ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬಹುದೊಡ್ಡ ಸಾಧನೆ ಮಾಡಿದೆ. ‘ಚಂದ್ರಯಾನ 3’ ಮಿಷನ್ ಯಶಸ್ವಿಯಾಗಿಸಿದೆ. ಈ ಮೊದಲು ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಚಂದ್ರನ ಮೇಲೆ ಕಾಲಿಟ್ಟಿದ್ದವು. ಈಗ ಭಾರತ ಕೂಡ ಚಂದ್ರನ ತಲುಪಿದೆ. ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಅನ್ನೋದು ಮತ್ತೊಂದು ಹೆಮ್ಮೆ. ಈ ಹೆಮ್ಮೆಯ ಕ್ಷಣವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ನಟ ಪ್ರಕಾಶ್ ರಾಜ್ (Prakash Raj) ಕೂಡ ಈ ಬಗ್ಗೆ ಸಂತೋಷ ವ್ಯಕ್ಯಪಡಿಸಿದ್ದಾರೆ. ಕೆಲವರು ಅವರನ್ನು ಟೀಕಿಸಿದ್ದಾರೆ.
‘ಭಾರತದ, ಮನುಕುಲದ ಹೆಮ್ಮೆಯ ಕ್ಷಣಗಳಿವು. ಇಸ್ರೋ, ಚಂದ್ರಯಾನ 3 ಹಾಗೂ ವಿಕ್ರಮ್ ಲ್ಯಾಂಡರ್ಗೆ ಹಾಗೂ ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು ಇದು ದಾರಿಯಾಗಲಿ’ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಇದನ್ನು ಅನೇಕರು ಟೀಕಿಸಿದ್ದಾರೆ.
‘ನಿಮ್ಮನ್ನು ಯಾರೂ ಕ್ಷಮಿಸುವುದಿಲ್ಲ. ನಿಮ್ಮ ಸ್ಪಷ್ಟನೆಯನ್ನೂ ನಾವು ಒಪ್ಪುವುದಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಕೆಲವರು ಪ್ರಕಾಶ್ ಅವರನ್ನು ಕಪಟಿ ಎಂದು ಕರೆದಿದ್ದಾರೆ. ಅವರು ಸ್ಪಷ್ಟನೆ ಕೊಟ್ಟ ಬಳಿಕವೂ ಅವರ ಬಗ್ಗೆ ಟೀಕೆ ಮಾಡುವುದು ಸರಿ ಅಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕಾಶ್ ರಾಜ್ ಅವರು ಇತ್ತೀಚೆಗೆ ಕಾರ್ಟೂನ್ ಒಂದನ್ನು ಹಂಚಿಕೊಂಡಿದ್ದರು. ಚಂದ್ರನ ಮೇಲೆ ವ್ಯಕ್ತಿಯೋರ್ವ ಚಹಾ ಮಾರುವ ರೀತಿಯಲ್ಲಿ ಈ ಕಾರ್ಟೂನ್ ಇತ್ತು. ‘ಚಂದ್ರಯಾನ 3’ ಯೋಜನೆಯನ್ನು ಪ್ರಕಾಶ್ ರೈ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟರು. ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಯಿತು. ಆದರೆ, ಇದರ ಹಿಂದಿರುವ ಕಥೆ ಏನು ಎಂಬುದನ್ನು ಅವರು ವಿವರಿಸಿದ್ದರು.
PROUD MOMENT for INDIA and to Humankind.. 🙏🏿🙏🏿🙏🏿Thank you #ISRO #Chandrayaan3 #VikramLander and to everyone who contributed to make this happen .. may this guide us to Explore and Celebrate the mystery of our UNIVERSE .. #justasking
— Prakash Raj (@prakashraaj) August 23, 2023
ಇದನ್ನೂ ಓದಿ: ‘ಚಂದ್ರಯಾನ 3’ ಬಗ್ಗೆ ಪ್ರಕಾಶ್ ರಾಜ್ ಮಾಡಿದ ಹಾಸ್ಯದ ಹಿಂದೆ ಬೇರೆಯದೇ ಕಥೆ ಇದೆ; ವಿವರಿಸಿದ ನಟ
ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ 1969ರಲ್ಲಿ ಚಂದ್ರನಮೇಲೆ ಕಾಲಿಟ್ಟರು. ಆಗ ಒಂದು ಜೋಕ್ ವೈರಲ್ ಆಗಿತ್ತು. ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ ಅಲ್ಲಿ ಮಲಯಾಳಿ ಒಬ್ಬರು ಚಹಾ ಮಾರುತ್ತಿದ್ದರಂತೆ! ಮಲಯಾಳಿಗಳು ಎಲ್ಲ ಕಡೆ ವ್ಯಾಪಾರ ಮಾಡುತ್ತಾರೆ ಎಂಬುದನ್ನು ಹಾಸ್ಯದ ರೀತಿಯಲ್ಲಿ ಹೇಳುವ ಕಾರ್ಟೂನ್ ಇದಾಗಿತ್ತು. ಇದನ್ನೇ ಪ್ರಕಾಶ್ ರೈ ಟ್ವೀಟ್ ಮಾಡಿದ್ದರು. ಆದರೆ, ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:15 am, Thu, 24 August 23