ನಟ ರಜನಿಕಾಂತ್ (Rajinikanth) ಅವರಿಗೆ ಈಗ 72 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಆ್ಯಕ್ಷನ್ ಹೀರೋ ಆಗಿ ಮಿಂಚುತ್ತಿದ್ದಾರೆ. ಅದಕ್ಕೆ ಸಾಕ್ಷಿಯೇ ‘ಜೈಲರ್’ (Jailer Movie) ಸಿನಿಮಾದ ಗಳಿಕೆ. ಆಗಸ್ಟ್ 10ರಂದು ಬಿಡುಗಡೆ ಆದ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ವಿಶ್ವಾದ್ಯಂತ ಈ ಚಿತ್ರಕ್ಕೆ 550 ಕೋಟಿ ರೂಪಾಯಿ (Jailer Movie Collection) ಕಮಾಯಿ ಆಗಿದೆ. ಭಾರತದಲ್ಲಿ 300 ಕೋಟಿ ರೂಪಾಯಿ ಬಾಚಿಕೊಳ್ಳುವತ್ತ ಈ ಸಿನಿಮಾ ಮುನ್ನುಗ್ಗುತ್ತಿದೆ. ಬೇರೆ ಸಿನಿಮಾಗಳ ಪೈಪೋಟಿ ನಡುವೆಯೂ ‘ಜೈಲರ್’ ಸಿನಿಮಾ ಅಬ್ಬರಿಸಿದೆ. ಈ ಚಿತ್ರದ ಗೆಲುವಿಗೆ ಅನೇಕ ಕಾರಣಗಳು ಇವೆ. ರಜನಿಕಾಂತ್ ಅವರ ವೃತ್ತಿಜೀವನದಲ್ಲಿ ಈ ಸಿನಿಮಾದ ಗೆಲುವು ಗಮನಾರ್ಹವಾಗಿದೆ. ‘ಜೈಲರ್’ ಗೆದ್ದ ಬಳಿಕ ರಜನಿಕಾಂತ್ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.
‘ಜೈಲರ್’ ಸಿನಿಮಾದಲ್ಲಿ ಒಂದು ಕೌಟುಂಬಿಕ ಕಥಾಹಂದರ ಇದೆ. ಮಗನಿಗಾಗಿ ಹೋರಾಡುವ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣನ್, ಶಿವರಾಜ್ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್ ಮುಂತಾದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ಅಭಿನಯಯಿಸಿದ್ದಾರೆ. ಎಲ್ಲರ ಸಂಗಮದಿಂದ ‘ಜೈಲರ್’ ಸಿನಿಮಾ ಸಖತ್ ಮಾಸ್ ಆಗಿ ಮೂಡಿಬಂದಿದೆ. ಅದು ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿನಾಯಕನ್ ಅವರು ಹೆಚ್ಚು ಹೈಲೈಟ್ ಆಗಿದ್ದಾರೆ.
ಇದನ್ನೂ ಓದಿ: ‘ಜೈಲರ್’ ಗೆಲುವಿನ ಬೆನ್ನಲ್ಲೇ ‘ಲಾಲ್ ಸಲಾಮ್’ ಚಿತ್ರದ ಬಗ್ಗೆ ಹೆಚ್ಚಿದ ನಿರೀಕ್ಷೆ; ಐಶ್ವರ್ಯಾ ಮೇಲೆ ಬೀಳುತ್ತಿದೆ ಒತ್ತಡ?
ತಮಿಳನ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ‘ಜೈಲರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾ. ಈ ಹಿಂದೆ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾಗೆ ನೆಲ್ಸನ್ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಎದುರು ಬಿಡುಗಡೆ ಆಗಿ ಸಮಾಧಾನಕರ ಗಳಿಕೆ ಮಾಡಿತ್ತು. ಈಗ ‘ಜೈಲರ್’ ಸಿನಿಮಾ ಮೂಲಕ ನೆಲ್ಸನ್ ಅವರು ಭರ್ಜರಿ ಹಿಟ್ ನೀಡಿದ್ದಾರೆ. ಇದರಿಂದ ಅವರಿಗೆ ಇದ್ದ ಡಿಮ್ಯಾಂಡ್ ಡಬಲ್ ಆಗಿದೆ. ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: ‘ಜೈಲರ್’ ಸಿನಿಮಾದ ಕಲಾವಿದರು ಪಡೆದ ಸಂಭಾವನೆ ಇಷ್ಟೊಂದಾ? ಶಿವಣ್ಣನಿಗೆ ಸಿಕ್ಕ ಹಣ ಎಷ್ಟು?
ರಜನಿಕಾಂತ್ ಅವರಿಗೆ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಹಾಗಾಗಿ ಬೇರೆ ಬೇರೆ ದೇಶಗಳಲ್ಲಿ ‘ಜೈಲರ್’ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ಮೂರನೇ ವಾರದಲ್ಲಿ ಈ ಸಿನಿಮಾದ ಹವಾ ಕೊಂಚ ಕಡಿಮೆ ಆಗಿದೆ. ಭಾರತದಲ್ಲಿ 295 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಶೀಘ್ರದಲ್ಲೇ 300 ಕೋಟಿ ರೂಪಾಯಿ ಗಡಿ ಮುಟ್ಟಲಿದೆ. ಅಂತಿಮವಾಗಿ ಈ ಸಿನಿಮಾದ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ‘ಕಾವಾಲಾ..’ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರು ಭರ್ಜರಿಯಾಗಿ ಕುಣಿದಿದ್ದಾರೆ. ಸಿನಿಮಾದ ಗೆಲುವಿನಲ್ಲಿ ಈ ಹಾಡಿನ ಕೊಡುಗೆ ಕೂಡ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.