ಹಾಲಿವುಡ್ನ (Hollywood) ಖ್ಯಾತ ತಾರಾ ದಂಪತಿ ಆಗಿದ್ದ ಜಾನಿ ಡೆಪ್ (Jhonny Depp) ಹಾಗೂ ಅಂಬರ್ ಹರ್ಡ್ ಕಿತ್ತಾಟ ಕಳೆದ ವರ್ಷ ಭಾರಿ ದೊಡ್ಡದಾಗಿ ಸದ್ದು ಮಾಡಿತ್ತು. ಯಾವ ಮಟ್ಟಿಗೆಂದರೆ ವಿಶ್ವದ ಹಲವು ಭಾಷೆಗಳಲ್ಲಿ ಇವರ ಸುದ್ದಿಗಳು ಪ್ರಸಾರವಾಗಿದ್ದವು, ಯಾವ ಸಿನಿಮಾ, ಕ್ರಿಕೆಟ್, ಫುಟ್ಬಾಲ್ ಮ್ಯಾಚ್ಗಳಿಗೂ ಸಿಗದಷ್ಟು ವೀಕ್ಷಣೆ ನ್ಯಾಯಾಲಯದ ಕಲಾಪಗಳ ಲೈವ್ ಪ್ರಸಾರಕ್ಕೆ ಸಿಕ್ಕಿತ್ತು. ಇವರಿಬ್ಬರ ನ್ಯಾಯಾಲಯದ ವಾದ-ವಿವಾದಗಳ ಲೈವ್ ಕಲಾಪ, ಸಾಕ್ಷಿಧಾರರ ಹೇಳಿಕೆ, ಚಾರ್ಜ್ ಶೀಟ್, ನ್ಯಾಯಾಲಯದ ತೀರ್ಪುಗಳನ್ನೇ ಆಧರಿಸಿ ನೆಟ್ಫ್ಲಿಕ್ಸ್ ಡಾಕ್ಯು ಡ್ರಾಮಾ ಬಿಡುಗಡೆ ಮಾಡುತ್ತಿದೆ.
ಜಾನಿ ಡೆಪ್-ಅಂಬರ್ ಹರ್ಡ್ರ ಜನಪ್ರಿಯ ಕೋರ್ಟ್ ಕಲಾಪದ ಡಾಕ್ಯು ಸರಣಿಯನ್ನು ನೆಟ್ಫ್ಲಿಕ್ಸ್ ಬಿಡುಗಡೆ ಮಾಡುತ್ತಿದ್ದು, ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ. ಇಬ್ಬರ ನಡುವಿನ ಜಗಳವನ್ನು ಬೇರೊಂದು ಕೋನದಿಂದ ನೋಡುವ ಪ್ರಯತ್ನವನ್ನು ನೆಟ್ಫ್ಲಿಕ್ಸ್ ಮಾಡಿರುವುದು ಡಾಕ್ಯು ಸರಣಿಯ ಟ್ರೈಲರ್ನಿಂದ ತಿಳಿದು ಬರುತ್ತಿದೆ. ಕೇವಲ ಕೋರ್ಟ್ ಕಲಾಪವನ್ನು ಮಾತ್ರವೇ ಡಾಕ್ಯು ಸರಣಿಯ ವಿಷಯವನ್ನಾಗಿ ಇರಿಸಿಕೊಳ್ಳದೆ ಅದರ ಸುತ್ತ ಬೇರೆ-ಬೇರೆ ವ್ಯಕ್ತಿಗಳು ವ್ಯಕ್ತಪಡಿಸಿದ ಅಭಿಪ್ರಾಯ, ಜನರಲ್ಲಿ ಮೂಡಿದ ಅಭಿಪ್ರಾಯ, ಅದಕ್ಕೆ ಕಾರಣವಾದ ಅಂಶಗಳು, ಜಾನಿ ಡೆಪ್-ಅಂಬರ್ರ ಪ್ರಕರಣ ಚಳವಳಿಯಾಗಿ ರೂಪುಗೊಂಡ ಬಗೆ ಇನ್ನಿತರೆ ವಿಷಯಗಳನ್ನು ನೆಟ್ಫ್ಲಿಕ್ಸ್ನ ಡಾಕ್ಯು ಸರಣಿ ಪರೀಕ್ಷೆಗೆ ಒಳಪಡಿಸಲಿದೆ ಎಂಬುದು ಟ್ರೈಲರ್ನಿಂದ ತಿಳಿದು ಬರುತ್ತಿದೆ.
ಕಳೆದ ವರ್ಷ ಏಪ್ರಿಲ್ ನಿಂದ ಜೂನ್ ತಿಂಗಳ ವರೆಗೆ ವರ್ಜಿನಿಯಾದ ಕೋರ್ಟ್ನಲ್ಲಿ ಮಾಜಿ ದಂಪತಿಗಳಾದ ಅಂಬರ್ ಹರ್ಡ್ ಹಾಗೂ ಜಾನಿ ಡೆಪ್ನ ಪ್ರಕರಣದ ವಿಚಾರಣೆ ನಡೆದಿತ್ತು. ಅಂಬರ್ ಹರ್ಡ್, ಪತ್ರಿಕೆಯೊಂದರಲ್ಲಿ ತಾನು ಜಾನಿ ಡೆಪ್ನಿಂದ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ಬರೆದಿದ್ದರು. ಇದರ ವಿರುದ್ಧ ಜಾನಿ ಡೆಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇವರಿಬ್ಬರ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಒಳಗಿಂದ ಲೈವ್ ಮಾಡಲಾಗಿತ್ತು. ಈ ಲೈವ್ ವಿಚಾರಣೆಯನ್ನು ವಿಶ್ವದಾದ್ಯಂತ ಕೋಟ್ಯಂತರ ಮಂದಿ ವೀಕ್ಷಿಸಿದರು. ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿ ಅಭಿಪ್ರಾಯ ದಾಖಲಿಸಿದ್ದರು.
ಇಬ್ಬರ ನಡುವಿನ ಪ್ರಕರಣದ ವಿಚಾರಣೆಯ ಸುಮಾರು 200 ಗಂಟೆಗಳ ಫೂಟೇಜ್ ಪ್ರಸಾರವಾಗಿತ್ತು. ಇದನ್ನೇ ಇರಿಸಿಕೊಂಡು ಇದಕ್ಕೆ ಇನ್ನಷ್ಟು ಸೇರಿಸಿ ನೆಟ್ಫ್ಲಿಕ್ಸ್ ಡಾಕ್ಯು ಸೀರೀಸ್ ತಯಾರಿಸಿದೆ. ಅದನ್ನು ಆಗಸ್ಟ್ 8 ರಂದು ಬಿಡುಗಡೆ ಮಾಡುತ್ತಿದ್ದು, ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ.
ಜಾನಿ ಡೆಪ್ ಹಾಗೂ ಅಂಬರ್ ಹರ್ಡ್ ಪ್ರಕರಣದಲ್ಲಿ ಅಂತಿಮವಾಗಿ ನಟ ಜಾನಿ ಡೆಪ್ಗೆ ಗೆಲುವಾಯ್ತು. ಭಾರಿ ಮೊತ್ತದ ನಷ್ಟ ಪರಿಹಾರವನ್ನು ನಟಿ ಅಂಬರ್ ಹರ್ಡ್ ನೀಡಬೇಕಾಗಿ ಬಂತು. ಅಲ್ಲದೆ ಅಂಬರ್ ಹರ್ಡ್ ಹಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡರು. ದೌರ್ಜನ್ಯದ ಆರೋಪ ಹೊತ್ತಿದ್ದ ಜಾನಿ ಡೆಪ್ಗೆ ಆರೋಪದಿಂದ ಬಿಡುಗಡೆ ದೊರಕಿತು. ಹಾಲಿವುಡ್ನ ಟಾಪ್ ನಟರಲ್ಲಿ ಒಬ್ಬರೆಂಬ ಖ್ಯಾತಿಯನ್ನು ಡೆಪ್ ಮರಳಿ ಪಡೆದುಕೊಂಡರು. ಆದರೆ ಅವರ ವಿಶ್ವವಿಖ್ಯಾತ ಪಾತ್ರ ಕ್ಯಾಪ್ಟನ್ ಜಾಕ್ ಸ್ಪಾರೋದಿಂದ ಅವರು ಹೊರಗೆ ಬಂದರು. ಆ ಪಾತ್ರವನ್ನು ಇನ್ನು ಮುಂದೆ ಮಾಡುವುದಿಲ್ಲವೆಂದು ಘೋಷಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ