯತ್ನಿಸುತ್ತಿದ್ದಾರೆ. ಪ್ರಚಾರ ಪಡೆಯಲೆಂದು ಈ ದೂರು ದಾಖಲಿಸಲಾಗಿದೆ. ವಾಟ್ಸಾಪ್ ಮೂಲಕ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಪೊಲೀಸರು ಉಪೇಂದ್ರಗೆ ಕಿರುಕುಳ ನೀಡಲು ಬಯಸಿದ್ದಾರೆ. ಹೀಗಾಗಿ ಎಫ್‌ಐಆರ್​ಗೆ ತಡೆಯಾಜ್ಞೆ ನೀಡಬೇಕು’ ಎಂದು ಉಪೇಂದ್ರ ಪರ ವಕೀಲರ ವಾದ ಮಾಡಿದ್ದಾರೆ.

ಇದನ್ನೂ ಓದಿ: ‘ನಿಮ್ಮೆಲ್ಲರನ್ನು ಇನ್ನೂ ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ’: ಎಫ್​ಐಆರ್​ ತಡೆ ಬಳಿಕ ಉಪೇಂದ್ರ ಮೊದಲ ಪ್ರತಿಕ್ರಿಯೆ

ಸರ್ಕಾರಿ ವಕೀಲರಿಗೆ ನ್ಯಾಯಮೂರ್ತಿಗಳ ಪ್ರಶ್ನೆ:

‘ಅರ್ಜಿದಾರರು ಗಾದೆ ಮಾತು ಬಳಸಿದ್ದಾರೆ, ಅದಕ್ಕೇಕೆ ಎಫ್‌ಐಆರ್’ ಎಂದು ಸರ್ಕಾರಿ ವಕೀಲರಿಗೆ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ‘ಮೇಲ್ನೋಟಕ್ಕೆ ಎಸ್‌ಸಿ, ಎಸ್‌ಟಿ ಅಟ್ರಾಸಿಟಿ ತಡೆ ಕಾಯ್ದೆಯಡಿ ಅಪರಾಧವಾಗುವ ಅಂಶಗಳಿಲ್ಲ ಅಂತ ಅರ್ಜಿದಾರರು ವಾದ ಮಂಡಿಸಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡುತ್ತಿದ್ದೇನೆ’ ಎಂದು ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ನೀಡಿದರು.

ಇದನ್ನೂ ಓದಿ: ಉಪೇಂದ್ರ ಹೇಳಿಕೆಗೆ ಹೆಚ್​ ಸಿ‌ ಮಹದೇವಪ್ಪ ಕಿಡಿ, ಕ್ರಮ ಕೈಗೊಳ್ಳಲಾಗುವುದು ಎಂದ ಸಮಾಜ ಕಲ್ಯಾಣ ಸಚಿವ

ವಿ,ವಿ.ಪುರಂ ಉಪವಿಭಾಗದ ಎಸಿಪಿಗೂ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್ ಆದೇಶದಿಂದಾಗಿ ಬಂಧನದ ಭೀತಿಯಲ್ಲಿದ್ದ ಉಪೇಂದ್ರಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸದ್ಯ ಮೊದಲಿಗೆ ದಾಖಲಾಗಿದ್ದ ಒಂದು ಕೇಸ್​ನಲ್ಲಿ ತಡೆ ಸಿಕ್ಕಿದ್ದರೂ, ಬೇರೆ ಎಫ್‌ಐಆರ್​ಗೆ ಸಂಬಂಧಿಸಿದಂತೆ ನೋಟೀಸ್ ಬಂದರೆ ಅದನ್ನೂ ಪ್ರಶ್ನಿಸಲು ಉಪೇಂದ್ರ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಮೂಲ ಪ್ರಕರಣದಲ್ಲೇ ತಡೆಯಾಜ್ಞೆ ಸಿಕ್ಕಿರುವುದರಿಂದ ಸದ್ಯಕ್ಕೆ ಉಪೇಂದ್ರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.