‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಅಭಿಮಾನಿಗಳು, ಸ್ನೇಹಿತರು, ಕುಟುಂಬದವರು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ದೊಡ್ಡ ಪರದೆ ಮೇಲೆ ನೋಡಬೇಕು ಎಂಬುದು ಫ್ಯಾನ್ಸ್ ಬಯಕೆ. ಅದಕ್ಕೆ ಉಳಿದಿರುವುದು ಕೆಲವೇ ಕೆಲವು ಅವಕಾಶಗಳು ಮಾತ್ರ. ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಪುನೀತ್ ರಾಜ್ಕುಮಾರ್ ಅವರು ‘ಲಕ್ಕಿ ಮ್ಯಾನ್’ (Lucky Man Movie) ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ. ಸೆಪ್ಟೆಂಬರ್ 9ರಂದು ‘ಲಕ್ಕಿ ಮ್ಯಾನ್’ ರಿಲೀಸ್ ಆಗಲಿದೆ. ಆದರೆ ಒಂದು ದಿನ ಮುನ್ನ, ಅಂದರೆ, ಸೆಪ್ಟೆಂಬರ್ 8ರಂದು ಅನೇಕ ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಆ ಶೋಗಳ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ. ಅಪ್ಪು ಜೊತೆ ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಪ್ರಭುದೇವ (Prabhu Deva), ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ.
ಪ್ರಭುದೇವ ಅವರ ಸಹೋದರ ಎಸ್. ನಾಗೇಂದ್ರ ಪ್ರಸಾದ್ ಅವರು ‘ಲಕ್ಕಿ ಮ್ಯಾನ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ದೇವರ ಪಾತ್ರವಿದೆ. ಅಭಿಮಾನಿಗಳ ಕಣ್ಣಲ್ಲಿ ಅವರ ದೇವರಾಗಿದ್ದಾರೆ. ಆ ರೀತಿ ದೇವರ ಪಾತ್ರದಲ್ಲಿಯೇ ಅವರನ್ನು ತೆರೆಮೇಲೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ಗಮನ ಸೆಳೆಯುತ್ತಿದೆ.
ಸೆಪ್ಟೆಂಬರ್ 8ರ ಗುರುವಾರ ಅನೇಕ ಕಡೆಗಳಲ್ಲಿ ಪ್ರೀಮಿಯರ್ ಪ್ರದರ್ಶನ ನಡೆಯುತ್ತಿದೆ. ಅದರ ಟಿಕೆಟ್ಗಳ ಮುಂಗಡ ಬುಕಿಂಗ್ಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನ ಅನೇಕ ಮಲ್ಟಿಪ್ಲೆಕ್ಸ್ನಲ್ಲಿ ಅಂದು ಸಂಜೆ 6 ಗಂಟೆ ನಂತರ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ.
ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಇವೆಂಟ್ ಬೆಂಗಳೂರಿನಲ್ಲಿ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ‘ಈ ಸಿನಿಮಾ ರಿಲೀಸ್ ಆದಾಗ ಎಲ್ಲರೂ ಎರಡೂ ಕೈಗಳನ್ನು ಚಾಚಿ ತಬ್ಬಿಕೊಂಡು ನೋಡಿ. ಯಾಕೆಂದರೆ, ಮತ್ತೆ ಬೇಕು ಎಂದರೂ ಕೂಡ ಇದು ಸಿಗಲ್ಲ. ಇರುವಾಗ ನಾವು ಬೆಲೆ ಕೊಡುತ್ತೇವೆ. ಕಳೆದುಕೊಂಡ ನಂತರ ಅದಕ್ಕೆ ಇನ್ನೂ ಜಾಸ್ತಿ ಬೆಲೆ ಕೊಡುತ್ತೇವೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ದೇವರ ಪಾತ್ರ ಮಾಡಿದ್ದಾರೆ. ಅದೊಂದು ನಂಬಿಕೆ. ಅವರು ಬದುಕಿದ ರೀತಿಯೇ ಆಗಿತ್ತು. ನಾವೆಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಟ್ರೇಲರ್ ನೋಡುವಾಗ ನಾನು ಸ್ಮೈಲ್ ಮಾಡುತ್ತಿದ್ದೆ. ಯಾಕೆಂದರೆ ಅವರಿಗೆ ಈ ಸಿನಿಮಾ ಹೆಚ್ಚು ಹೊಂದಿಕೆ ಆಗುತ್ತಿದೆ. ಎಲ್ಲರೂ ಈ ಸಿನಿಮಾವನ್ನು ತಬ್ಬಿಕೊಂಡು ಅನುಭವಿಸಿ’ ಎಂದು ಕಿಚ್ಚ ಸುದೀಪ್ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.