ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ‘ಗಂಧದ ಗುಡಿ’ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿದ್ದರು. ಆದರೆ ಅದು ನನಸಾಗುವುದಕ್ಕೂ ಮುನ್ನವೇ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಭೌತಿಕವಾಗಿ ಅಪ್ಪು ಇಲ್ಲದಿದ್ದರೂ ಕೂಡ ಅವರು ಕಂಡ ಕನಸನ್ನು ನನಸಾಗಿಸಲಾಗುತ್ತಿದೆ. ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದಾರೆ. ವಿಶೇಷ ಏನೆಂದರೆ, ರಿಲೀಸ್ ಆಗುವುದಕ್ಕೂ ಮುನ್ನವೇ ಈ ಡಾಕ್ಯುಮೆಂಟರಿ ದಾಖಲೆ ಬರೆದಿದೆ. ಬೆಂಗಳೂರಿನ ಮಾಲ್ಗಳಲ್ಲಿ ಮೊದಲ ಬಾರಿಗೆ ಏಕಕಾಲಕ್ಕೆ 50ಕ್ಕೂ ಹೆಚ್ಚು ಶೋಗಳಲ್ಲಿ ಪ್ರದರ್ಶನ ಕಾಣುವ ಮೂಲಕ ‘ಗಂಧದ ಗುಡಿ’ ದಾಖಲೆ ಬರೆಯುತ್ತಿದೆ.
ಈ ಶುಕ್ರವಾರ (ಅಕ್ಟೋಬರ್ 28) ‘ಗಂಧದ ಗುಡಿ’ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಅದಕ್ಕೂ ಒಂದು ದಿನ ಮುನ್ನ ಅನೇಕ ಕಡೆಗಳಲ್ಲಿ ಪ್ರೀಮಿಯರ್ ಪ್ರದರ್ಶನ ಆಯೋಜನೆಗೊಂಡಿದೆ. ಅದರ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಅಪ್ಪು ಕನಸಿನ ಪ್ರಾಜೆಕ್ಟ್ ಅನ್ನು ಅಭಿಮಾನಿಗಳು ಹೆಮ್ಮೆಯಿಂದ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ರಾಜ್ಯಾದ್ಯಂತ ‘ಗಂಧದ ಗುಡಿ’ ಗುಂಗು ಜೋರಾಗಿದೆ.
ಬೆಂಗಳೂರಿನ ಎಲ್ಲ ಪ್ರಮುಖ ಮಾಲ್ಗಳಲ್ಲಿ ಅ.28ರ ಬೆಳಗ್ಗೆ 10 ಗಂಟೆಗೂ ಮುನ್ನ ಬರೋಬ್ಬರಿ 50 ಶೋಗಳಲ್ಲಿ ‘ಗಂಧದ ಗುಡಿ’ ಪ್ರದರ್ಶನ ಕಾಣುತ್ತಿದೆ. ಈ ಕುರಿತು ‘ಕೆಆರ್ಜಿ ಸ್ಟುಡಿಯೋಸ್’ನ ಕಾರ್ತಿಕ್ ಗೌಡ ಅವರು ಟ್ವೀಟ್ ಮಾಡಿದ್ದಾರೆ. ಈ ಸಾಕ್ಷ್ಯಚಿತ್ರ ನೋಡಲು ಜನರು ಸಖತ್ ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ಶೋ ಸಂಖ್ಯೆ ಹೆಚ್ಚುತ್ತಿದೆ.
‘ಗಂಧದ ಗುಡಿ’ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಮಾತು:
‘ಇದರಲ್ಲಿ ನಟನೆ ಇಲ್ಲ. ಅಪ್ಪು ಅವರ ಜರ್ನಿಯನ್ನೇ ನೇರವಾಗಿ ಸೆರೆ ಹಿಡಿಯಲಾಗಿದೆ. ನನಗೆ ಇದರ ಬಗ್ಗೆ ತುಂಬ ಹೆಮ್ಮೆ ಇದೆ. ಕನ್ನಡದ ಜನತೆಗೆ ಪುನೀತ್ ಅವರ ಮೂಲಕ ಕರ್ನಾಟಕವನ್ನು ತೋರಿಸುವ ಕಾರ್ಯ ಆಗುತ್ತಿದೆ. ಶೂಟಿಂಗ್ ವೇಳೆ ಅವರು ಅವರಾಗಿಯೇ ಇದ್ದರು. ಪ್ರತಿ ಹಂತದ ಶೂಟಿಂಗ್ನಲ್ಲೂ ಅವರು ಖುಷಿಯಾಗಿದ್ದರು’ ಎಂದು ಅಶ್ವಿನಿ ಹೇಳಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಪ್ರೀಮಿಯರ್ ಶೋ ಟಿಕೆಟ್ಗಳು ಸೋಲ್ಡ್ ಔಟ್ ಆಗಿರುವುದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಖುಷಿ ನೀಡಿದೆ. ‘ಇದು ನನಗೆ ಹೆಮ್ಮೆ ಕೊಟ್ಟಿರುವ ಪ್ರಾಜೆಕ್ಟ್. ಒಂದು ಕಡೆ ಬೇಸರ, ಇನ್ನೊಂದು ಕಡೆ ಖುಷಿ ಇದೆ. ಎಲ್ಲರೂ ಗಂಧದ ಗುಡಿ ನೋಡಿ, ಆಶೀರ್ವದಿಸಿ’ ಎಂದು ಅವರು ಕೇಳಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.