69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (69th National Film Award 2023) ಘೋಷಣೆ ಆಗಿದೆ. 2021ರ ಸಾಲಿನ ಸಿನಿಮಾಗಳಿಗೆ ಈ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ವಿವಿಧ ವಿಭಾಗಗಳಲ್ಲಿ ನ್ಯಾಷನಲ್ ಅವಾರ್ಡ್ ಪ್ರಕಟ ಆಗಿದೆ. ಖ್ಯಾತ ನಟಿ ಭಾರತಿ ವಿಷ್ಣುವರ್ಧನ್ ಅವರ ಜೀವನದ ಕುರಿತು ತಯಾರಾದ ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರಕ್ಕೆ (Bale Bangara Documentary) ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಡಾಕ್ಯುಮೆಂಟರಿಗೆ ಅನಿರುದ್ಧ್ ಜತ್ಕರ್ (Anirudh Jatkar) ಅವರು ನಿರ್ದೇಶನ ಮಾಡಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರ ಸಾಧನೆ ಮತ್ತು ಜೀವನದ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ. ಅನೇಕ ಸೆಲೆಬ್ರಿಟಿಗಳ ಸಂದರ್ಶನ ಕೂಡ ಇದರಲ್ಲಿ ಇದೆ.
ಭಾರತಿ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರದಲ್ಲಿ ಚಿತ್ರರಂಗದ ಹಲವರು ಮಾತನಾಡಿದ್ದಾರೆ. ಹಿರಿಯ ಕಲಾವಿದರಾದ ಅನಂತ್ ನಾಗ್, ಶಿವರಾಮ್, ಶಿವರಾಜ್ಕುಮಾರ್, ಮೋಹನ್ ಲಾಲ್, ಹೇಮಾ ಚೌಧರಿ ಮುಂತಾದವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸ್ವತಃ ಭಾರತಿ ವಿಷ್ಣುವರ್ಧನ್ ಅವರ ಸಂದರ್ಶನ ಕೂಡ ಈ ಸಾಕ್ಷ್ಯಚಿತ್ರದಲ್ಲಿದೆ. ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ, ಅನೇಕ ಬಗೆಯ ಮಾಹಿತಿಗಳನ್ನು ಕಲೆಹಾಕಿ ಅನಿರುದ್ಧ್ ಜತ್ಕರ್ ಅವರು ಈ ಡಾಕ್ಯುಮೆಂಟರಿ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಯಾರಿಗೆಲ್ಲ ಸಿಕ್ಕಿದೆ ನ್ಯಾಷನಲ್ ಅವಾರ್ಡ್? ಇಲ್ಲಿದೆ ಲೈವ್ ವಿಡಿಯೋ
ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು ನಟರ ಜೊತೆ ಭಾರತಿ ವಿಷ್ಣುವರ್ಧನ್ ಅವರು ಸಿನಿಮಾ ಮಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಬರೀ 8 ವರ್ಷದಲ್ಲಿ ಅವರು 100 ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಮನೆಮಾತಾದರು. ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೋತರು. ಹಲವು ಕಷ್ಟಗಳನ್ನು ಎದುರಿಸಿ ಅವರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದರು. ಈ ಎಲ್ಲ ವಿಚಾರಗಳನ್ನು ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: 69th National Film Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪಟ್ಟಿ
ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಜತ್ಕರ್ ಅವರು ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿದ್ದಾರೆ. ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಬೇರೆ ಬೇರೆ ಪ್ರಯೋಗಗಳ ಮೂಲಕ ಅವರು ದಾಖಲೆ ಮಾಡಿದ್ದಾರೆ. ನಿರ್ದೇಶನದಲ್ಲೂ ಅವರು ಆಸಕ್ತಿ ಹೊಂದಿದ್ದಾರೆ. ಈಗ ಅನಿರುದ್ಧ್ ಅವರು ‘ಶೆಫ್ ಚಿದಂಬರ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆ ರಾಷ್ಟ್ರ ಪ್ರಶಸ್ತಿ ಪಡೆದಿರುವುದಕ್ಕೆ ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:52 pm, Thu, 24 August 23