ನಟ ಸುದೀಪ್ (Sudeep), ತಮ್ಮ ವಿರುದ್ಧ ಆರೋಪ ಮಾಡಿದ ಇಬ್ಬರು ನಿರ್ಮಾಪಕರ (Producer) ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಸುದೀಪ್ ಹೇಳಿಕೆ ದಾಖಲಿಸಿಕೊಂಡಿರುವ ನ್ಯಾಯಾಲಯ ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಸುರೇಶ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಬಗ್ಗೆ ನಿರ್ಮಾಪಕ ಎಂಎನ್ ಸುರೇಶ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ‘ಕ್ಷಮೆ ಕೇಳುವುದಿಲ್ಲ, ಹೋರಾಟ ಮಾಡುತ್ತೇನೆ’ ಎಂದಿದ್ದಾರೆ.
ನ್ಯಾಯಾಲಯದ ಸಮನ್ಸ್ ಇನ್ನೂ ನನ್ನ ಕೈಸೇರಿಲ್ಲ, ನಾನು ಕಾನೂನಿಗೆ ಗೌರವ ಕೊಡ್ತಿನಿ ನ್ಯಾಯಾಧೀಶರು ಕೊಡುವ ತೀರ್ಮಾನಕ್ಕೆ ಬದ್ಧರಾಗಿರ್ತಿನಿ. ಸಮನ್ಸ್ ಬಂದ ನಂತರ ಕಾನೂನು ರೀತಿ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡುತ್ತೀನಿ. ನಮ್ಮ ವಕೀಲರಿದ್ದಾರೆ ಅವರೊಟ್ಟಿಗೆ ಚರ್ಚಿಸಿ ಮುಂದೆ ಏನು ಮಾಡಬೇಕು ಎಂದು ಚಿಂತನೆ ಮಾಡ್ತೀನಿ” ಎಂದಿದ್ದಾರೆ.
ಇನ್ನೋಬ್ಬರನ್ನು ಶೋಷಣೆ, ದೂಷಣೆ ಮಾಡೋದು ತಪ್ಪು. ಅವರು ದೊಡ್ಡವರು ಕೋರ್ಟ್ಗೆ ಹೋಗಿದ್ದಾರೆ ನಾನು ಗೌರವ ಕೊಡುತ್ತೀನಿ. ಕ್ಷಮೆ ಕೇಳೋದರ ಬಗ್ಗೆ ನಾನು ಯೋಚನೆ ಸಹ ಮಾಡಿಲ್ಲ. ನಾನು ಕಾನೂನು ನಿಟ್ಟಿನಲ್ಲಿ ಕೂಲಂಕುಶವಾಗಿ ಅಭ್ಯಾಸ ಮಾಡಿ ನ್ಯಾಯ ದೇಗುಲದಲ್ಲಿ ಹೋರಾಟ ಮಾಡಿ ನ್ಯಾಯ ದೇವತೆ ಮೋರೆ ಹೋಗುತ್ತೀನಿ ಎಂದು ಸುರೇಶ್ ಹೇಳಿದ್ದಾರೆ. ರವಿಚಂದ್ರನ್ ಮಾಡಿದ್ದ ಸಂಧಾನದ ಫಲ ಏನಾಯ್ತೊ ತಮಗೆ ಗೊತ್ತಿಲ್ಲವೆಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಇದನ್ನೂ ಓದಿ:ಸುದೀಪ್-ಎಂಎನ್ ಕುಮಾರ್ ಕೇಸ್ ವಿಚಾರಣೆ; ಕೋರ್ಟ್ನಲ್ಲಿ ನಡೆದ ಪ್ರಕ್ರಿಯೆ ಬಗ್ಗೆ ವಿವರಿಸಿದ ಲಾಯರ್
ನಿರ್ಮಾಪಕ ಎಂಎನ್ ಕುಮಾರ್ ಹಾಗೂ ಸುರೇಶ್ ಅವರು ತಿಂಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ, ನಟ ಸುದೀಪ್ ತಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಏಳೆಂಟು ವರ್ಷಗಳ ಹಿಂದೆ ಸುದೀಪ್ ಸಿನಿಮಾ ಮಾಡಿಕೊಡುವುದಾಗಿ ಹೇಳಿ ತಮ್ಮಿಂದ ಹಣ ಪಡೆದಿದ್ದರು, ಆದರೆ ಸಿನಿಮಾ ಮಾಡಲು ಡೇಟ್ಸ್ ನೀಡಲಿಲ್ಲ, ಕೊಟ್ಟಿರುವ ಹಣವನ್ನೂ ವಾಪಸ್ ನೀಡಲಿಲ್ಲ ಎಂದಿದ್ದರು. ಸುಮಾರು 45 ಲಕ್ಷ ರೂಪಾಯಿ ಹಣವನ್ನು ಸುದೀಪ್ ತಮಗೆ ನೀಡಬೇಕು ಎಂದು ಕುಮಾರ್ ಹಾಗೂ ಸುರೇಶ್ ಆರೋಪಿಸಿದ್ದರು.
ಕುಮಾರ್ ಹಾಗೂ ಸುರೇಶ್ ಅವರ ಆರೋಪಗಳಿಂದ ಅಸಮಾಧಾನಗೊಂಡ ನಟ ಕಿಚ್ಚ ಸುದೀಪ್ ನ್ಯಾಯಾಲಯದ ಮೆಟ್ಟಿಲೇರಿ, ಸುರೇಶ್ ಹಾಗೂ ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಆ ತರುವಾಯ ನಿರ್ಮಾಪಕ ಎಂಎನ್ ಕುಮಾರ್ ಅವರು, ಫಿಲಂ ಚೇಂಬರ್ ಎದುರು ಪ್ರತಿಭಟನೆ ನಡೆಸಿ ನ್ಯಾಯ ಒದಗಿಸುವಂತೆ ಒತ್ತಾಯ ಮಾಡಿದರು. ಬಳಿಕ ನಟ ರವಿಚಂದ್ರನ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯ್ತು. ಸಭೆಯಲ್ಲಿ ಸುದೀಪ್, ಜಾಕ್ ಮಂಜು, ರಾಕ್ಲೈನ್ ವೆಂಕಟೇಶ್, ಎಂಎನ್ ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು. ಆದರೆ ಆ ಸಂಧಾನ ಸಭೆ ಫಲಪ್ರದವಾದಂತಿಲ್ಲ.
ಇತ್ತೀಚೆಗಷ್ಟೆ ನಟ ಸುದೀಪ್ ತಮ್ಮ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಿದ್ದರು. ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ನಿರ್ಮಾಪಕರಾದ ಕುಮಾರ್ ಹಾಗೂ ಸುರೇಶ್ ಅವರಿಗೆ ಸಮನ್ಸ್ ನೀಡಿದ್ದು, ಆಗಸ್ಟ್ 26ರ ಒಳಗೆ ಹಾಜರಾಗುವಂತೆ ಸೂಚಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:22 pm, Sat, 12 August 23