ಬಹುನಿರೀಕ್ಷಿತ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಹೊಸ ಸೆನ್ಸೇಷನ್ ಸೃಷ್ಟಿ ಮಾಡಿದೆ. ಇಂದು (ಅ.9) ಬೆಳಗ್ಗೆ ಅದ್ದೂರಿಯಾಗಿ ಇದರ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar), ರಾಘವೇಂದ್ರ ರಾಜ್ಕುಮಾರ್, ಯುವ ರಾಜ್ಕುಮಾರ್ ಸೇರಿದಂತೆ ಡಾ. ರಾಜ್ ಕುಟುಂಬದ ಹಲವರು ಜತೆಯಾಗಿ ಸೇರಿ ‘ಗಂಧದ ಗುಡಿ’ ಟ್ರೇಲರ್ (Gandhada Gudi Trailer) ಅನಾವರಣ ಮಾಡಿದ್ದಾರೆ. ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಲು ತೀರ್ಮಾನಿಸಲಾಗಿದೆ. ಅ.21ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ಮಾಡಿಸಿರುವ ಆಮಂತ್ರಣ ಪತ್ರಿಕೆ ಗಮನ ಸೆಳೆಯುತ್ತಿದೆ. ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಇರುವ ಈ ಆಹ್ವಾನ ಪತ್ರಿಕೆ ವಿಡಿಯೋ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.
ಕರ್ನಾಟಕದ ಅರಣ್ಯ ಸಂಪತ್ತು, ವನ್ಯಜೀವಿಗಳ ಬದುಕು ಸೇರಿದಂತೆ ಅನೇಕ ಸಂಗತಿಗಳನ್ನು ‘ಗಂಧದ ಗುಡಿ’ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಇದನ್ನು ಇಡೀ ಜಗತ್ತಿಗೆ ತೋರಿಸುವ ಸಮಯ ಕೂಡ ಹತ್ತಿರವಾಗಿದೆ. ಈ ಪ್ರಾಜೆಕ್ಟ್ ಮೇಲೆ ಪುನೀತ್ ರಾಜ್ಕುಮಾರ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ತುಂಬ ಕಾಳಜಿ ವಹಿಸಿ ಅವರು ಇದರಲ್ಲಿ ಭಾಗಿ ಆಗಿದ್ದರು. ಅದರ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ತೀವ್ರ ನೋವಿನ ಸಂಗತಿ.
ಪುನೀತ್ ರಾಜ್ಕುಮಾರ್ ಇಂದು ಭೌತಿಕವಾಗಿ ಇಲ್ಲದೇ ಇರಬಹುದು. ಆದರೆ ಸಾಮಾಜಿಕ ಕೆಲಸ ಮತ್ತು ಸಿನಿಮಾಗಳ ಮೂಲಕ ಅವರ ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಜೀವಂತವಾಗಿ ಇರುತ್ತಾರೆ. ಜನರು ಅವರನ್ನು ಆರಾಧಿಸಲು ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಕೂಡ ಕಾರಣವಾಗುತ್ತಿದೆ. ಚಿತ್ರಮಂದಿರದಲ್ಲಿ ಈ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ.
ಅ.21ರಂದು ನಡೆಯುವ ‘ಗಂಧದ ಗುಡಿ’ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಈಗಾಗಲೇ ಅನೇಕರಿಗೆ ಆಮಂತ್ರಣ ಪತ್ರಿಕೆ ತಲುಪಿದೆ. ಸಂಪೂರ್ಣ ಮರದಿಂದ ಮಾಡಲಾದ ಈ ಪತ್ರಿಕೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಇದೆ. ಜೊತೆಗೆ ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್ಕುಮಾರ್ ಎಂದು ಬರೆದಿರುವ ಹಸ್ತಾಕ್ಷರ ಇದೆ. ಅಮಿತಾಭ್ ಬಚ್ಚನ್, ರಜನಿಕಾಂತ್ ಮುಂತಾದ ಗಣ್ಯರಿಗೆ ಇದೇ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ.
ಟ್ರೇಲರ್ ಬಿಡುಗಡೆ ಆಗುತ್ತಿದ್ದಂತೆಯೇ ‘ಗಂಧದ ಗುಡಿ’ ಮೇಲೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಈ ಕುರಿತು ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.